Mysore
23
mist

Social Media

ಶುಕ್ರವಾರ, 02 ಜನವರಿ 2026
Light
Dark

ಮೈಸೂರಿಗೆ ಸೋನಿಯಾ ಆಗಮನ, ಕಬಿನಿಯಲ್ಲಿ ವಿಶ್ರಾಂತಿ ಭಾರತ ಜೋಡೊ ಯಾತ್ರೆಗೆ ಕೈ ಜೋಡಿಸಲಿದ್ದಾರೆ ಸೋನಿಯಾ, ಪ್ರಿಯಾಂಕಾ

ಮೈಸೂರು: ಕಾಂಗ್ರೆಸ್ ನಾಯಕಿ, ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಲು ಮೈಸೂರಿಗೆ ಆಗಮಿಸಿದ್ದಾರೆ.
ಮೈಸೂರಿಗೆ ಆಗಮಿಸಿದ ಸೋನಿಯಾ ಗಾಂಧಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸೇರಿ ಕಾಂಗ್ರೆಸ್ ಮುಖಂಡರು ಸ್ವಾಗತ ಕೋರಿದರು. ಎರಡು ದಿನಗಳ ಕಾಲ ಮಡಿಕೇರಿಯಲ್ಲಿ ಸೋನಿಯಾ ಗಾಂಧಿ ಅವರು ವಾಸ್ತವ್ಯ ಹೂಡಬೇಕಿತ್ತು. ಆದರೆ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸಿದ್ದು, ಎಚ್.ಡಿ.ಕೋಟೆ ಕಬಿನಿಯ ಖಾಸಗಿ ರೆಸಾರ್ಟ್‌ ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಭಾರತ ಜೋಡೋ ಯಾತ್ರೆಗೆ ಎರಡು ದಿನಗಳ ಕಾಲ ವಿರಾಮ ನೀಡಲಾಗಿದೆ. ಗುರುವಾರದಿಂದ ಯಾತ್ರೆ ಮತ್ತೆ ಆರಂಭವಾಗಲಿದೆ.

ಸೋನಿಯಾ ಗಾಂಧಿ ಅವರು 6 ರಂದು ಬೆಳಗ್ಗೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು 5 ರಂದು ರಾತ್ರಿ ಹಾಗೂ 6 ರಂದು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಇದು ಅಧಿಕೃತ ಕಾರ್ಯಕ್ರಮ. ಯಾರೊಬ್ಬರಿಗೂ ಹೂವಿನ ಹಾರ ಹಾಕುವ ಅವಕಾಶ ನೀಡುವುದಿಲ್ಲ. ಎಲ್ಲ ಕಾರ್ಯಕರ್ತರು ಹಾಗೂ ನಾಯಕರು ಸಹಕಾರ ನೀಡಬೇಕು ಎಂದವರು ತಿಳಿಸಿದರು.
ಸೋನಿಯಾ ಗಾಂಧಿ ಅವರಿಗೆ ಮೈಸೂರು ಹಾಗೂ ಕೊಡಗಿನಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಕೊಡಗು ಜಿಲ್ಲಾ ಅಧ್ಯಕ್ಷರು ಹಾಗೂ ಇತರೆ 15 ನಾಯಕರಿಗೆ ಅವರನ್ನು ಸ್ವಾಗತಿಸುವ ಜವಾಬ್ದಾರಿ ನೀಡಿದ್ದು, ಅವರ ಹೊರತಾಗಿ ಬೇರೆ ಯಾರೂ ಕೂಡ ಭೇಟಿ ಮಾಡಲು ಹೋಗಿ ತೊಂದರೆ ನೀಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಕಾಂಗ್ರೆಸ್‌ ನಾಯಕರಿಗೆ ಮನವಿ ಮಾಡಿದ್ದಾರೆ.

ಸೋನಿಯಾ ಗಾಂಧಿ ಮೈಸೂರಿಗೆ ಭೇಟಿ ನೀಡಿರೋದು ಹಲವು ಕುತೂಹಲಕ್ಕೆ ಕಾರಣವಾಗಿದೆ. ಈ ಮಧ್ಯೆ ಪ್ರಿಯಾಂಕಾ ಗಾಂಧಿ ಕೂಡಾ ಅಕ್ಟೋಬರ್ 7ಕ್ಕೆ ರಾಜ್ಯಕ್ಕೆ ಆಗಮಿಸಲಿದ್ದು, ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಮೂಲಕ ಇಡೀ ಗಾಂಧಿ ಕುಟುಂಬವೇ ಹಳೇ ಮೈಸೂರು ಭಾಗದಲ್ಲಿ ಬೀಡು ಬಿಟ್ಟಿದ್ದು, ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ವಿಶೇಷ ತಂತ್ರ ರೂಪಿಸಿರುವ ಸಾಧ್ಯತೆ ಇದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!