Mysore
31
scattered clouds

Social Media

ಭಾನುವಾರ, 27 ಏಪ್ರಿಲ 2025
Light
Dark

ಚಿತ್ರರಂಗದಲ್ಲಿ ಕೊಡಗಿನ ಬೆಡಗಿಯರು

ಕನ್ನಡ ಚಿತ್ರರಂಗ ಮಾತ್ರವಲ್ಲ ಹಿಂದಿ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಈಗ ಕೊಡಗಿನ ಬೆಡಗಿಯರದ್ದೇ ಹವಾ. ತಮ್ಮ ಸೌಂದರ‌್ಯಕ್ಕೆ ಹೆಸರಾದರೂ ಕೊಡಗಿನ ಹೆಣ್ಣು ಮಕ್ಕಳು ಚಿತ್ರರಂಗದತ್ತ ಹೊರಳಿದ್ದು ಕಡಿಮೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕೊಡಗಿನ ಕುವರಿಯರು ನಟನೆಯಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಸದ್ಯ ಚಿತ್ರರಂಗ ಪ್ರವೇಶಿಸುವ ಹೊಸ ಮುಖಗಳಲ್ಲಿ ಕೊಡಗಿನ ಬೆಡಗಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಿರಿಯರಿಂದ ಹಿಡಿದು ಕಿರಿಯರವರೆಗೆ ಚಿತ್ರರಂಗದಲ್ಲಿ ಕಾಣಿಸಿಕೊಂಡ ಕೊಡಗು ಸುಂದರಿಯರ ಬಗ್ಗೆ ಕಿರು ನೋಟ.

ಕನ್ನಡ ಚಿತ್ರರಂಗದ ಆರಂಭದ ದಿನಗಳಲ್ಲಿ ಬೆಳ್ಳಿತೆರೆಗೆ ಬಂದವರಲ್ಲಿ ಕೊಡಗಿನ ಬೆಡಗಿಯರು ಅಪರೂಪ. ಚಿತ್ರರಂಗ ಮದರಾಸಿನಲ್ಲೋ, ಮುಂಬೈಯಲ್ಲೋ ಇದ್ದ ಕಾರಣಕ್ಕೋ, ಇಲ್ಲವೇ ಸಿನಿಮಾ, ನಾಟಕಗಳಲ್ಲಿ ಅಭಿನಯಿಸಿದವರ ಕುರಿತಂತೆ ಬಹುತೇಕ ಮಂದಿಗೆ ಇದ್ದ ಅಭಿಪ್ರಾಯಕ್ಕೋ ಏನೋ ಕೊಡಗಿನ ಹೆಣ್ಣು ಮಕ್ಕಳು ಚಿತ್ರರಂಗ ಪ್ರವೇಶಿಸಿದ್ದು ಕಡಿಮೆ. ತೆರೆಯ ಹಿಂದೆ ಕಂಠದಾನ ಕಲಾವಿದೆ ಶಶಿಕಲಾ, ‘ಹೊಸ ನೀರು’ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ಕಲಾವಿದೆ ರಾಜ್ಯಪ್ರಶಸ್ತಿ ಪಡೆದ ಮತ್ತೊಬ್ಬ ಶಶಿಕಲಾ ಹೀಗೆ ಒಂದಿಬ್ಬರನ್ನು ಹೊರತು ಪಡಿಸಿದರೆ, ಕನ್ನಡ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ ಕೊಡಗಿನ ಬೆಡಗಿಯರು ಕಡಿಮೆ.


‘ಸವ್ಯಸಾಚಿ’ ಚಿತ್ರದಲ್ಲಿ ಶಿವರಾಜಕುಮಾರ್ ಅವರ ಜೋಡಿಯಾಗಿ ಅಭಿನಯಿಸುವುದರೊಂದಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪ್ರೇಮಾ ಮುಂದೆ ಇಲ್ಲಿ ಮಾತ್ರವಲ್ಲ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರಾದರು. ‘ಓಂ’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಪಡೆದ ಪ್ರೇಮಾ ಅಭಿನಯದ ಚಿತ್ರಗಳಲ್ಲಿ ‘ನಮ್ಮೂರ ಮಂದಾರ ಹೂವೇ’, ‘ಚಂದ್ರಮುಖಿ ಪ್ರಾಣಸಖಿ’, ‘ಯಜಮಾನ’ ಮೊದಲಾದ ಹಲವು ಅವರ ಅಭಿನಯ ಪ್ರತಿಭೆಗೆ ಕನ್ನಡಿ ಹಿಡಿದವುಗಳು.
ಕನ್ನಡ ಚಿತ್ರರಂಗದತ್ತ ಭಾರತೀಯರು ಮಾತ್ರವಲ್ಲ, ವಿಶ್ವ ಚಿತ್ರರಂಗ ಹೊರಳುವಂತೆ ಮಾಡಿದ ಚಿತ್ರಗಳಂತೆ, ಕೊಡಗಿನ ಬೆಡಗಿಯೊಬ್ಬಳದು ಇದೀಗ ಭಾರತೀಯ ಚಿತ್ರರಂಗದಲ್ಲೇ ದೊಡ್ಡ ಹೆಸರು. ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಬಂದ ರಶ್ಮಿಕಾ ಮಂದಣ್ಣ , ತಮಿಳು, ತೆಲುಗು, ಹಿಂದಿ ಚಿತ್ರರಂಗಗಳ ಅತಿ ಬೇಡಿಕೆಯ ಎನ್ನುವುದಕ್ಕಿಂತಲೂ ಅತ್ಯಂತ ಪ್ರಚಾರದಲ್ಲಿರುವ ನಟಿ. ಕನ್ನಡದ ‘ಚಮಕ್’, ‘ಪೊಗರು’ ಅವರದೇ.

ಇತ್ತೀಚಿನ ದಿನಗಳಲ್ಲಿ, ಡಿಜಿಟಲ್ ತಂತ್ರಜ್ಞಾನದ ನಂತರ ಮನರಂಜನೋದ್ಯಮತ್ತ ಹೆಚ್ಚು ಹೆಚ್ಚು ಮಂದಿ ಬರುತ್ತಿದ್ದಾರೆ. ಕೊಡಗಿನ ಹುಡುಗಿಯರೂ. ‘ಅಭಿಮಾನಿ’ ಮೂಲಕ ಬಣ್ಣ ಹಚ್ಚಿ, ಹಿಂದಿ ಚಿತ್ರರಂಗದಲ್ಲಿ ತನ್ನ ಅದೃಷ್ಟ ಪರೀಕ್ಷೆ ಮಾಡಿಬಂದ ನಿಧಿ ಸುಬ್ಬಯ್ಯ, ‘ರಂಗ ಎಸ್‌ಎಸ್‌ಎಲ್‌ಸಿ’ಯಲ್ಲಿ ಬಣ್ಣ ಹಚ್ಚಿ, ‘ಬಿಂಬ’, ‘ರಾಮ ಶಾಮ ಭಾಮ’, ‘ಗಾಳಿಪಟ’ಗಳ ಮೂಲಕ ಕನ್ನಡ ಚಿತ್ರರಸಿಕರ ಮನಗೆದ್ದ ಡೈಸಿ ಬೋಪಣ್ಣ, ‘ಚಿಂಗಾರಿ’ಯ ದೀಪಿಕಾ ಕಾಮಯ್ಯ, ಎಂಜಿನಿಯರಿಂಗ್ ಮುಗಿಸಿ ಅಭಿನಯವನ್ನೇ ವೃತ್ತಿಯಾಗಿಸಿರುವ ಹರ್ಷಿಕಾ ಪೂಣಚ್ಚ, ‘ಭೀಮಾತೀರದಲ್ಲಿ’ನ ಪ್ರಜ್ಜು ಪೂವಯ್ಯ, ಹೀಗೆ ಹಲವು ಮಂದಿ ಕನ್ನಡ ಬೆಳ್ಳಿತೆರೆಯ ಮೂಲಕ ಪರಿಚಯವಾಗಿದ್ದಾರೆ.

ಇವರೊಂದಿಗೆ ಸಿಂಧು ಲೋಕನಾಥ್, ಶ್ವೇತಾ ಚೆಂಗಪ್ಪ ,ರಮ್ಯ ಬಾರ್ನ, ಅನು ಪೂವಮ್ಮ, ಕೃಷಿ ತಾಪಂಡ, ಶುಭ್ರ ಆಯ್ಯಪ್ಪ, ಸಾನ್ವಿ ಪೊನ್ನಮ್ಮ, ದಿಶಾ ಪೂವಯ್ಯ ಮುಂತಾದವರಲ್ಲದೆ ಮಲಯಾಳ ಚಿತ್ರಗಳಲ್ಲಿ ನಟಿಸುತ್ತಿರುವ ರಾಜಶ್ರೀ ಪೊನ್ನಪ್ಪ, ಅಲ್ಫಿ ಪಂಜಿಕ್ಕರನ್ , ತಮಿಳು ಚಿತ್ರರಂಗದಲ್ಲಿನ ವರ್ಷಾ ಬೋಳಮ್ಮ, ಡಯಾನಾ ಈರಪ್ಪ ,ಆದ್ಯ ಆನಂದ್ ಮೊದಲಾದವರು ಕೂಡಾ ಕೊಡಗಿನ ಬೆಡಗಿಯರು.

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ