ಸಾಬು ದಸ್ತಗೀರ್ ಎಂದರೆ ಮೈಸೂರಿನ ಜನರಿಗೆ ಈಗ ಅಪರಿಚಿತ ಹೆಸರು. ಆದರೆ ಹಾಲಿವುಡ್ ಸಿನಿಮಾ ಜಗತ್ತಿಗೆ ಈ ಹೆಸರು ಚಿರಪರಿಚಿತ. ಎಚ್.ಡಿ.ಕೋಟೆಯ ಕಾರಾಪುರದಲ್ಲಿ ಜನಿಸಿ, ಎಳವೆಯಲ್ಲಿಯೇ ತಂದೆ ತಾಯಿಗಳನ್ನು ಕಳೆದುಕೊಂಡು ಮೈಸೂರು ಮಹಾರಾಜರ ಆನೆ ಲಾಯದಲ್ಲಿ ಬೆಳೆದ ಬಾಲಕ ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿ, ಅಮೆರಿಕದ ಅಧ್ಯಕ್ಷರ ಖಾಸಾ ದೋಸ್ತ್ ಆಗುವಷ್ಟರ ಮಟ್ಟಕ್ಕೆ ಬೆಳೆದ ವಿಷಯ ಸಿನಿಮಾ ಕಥೆಯಷ್ಟೇ ರೋಚಕವಾಗಿದೆ.

ಬಿಸಿಲ ಝಳದ ರಕ್ಷಣೆಗಾಗಿ ತಲೆಯ ಮೇಲೆ ರೌಂಡ್ ಟೋಪಿ, ಬ್ಯಾಗಿ ಪ್ಯಾಂಟು- ದೊಗಳೆ ಶರ್ಟ್ ಧರಿಸಿರುವ ವ್ಯಕ್ತಿಯೊಬ್ಬರು ಮೈಸೂರು ಅರಮನೆ ಬಳಿ ಬಂದರು. ಅಲ್ಲಿ ಅವರಿಗೆ ಹುಡುಕುತ್ತಿದ ಬಳ್ಳಿ ಕಾಲ ಬುಡಕ್ಕೆ ತಗುಲಿದಂತೆ ಆಯಿತು. ಲಾಯದಲ್ಲಿ ಆನೆಗಳ ಜತೆ ಆಡವಾಡುತ್ತಿದ್ದ ನಾಲ್ಕು ವರ್ಷದ ಪುಟ್ಟ ಬಾಲಕ ಅವರ ಕಣ್ಣಿಗೆ ಬಿದ್ದ. ತಕ್ಷಣವೇ ಹಿಂದೆ-ಮುಂದೆ ನೋಡದೆ ತಮ್ಮ ಚಿತ್ರಕ್ಕೆ ಈತನೇ ನಾಯಕ ಎಂದು ನಿರ್ಧರಿಸಿಬಿಟ್ಟರು ಆ ವ್ಯಕ್ತಿ.
ಆ ವ್ಯಕ್ತಿ ಬೇರೆ ಯಾರೂ ಅಲ್ಲ. ಇಂಗ್ಲೆಂಡಿನ ಅಂದಿನ ಪ್ರಸಿದ್ಧ ಚಿತ್ರ ನಿರ್ದೇಶಕ ರಾಬರ್ಟ್ ಪ್ಲಾಟರಿ. ೪೦ರ ದಶಕದಲ್ಲಿ ಭಾರಿ ಸದ್ದು ಮಾಡಿದ ‘ ದಿ ಎಲಿಫೆಂಟ್ ಬಾಯ್’ ಚಿತ್ರಕ್ಕೆ ನಾಯಕನನ್ನು ಹುಡುಕಿಕೊಂಡು ಬಂದ ಅವರಿಗೆ ಸಿಕ್ಕಿದ ಹುಡುಗನೇ ಸಾಬು ದಸ್ತಗೀರ್.
ಆಂದು ಮೈಸೂರು ಸಂಸ್ಥಾನದ ಭಾಗವಾಗಿದ್ದ ಎಚ್.ಡಿ.ಕೋಟೆಯ ಕಾರಾಪುರದ ಕಾಡಿನಲ್ಲಿ ೧೯೨೪ರಲ್ಲಿ ಜನಿಸಿದ ಸಾಬು ದಸ್ತಗೀರ್ ಚಿಕ್ಕಂದಿನಲ್ಲಿಯೇ ತಂದೆ-ತಾಯಿಗಳನ್ನು ಕಳೆದುಕೊಂಡು ಮೈಸೂರು ಮಹಾರಾಜರ ಆನೆ ಲಾಯದಲ್ಲಿ ಜೀವನ ಸಾಗಿಸುತ್ತಿದ್ದ. ಆನೆಗಳ ಜೊತೆ ಆತನ ಬಾಂಧವ್ಯ ಅಚ್ಚರಿ ಹುಟ್ಟಿಸುವಂತಿತ್ತು. ಆನೆಗಳು ಆತ ಹೇಳಿದಂತೆ ಕೇಳುತ್ತಿದ್ದವು. ರಾಬರ್ಟ್ ಪ್ಲಾಟರಿಗೂ ಇದೇ ಬೇಕಾಗಿತ್ತು.
‘ಜಂಗಲ್‌ಬುಕ್’ ಖ್ಯಾತಿಯ ಭಾರತ ಸಂಜಾತ ಕತೆಗಾರ ರುಡ್ಯಾರ್ಡ್ ಕ್ಲಿಪಿಂಗ್‌ನ ಸಣ್ಣ ಕಥೆ ಆಧಾರಿತ ಸಿನಿಮಾಕ್ಕೆ ತಕ್ಕ ಬಾಲ ನಟ ಸಾಬು ರೂಪದಲ್ಲಿ ಸಿಕ್ಕೇಬಿಟ್ಟ.
‘ದಿ ಎಲಿಫೆಂಟ್ ಬಾಯ್’
ಆನೆಗಳೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದ ಸಾಬುವನ್ನು ತನ್ನ ಸಿನಿಮಾದ ನಾಯಕನನ್ನಾಗಿ ಆ್ಂಕೆು ಮಾಡಿಕೊಂಡ ರಾಬರ್ಟ್ ಫ್ಲಾಟರಿ, ಆತನನ್ನು ಲಂಡನ್‌ಗೆ ಕರೆದುಕೊಂಡು ಹೋದ, ಅಲ್ಲಿ ಇಂಗ್ಲಿಷ್ ಕಲಿಸಿದ, ನಟನೆ ಹೇಳಿಕೊಟ್ಟ. ೧೯೩೭ ರ ವೇಳೆಗೆ ಸಾಬು ನ ಮೊದಲ ಸಿನಿಮಾ ’ದಿ ಎಲಿಫೆಂಟ್ ಬಾಯ್’ ಬಿಡುಗಡೆ ಆಯಿತು. ಸಿನಿಮಾ ಸೂಪರ್ ಹಿಟ್ ಆಯಿತು. ಅಲ್ಲಿಂದ ಸಾಬು ಹಿಂತಿರುಗಿ ನೋಡಲಿಲ್ಲ.
ಮೊದಲ ಮೋಗ್ಲಿ ಸಾಬು ದಸ್ತಗೀರ್
ಸಾಬು ಸಿನಿ ಪಯಣ ಆಗಷ್ಟೆ ಆರಂಭವಾಗಿತ್ತು, ಎಲಿಫೆಂಟ್ ಬಾಯ್ ಹಿಟ್ ಆದ ನಂತರ, ’ದಿ ಥೀಫ್ ಆಫ್ ಬಾಗ್ದಾದ್’, ’ಅರೇಬಿಯನ್ ನೈಟ್ಸ್’, ’ದಿ ಡ್ರಮ್’ ಹೀಗೆ ಸಿನಿಮಾಗಳ ಮೇಲೆ ಸಿನಿಮಾಗಳನ್ನು ಮಾಡಿದರು. ಜಗತ್ ಪ್ರಸಿದ್ಧ ’ದಿ ಜಂಗಲ್ ಬುಕ್’ ಮೊದಲ ಸಿನಿಮಾದಲ್ಲಿ ಮೋಗ್ಲಿ ಪಾತ್ರ ಮಾಡಿದವರು ಇದೇ ಸಾಬು ದಸ್ತಗೀರ್.
೧೯೪೦ರ ಅವಧಿಯಲ್ಲಿ ಎರಡನೇ ಮಹಾಯುದ್ದದ ಸಮಯದಲ್ಲಿ ಚಿತ್ರೋದ್ಯಮಿಗಳು ಲಂಡನ್ ತೊರೆದು ಅಮೆರಿಕಾದ ಹಾಲಿವುಡ್‌ಗೆ ಸ್ಥಳಾಂತರಗೊಂಡರು. ಅಲ್ಲಿಯೂ ಜನ ಮನ್ನಣೆಗಳಿಸಿದ ಸಾಬು ದೊಡ್ಡ ಸ್ಟಾರ್ ಆದರು. ಅತ್ಯಂತ ಕಡಿಮೆ ಅವಧಿಯಲ್ಲಿ ೨೩ ಸಿನಿಮಾಗಳಲ್ಲಿ ನಟಿಸಿದ ಸಾಬು, ದೊಡ್ಡ ಮಟ್ಟದ ಅಭಿಮಾನಿಗಳನ್ನು ಸಂಪಾದಿಸಿದ್ದರು. ಅಮೆರಿಕಾದ ಅಂದಿನ ಅಧ್ಯಕ್ಷ ರೊನಾಲ್ಡ್ ರೇಗನ್ ಜತೆಗೂ ಆತ್ಮಿಯ ಗೆಳೆತನ ಹೊಂದಿದ್ದರು.
ಸಹನಟಿ ಮಾರ್ಲಿನ್ ಕೂಪರ್ ಅವರನ್ನು ವಿವಾಹವಾಗಿ ಇಬ್ಬರು ಮಕ್ಕಳನ್ನು ಪಡೆದ ಸಾಬು ಬದುಕಿನ ಪಯಣ ಅಲ್ಲಿವರೆಗೂ ಸಿನಿಮಾ ಕಥೆಯಂತೆಯೇ ಇತ್ತು. ಆದರೆ ಸಿನಿ ಬದುಕಿನ ಉತ್ತುಂಗದಲ್ಲಿರುವಾಗ ೪೦ನೇ ವರ್ಷಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇರುವಾಗಲೇ ಸಾಬು ಹೃದಯಾಘಾತಕ್ಕೀಡಾಗಿ ಅಕಾಲಿಕ ಮರಣ ಹೊಂದಿದರು.
ನಿಧನಕ್ಕೆ ಎರಡು ದಿನಗಳ ಮುನ್ನ ಸಾಬು ವೈದ್ಯರ ಬಳಿಗೆ ಮಾಮೂಲಿ ತಪಾಸಣೆಗೆ ತೆರಳಿದ್ದರು. ‘‘ಎಲ್ಲರೂ ನಿನ್ನಷ್ಟು ಆರೋಗ್ಯವಂತರಾದರೆ ನಾನು ಕೆಲಸವಿಲ್ಲದೆ ಮನೆಯಲ್ಲಿರಬೇಕಾಗುತ್ತದೆ’’ ಎಂದು ವೈದ್ಯರು ಆತನ ಆರೋಗ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಆದರೆ ವಿಧಿಯಾಟ ಬೇರೆಯೇ ಇತ್ತು !
ಹಾಲ್ ಆಫ್ ಫೇಮ್ ನಲ್ಲಿ ಸ್ಥಾನ
ಸಾಬು ಅವರನ್ನು ಕ್ಯಾಲಿಫೋರ್ನಿಯಾದ ಖ್ಯಾತ ಫಾರೆಸ್ಟ್ ಲಾನ್ ಮೆಮೋರಿಯಲ್ ಪಾರ್ಕ್‌ನಲ್ಲಿ ಸಕಲ ಗೌರವಗಳೊಂದಿಗೆ, ಹಾಲಿವುಡ್‌ನ ದಂತಕತೆಗಳಾದ ವಾಲ್ಟ್ ಡಿಸ್ನಿ, ಎಲಿಜಬೆತ್ ಟೈಲರ್ ಅವರ ಸಮಾಧಿ ಪಕ್ಕದಲ್ಲಿೆುೀಂ ಮಣ್ಣು ಮಾಡಲಾಯಿತು. ಇಷ್ಟೇ ಅಲ್ಲ, ಹಾಲಿವುಡ್‌ನ ಪ್ರತಿಷ್ಠಿತ ’ವಾಕ್ ಆಫ್ ಫೇಮ್’ ನಲ್ಲಿ ಸಾಬುಗೆ ಸ್ಥಾನ ನೀಡಲಾಗಿದೆ. ವಾಕ್ ಆಫ್ ಫೇಮ್‌ನಲ್ಲಿರುವ ಏಕೈಕ ಭಾರತೀಯ ನಟ ಸಾಬು ದಸ್ತಗಿರ್.
ಮೈಸೂರಿನ ನೆನಪು
ಹಾಲಿವುಡ್ ಚಿತ್ರ ಜಗತ್ತಿನ ಕಣ್ಣು ಕೊರೈಸುವ ದೀಪಗಳು, ಕಿವಿಗಡಚಿಕ್ಕುವ ಡೈನಮೋ ಸದ್ದು ಇವುಗಳ ಮಧ್ಯೆ ಓಡಾಡುತ್ತಿದ್ದರೂ ಸಾಬು ದಸ್ತಗೀರ್ ಗೆ ಚಿಕ್ಕವನಿದ್ದಾಗ ಕಾಡು- ಪ್ರಾಣಿಗಳ ನಡುವೆ ಕಳೆದ ಮೈಸೂರಿನ ನೆನಪು ಕಾಡುತ್ತಿತ್ತು. ಆಗ ಸ್ಥಳೀಯ ಪ್ರಾಣಿ ಸಂಗ್ರಹಾಲಯಗಳಿಗೆ ಭೇಟಿ ನೀಡಿ ಗಂಟೆಗಟ್ಟಲೆ ಅಲ್ಲಿನ ಪ್ರಾಣಿಗಳ ಜತೆ ಕಾಲ ಕಳೆಯುತ್ತಿದ್ದರು. ಅದರಲ್ಲೂ ಮೃಗಾಲಯದ ಆನೆಗಳ ಜತೆ ವಿಶೇಷ ನಂಟು ಬೆಳೆಸಿಕೊಂಡಿದ್ದರು. ಲಂಡನ್‌ನ ಪ್ರಖ್ಯಾತ ಮೃಗಾಲಯದಲ್ಲಿ ಈಗಲೂ ಸಾಬು ಅವರ ಚಿತ್ರಗಳಿವೆ.