Light
Dark

30 ವರ್ಷಗಳಿಂದ ಆಂದೋಲನ ಪತ್ರಿಕೆ ಜೋಪಾನವಾಗಿಟ್ಟಿದ್ದೇನೆ…

ಆಂದೋಲನ ದಿನಪತ್ರಿಕೆಯ ೫೦ ವರ್ಷಗಳ ಸಾರ್ಥಕ ಪಯಣದ ನೆನಪಿನಲ್ಲಿ ಪ್ರತಿದಿನವೂ ನೂರಾರು ಓದುಗರು ತಮ್ಮ ನೆನಪಿನ ಬುತ್ತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪತ್ರಿಕೆ ಮತ್ತು ಸಂಸ್ಥಾಪಕ ಸಂಪಾದಕರ ಜತೆಗಿನ ಒಡನಾಟ ಕುರಿತು ಓದುಗರ ಅಭಿಮಾನದ ಮಾತುಗಳು ಇಲ್ಲಿವೆ.

ಶಿಕ್ಷಕ-ನೌಕರರ ಕುಂದು ಕೊರತೆಗಳನ್ನು ನೀಗಿಸುವಲ್ಲಿ ಮುಖ್ಯ ಪಾತ್ರ

ಸಂಘ-ಸಂಸ್ಥೆಗಳ, ಶಿಕ್ಷಕ ನೌಕರರ ಕುಂದು ಕೊರತೆಗಳನ್ನು ನೀಗಿಸುವಲ್ಲಿ ಆಂದೋಲನ ಮುಖ್ಯ ಪಾತ್ರ ವಹಿಸಿದೆ. ನನ್ನ ಸೇವಾವಧಿಯಲ್ಲಿ ಶಿಕ್ಷಕ ಸಂಘದ ಕಾರ್ಯದರ್ಶಿಯಾಗಿದ್ದೆ. ಆ ವೇಳೆಯಲ್ಲಿ ಸಂಘದ ವಿವಿಧ ಕಾರ್ಯ ಚಟುಚಟಿಕೆಯಲ್ಲಿ ತೊಡಗಿದ್ದ ಶಿಕ್ಷಕ ನೌಕರರ ಕುಂದು ಕೊರತೆ ಬಗ್ಗೆ ಆಂದೋಲನ ಪತ್ರಿಕೆಗೆ ಮನವಿ ಸಲ್ಲಿಸಿದ ಕೂಡಲೇ ಅದನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಸರ್ಕಾರ ಹಾಗೂ ಇಲಾಖೆಯ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸುವಲ್ಲಿ ಕೆಲಸ ಮಾಡುತ್ತಿದ್ದರು. ಆಂದೋಲನ ಪತ್ರಿಕೆ ಈಗಲೂ ರಾಜಶೇಖರ ಕೋಟಿ ಅವರು ಹಾಕಿ ಕೊಟ್ಟ ದಾರಿಯಲ್ಲೇ ಸಾಗುತ್ತಿರುವುದು ನಮ್ಮೆಲ್ಲರ ಹೆಮ್ಮೆ.

-ಶ್ರೀ ಕಂಠಯ್ಯ, ನಿವೃತ್ತ ಮುಖ್ಯ ಶಿಕ್ಷಕರು, ಗುಂಡ್ಲುಪೇಟೆ


ಪತ್ರಿಕೆ ಅನೇಕ ಜನರಿಗೆ ಸ್ಪೂರ್ತಿಯಾಗಿದೆ.

ರಾಜಶೇಖರ ಕೋಟಿ ಮತ್ತು ಆಂದೋಲನ ಪತ್ರಿಕೆ ಅನೇಕ ಜನರಿಗೆ ಸ್ಪೂರ್ತಿಯಾಗಿದೆ. ಆಂದೋಲನ ಅಂದರೆ ಜನಪರ, ಶೋಷಿತರ, ನೊಂದವರ ಪರವಾದ ಪತ್ರಿಕೆಯಾಗಿದೆ. ೨೦೦೦ನೇ ಇಸವಿಯಲ್ಲಿ ನರಹಂತಕ ವೀರಪ್ಪನ್, ಡಾ.ರಾಜ್‌ಕುಮಾರ್ ಅವರನ್ನು ಅಪಹರಿಸಿದ ಸಂದರ್ಭದಲ್ಲಿ ಆಂದೋಲನ ಪತ್ರಿಕೆಯಲ್ಲಿ ಪ್ರಟಕವಾಗುತ್ತಿದ್ದ ಸುದ್ದಿಗಳು ಸ್ಮರಣಿಯ. ೧೯೭೨ ರಲ್ಲಿ ಪ್ರಾರಂಭವಾದ ಆಂದೋಲನ ಪತ್ರಿಕೆ ೫೦ ವರ್ಷಗಳನ್ನು ಪೂರೈಸಿರುವುದು ಸಂತೋಷದ ವಿಷಯ. ನಾನು ಆಂದೋಲನ ಪತ್ರಿಕೆಯನ್ನು ದಿನನಿತ್ಯ ತಪ್ಪದೆ ಓದುತ್ತೇನೆ. ಪತ್ರಿಕೆ ಶತಮಾನೋತ್ಸವ ಆಚರಿಸಲಿ ಎಂದು ಆಶಿಸುತ್ತೇನೆ.

ರಾಜಣ್ಣ, ಪೊಲೀಸ್ ಲೇಔಟ್, ಎಸ್‌ವಿಪಿ ನಗರ, ಮೈಸೂರು


ಮನುಷ್ಯ- ಮನುಷ್ಯರ ನಡುವೆ ಸಂಬಂಧ ಬೆಸೆಯುವ ಕೆಲಸ

ಇಂದು ಸಾಮಾಜಿಕ ಜವಾಬ್ದಾರಿಯನ್ನು ಅರಿತ ಪತ್ರಿಕೆಗಳು ಸಮಾಜಕ್ಕೆ ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಿದೆ. ಧರ್ಮ, ಜಾತಿ, ಸಂಸ್ಕೃತಿ, ದೇವರ ಹೆಸರಿನಲ್ಲಿ ಸದಾ ಕಚ್ಚಾಡುತ್ತಾ, ಸಾವು -ನೋವುಗಳನ್ನು ಉಂಟುಮಾಡುತ್ತಾ ಇರುವ ಪ್ರಸ್ತುತ ಸಾಮಾಜಿಕ ಸಂದರ್ಭದಲ್ಲಿ ನೆಮ್ಮದಿ ಮರೀಚಿಕೆಯಾಗುತ್ತಿದೆ. ಈ ನಡುವೆ ವಸ್ತುನಿಷ್ಠ ವರದಿ ಮಾಡುವ, ಮನುಷ್ಯ ಮನುಷ್ಯರ ನಡುವೆ ಸಂಬಂಧ ಬೆಸೆಯುವ ಕೆಲಸವನ್ನು ಆಂದೋಲನ ಪತ್ರಿಕೆ ಮಾಡುತ್ತಾ ಬರುತ್ತಿರುವುದು ಸಂತೋಷದ ವಿಷಯವಾಗಿದೆ. ಆಂದೋಲನ ಪತ್ರಿಕೆ ಬೆಳಿಗ್ಗೆ ಎಷ್ಟು ಹೊತ್ತಿಗೆ ಬರುತ್ತದೆ ಎಂದು ನಮ್ಮನ್ನು ಕಾಯುವಂತೆ ಮಾಡಿದೆ. ಇದು ಆಂದೋಲನ ಪತ್ರಿಕೆಯ ಗೆಲುವು ಎಂದೇ ಭಾವಿಸುವೆ.

ಎನ್.ನಾಗಮ್ಮ, ಬಳ್ಳಗೆರೆ ಗ್ರಾಮ, ಮಳವಳ್ಳಿ ತಾಲೂಕು


ಜನರ ಮನಸ್ಸಿನಲ್ಲಿ ಆಳವಾಗಿ ಉಳಿದಿದೆ

ಆಂದೋಲನ ಪತ್ರಿಕೆಯು ತನ್ನ ಸುದ್ದಿಗಳ ಮೂಲಕ ಜನರ ಮನಸ್ಸಿನಲ್ಲಿ ಆಳವಾಗಿ ಉಳಿದಿದೆ. ಇದೇ ಕಾರಣಕ್ಕಾಗಿ ಆಂದೋಲನ ಪತ್ರಿಕೆ ಓದುವವರ ಸಂಖ್ಯೆಯು ಹೆಚ್ಚಾಗಿದೆ. ಆಂದೋಲನ ಪತ್ರಿಕೆ ೫೦ ವರ್ಷ ಪೂರೈಸಿದ ಸಂದರ್ಭದಲ್ಲಿ ಹೊಸ ಸಂಚಿಕೆ ಬಿಡುಗಡೆ ಮಾಡಿರುವುದು ಸಂತಸ ತಂದಿದೆ. ಪತ್ರಿಕೆ ೧೦೦ ವರ್ಷ ಪೂರೈಸಿ ಮುನ್ನಡೆಯಲಿ ಎಂದು ಅಶಿಸುತ್ತೇನೆ.

ಚಂದ್ರಶೇಖರ್, ಕುವೆಂಪು ನಗರ ಮೈಸೂರು


ಆಂದೋಲನ ಕ್ರಾಂತಿಯನ್ನೇ ಮಾಡಿದೆ

ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಸಂಚಿಕೆ ಪತ್ರಿಕಾ ಕ್ಷೇತ್ರದಲ್ಲಿ ೫೦ ವರ್ಷ ಪೂರೈಸಿ ಅತಿ ಹೆಚ್ಚು ಪುಟಗಳನ್ನು ಹೊರತರುವ ಮೂಲಕ ಆಂದೋಲನ ಒಂದು ಕ್ರಾಂತಿಯನ್ನೇ ಮಾಡಿದೆ. ಪಕ್ಷಪಾತ ಮತ್ತು ಜಾತಿ ಭೇದವಿಲ್ಲದೆ ನೊಂದವರ ಧ್ವನಿಯಾಗಿ ಪತ್ರಿಕೆ ಕೆಲಸ ಮಾಡಿರುವುದು ಸಂಚಿಕೆ ಮೂಲಕ ತಿಳಿದುಬರುತ್ತಿದೆ. ವೀರಪ್ಪನ್, ಸತ್ಯದೇವ್ ಇನ್ನೂ ಹತ್ತು ಹಲವಾರು ಪರಿಣಾಮಕಾರಿ ವರದಿಗಳನ್ನು ಮತ್ತೆ ನೆನಪು ಮಾಡುವ ರೀತಿಯಲ್ಲಿ ಸಂಚಿಕೆ ಮೂಡಿಬಂದಿದೆ. ಇಂತಹ ಉತ್ತಮ ಕೆಲಸ ಮಾಡುವ ಶಕ್ತಿ ಇರುವುದು ಆಂದೋಲನಕ್ಕೆ ಮಾತ್ರ.

ನಾಗೇಗೌಡ, ಶ್ರೀ ವಿನಾಯಕ ಪೇಂಟ್ ಮಾಲೀಕರು, ಎಚ್.ಡಿ. ಕೋಟೆ


ಕನ್ನಡ ಸಾಹಿತ್ಯ ಲೋಕಕ್ಕೆ ಅನೇಕ ಬರಹಗಾರರು ಸಿಕ್ಕಿದರು
ದಲಿತ, ದಮನಿತರ, ಶೋಷಿತರ ಪರವಾಗಿ ಆಂದೋಲನ ಪತ್ರಿಕೆ ದೊಡ್ಡ ಧ್ವನಿಯಾಗಿತ್ತು. ಕೋಟಿ ಅವರು ‘ಆಂದೋಲನ’ದ ಮೂಲಕ ವೈಚಾರಿಕ ನೆಲೆಗಟ್ಟಿನ ಬರಹಗಾರರಿಗೆ ಬರೆಯಲು ವೇದಿಕೆ ಕಲ್ಪಿಸಿಕೊಟ್ಟರು. ಭಾಷಾ ಚಳುವಳಿ, ರೈತ ಚಳುವಳಿ, ದಲಿತ ಚಳುವಳಿಗೆ ಪತ್ರಿಕೆಯ ಮೂಲಕ ಬೆಂಬಲವಾಗಿದ್ದರು. ಆಂದೋಲನ ಪತ್ರಿಕೆ ತನ್ನ ಶೀರ್ಷಿಕೆಗೆ ತಕ್ಕಂತೆ ನಡೆದುಕೊಂಡು ಬಂದಿರುವುದು ಸಂತಸದ ವಿಚಾರ. ಕೋಟಿ ಅವರ ಕಾರಣದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಅನೇಕ ಬರಹಗಾರರು ದಕ್ಕಿದರು.

ಸಿ.ಹರಕುಮಾರ್, ಹವ್ಯಾಸಿ ಬರಹಗಾರ


30 ವರ್ಷಗಳಿಂದ ಆಂದೋಲನ ಜೋಪಾನವಾಗಿಟ್ಟಿದ್ದೇನೆ…

ಪತ್ರಿಕೆಗಳನ್ನು ಕೊಂಡು ಓದುವುದು ನನ್ನ ಹವ್ಯಾಸ. ನನ್ನ ಸಂಗ್ರಹಾಲಯದಲ್ಲಿ ಕಳೆದ ಮೂವತ್ತು ವರ್ಷಗಳಿಂದಲೂ ಆಂದೋಲನ ದಿನಪತ್ರಿಕೆ ಜೋಪಾನವಾಗಿ ಇವೆ. ಸಮಯ ಸಿಕ್ಕಾಗಲೆಲ್ಲ ಓದಿ ಸಂಭ್ರಮ ಪಡುತ್ತೇನೆ. ಆಂದೋಲನ ದಿನಪತ್ರಿಕೆ ಪ್ರಾರಂಭದಿಂದ ಇವತ್ತಿನವರೆಗೆ ಹಲವಾರು ಬದಲಾವಣೆಗಳೊಂದಿಗೆ ಓದುಗರಿಗೆ ವಿಭಿನ್ನ ರೀತಿಯಲ್ಲಿ, ತನ್ನದೇ ಆದ ದಾಟಿಯಲ್ಲಿ ಸುದ್ದಿ, ಮಾಹಿತಿಗಳನ್ನು ನೀಡುವುದರ ಮೂಲಕ ಓದುಗರ ಮನಸೂರೆಗೊಂಡಿದೆ.
ಸಾಮಾನ್ಯ ಓದುಗರನ್ನು ಲೇಖಕರನ್ನಾಗಿ ಮಾಡಿದ ಕೀರ್ತಿ ಆಂದೋಲನ ದಿನಪತ್ರಿಕೆಗೆ ಸಲ್ಲುತ್ತದೆ. ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ ಅನೇಕ ಪತ್ರಕರ್ತರು ರಾಜ್ಯಮಟ್ಟದ ಅನೇಕ ಪತ್ರಿಕೆಗಳಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಒಂದು ರೀತಿಯಲ್ಲಿ ಆಂದೋಲನ ದಿನಪತ್ರಿಕೆ ಪತ್ರಿಕೋದ್ಯಮದ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಹಲವು ಪತ್ರಕರ್ತರಿಗೆ ತರಬೇತಿ ನೀಡುವ ಕೇಂದ್ರವಾಗಿದೆ ಎಂದರೆ ತಪ್ಪಾಗಲಾರದು.
ಅನೇಕ ಅಂಕಣಗಳು ಓದುಗರ ಮನ ಸೆಳೆದಿವೆ. ಹಬ್ಬ ಹರಿದಿನ, ಗಣ್ಯರ ದಿನಾಚರಣೆ, ಇನ್ನಿತರ ವಿಶೇಷ ದಿನಗಳ ಸಂದರ್ಭಗಳಲ್ಲಿ ವರ್ಣರಂಜಿತ ವಿಶೇಷಾಂಕ ನೀಡಿದೆ. ಇಂತಹ ಶುಭ ಸಂದರ್ಭದಲ್ಲಿ ಸಂಸ್ಥಾಪಕರಾದ ರಾಜಶೇಖರ ಕೋಟಿ ಅವರು ಇದ್ದಿದ್ದರೆ ತುಂಬಾ ಸಂಭ್ರಮ ಪಡುತ್ತಿದ್ದರು. ಪತ್ರಿಕೆಯ ಬಳಗದ ಎಲ್ಲ ಸನ್ಮಿತ್ರರಿಗೆ ಆಂದೋಲನ ದಿನಪತ್ರಿಕೆಯ ೫೦ನೇ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.

ಕಾಳಿಹುಂಡಿ ಶಿವಕುಮಾರ್, ರಾಮಕೃಷ್ಣನಗರ, ಮೈಸೂರು.


ನನ್ನ ಬೆಳವಣಿಗೆಯಲ್ಲಿ ಪತ್ರಿಕೆ ಪಾತ್ರ ದೊಡ್ಡದಿದೆ

ನಾನು ನಗರಪಾಲಿಕೆ ಸದಸ್ಯನಾಗಿದ್ದ ವೇಳೆ ‘ಆಂದೋಲನ’ ದಿನಪತ್ರಿಕೆ ಸಂಪಾದಕರಾದ ರಾಜಶೇಖರ ಕೊಟಿ ಅವರು ನನ್ನ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದರು. ನನ್ನ ಬೆಳವಣಿಗೆಯಲ್ಲಿ ಪತ್ರಿಕೆ ಪಾತ್ರ ದೊಡ್ಡದಿದೆ. ನನ್ನಂತಹ ನೂರಾರು ಜನರನ್ನು ಬೆಳೆಸಿದೆ. ಸತ್ಯ, ನಿಷ್ಠುರ ವರದಿಗಳನ್ನು ನೀಡಿ ಜನ ಮೆಚ್ಚುಗೆ ಪಡೆದಿರುವ ‘ಆಂದೋಲನ’ ಪಯಣ ಹೀಗೇ ಯಶಸ್ವಿಯಾಗಿ ನಡೆಯಲಿ. ೫೦ನೇ ವರ್ಷಾಚರಣೆ ಜನಮಾನಸದಲ್ಲಿ ಉಳಿಯುವಂತೆ ನಡೆಯಿತು.

ಆರ್.ಸೋಮಸುಂದರ್, ನಗರಪಾಲಿಕೆ ಮಜಿ ಸದಸ್ಯರು.


‘ಆಂದೋಲನ’ ಬಳಗ ನನ್ನನ್ನು ಪ್ರೋತ್ಸಾಹಿಸಿದೆ

ನನ್ನ ಪ್ರತಿೊಂಂದು ಸಾಮಾಜಿಕ ಕಾರ್ಯದಲ್ಲಿ ‘ಆಂದೋಲನ’ ಪತ್ರಿಕೆಯ ಪ್ರೋತ್ಸಾಹವಿದೆ. ನಾನು ಯಾವುದೇ ಒಳ್ಳೆಯ ಕೆಲಸ ಮಾಡಿದಾಗಲೂ ಸಂಪಾದಕರಾಗಿದ್ದ ರಾಜಶೇಖರ ಕೋಟಿ ಅವರು ಹಾಗೂ ರವಿ ಕೋಟಿ ಅವರು ನನ್ನನ್ನು ಪ್ರೋತ್ಸಾಹಿಸಿ ಹುರಿದುಂಬಿಸಿದ್ದಾರೆ. ಪತ್ರಿಕೆಯ ಪಯಣ ಯಶಸ್ವಿಯಾಗಿ ಮುಂದುವರಿಯಲಿ. ಪತ್ರಿಕೆಯಿಂದ ನೂರಾರು ಸಮಾಜ ಸೇವಕರು ಸಾರ್ವಜನಿಕವಾಗಿ ಗುರುತಿಸಿಕೊಳ್ಳುವಂತಾಗಲಿ. ೫೦ನೇ ವರ್ಷಾಚರಣೆಯ ಸಂಭ್ರಮವು ‘ಆಂದೋಲನ’ ಬಳಗದ ಶ್ರಮ ಹಾಗೂ ಬದ್ಧತೆಯನ್ನು ತೋರಿಸಿತು.

-ಎಂ.ಎಸ್.ಧನಂಜಯ, ಬಿಜೆಪಿ ಮುಖಂಡರು

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ