Mysore
25
overcast clouds
Light
Dark

ಎಲ್ಲವೂ ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ..

ಸುಜಾತ ರೋಹಿತ್‌ 

ಬದುಕೆಂಬ ಖಾನಾವಳಿಯಲ್ಲಿ ಕೆಲವರಿಗೆ ಸದಾ ಭೂರಿ ಭೋಜನ ಭಾಗ್ಯ. ಇನ್ನು ಕೆಲವರಿಗೆ ಗಂಜಿ ನೀರು, ಒಣರೊಟ್ಟಿಯೇ ಗತಿ. ಜೀವನ ಅನಿರೀಕ್ಷಿತ ತಿರುವುಗಳಲ್ಲಿ ಸಿಕ್ಕಾಗ ಅನ್ನ ಬಡಿಸುವ ಕಾಯಕ ಬದುಕಿನ ದಾರಿಯಾಗಿದ್ದೂ ಇದೆ. ಅದರಲ್ಲೂ ಹೆಣ್ಣು ಮಕ್ಕಳು ಹುಟ್ಟಿನಿಂದಲೇ ಬಂದ ಕಸುಬಿನಿಂದಲೇ ಬದುಕು ಕಂಡುಕೊಂಡ ಹಲವು ಉದಾಹರಣೆಗಳಿವೆ.

ಬದುಕಿಗೊಂದು ದುಡಿಮೆ ಬೇಕಲ್ಲವೆ? ನಮ್ಮ ಭಾರತೀಯ ಸಂಕೀರ್ಣ ಸಾಮಾಜಿಕ ಮಾದರಿ ಕೆಲವು ರೀತಿಯ ದುಡಿಮೆಯನ್ನು ಒಪ್ಪಿಕೊಳ್ಳುವುದಿಲ್ಲ.ಅದರಲ್ಲೂ ಹೆಣ್ಣುಮಕ್ಕಳ ಶ್ರಮಕ್ಕೆ ಪ್ರತಿಫಲ ಈಗಲೂ ಕಡಿಮೆಯೇ. ನಮ್ಮ ಮಧ್ಯ ಇರುವ ಅನೇಕ ಬಡ ಹೆಣ್ಣು ಮಕ್ಕಳು ಸ್ವಂತ ಪರಿಶ್ರಮದಿಂದ ಬದುಕುವ ಅನಿವಾರ್ಯತೆ ಇರುವವರು ಏನು ಕೆಲಸ ಮಾಡಬೇಕೆಂದು ಚಿಂತಿಸುವವರು ಅವರಿಗೆ ಹುಟ್ಟಿನಿಂದಲೇ ಕರಗತವಾಗಿರುವ ಅಡುಗೆಯಿಂದ ನಾಲ್ಕು ಕಾಸು ಸಂಪಾದಿಸಿ ಬದುಕಬೇಕು ಎಂದು ಸಹಜವಾಗಿ ತೀರ್ಮಾನ ಮಾಡುತ್ತಾರೆ. ಇಂತಹ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.

ಸ್ತ್ರೀ ಶಕ್ತಿ ಸಂಘಗಳ ಮಹಿಳೆಯರೂ ಸೇರಿದಂತೆ ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಮಹಿಳೆಯರು ಸಣ್ಣ ಸಣ್ಣ ಹೋಟೆಲ್ ನಡೆಸುವುದು, ಮನೆಗೆ ಆಹಾರ ಸಿದ್ಧಪಡಿಸಿ ತಲುಪಿಸುವುದು, ಮಹಾನಗರಗಳಲ್ಲಿ,ಪಟ್ಟಣಗಳಲ್ಲಿ ಆಫೀಸುಗಳಿಗೆ ಆಹಾರ ತಯಾರಿಸಿ ತಲುಪಿಸುವ ಕಾಯಕದಿಂದ ಸ್ವಾಭಿಮಾನದಿಂದ ದುಡಿದು ತಮ್ಮನ್ನು ಅವಲಂಬಿಸಿದ ಮಕ್ಕಳ, ಶಿಕ್ಷಣ, ಆರೋಗ್ಯ ಮತ್ತು ಮನೆಯ ಇತರ ಅವಲಂಬಿತರ ಜವಾಬ್ದಾರಿ ನಿರ್ವಹಣೆ ಮಾಡುತ್ತಿದ್ದಾರೆ. ನಾನೊಂದು ಸಣ್ಣ ಹೊಟೆಲ್ ಗೆ ಹೋಗಿದ್ದೆ. ಅಮ್ಮ ಮಗಳು ಇಬ್ಬರೇ ಪಿಜಿಗಳಿಗೆ ಆಹಾರ ಸಿದ್ಧಪಡಿಸಿಕೊಡುವುದರ ಜೊತೆಗೆ ಕಾಲೇಜಿನ ಮಕ್ಕಳಿಗೂ ಪ್ರೀತಿಯಿಂದ ಶುಚಿಯಾಗಿ ಆಹಾರ ತಯಾರಿಸಿ ಕೊಡುತ್ತಿದ್ದರು.

ಚಹಾ ಕುಡಿಯುತ್ತಾ ಹೀಗೆ ಮಾತಿಗೆಳೆದೆ… ಆಕೆಯ ಗಂಡ ಅನಾರೋಗ್ಯದಿಂದ ತೀರಿಕೊಂಡಾಗ ಎರಡು ಮಕ್ಕಳ ಹೊಟ್ಟೆ ಹೊರೆಯುವ ಚಿಂತೆ ಶುರು ಆದಾಗ ಹೊಳೆದದ್ದೆ ಕರಗತವಾಗಿದ್ದ ಅಡುಗೆ ಕಲೆಯನ್ನೆ ಬಂಡವಾಳ ಮಾಡಿಕೊಳ್ಳುವುದು. ಅವರಿವರ ಹಂಗಿಲ್ಲ, ಕೈತುಂಬಾ ಕೆಲಸ, ಜೀವನ ನಡೀತಿದೆ…ಇನ್ನೇನು ಬೇಕು ಅಂತ ಮಾತು ಮುಗಿಸಿದರು.ಒಮ್ಮೆ ಸಾಗರಕ್ಕೆ ಹೋದಾಗ ಅಪ್ಪಟ ಮಾಂಸಾಹಾರಿ ಹೋಟೆಲ್ ಎಂದು ಬೋರ್ಡ್ ಇದ್ದ ಪುಟ್ಟ ಹೋಟೆಲ್ ಕಣ್ಣಿಗೆ ಬಿತ್ತು..ಅಲ್ಲಿ ಒಳ ಹೊಕ್ಕಾಗ ಕಂಡಿದ್ದು ವಯಸ್ಸಾದ ತಾಯಿ ಮಗಳು.ಬೇರೆ ಯಾವುದೋ ಕಾರಣಕ್ಕೆ ಬದುಕು ಕುಂಟತೊಡಗಿದಾಗಿ ನೆನಪಾಗಿದ್ದು ಅಡುಗೆ.

ಹರೆಯದ ಮಗಳು ಸಂತೆ ಪೇಟೆ ಆಹಾರ ಸಾಮಗ್ರಿಗಳನ್ನು ತರುವ ಜವಾಬ್ದಾರಿ ಹೊತ್ತರೆ ಅವರಮ್ಮ ಮೀನು ಫ್ರೈ, ಚಿಕನ್ ಸಾಂಬಾರು ಮಾಡಿ ಬಡಿಸಿ ನಾಲ್ಕು ಕಾಸು ಸಂಪಾದಿಸುತ್ತಾರೆ. ಹಾಸನದ ಪ್ರೇರಣಾ ಖಾನಾವಳಿ ಆರಂಭವಾದ ಕತೆ ಇನ್ನೂ ವಿಶೇಷ. ಅನೇಕ ಮಹಿಳಾ ದಾನಿಗಳ ಸಹಕಾರದಿಂದ ಸ್ವಾಭಿಮಾನಿ ಮಹಿಳೆಯರು ನಡೆಸುವ ಈ ಖಾನಾವಳಿಗೆ ಆರ್ಥಕವಾಗಿ ಸಹಕರಿಸುವುದರ ಜೊತೆಗೆ ಅವರ ಆಶಯಕ್ಕೆ ನೀರೆರೆದು ಪೋಷಿಸುತ್ತಿರುವವರು ಸಾಮಾಜಿಕ ಹೋರಾಟಗಾರ್ತಿ ಕವಯತ್ರಿ ರೂಪ ಹಾಸನ.

ಸಮಸ್ಯೆಗೆ ಬರೀ ಸಹಾನುಭೂತಿ ತೋರಿಸುವವರು ಹಲವರು.. ಆದರೆ ನಿಜವಾದ ಕಾಳಜಿವುಳ್ಳವರು ಅವರಿಗೆ ತುರ್ತಾಗಿ ಆಗಬೇಕಾದ ಸಹಾಯದ ಬಗ್ಗೆ ಗಮಗಹರಿಸಬೇಕು. ನಾನು ಮತ್ತು ನಮ್ಮ ತಂಡ ಅವರಿಗೆ ಬೇಕಾದ ಮಾನಸಿಕ ಧೈರ್ಯ ತುಂಬಿದ್ದಲ್ಲದೆ ಆರ್ಥಿಕ ಸಹಾಯದ ಜೊತೆಗೆ ಅವರ ಜೊತೆ ನಿಂತಿರುವುದು ಸಂತಸ ತಂದಿದೆ ಎನ್ನುತ್ತಾರೆ. ಹೀಗೆ ರಾಜ್ಯಾದ್ಯಂತ ಹಲವು ಉತ್ಸಾಹಿ ಮತ್ತು ಅಗತ್ಯ ಇರುವ ಅನೇಕ ಮಹಿಳೆಯರ ಸ್ವಾವಲಂಬಿ ಬದುಕಿಗೆ ದಾರಿ ತೋರಿದ್ದು ಅವರಿಗೆ ಸುಲಭವಾಗಿ ಕರಗತವಾದ ಅಡುಗೆ ಕಲೆ.

ಸರ್ಕಾರಿ ಆಫೀಸ್‌ಗಳು, ಕೈಗಾರಿಕಾ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಇರುವ ಕಡೆ ಸಣ್ಣ ಸಣ್ಣ ಮೆಸ್ ಗಳನ್ನು ನಾವೆಲ್ಲರೂ ನೋಡುತ್ತೇವೆ.ಕೈಗೆಟುಕುವ ಬೆಲೆಯಲ್ಲಿ ಅಚ್ಚುಕಟ್ಟಾಗಿ ಅಡುಗೆ ಮಾಡಿ ಬಡಿಸುವ ಮಹಿಳೆಯರಿಗೊಂದು ಸಲಾಂ. ವಯಸ್ಸಾದ ಅನೇಕ ಅಜ್ಜಿಯರು ಮಕ್ಕಳೊಂದಿಗೆ ಹೊಂದಾಣಿಕೆ ಸಮಸ್ಯೆ ಬಂದಾಗ ಅವರಿಗೆ ಗೊತ್ತಿರುವ ಅಡುಗೆ ಮಾಡಿ ಜೀವನ ದೂಡುತ್ತಾರೆ.ಹೀಗೆ ಒಂದು ವಯಸ್ಸಾದ ಜೋಡಿ ರಸ್ತೆಯ ಮೂಲೆಯಲ್ಲಿ ಎಳನೀರು ಮಾರುತ್ತಿದ್ದರು. ಎರಡನೇ ವಾರ ಎಳನೀರು ಜೊತೆಗೆ ಬಾಳೆಹಣ್ಣು ಕೊಡಲಾರಂಭಿಸಿದರು. ಒಂದು ತಿಂಗಳಲ್ಲಿ ಅಜ್ಜಿಯ ಕೈ ರುಚಿ ಬಜ್ಜಿ ಬೊಂಡ ಶುರು ಆಗಿ ಈಗ ಒಂದು ಸಣ್ಣ ಹೊಟೆಲ್‌ನಲ್ಲಿ ಬಜ್ಜಿ ಬೊಂಡ ಜೊತೆಗೆ ಅನ್ನ ಸಾಂಬಾರು ಕಬಾಬ್ ಮಾಡಿ ಬಡಿಸುತ್ತಾರೆ.ಕೈಲಾಗುವವರೆಗೂ ದುಡಿದು ತಿನ್ನಬೇಕು ಅನ್ನುವುದು ಅಜ್ಜಿಯ ಹಂಬಲ.ಹೀಗೆ ಅನೇಕ ಮಹಿಳೆಯರು ದುಡಿದು ಬದುಕು ಕಟ್ಟಿಕೊಂಡಿರುವುದು ಇನ್ನೂ ಹಲವರಿಗೆ ಸ್ಪೂರ್ತಿಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ