Light
Dark

ಚಾಮರಾಜನಗರ-ಜೀವ ವೈವಿಧ್ಯದ ಆಗರ

ಪ್ರಸಾದ್ ಲಕ್ಕೂರು

ಎತ್ತೆತ್ತ ನೋಡಿದರತ್ತತ್ತ ಕಾಡೇ ಕಾಡು. ಏರಿ ಇಳಿದಷ್ಟೂ ಗಿರಿ ಶಿಖರಗಳು. ಅತಿ ಶ್ರೀಮಂತ ಜೈವಿಕ ವೈವಿಧ್ಯತೆ, ನಾಲ್ಕೂ ದಿಕ್ಕಿಗೂ ಹರಡಿಕೊಂಡಿರುವ ಜಲಮೂಲಗಳು, ಅಗೆದು ಬಗೆದರೂ ಮುಗಿಯದ ಖನಿಜ ಸಂಪತ್ತು. ಇಡೀ ಭೂಮಿಯು ಹಸಿರು ಶಾಲು ಹೊದ್ದಂತಹ ಹಚ್ಚಹಸಿರು. ವಾಹ್ಹ್! ಚಾಮರಾಜನಗರ ಜಿಲ್ಲೆಯೆಂದರೆ- ಪ್ರಕೃತಿ ಸೃಷ್ಟಿಸಿದ ಬೃಹತ್ ಲ್ಯಾಂಡ್ ಸ್ಕೇಪ್!
ಚಾಮರಾಜನಗರದ ಜೈವಿಕ ವೈವಿಧ್ಯತೆಯಿಂದಷ್ಟೇ ಸಮೃದ್ಧವಾಗಿಲ್ಲ, ಜನ-ಜಲ ವೈವಿಧ್ಯತೆಯಲ್ಲೂ ಸಮೃದ್ಧವಾಗಿದೆ. ಕೆರೆ, ಕಟ್ಟೆ, ತೊರೆ, ನದಿ, ಜಲಾಶಯಗಳು ಜಲ ವೈವಿಧಧ್ಯತೆಗೆ ಸಾಕ್ಷಿಯಾಗಿದ್ದರೆ, ನಿತ್ಯಹರಿದ್ವರ್ಣ ಕಾಡುಗಳು, ಅರೆನಿತ್ಯಹರಿದ್ವರ್ಣ ಕಾಡುಗಳು, ಕುರುಚಲು ಪ್ರದೇಶ, ದೊಡ್ಡಹುಲ್ಲುಗಾವಲು- ಹೀಗೆ ಹಸಿರ ಸಿರಿ ಸೊಬಗಿನ ನದಿಯೊಂದು ಹರಿದಂತೆ ಹರಡಿಕೊಂಡಿದೆ! ಲೆಕ್ಕಕ್ಕೆ ಸಿಗದ ಎಷ್ಟೋ ಅಚ್ಚರಿಗಳಿನ್ನೂ ದಟ್ಟಕಾಡಿನೊಳಗೆ, ಖನಿಜಸಮೃದ್ಧ ಭೂಮಮಿಯೊಳಗೆ , ಹರಿವ ತೊರೆ,ನದಿಗಳಲ್ಲಿ ಅಡಗಿವೆ. ಮಲೆಮಹಾದೇಶ್ವರನ ವಾಹನ ಹುಲಿಯಿಂದ ಮಡ್ರಾಸ್ ಟ್ರೀ ಶ್ರ್ಯೂ ಎಂಬ ಪುಟ್ಟ ವಿಚಿತ್ರ ಪ್ರಾಣಿಗಳಿಗೂ ಈ ನೆಲವೇ ನೆಲೆ! ಕೇರಳ ಮತ್ತು ತಮಿಳುನಾಡಿನ ದಟ್ಟಕಾಡುಗಳು ಒಟ್ಟೊಟ್ಟಿಗೆ ಈ ನೆಲದ ಗಡಿ ಮುಟ್ಟಿಹೋಗುತ್ತವೆ.
ಚಾಮರಾಜನಗರ ರಾಜ್ಯದ ಪ್ರಾಕೃತಿಕ ಶ್ರೀಮಂತ ಜಿಲ್ಲೆ. ಅರಣ್ಯ ಸಂಪತ್ತು ಮತ್ತು ಜೀವವೈವಿಧ್ಯತೆೆುೀಂ ಈ ಜಿಲ್ಲೆಯ ಹೆಗ್ಗಳಿಕೆ. ಐದು ಸಂರಕ್ಷಿತಾರಣ್ಯಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಬಂಡೀಪುರ ಮತ್ತು ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯಗಳು, ಮಲೆ ಮಹದೇಶ್ವರ ಬೆಟ್ಟ ಮತ್ತು ಕಾವೇರಿ ವನ್ಯಜೀವಿಧಾಮಗಳು ಮತ್ತು ಉಮ್ಮತ್ತೂರು ಕೃಷ್ಣಮೃಗ ವನ್ಯಧಾಮ ಜಿಲ್ಲೆಯಲ್ಲಿವೆ. 

ಜಿಲ್ಲೆಯ ಸಂರಕ್ಷಿತಾರಣ್ಯಗಳು ತಮಿಳುನಾಡಿನ ಉತ್ತರ ಕಾವೇರಿ ವನ್ಯಧಾಮ, ಸತ್ಯಮಂಗಲಂ ಮತ್ತು ಮಧುಮಲೈ ಹುಲಿ ಸಂರಕ್ಷಿತಾರಣ್ಯಗಳು ಹಾಗೂ ಕೇರಳದ ವಯನಾಡು ವನ್ಯಜೀವಿಧಾಮಗಳೊಂದಿಗೆ ಬೆಸೆದುಕೊಂಡಿವೆ. ಇವೆಲ್ಲ ಒಗ್ಗೂಡಿ ೯ ಸಾವಿರ ಚದರ ಕಿ.ಮೀ.ನಷ್ಟು ವಿಸ್ತಾರಕ್ಕೆ ಹಸಿರು ಹರಡಿಕೊಂಡಿದೆ. ಮಾಂಸಹಾರಿ, ಸಸ್ಯಾಹಾರಿ, ಸರಿಸೃಪ, ಉಭಯವಾಸಿ ಪ್ರಾಣಿಗಳಿಗೆ ಮತ್ತು ವಿವಿಧ ಬಗೆಯ ಪಕ್ಷಿಗಳಿಗೆ ನೆಲೆಯಾಗಿದೆ. ಕಾಡಿನರಾಜನ ಹುಲಿಯ ತವರೂರು!
೫೧೦೧ ಚದರ ಕಿ.ಮೀ. ವಿಸ್ತೀರ್ಣ ಹೊಂದಿರುವ ಜಿಲ್ಲೆಯ ಶೇ.೬೦ ರಷ್ಟು ಭಾಗ ಬೆಟ್ಟ ಗುಡ್ಡಗಳಿಂದ ಕೂಡಿದೆ. ಇದರಲ್ಲಿ ಶೇ.೫೫ ರಷ್ಟು ಭಾಗ ಸಂರಕ್ಷಿತಾರಣ್ಯಗಳಿಂದ ಕೂಡಿದೆ. ಜಿಲ್ಲೆಯನ್ನು ಅರಣ್ಯ ಪ್ರದೇಶ ಸುತ್ತುವರಿದಿದೆ. ಬಂಡೀಪುರ ಅರಣ್ಯ, ಬಿಳಿಗಿರಿರಂಗನಬೆಟ್ಟ ಮತ್ತು ಮಲೆಮಹದೇಶ್ವರ ಬೆಟ್ಟಗಳು ಪವಿತ್ರ ಧಾರ್ಮಿಕ ಯಾತ್ರಾಸ್ಥಳಗಳಾಗಿವೆ. ಪ್ರಾಣಿಗಳು ಮತ್ತು ಪಕ್ಷಿಗಳಿಗೆ ನೆಲೆ ನೀಡಿರುವ ಅರಣ್ಯಗಳಲ್ಲಿ ಆದಿವಾಸಿ ಬುಡಕಟ್ಟು ಸೋಲಿಗರು, ಜೇನುಕುರುಬರು ವಾಸವಿದ್ದಾರೆ.

ಕಾವೇರಿ, ಎಂಎಂ ಹಿಲ್ಸ್ ವನ್ಯಧಾಮಗಳು
ಪವಾಡ ಪುರುಷ ಮಲೆ ಮಹದೇಶ್ವರರು ಐಕ್ಯಗೊಂಡಿರುವ ೭೭ ಬೆಟ್ಟಗಳು ಹಾಗೂ ಅರಣ್ಯ ಪ್ರದೇಶವನ್ನು ಸೇರಿದ ೯೦೬ ಚದರ ಕಿ.ಮೀ. ವ್ಯಾಪ್ತಿಯನ್ನು ೨೦೧೩ ರಲ್ಲಿ ಮಲೆ ಮಹದೇಶ್ವರ ವನ್ಯಜೀವಿಧಾಮವೆಂದು ಘೋಷಿಸಲಾಗಿದೆ. ಇಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾದ್ದರಿಂದ ಹುಲಿ ಸಂರಕ್ಷಿತಾರಣ್ಯವಾಗಿ ಘೋಷಿಸಬೇಕೆಂಬ ಅರಣ್ಯ ಇಲಾಖೆ ಮತ್ತು ಪರಿಸರ ತಜ್ಞರ ಬೇಡಿಕೆ ಸರ್ಕಾರದ ಪರಿಶೀಲನೆಯಲ್ಲಿದೆ. ಇದು ಹನೂರು ತಾಲೂಕಿಗೆ ಸೇರಿದೆ. ಮಲೆ ಮಹದೇಶ್ವರ ವನ್ಯಜೀವಿಧಾಮಕ್ಕೆ ಹೊಂದಿಕೊಂಡಂತೆ ಇರುವ ೧೦೨೭ ಚದರ ಕಿ.ಮೀ. ವ್ಯಾಪ್ತಿಯ ಅರಣ್ಯ ಪ್ರದೇಶವನ್ನು ಕಾವೇರಿ ವನ್ಯಜೀವಿಧಾಮವಾಗಿ ೨೦೧೧ ರಲ್ಲಿ ಘೋಷಿಸಲಾಗಿದೆ. ಇವೆರಡು ಒಂದಕ್ಕೊಂದು ಬೆಸೆದುಕೊಂಡಿದ್ದು ಪ್ರಾಣಿಗಳ ವಲಸೆಗೆ ಅಗತ್ಯ ಕಾರಿಡಾರ್‌ಗಳನ್ನು ಹೊಂದಿವೆ.
ಈ ಅರಣ್ಯಗಳ ವೈಶಿಷ್ಟವೆಂದರೆ- ಹುಲ್ಲುಗಾವಲು, ಎಲೆ ಉದುರುವ ಹಾಗೂ ನದಿ ತೀರಕ್ಕೆ ಹೊಂದಿಕೊಂಡಿರುವುದು. ಉತ್ತಮ ಸಸ್ಯ ಸಂಪತ್ತು ಹೊಂದಿರುವ ಈ ಅರಣ್ಯಗಳಲ್ಲಿ ಜಾಲಾರಿ ಎಂಬ ಸಸ್ಯ ವಿನಾಶ ಅಂಚಿನಲ್ಲಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆಯಾದ ಐಯುಸಿಎನ್ ಗುರುತಿಸಿದೆ.


ಸಸ್ಯ ಸಂಪತ್ತಿನ ಜೊತೆಗೆ ಪ್ರಾಣಿ ಸಂಪತ್ತು ಇಲ್ಲಿದೆ. ಜೀವಜಗತ್ತಿನ ಅತಿದೊಡ್ಡ ಸಸ್ತನಿ ಆನೆಗಳು ವಿಫುಲವಾಗಿವೆ. ಹುಲಿ, ಚಿರತೆ, ಕಾಡೆಮ್ಮೆ, ಕೆನ್ನಾಯಿ, ಕಡವೆ, ನೀರುನಾಯಿ, ಕಂದುಚುಕ್ಕೆ ಬೆಕ್ಕು ವಾಸವಾಗಿವೆ. ಈಶಾನ್ಯ ಘಟ್ಟಗಳಲ್ಲಿ ಕಂಡುಬರುವ ಅಳಿಲಿನಂತೆ ಕಂಡುಬರುವ ಮಡ್ರಾಸ್ ಟ್ರೀ ಶ್ರ್ಯೂ ಎಂಬ ವಿಶಿಷ್ಟ ಜೀವಿಯಿದೆ.
ಬೆಟ್ಟ ಅಳಿಲು, ಚಿಪ್ಪುಹಂದಿ, ತರಕರಡಿ ಅಥವಾ ಜೇನ್‌ಹೀರ್ಕ್, ಕೊಳ್ಳೇಗಾಲ ಹಲ್ಲಿಗಳು ವಾಸವಾಗಿವೆ. ಅರಣ್ಯಗಳ ನಡುವೆ ಹರಿಯುವ ಕಾವೇರಿ ನದಿಯಲ್ಲಿ ವಿನಾಶದ ಅಂಚಿನಲ್ಲಿರುವ ಮಹಷೀರ್ ಮೀನುಗಳಿವೆ. ಈ ಅರಣ್ಯಗಳಲ್ಲಿ ಪ್ರಾಣಿಗಳು ಬದುಕಲು ನೀರು ಅವಶ್ಯಕವಾಗಿದ್ದು ಕಾವೇರಿ, ಪಾಲಾರ್, ಶಿಂಷಾ, ಅರ್ಕಾವತಿಗಳು ಹರಿಯುತ್ತವೆ. ಹೆಚ್ಚು ಮಳೆಯಾದರೆ ಉಕ್ಕುತ್ತವೆ. ಇನ್ನು ದೊಡ್ಡ ಹಳ್ಳ, ಉಡುತೊರೆಹಳ್ಳ, ಸಂಪೆಕೊಬೆಹಳ್ಳ, ಹೆಬ್ಬಾವಿನ ಮಡುಹಳ್ಳ, ಮಿನ್ನತ್ ಹಳ್ಳ, ಇರ್ಕಿಯಂ ಹಳ್ಳಗಳು ಮಳೆಗಾಲದಲ್ಲಿ ಹರಿದು ನದಿಗಳನ್ನು ಸೇರುತ್ತವೆ. ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮದಲ್ಲಿ ಮಲೆ ಮಹದೇಶ್ವರರು ಐಕ್ಯರಾಗಿದ್ದರು. ಪವಾಡ ಪುರುಷರಾದ ಅವರು ನೆಲೆಸಿದ್ದ ಕಾಲದಲ್ಲಿ ಹುಲಿಯನ್ನೇ ವಾಹನವಾಗಿ ಮಾಡಿಕೊಂಡಿದ್ದರು ಎಂಬ ಪ್ರತೀತಿಯಿದೆ.

ಬಿಆರ್‌ಟಿ ಹುಲಿಧಾಮ
ವೈಷ್ಣವ ಪರಂಪರೆಯ ಬಿಳಿಗಿರಿರಂಗನಾಥಸ್ವಾಮಿ ನೆಲೆಸಿರುವ ಬಿಳಿಗಿರಿರಂಗನಬೆಟ್ಟ ಅರಣ್ಯ ಪ್ರದೇಶವು ಯಳಂದೂರು ತಾಲೂಕಿಗೆ ಸೇರಿದೆ. ೧೯೯೪ ರಲ್ಲಿ ಬಿಳಿಗಿರಿರಂಗನಾಥ ವನ್ಯಜೀವಿಧಾಮವೆಂದು ಘೋಷಿಸಲಾಗಿತ್ತು. ನಂತರ ೨೦೧೧ ರಲ್ಲಿ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತಾರಣ್ಯ ಎಂದು ಹೊಸ ರೂಪ ಪಡೆದುಕೊಂಡಿದ್ದು, ೫೭೪.೮೨ ಚದರ ಕಿ.ಮೀ. ವಿಸ್ತೀರ್ಣ ಹೊಂದಿದೆ. ಇದು ಪೂರ್ವ ಮತ್ತು ಪಶ್ಚಿಮ ಘಟ್ಟ ಅರಣ್ಯಗಳ ಸೇತುವೆಯಂತಿದ್ದು, ಮಲೆ ಮಹದೇಶ್ವರ ಬೆಟ್ಟ, ಸತ್ಯಮಂಗಲ ಅರಣ್ಯದ ಜೊತೆ ಗಡಿ ಹಂಚಿಕೊಂಡಿದೆ. ಆನೆ, ಹುಲಿ, ಚಿರತೆಗಳು ವಲಸೆ ಹೋಗಲು ಪ್ರಾಣಿಪಥ (ಕಾರಿಡಾರ್) ವಾಗಿದೆ. ಬಿಆರ್ ಟಿಯಲ್ಲಿ ಹುಲಿ, ಆನೆ, ಚಿರತೆ, ಕಾಡೆಮ್ಮೆ, ಜಿಂಕೆ, ಕಡವೆ, ಕಾಡುಕುರಿ, ಕರಡಿ, ಕಾಡುನಾಯಿ, ಕಾಡು ಬೆಕ್ಕು ಸೇರಿದಂತೆ ಸುಮಾರು ೨೮ ಸಸ್ತನಿಗಳಿವೆ. ಕಿಂಗ್‌ಫಿಷರ್, ಕಂದುಬಣ್ಣದ ಮೈನಾ, ನವಿಲು, ಗೌಜಲಕ್ಕಿ, ಕಾಡುಕೋಳಿ, ಹದ್ದು, ರಣಹದ್ದು, ಗೀಜಗ ಸೇರಿ ಸುಮಾರು ೨೭೪ ಪಕ್ಷಿ ಪ್ರಬೇಧಗಳಿವೆ.
೧೪ ಬಗೆಯ ಉಭಯವಾಸಿಗಳು, ೧೪೫ ಪ್ರಕಾರದ ಚಿಟ್ಟೆಗಳು, ೧೬ ಬಗೆಯ ಮೀನುಗಳು, ೨೩ ಬಗೆಯ ಸರಿಸೃಪಗಳು, ತೇಗ, ಹೊನ್ನೆ, ಬೀಟೆ, ಶ್ರೀಗಂಧ, ನೆಲ್ಲಿ, ನೀಲಗಿರಿ, ಅಕೇಶಿಯಾ ಸೇರಿದಂತೆ ೧೩೫೦ ಜಾತಿಯ ಮರಗಳಿವೆ. ಸುಮಾರು ೮೮೬ ಔಷಧೀಯ ಸಸ್ಯಗಳು ಈ ಅರಣ್ಯದೊಳಗೆ ಇವೆ. ಇಲ್ಲಿ ೮೬ ಹುಲಿಗಳು, ೭೫೦ಕ್ಕೂ ಹೆಚ್ಚು ಆನೆಗಳು ವಾಸವಾಗಿವೆ. ಪ್ರಾಣಿಗಳಿಗೆ ಕೃಷ್ಣಯ್ಯನಕಟ್ಟೆ, ಸುವರ್ಣಾವತಿ ಮತ್ತು ಚಿಕ್ಕಹೊಳೆ ಅವಳಿ ಜಲಾಶಯಗಳು, ಜೋಡಿಗೆರೆ, ಸೋಮೇಶ್ವರ ಕೆರೆ, ಹೊಂಗನೂರು ಹಿರಿಕೆರೆಗಳ ನೀರೆ ಆಧಾರ. ಮಳೆಗಾಲದಲ್ಲಿ ಅರಣ್ಯದಲ್ಲಿ ಜರಿಗಳು ಬಂಡೆಗಳ ನಡುವೆ ಧುಮ್ಮಿಕ್ಕುವುದನ್ನು ನೋಡುವುದೇ ಮನಮೋಹಕ.
ಈ ಅರಣ್ಯದೊಳಗೆ ತಮಿಳುನಾಡಿಗೆ ಸಂಪರ್ಕ ಸಾಧಿಸುವ ಬೆಂಗಳೂರು- ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ಸಫಾರಿಯಿದೆ. ಉಳಿದುಕೊಳ್ಳಲು ಜಂಗಲ್ ಲಾಡ್ಜಸ್ ಇದೆ. ಬೆಟ್ಟದಲ್ಲಿ ವಸತಿಗೃಹಗಳಿವೆ.

ಬಂಡೀಪುರ ಹುಲಿಧಾಮ
ಗುಂಡ್ಲುಪೇಟೆ ತಾಲೂಕಿಗೆ ಸೇರಿದ ಸುಪ್ರಸಿದ್ದ ಪ್ರವಾಸಿ ತಾಣ ಬಂಡೀಪುರ ಹುಲಿ ಸಂರಕ್ಷಿತಾರಣ್ಯವು ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತಾರಣ್ಯ ಮತ್ತು ಕೇರಳದ ವಯನಾಡು ವನ್ಯಜೀವಿಧಾಮದ ಜೊತೆ ಗಡಿಯನ್ನು ಹಂಚಿಕೊಂಡಿದೆ. ಈ ಅರಣ್ಯದೊಳಗೆ ಕೇರಳ ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ೨ ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿವೆ. ಈ ಅರಣ್ಯ ಮೈಸೂರು ಮಹಾರಾಜರ ಬೇಟೆಯ ತಾಣವಾಗಿತ್ತು. ಅವರು ೧೯೩೧ರಲ್ಲಿ ೩೫ ಚದರ ಕಿ.ಮೀ. ಪ್ರದೇಶವನ್ನು ವೇಣುಗೋಪಾಲ ವನ್ಯಜೀವಿಧಾಮವಾಗಿ ಘೋಷಿಸಿದ್ದರು. ೧೯೭೩ ರಲ್ಲಿ ೩೩೫ ಚದರ ಕಿ.ಮೀ. ಅರಣ್ಯವನ್ನು ಬಂಡೀಪುರ ಹುಲಿ ಸಂರಕ್ಷಿತಾರಣ್ಯವಾಗಿ ಘೋಷಿಸಲಾಯಿತು.

ಈ ಅರಣ್ಯದ ಉತ್ತರದಲ್ಲಿ ಕಬಿನಿ ನದಿ, ದಕ್ಷಿಣದಲ್ಲಿ ಮಯಾರ್ ನದಿ, ನುಗು ಮತ್ತು ಮೂಲೆಹೊಳೆಗಳು ಹರಿಯುತ್ತವೆ. ಇಲ್ಲಿ ಸಫಾರಿಯಿದೆ. ವಾಸ್ತವ್ಯ ಹೂಡಲು ಜೆಂಗಲ್ ರೆಸಾರ್ಟ್ ಸೇರಿದಂತೆ ಹಲವು ಖಾಸಗಿ ರೆಸಾರ್ಟ್‌ಗಳಿವೆ.
ಬಂಡೀಪುರದಲ್ಲಿ ಹುಲಿ, ಆನೆ, ಚಿರತೆ, ಜಿಂಕೆ, ಕರಡಿ, ಕೆನ್ನಾಯಿ, ಕಾಡೆಮ್ಮೆ, ಮೌಸ್ ಡಿಯರ್, ಕೆಂದು ಬಣ್ಣದ ಅಳಿಲು, ಲಂಗೂರ್ ಕೋತಿಗಳು, ಹಳದಿ ಕತ್ತಿನ ಗುಬ್ಬಚ್ಚಿ, ರೋಸ್‌ಪಿಂಚ್, ಕಿಂಗ್ ಫಿಶರ್, ಹದ್ದು, ಕೆಂಪು ಕತ್ತಿನ ರಣಹದ್ದು, ಗೂಬೆ ವಾಸವಾಗಿವೆ. ಸುಮಾರು ೧೭೯ ಹುಲಿ, ೮೦೦ ಆನೆ, ೭೩ ಚಿರತೆಗಳು ಇಲ್ಲಿವೆ.
ದಿಂಡಿಲು, ಬಿದಿರು, ತಾರೆ, ಸಾಗುವಾನಿ, ಮುತ್ತುಗ, ಹೊನ್ನೆ, ಬೀಟೆ, ಮತ್ತಿ, ಶ್ರೀಗಂಧ ಮರಗಳು ಸೇರಿದಂತೆ ನೂರಾರು ಪ್ರಬೇಧದ ಮರಗಳು ಇಲ್ಲಿವೆ. ಹಿಮವದ್ ಗೋಪಾರಸ್ವಾಮಿ ಬೆಟ್ಟವಿದ್ದು ಯಾವಾಗಲೂ ತಂಪಾದ ವಾತಾವರಣ ಇಲ್ಲಿನ ವಿಶೇಷ.

ಕೃಷ್ಣಮೃಗ ವನ್ಯಧಾಮ

ಚಾಮರಾಜನಗರ ತಾಲೂಕಿಗೆ ಸೇರಿದ ಉಮ್ಮತ್ತೂರು ಬಳಿ ೧೫೦೪.೩೯ ಎಕರೆಯಷ್ಟು ಬೆಟ್ಟ, ಗುಡ್ಡ ಪ್ರದೇಶವನ್ನು ಕೃಷ್ಣಮೃಗಗಳ ವನ್ಯಜೀವಿ ಧಾಮವನ್ನು ೧೯೧೭ ರಲ್ಲಿ ಘೋಷಿಸಲಾಯಿತು. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷ್ಣಮೃಗಗಳು ವಾಸವಾಗಿವೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ