Light
Dark

ಯುವ ಭಾರತದ ಯುವ ಐಕಾನ್ ಚೇತನ ಭಗತ್

ಲೇಖಕ, ಅಂಕಣಕಾರ, ನಟ, ಚಿತ್ರಕಥೆಗಾರ, ರಿಯಾಲಿಟಿ ಶೋ ತೀರ್ಪುಗಾರ, ಈಗ ಮೋಟಿವೇಷನಲ್ ಸ್ಪೀಕರ್ (ಪ್ರೇರಣಾ ಭಾಷಣಕಾರ) ! ೨೦೦೪ ರಲ್ಲಿ ಪ್ರಕಟವಾದ ಅವರ ಮೊದಲ ಕಾದಂಬರಿ ‘ಫೈವ್ ಪಾಯಿಂಟ್ ಸಮ್‌ಒನ್’ ನಿಂದ ಹಿಡಿದು ಇಂದಿನವರೆಗೆ ಅವರು ಒಂದಲ್ಲಾ ಒಂದು ರೀತಿಯಲ್ಲಿ ಎಲ್ಲರ ಗಮನ ಸೆಳೆಯುತ್ತಾ ಬಂದಿದ್ದಾರೆ. ಅವರ ೫ ಕಾದಂಬರಿಗಳು ಬಾಲಿವುಡ್‌ನ ೩ ಈಡಿಯಟ್ಸ್, ೨ ಸ್ಟೇಟ್ಸ್ ನಂತಹ ಸೂಪರ್ ಹಿಟ್ ಚಲನಚಿತ್ರಗಳಾಗಿ ಬಂದಿವೆ. ದೇಶದ ಅತಿ ಹೆಚ್ಚು ಮಾರಾಟವಾಗುವ ಕೃತಿಗಳ ಲೇಖಕರಲ್ಲಿ ಒಬ್ಬರಾದ ಚೇತನ್ ಭಗತ್ ಇತ್ತೀಚೆಗೆ ಮೊಟ್ಟ ಮೊದಲ ಬಾರಿಗೆ ಮೈಸೂರಿಗೆ ‘ಯಶಸ್ಸಿನ ವ್ಯಾಖ್ಯಾನ’ ಕುರಿತಾಗಿ ಪ್ರೇರಣಾ ಭಾಷಣಕಾರರಾಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭದಲ್ಲಿ ‘ಆಂದೋಲನ’ ದಿನಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನ ಇಲ್ಲಿದೆ.

ಭವ್ಯ ತಿಮ್ಮಯ್ಯ, ಪ್ರಾಧ್ಯಾಪಕಿ

ಆಂದೋಲನ: ನಿಮ್ಮ ಇಲ್ಲಿಯವರೆಗಿನ ಸಾಹಿತ್ಯ ಪಯಣದ ಕುರಿತು ನಿಮ್ಮ ಅನಿಸಿಕೆ?
     ಚೇತನ್ ಭಗತ್: ಇಲ್ಲಿಯವರೆಗಿನ ನನ್ನ ಸಾಹಿತ್ಯ ಪಯಣದ ಅನುಭವ ಬಹಳ ಅದ್ಭುತವಾಗಿದೆ. ನಾನು ಇಲ್ಲಿಯವರೆಗೆ ರಚಿಸಿರುವ ಪುಸ್ತಕಗಳಲ್ಲಿ ೧೦ ಪುಸ್ತಕಗಳು ಅತಿ ಹೆಚ್ಚು ಮಾರಾಟವಾಗಿವೆ. ಇಂದಿನ ಯುವ ಪೀಳಿಗೆಗೆ ಸಾಮಾಜಿಕ ಜಾಲತಾಣಗಳಿಂದ ದೂರವಿರುವುದು ಕಷ್ಟ. ಅವರ ಉತ್ತಮ ಭವಿಷ್ಯಕ್ಕಾಗಿ, ಒಳ್ಳೆಯ ವಿಚಾರಗಳನ್ನು ಮೈಗೂಡಿಸಿಕೊಳ್ಳಲು ಹಾಗೂ ಓದಿಗೆ ಹೆಚ್ಚಿನ ಒತ್ತು ನೀಡುವುದಕ್ಕೆ ಪ್ರೇರೇಪಿಸುವುದು ನನ್ನ ಗುರಿಯಾಗಿದೆ.

ಆಂದೋಲನ: ನಿಮ್ಮ ನೆಚ್ಚಿನ ಹವ್ಯಾಸ ?
     ಚೇತನ್ ಭಗತ್: ಬರವಣಿಗೆ ಸದಾಕಾಲದಿಂದಲೂ ನನ್ನ ನೆಚ್ಚಿನ ಹವ್ಯಾಸವಾಗಿದೆ. ಆದರೆ ಅದರ ಮೂಲಕ ಜನರನ್ನು ತಲುಪುವುದು ಹಾಗೂ ಅವರ ಜೀವನದಲ್ಲಿ ಗುರುತರವಾದ ಛಾಪು ಮೂಡಿಸುವುದು ನನ್ನನ್ನು ಹೆಚ್ಚಾಗಿ ಉತ್ತೇಜಿಸುತ್ತದೆ. ಲೇಖಕರು ತಮ್ಮ ಬರವಣಿಗೆಯಿಂದ ಓದುಗರಲ್ಲಿ ಸ್ಪೂರ್ತಿ ತುಂಬಬೇಕು ಎಂಬುದೇ ನನ್ನ ಅಭಿಪ್ರಾಯ.

ಆಂದೋಲನ: ಚೇತನ್ ಭಗತರ ನಿಜವಾದ ವ್ಯಕ್ತಿತ್ವ ಯಾವುದು?
    ಚೇತನ್ ಭಗತ್ : ನಾನು ಏನೇ ಮಾಡಿದರೂ ಕಾಯಾ, ವಾಚಾ ಮನಸಾ ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ. ಕೀರ್ತಿ ನನ್ನ ಮೇಲೆ ಹಾವಿಯಾಗಲು ಬಿಡುವುದಿಲ್ಲ. ಪ್ರತಿ ದಿನ ಉತ್ತಮ ಮನುಷ್ಯನಾಗಲು ಪ್ರಯತ್ನಿಸುವುದರಿಂದ ಅದು ನಮ್ಮನ್ನು ಬಹು ದೂರದವರೆಗೆ ಕೊಂಡೊಯ್ಯುತ್ತದೆಂದು ನಂಬಿದ್ದೇನೆ.

ಆಂದೋಲನ: ನೀವು ಜನರ ಲೇಖಕರಾಗಿ ಉಳಿಯಲು ಬಯಸುತ್ತೀರೋ ಅಥವಾ ಪ್ರತಿಷ್ಠಿತ ಪ್ರಶಸ್ತಿ ವಿಜೇತ ಲೇಖಕರಾಗಲು ಬಯಸುತ್ತೀರೋ?
     ಚೇತನ್ ಭಗತ್: ನಾನು ಜನರ ಲೇಖಕನಾಗಿ ಉಳಿಯಲು ಬಯಸುತ್ತೇನೆ.

ಆಂದೋಲನ: ನೀವು ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ. ಅದಕ್ಕೆ ಟೀಕೆಗಳು ವ್ಯಕ್ತವಾದಾಗ ಹೇಗೆ ಸ್ವೀಕರಿಸುತ್ತೀರಿ?
     ಚೇತನ್ ಭಗತ್: ಒಬ್ಬ ಲೇಖಕನಾಗಿ ನನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ನನ್ನ ಕರ್ತವ್ಯ. ನಾನು ಯಾವಾಗಲೂ ನನ್ನ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಧನಾತ್ಮಕವಾಗಿ ರೂಪಿಸಲು ಪ್ರಯತ್ನಿಸುತ್ತೇನೆ. ಹಾಗಾಗಿ ಟೀಕೆಗಳು ಹೆಚ್ಚಾಗಿ ನನ್ನನ್ನು ಬಾಧಿಸುವುದಿಲ್ಲ.
ಇತ್ತೀಚಿನ ಉದಾಹರಣೆಯನ್ನೇ ತೆಗೆದುಕೊಳ್ಳಿ. ಇಡೀ ದೇಶದಲ್ಲೇ ಪುರಾತನ ಹಿಂದೂ ದೇವಾಲಯಗಳ ಮರು ಸ್ಥಾಪನೆಯ ಕುರಿತು ಚರ್ಚೆಗಳು ನಡೆಯುತ್ತಿರುವಾಗ ನನ್ನ ಸಲಹೆಯೇನೆಂದರೆ ಇಸ್ತಾನ್‌ಬುಲ್‌ನಲ್ಲಿ ಚರ್ಚ್ ಹಾಗೂ ಮಸೀದಿ ಎರಡೂ ಒಂದೇ ಸ್ಥಳದಲ್ಲಿರುವಂತೆ ಭಾರತದಲ್ಲಿಯೂ ಎಲ್ಲ ಧಾರ್ಮಿಕ ಕ್ಷೇತ್ರಗಳೂ ಸಹಬಾಳ್ವೆಯಿಂದ ಇರಲು ಸಾಧ್ಯ ಎಂಬುದಾಗಿದೆ.

ಆಂದೋಲನ: ಬಹಳಷ್ಟು ವಿಮರ್ಶಕರು ನಿಮ್ಮ ಭಾಷಾ ಪ್ರೌಢಿಮೆಯ ಬಗ್ಗೆ ಕಟುವಾಗಿ ಟೀಕಿಸಿದ್ದಾರೆ. ಅದು ನಿಮ್ಮನ್ನು ಕಾಡುತ್ತದೆಯೇ?
    ಚೇತನ್ ಭಗತ್: ಬಿಲ್ ಗೇಟ್ಸ್ , ಲೇಖಕ ಹಾಗೂ ಕವಿ ಗುಲ್ಜಾರ್ ಹೀಗೆ ಹಲವಾರು ಮಂದಿ ನನ್ನ ಬರವಣಿಗೆಯನ್ನು ಮೆಚ್ಚಿ ಬೆನ್ನು ತಟ್ಟಿದ್ದಾರೆ. ಈಗಾಗಲೇ ನಾನು ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದ್ದೇನೆ. ನನಗಿಂತ ಹೆಚ್ಚಾಗಿ ಪ್ರಸಿದ್ಧರಾಗಿರುವವರೆಲ್ಲಾ ನನ್ನ ಬರವಣಿಗೆಯನ್ನು ಮೆಚ್ಚಿ, ಹೊಗಳಿದ್ದಾರೆ. ಹಾಗಾಗಿ ಟೀಕೆಗಳು ನನ್ನನ್ನು ಕಾಡುವುದಿಲ್ಲ.
ನನ್ನನ್ನು ಕಾಡುವ ವಿಷಯವೆಂದರೆ ಇಂದಿನ ಯುವ ಪೀಳಿಗೆ ಪುಸ್ತಕಗಳನ್ನು ಓದುವ ಬದಲಾಗಿ ಟಿಕ್ ಟಾಕ್ ಹಾಗೂ ಇನ್ಸ್ಟಾ ರೀಲ್‌ಗಳಲ್ಲಿ ಮುಳುಗಿ ಹೋಗಿದ್ದಾರೆ. ಅವರನ್ನು ಮತ್ತೆ ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ನಾನು ಬರೆಯುತ್ತಿದ್ದೇನೆ. ಅದಕ್ಕಾಗಿ ನನ್ನನ್ನು ಟೀಕಿಸಿದರೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ.

ಆಂದೋಲನ: ಹಾಗಾದರೆ ನಿಮ್ಮ ಗುರಿ ಯುವ ಪೀಳಿಗೆಯೇ?
    ಚೇತನ್ ಭಗತ್: ಯಾರೆಲ್ಲಾ ಓದಲು ಆಸಕ್ತಿ ತೋರುತ್ತಾರೋ ಅಥವಾ ಲೇಖಕರಾಗಲು ಬಯಸುತ್ತಾರೋ ಎಲ್ಲರನ್ನೂ ಉತ್ತೇಜಿಸಬೇಕು.

ಆಂದೋಲನ: ನಿಮ್ಮ ನೆಚ್ಚಿನ ಪಾತ್ರ ಯಾವುದು? ಲೇಖಕರಾಗಿಯೋ, ಅಂಕಣಕಾರರಾಗಿಯೋ, ಯೂ- ಟ್ಯೂಬರ್ ಆಗಿಯೋ ಅಥವಾ ನಟರಾಗಿಯೋ?
     ಚೇತನ್ ಭಗತ್: ನಟನೆ ಅನಿರೀಕ್ಷಿತವಾಗಿ ಆದದ್ದು. ನನಗೆ ನಟನಾಗುವ ಯಾವ ಬಯಕೆಯೂ ಇಲ್ಲ. ನಾನು ನನ್ನ ಬರವಣಿಗೆಯಿಂದ ಸಮಾಜದಲ್ಲಿ ಬದಲಾವಣೆ ತರಲು ಬಯಸುತ್ತೇನೆ. ಹಾಗಾಗಿ ಬರೆಯುವುದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ನನ್ನ ಪುಸ್ತಕಗಳು ಹೆಚ್ಚು ಜನಪ್ರಿಯತೆ ಪಡೆದಂತೆಲ್ಲಾ ಸಮಾಜದಲ್ಲಿ ಬದಲಾವಣೆ ತರಬೇಕೆಂಬ ನನ್ನ ಆಶಯ ಈಡೇರಿದಂತಾಗುತ್ತದೆ.

ಆಂದೋಲನ: ಭಾರತದಲ್ಲಿ ಅಪರಾಧ ಆಧಾರಿತ ಕಾದಂಬರಿಗಳ ಅಭಾವ ಇದೆ ಎಂದು ನಿಮಗೆ ಅನಿಸುತ್ತದೆಯಾ?
ಚೇತನ್ ಭತ್: ನಾವು ಇಂಗ್ಲಿಷಿನಲ್ಲಿ ಬಹಳ ಕ್ಲಿಷ್ಟ ಪದಗಳನ್ನು ಬಳಸುವ ಮೂಲಕ ನಮ್ಮ ಬರವಣಿಗೆಯನ್ನು ಸಂಕುಚಿತಗೊಳಿಸಿಬಿಟ್ಟಿದ್ದೇವೆ. ಅದನ್ನೇ ನಾವು ಉತ್ತಮ ಬರವಣಿಗೆ ಎಂದು ಭಾವಿಸಿದ್ದೇವೆ. ಆದರೆ, ಉತ್ತಮ ಬರವಣಿಗೆ ಎಂದರೆ ಉತ್ತಮ ಆಲೋಚನೆ. ಜನರು ಅಪರಾಧ, ಮಕ್ಕಳ ಸಾಹಿತ್ಯ ಎಲ್ಲವನ್ನೂ ಓದುವ ಮೂಲಕ ತಮ್ಮ ದಿಗಂತವನ್ನು ವಿಸ್ತರಿಸಿಕೊಳ್ಳಬೇಕು. ಆದರೆ ನಾವು ಒಂದು ಪ್ರಕಾರಕ್ಕೆ ಮಾತ್ರ ಉತ್ತೇಜನ ನೀಡುತ್ತಾ ಬಂದಿದ್ದೇವೆ. ಇದು ಬದಲಾಗಬೇಕು.

ಆಂದೋಲನ: ನಿಮಗೆ ಓದಲು ಸಮಯ ಸಿಗುತ್ತದೆಯೇ?
     ಚೇತನ್ ಭಗತ್: ಖಂಡಿತಾ. ಸದ್ಯಕ್ಕೆ ನಾನು ನರವಿಜ್ಞಾನ ಕುರಿತಾದ ಪುಸ್ತಕವನ್ನು ಓದುತ್ತಿದ್ದೇನೆ. ಅದು ನನಗೆ ಮನುಷ್ಯರಲ್ಲಾಗುವ ಉದ್ವೇಗಗಳನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತಿದೆ. ಈ ಇನ್ಸ್ಟಾ ರೀಲ್ಗಳು, ಟಿಕ್ ಟಾಕ್‌ಗಳು ಯುವ ಜನಾಂಗದ ಮೇಲೆ ದುಷ್ಪರಿಣಾಮ ಬೀರುತ್ತಿವೆ. ಅವರು ತಮ್ಮ ಭವಿಷ್ಯದ ಬಗ್ಗೆ ಯೋಚಿಸದೆ, ತಮ್ಮ ಅಮೂಲ್ಯವಾದ ಸಮಯವನ್ನು ಇವುಗಳ ಮೇಲೆ ವ್ಯರ್ಥ ಮಾಡುತ್ತಿದ್ದಾರೆ.

ಆಂದೋಲನ: ಇಂದು ಸಣ್ಣ ಊರುಗಳಿಂದ ಬರುವ ಲೇಖಕರಿಗೆ ಪುಸ್ತಕವನ್ನು ಪ್ರಕಟಿಸುವುದು ಸುಲಭವಿದೆಯೇ?
    ಚೇತನ್ ಭಗತ್: ಇಂದಿನ ದಿನದಲ್ಲಿ ಪ್ರತಿಯೊಬ್ಬ ಲೇಖಕನೂ ಪ್ರಚಾರದ ಬೆನ್ನು ಹತ್ತಲೇಬೇಕು. ಒಂದು ಕಾಲದಲ್ಲಿ ಪುಸ್ತಕದ ಸಮೀಕ್ಷೆಯು ಇಂಡಿಯಾ ಟುಡೆ ಪತ್ರಿಕೆಯಲ್ಲಿ ಪ್ರಕಟವಾಯಿತೆಂದರೆ ಅದೇ ದೊಡ್ಡ ಪ್ರಚಾರ ಎಂದೆನಿಸುತ್ತಿತ್ತು. ಆದರೆ ಇಂದು ಒಬ್ಬ ಪ್ರಭಾವಿ ಯೂ – ಟ್ಯೂಬರ್ ನಿಮ್ಮ ಪುಸ್ತಕದ ಬಗ್ಗೆ ಪ್ರಚಾರ ಮಾಡಿದರೆ ಅದು ನಿಮ್ಮ ಬದುಕನ್ನೇ ಬದಲಿಸಬಹುದು. ಅಂತಹ ಸಾಮರ್ಥ್ಯ ಇಂದು ಸಾಮಾಜಿಕ ಜಾಲತಾಣಗಳಿಗಿವೆ. ಹಾಗಾಗಿ ನೀವು ಎಲ್ಲಿ ವಾಸವಾಗಿದ್ದೀರಿ ಎಂಬುದು ಗಣನೆಗೆ ಬರುವುದಿಲ್ಲ. ಜನರ ಮನಸ್ಥಿತಿ ಬದಲಾಗಿದೆ. ಎಲ್ಲವೂ ಆನ್‌ಲೈನ್ ಆಗಿದೆ. ನಿಮಗೆ ಸಾಮಾಜಿಕ ಜಾಲತಾಣದಲ್ಲಿ ಅನುಸರಿಸುವವರ ಸಂಖ್ಯೆ ಹೆಚ್ಚಾಗಿದ್ದರೆ, ನಿಮ್ಮ ಪುಸ್ತಕಕ್ಕೂ ಹೆಚ್ಚಿನ ಪ್ರಚಾರ ಸಿಗುತ್ತದೆ.

ಆಂದೋಲನ: ನಿಮ್ಮ ದೈನಂದಿನ ದಿನಚರಿ ಹೇಗಿರುತ್ತದೆ?
     ಚೇತನ್ ಭಗತ್: ನಾನು ದಿನದಲ್ಲಿ ಸುಮಾರು ೨ ಗಂಟೆಗಳ ಕಾಲ ಯೋಚನೆಯಲ್ಲಿ ಮಗ್ನನಾಗಿ ಬಿಡುತ್ತೇನೆ. ಆಗೆಲ್ಲ ಹೆಚ್ಚಾಗಿ ಕಾಫಿ ಕುಡಿಯುತ್ತಿರುತ್ತೇನೆ. ಪ್ರತಿದಿನ ಬೆಳಿಗ್ಗೆ ನಾನು ಮಾಡಬೇಕಾಗಿರುವ ಕೆಲಸಗಳ ಪಟ್ಟಿಯನ್ನು ತಯಾರಿಸಿಕೊಳ್ಳುತ್ತೇನೆ. ಸಂಜೆ ೬ ಅಥವಾ ೭ ಗಂಟೆಯವರೆಗೆ ನನ್ನ ಕೆಲಸ ಕಾರ್ಯಗಳಲ್ಲಿ ನಿರತನಾಗಿರುತ್ತೇನೆ. ನಂತರ ನನ್ನ ಕುಟುಂಬಕ್ಕೆ ಸಮಯವನ್ನು ಸೀಮಿತಗೊಳಿಸಿಕೊಳ್ಳುತ್ತೇನೆ.

ಆಂದೋಲನ: ಉದಯೋನ್ಮುಖ ಲೇಖಕರಿಗೆ ನಿಮ್ಮ ಸಲಹೆ?
ಚೇತನ್ ಭಗತ್ : ನಿಮ್ಮ ತನವನ್ನು ಉಳಿಸಿಕೊಳ್ಳಿ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ