Mysore
18
few clouds

Social Media

ಗುರುವಾರ, 16 ಜನವರಿ 2025
Light
Dark

ಹತ್ತು ಮಂದಿಯನ್ನು ಬಲಿ ಪಡೆದ ಕರಾಳ ದಿನ!

 

-ಬೆಟ್ಟಯ್ಯ ಕೋಟೆ

೫೦ನೇ ವರ್ಷ ಪೂರೈಸುತ್ತಿರುವ ‘ಆಂದೋಲನ’ ದಿನಪತ್ರಿಕೆಯು ದಲಿತ ಚಳವಳಿಯ ಬೆನ್ನೆಲುಬು ಎಂದೇ ಹೇಳಬಹುದು. ಹೌದು, ಇಲ್ಲಿನ ಸರಸ್ವತಿಪುರಂನ ಯಜಮಾನ ಪ್ರಕಾಶನದಲ್ಲಿ ನಮ್ಮ ಹಾಗೂ ರಾಜಶೇಖರ ಕೋಟಿ ಅವರ ನಡುವಿನ ಮೊದಲ ಭೇಟಿಯಾಯಿತು. ಆಗಿನ್ನೂ ‘ಆಂದೋಲನ’ ಪತ್ರಿಕೆ ಆರಂಭವಾಗಿರಲಿಲ್ಲ.

ಪತ್ರಿಕೆ ಹುಟ್ಟಿಕೊಂಡ ಆರಂಭದಲ್ಲಿ ಅದನ್ನು ಚಳವಳಿಯ ಕರಪತ್ರಗಳಂತೆ ಕೋಟಿಯವರೊಂದಿಗೆ ಸೇರಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೆವು. ಈ ನಿಟ್ಟಿನಲ್ಲಿ ಆಂದೋಲನ- ದಲಿತ ಸಂಘರ್ಷ ಸಮಿತಿ ಹಾಗೂ ಚಳವಳಿಗಳ ಜೊತೆಯಾಗಿ ಬೆಳೆದು ಬಂದಿತು. ಕೋಟಿಯವರು ದಸಂಸದೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು. ನಾವೂ ಕೂಡ ಕೋಟಿ ಅವರನ್ನು ಹೊರತುಪಡಿಸಿ ಯಾವುದೇ ಕಾರ್ಯಕ್ರಮ ಮಾಡುತ್ತಿರಲಿಲ್ಲ. ಏಕೆಂದರೆ ಅವರೇ ನಮ್ಮ ಚಳವಳಿಗೆ ಬೆಂಗಾವಲಾಗಿ, ಬೆಂಬಲಿಗರಾಗಿ, ಮಾರ್ಗದರ್ಶಕರಾಗಿ ಬಹಳಷ್ಟು ತಮ್ಮದೇ ಆದ ಕೊಡುಗೆಯನ್ನೂ ನೀಡಿದ್ದರು.

೧೯೯೬, ಡಿ.೨೩ರಂದು ಮೈಸೂರಿನಲ್ಲಿ ಅಂಬೇಡ್ಕರ್ ಪರಿನಿರ್ವಾಣ ದಿನವನ್ನು ‘ಶೋಷಿತರ ಐಕ್ಯತಾ ಸಮಾವೇಶ’ದ ಬ್ಯಾನರ್‌ಅಡಿಯಲ್ಲಿ ಆಚರಣೆ ಮಾಡಲಾಗುತ್ತಿತ್ತು. ಆ ದಿನ ಎಚ್.ಡಿ.ಕೋಟೆ ಭಾಗದ ಸುಮಾರು ೨ ಸಾವಿರ ದಸಂಸ ಕಾರ್ಯಕರ್ತರು ಮೈಸೂರಿಗೆ ಬರುತ್ತಿದ್ದರು. ಈ ಸಂದರ್ಭದಲ್ಲಿ ನಾನೇ ಕುಳಿತಿದ್ದ ಲಾರಿಯೊಂದು ಅಪಘಾತಕ್ಕೀಡಾಗಿ ಅದರಲ್ಲಿದ್ದ ೧೦ ಮಂದಿ ಕಾರ್ಯಕರ್ತರು ತೀರಿಕೊಂಡರು. ಅದು ನಮ್ಮ ಪಾಲಿನ ಕರಾಳದಿನವಾಗಿತ್ತು. ಗಂಭೀರ ಹಾಗೂ ಸಣ್ಣಪುಟ್ಟ ಗಾಯಗಳಾದವರು ಬದುಕಿಕೊಂಡರು. ಅಂದು ಮುಖ್ಯಮಂತ್ರಿಗಳಾಗಿದ್ದ ಜೆ.ಎಚ್.ಪಟೇಲ್ ಅವರು ತಮ್ಮದೇ ಕ್ಷೇತ್ರದಲ್ಲಿ ಅಪಘಾತದಲ್ಲಿ ಮೃತಪಟ್ಟ ಜನರಿಗೆ ಪರಿಹಾರ ನೀಡಿದರೇ ವಿನಃ, ನಮ್ಮ ಕಾರ್ಯಕರ್ತರ ನೆರವಿಗೆ ಬರಲೇ ಇಲ್ಲ. ಈ ವೇಳೆ ರಾಜಶೇಖರ ಕೋಟಿ ಅವರು ಜವಾಬ್ದಾರಿ ತೆಗೆದುಕೊಂಡು, ‘ಪತ್ರಿಕೆ’ಯ ಮೂಲಕ ವಂತಿಗೆ ಸಂಗ್ರಹಿಸಿ ನೊಂದ ಕುಟುಂಬಗಳಿಗೆ ಸಹಕರಿಸುವ ಕೆಲಸ ಮಾಡಿದರು. ಹಾಗಾಗಿ ಮೈಸೂರಿನಲ್ಲಿ ದಲಿತ ಚಳವಳಿಗೆ ಭರವಸೆಯ ಬೆಳಕಾಗಿ ‘ಆಂದೋಲನ’ ಪತ್ರಿಕೆ ಹಾಗೂ ಕೋಟಿ ಅವರು ನಿಂತರು. ದಸಂಸ ಚಳವಳಿ ಮೈಸೂರಿನಲ್ಲಿ ತನ್ನ ನೆಲೆ ಗಟ್ಟಿಗೊಳಿಸಿಕೊಳ್ಳಲು ಕೋಟಿ ಅವರೇ ಕಾರಣ. ಅವರ ಆದರ್ಶಗಳನ್ನು ಇನ್ನಷ್ಟು ಹೆಚ್ಚಾಗಿ ಮೈಗೂಡಿಸಿಕೊಳ್ಳಬೇಕಿದೆ.

ಜೈಲಿನಲ್ಲಿದ್ದಾಗ ನೆರವಿಗೆ ನಿಂತ ‘ಆಂದೋಲನ’
ಧರ್ಮಾಪುರದಲ್ಲಿ ಭೂ ಅಕ್ರಮ ಹೋರಾಟದ ಸಂದರ್ಭದಲ್ಲಿ ಅರಣ್ಯ ಹಾಗೂ ಪೊಲೀಸ್ ಇಲಾಖೆಗಳು ದಸಂಸ ಕಾರ್ಯಕರ್ತರನ್ನು ಬಂಧಿಸಿ, ದೌರ್ಜನ್ಯವನ್ನೂ ನಡೆಸುತ್ತಿತ್ತು. ಈ ವೇಳೆ ‘ಆಂದೋಲನ’ ದಿನಪತ್ರಿಕೆ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಹೋರಾಟದ ರೂಪುರೇಷೆಗಳನ್ನು, ಅರಣ್ಯ ಮತ್ತು ಪೊಲೀಸ್ ಇಲಾಖೆಗಳ ಅಕ್ರಮಗಳನ್ನು ಬಯಲಿಗೆಳೆಯುತ್ತಾ ಲೇಖನಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದು ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಯಿತು. ಹಾಗಾಗಿ ದಲಿತ ಸಂಘರ್ಷ ಸಮಿತಿಯ ಎಲ್ಲ ಹೋರಾಟಗಳಲ್ಲೂ ‘ಆಂದೋಲನ’ದ ಕುರುಹು ಇದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ