Mysore
17
clear sky

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಅಗ್ನಿಪಥ್‌ ; ಭಾರತವನ್ನು ಕಮರಿಸಬಹುದಾದ ಅಗ್ನಿ : ಭಾಗ-2

ಅನೇಕ ಕುಟುಂಬಗಳಲ್ಲಿ ಹಲವು ಪೀಳಿಗೆಗಳಿಗೆ ಸೇನಾ ಸೇವೆ ಎನ್ನುವುದು ಒಂದು ಪ್ರತಿಷ್ಠೆಯ ಪ್ರಶ್, ಅದೇ ಪರಂಪರೆಯಲ್ಲೇ ಪೀಳಿಗೆಗಳು ಬೆಳೆಯುತ್ತವೆ!

ಸುಶಾಂತ್‌ ಸಿಂಗ್‌

ಸ್ವಾತಂತ್ರ್ಯಾನಂತರದಲ್ಲೂ ವರ್ಗಾಧಾರಿತ (ಜಾತಿಯ ಮತ್ತೊಂದು ರೂಪ) ನೇಮಕಾತಿಯೇ ಭಾರತೀಯ ಸೇನೆಯ ಒಂದು ಪ್ರಮುಖ ಲಕ್ಷಣವಾಗಿದೆ. ಈ ಲಕ್ಷಣವೇ  ಭಾರತೀಯ ಸೇನೆಯ ಹೋರಾಟದ ಸಾಮರ್ಥ್ಯವನ್ನೂ, ಪ್ರಕೃತಿಯನ್ನೂ ರೂಪಿಸಿವೆ. ಕೆಲವು ವರ್ಷಗಳ ಹಿಂದೆ ನ್ಯಾಯಾಲಯಕ್ಕೆ ಸಲ್ಲಿಸಲಾದ ಪ್ರಮಾಣಪತ್ರವೊಂದರಲ್ಲಿ ಕೇಂದ್ರ ಸರ್ಕಾರವು “ ಭಾರತೀಯ ಸೇನೆಯು ರಾಷ್ಟ್ರಪತಿಗಳ ಸುರಕ್ಷತಾ ಸಿಬ್ಬಂದಿಯ ನೇಮಕಾತಿಯಲ್ಲಿ ವರ್ಗ ಸಂಯೋಜನೆಯನ್ನು ಕಾಪಾಡಿಕೊಂಡು ಬಂದಿರುವುದರಿಂದ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ, ಈ ಸಂದರ್ಭದಲ್ಲಿ ವರ್ಗ ಸಂಯೋಜನೆಯನ್ನು ಅಖಿಲ ಭಾರತ ಮಟ್ಟಕ್ಕೆ ವಿಸ್ತರಿಸುವುದು ರಾಷ್ಟ್ರಪತಿಗಳ ಭದ್ರತಾ ವ್ಯವಸ್ಥೆಯ ಕಾರ್ಯನಿರ್ವಹಣೆಗೆ ಧಕ್ಕೆ ಉಂಟಾಗುವುದೇ ಅಲ್ಲದೆ, ಈ ರೆಜಿಮೆಂಟಿನಲ್ಲಿರುವ ಜ್ಯೇಷ್ಠತೆಗೂ ಧಕ್ಕೆ ಉಂಟಾಗುತ್ತದೆ ” ಎಂದು ಹೇಳಿತ್ತು. ವರ್ಗಾಧಾರಿತ ಘಟಕಗಳನ್ನು ಸಮರ್ಥಿಸಿಕೊಂಡಿದ್ದ ಸರ್ಕಾರ ಆಯ್ಕೆಯಾದ ನಂತರದಲ್ಲಿ ಸಿಬ್ಬಂದಿಯನ್ನು ಕಾರ್ಯಾಚರಣೆಯ ಅವಶ್ಯಕತೆಗಳಿಗನುಗುಣವಾಗಿ ಗರಿಷ್ಟ ಪ್ರಮಾಣದ ಪರಿಣಾಮವನ್ನುಂಟುಮಾಡುವಂತೆ ವರ್ಗೀಕರಿಸಲಾಗುತ್ತದೆ ಎಂದು ಹೇಳಲಾಗಿತ್ತು.

ಅಗ್ನಿಪಥ್‌ ಪ್ರಸ್ತಾವನೆಯಲ್ಲಿ ಈ ವರ್ಗಾಧಾರಿತ ನೇಮಕಾತಿಯ ಬದಲು ಅಖಿಲ ಭಾರತ ಮಟ್ಟದ ಮುಕ್ತ  ವರ್ಗಾಧಾರಿತ ನೇಮಕಾತಿಯನ್ನು ಅನುಸರಿಸಲು ಸೂಚಿಸಲಾಗಿದೆ. ಸರ್ಕಾರದ ಆಲೋಚನೆಯಲ್ಲಿನ ಈ ಬದಲಾವಣೆಯ ಮೂಲ ಕಾರಣ ರಹಸ್ಯವಾಗಿಯೇ ಇದ್ದರೂ, ಇದು ಈಗಿರುವ ಮೂಲ ಸಾಂಘಿಕ ನಿರ್ವಹಣೆ, ನಾಯಕತ್ವದ ಸಂರಚನೆಗಳು ಮತ್ತು ಭಾರತೀಯ ಸೇನೆಯ ಕಾರ್ಯಾಚರಣೆಯ ತತ್ವಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.  ಭಾರತೀಯ ಸೇನೆಯಲ್ಲಿರುವ ಯೋಧರು ವೃತ್ತಿಪರ ತರಬೇತಿ ಹೊಂದಿರುತ್ತಾರಾದರೂ, ಅವರ ಮೂಲ ಪ್ರೇರಣೆ ತಮ್ಮದೇ ಆದ ಸಾಮಾಜಿಕ ಅಸ್ಮಿತೆಯನ್ನು ಆಧರಿಸಿರುತ್ತದೆ. ಪ್ರತಿಯೊಬ್ಬ ಯೋಧನೂ ಸಹ ತನ್ನ ಸಾಮಾಜಿಕ ಅಸ್ಮಿತೆಗನುಗುಣವಾಗಿ ತನ್ನ ಜಾತಿಯ ಬಳಗದಲ್ಲೇ, ಗ್ರಾಮ ವಲಯದಲ್ಲಿ, ಸಾಮಾಜಿಕ ವಾತಾವರಣದಲ್ಲಿ ಖ್ಯಾತಿ ಗಳಿಸಲು, ಒಂದು ಸ್ಥಾನವನ್ನು ಪಡೆಯಲು ಬಯಸುತ್ತಾನೆ.  ಈ ಅಸ್ಮಿತೆಯ ಜಾಗದಲ್ಲಿ ವೃತ್ತಿಪರ ಅಸ್ಮಿತೆಯನ್ನು ತರುವುದರಿಂದ ಸಂಪ್ರದಾಯಗಳಿಗೆ ಬದ್ಧವಾಗಿರುವ ಸೇನೆಯಲ್ಲಿ ಹಲವು ಸವಾಲುಗಳು ಉದ್ಭವಿಸುತ್ತವೆ. ಗೋರ್ಖಾ ರೆಜಿಮೆಂಟ್‌ನಲ್ಲಿ ಹರಿಯಾಣದ ಒಬ್ಬ ಯೋಧ, ಕೇರಳದಿಂದ ಮಳಯಾಳಿ ಯೋಧ, ಮಣಿಪುರದಿಂದ ಮೈತಿ ಯೋಧ ಹೊಂದಿಕೊಳ್ಳಬೇಕಾದರೆ ಒಂದು ಅಮೂಲಾಗ್ರ  ಪುನಾರಚನೆ ಅಗತ್ಯವಾಗಿ ಬೇಕಾಗುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಭಾರತೀಯ ಸೇನೆ ಇದಕ್ಕೆ ಸಿದ್ಧವಾಗಿಲ್ಲ ಎನಿಸುತ್ತದೆ.  ಬಹುಶಃ ಹೊಂದಾಣಿಕೆಯ ಮನೋಭಾವವುಳ್ಳ, ಹೆಚ್ಚಿನ ಸ್ಥಿತಿಸ್ಥಾಪಕ ಗುಣವುಳ್ಳ ಭಾರತೀಯ ಸೇನೆಯು ಈ ಪಲ್ಲಟವನ್ನು ನಿಭಾಯಿಸಿಕೊಂಡು ಮುನ್ನಡೆದು, ತನ್ನ ಕಾರ್ಯಾಚರಣೆಯ ದಕ್ಷತೆಯನ್ನು ಕಾಪಾಡಿಕೊಳ್ಳುತ್ತದೆ ಎಂಬ ವಿಶ್ವಾಸ ಸರ್ಕಾರಕ್ಕೆ ಇರಬಹುದು.

ಈ ಹೊಸ ಮಾದರಿಯು ಒಡ್ಡುವ ಇತರ ಸವಾಲುಗಳೂ ಇವೆ. ವಿಭಿನ್ನ ಹಂತದ ಅನುಭವ ಮತ್ತು ಪ್ರೇರಣೆಯನ್ನು ಹೊಂದಿರುವ ಸೈನಿಕರ ತರಬೇತಿ, ನಿಯೋಜನೆ ಮತ್ತು ಸಂಯೋಜನೆಯ ಹಂತದಲ್ಲೂ ಸಮಸ್ಯೆಗಳು ಉದ್ಭವಿಸುತ್ತವೆ. ಅಲ್ಪಕಾಲಿಕ ಗುತ್ತಿಗೆ ಆಧಾರಿತ ಯೋಧರಾಗಿ ಶೇ 25ರಷ್ಟು ಅಭ್ಯರ್ಥಿಗಳನ್ನು ಉಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಅನಾರೋಗ್ಯಕರ ಪೈಪೋಟಿ ಸೃಷ್ಟಿಯಾಗಬಹುದು. ವಿಶ್ವಾಸ, ಗೆಳೆತನ, ಸಹವಾಸಿ ಮನೋಭಾವ ಮತ್ತು ಸಂಘಹಿತಾಸಕ್ತಿಯನ್ನೇ ಆಧರಿಸಿರುವ ಒಂದು ಸಂಸ್ಥೆಯಲ್ಲಿ, ಅಂತಿಮ ವರ್ಷದ ಅಭ್ಯರ್ಥಿಗಳ ಸೋಲು-ಗೆಲುವುಗಳ ಪೈಪೋಟಿಯು ಅಸೂಯೆ, ಈರ್ಷೆಗಳಿಗೂ ಕಾರಣವಾಗುವ ಸಾಧ್ಯತೆಗಳಿವೆ. ಹಾಗೆಯೇ ಸರ್ಕಾರವು ಗುತ್ತಿಗೆ ನೌಕರಿಯನ್ನು ನಾಲ್ಕು ವರ್ಷಗಳಿಗೆ ನಿಗದಿಪಡಿಸಿ, ಸೇವೆಯನ್ನು ಮುಂದುವರೆಸುವ ಅಥವಾ ಗ್ರಾಚ್ಯುಯಿಟಿ ಮುಂತಾದ ಸೌಲಭ್ಯಳ ಅವಕಾಶವನ್ನು ನಿರಾಕರಿಸಿರುವುದರಿಂದ, ಈ ನಿಯಮಗಳನ್ನು ಕಾನೂನಾತ್ಮಕವಾಗಿ ಪ್ರಶ್ನಿಸುವ ಸಾಧ್ಯತೆಗಳೂ ಇವೆ. ಒಆರ್‌ಒಪಿ ವಿಚಾರದಂತೆಯೇ ಇದೂ ಸಹ ಹೆಚ್ಚಿನ ಸೇವಾವಧಿ ಮತ್ತು ಪಿಂಚಣಿಯ ಆಗ್ರಹಗಳೊಂದಿಗೆ ವಿರೋಧ ಪಕ್ಷಗಳ ಪಾಲಿಗೆ ಒಂದು ರಾಜಕೀಯವಾಗಿ ಆಕರ್ಷಕವಾದ ವಿಷಯವಾಗಬಹುದು. ಕಾಲ ಕಳೆದಂತೆ, ಇದು ಪುನಃ ವೇತನ ಮತ್ತು ಪಿಂಚಣಿ ಬಜೆಟ್‌ನ ಹೆಚ್ಚಳಕ್ಕೆ ಕಾರಣವಾಗಲೂಬಹುದು.

ಅಲ್ಪ ಕಾಲಿಕ ಗುತ್ತಿಗೆ ಸೈನಿಕರು, ಯಾವುದೇ ಪಿಂಚಣಿ ಸೌಲಭ್ಯವೂ ಇಲ್ಲದೆ, ಸೇನಾ ವೃತ್ತಿಯ ನಂತರ ಅವರ ಘನತೆಗೆ ತಕ್ಕನಾದುದಲ್ಲದ ನೌಕರಿಗಳಲ್ಲಿ ತೊಡಗಬೇಕಾಗುತ್ತದೆ. ತತ್ಪರಿಣಾಮ ಅಲ್ಪಕಾಲಿಕ ಸೇನಾ ನೌಕರಿಗೆ ಸೇರಿಕೊಳ್ಳುವವರಿಗೆ ಬಲಯುತವಾದ  ಪ್ರೇರಣೆ ಇಲ್ಲವಾಗುತ್ತದೆ. ಆ ವೃತ್ತಿಗೆ ಸಲ್ಲುವ ಗೌರವವೂ ಕ್ಷೀಣಿಸುವುದಿಂದ ಯುವ ಜನತೆಯ ಮೇಲಿನ ಒತ್ತಡಗಳು ಹೆಚ್ಚಾಗುತ್ತವೆ. ಹಣಕಾಸಿನ ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ಸರ್ಕಾರದ ಆಲೋಚನೆಯು ವೃತ್ತಿ ಗೌರವವನ್ನು ಕ್ಷೀಣಿಸುವಂತೆ ಮಾಡುತ್ತದೆ ಹಾಗೆಯೇ ಸಾಮಾಜಿಕ ಸುಸ್ಥಿರತೆ ಮತ್ತು ದೇಶದ ಭದ್ರತೆಗೂ ತೊಂದರೆ ಎದುರಾಗುತ್ತದೆ.

ರಾಜಕೀಯ ಮತ್ತು ಸಾಮಾಜಿಕ ಪರಿಣಾಮಗಳು

ಅಗ್ನಿಪಥ್‌ ಯೋಜನೆಯಡಿ ಸೇನಾ ನೇಮಕಾತಿಯಲ್ಲಿ ಅನುಸರಿಸಲಾಗುತ್ತಿದ್ದ ರಾಜ್ಯಾವಾರು ಕೋಟಾಗಳನ್ನು ರದ್ದುಪಡಿಸಲಾಗುತ್ತದೆ. 1966ರಲ್ಲಿ ಜಾರಿಗೊಳಿಸಿದ ನೀತಿಯನುಸಾರ ಪ್ರತಿಯೊಂದು ರಾಜ್ಯದಿಂದಲೂ ಹೊಸದಾಗಿ ಸೇರಿಸಿಕೊಳ್ಳಬಹುದಾದ ಪುರುಷ ಜನಸಂಖ್ಯೆಯನ್ನು ಆಧರಿಸಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿತ್ತು. ಇದರಿಂದ ಸೇನೆಯಲ್ಲಿ ಒಂದು ರಾಜ್ಯದ ಅಥವಾ ಒಂದು ಭಾಷಿಕ ಸಮುದಾಯದ, ಜನಾಂಗೀಯತೆಯ ಪ್ರಾಬಲ್ಯವಿಲ್ಲದೆ ಸಮತೋಲನವನ್ನು ಕಾಪಾಡಿಕೊಳ್ಳಲಾಗುತ್ತಿದೆ. ಪಾಕಿಸ್ತಾನದಲ್ಲಿ ಪಂಜಾಬ್‌ ಪ್ರಾಂತ್ಯದ ಪ್ರಾತಿನಿಧ್ಯದಿಂದ ಉದ್ಭವಿಸಿದ ಸಮಸ್ಯೆಗಳನ್ನು ಇಲ್ಲಿ ಸ್ಮರಿಸಬಹುದು. ಶೈಕ್ಷಣಿಕ ಸಂಶೋಧನೆಗಳ ಪ್ರಕಾರ ಜನಾಂಗೀಯ ಅಸಮತೋಲನ ಹೆಚ್ಚಾದಷ್ಟೂ ಪ್ರಜಾತಂತ್ರಕ್ಕೆ ಮಾರಕವಾಗುವುದೇ ಅಲ್ಲದೆ ಅಂತರಿಕ ಕಲಹಗಳಿಗೂ ಕಾರಣವಾಗುತ್ತದೆ. ಭಾರತದ ಇಂದಿನ ಪರಿಸ್ಥಿತಿಯಲ್ಲಿ ಒಕ್ಕೂಟ ವ್ಯವಸ್ಥೆಯೇ ತೀವ್ರ ಪರಾಮರ್ಶೆಗೊಳಗಾಗಿರುವಾಗ ಇದು ಆತಂಕಕಾರಿಯೂ ಆಗುತ್ತದೆ.

ಇದರೊಂದಿಗೆ ಗಮನಿಸಬೇಕಾದ ಅಂಶವೆಂದರೆ, ಭಾರತದ ಆರ್ಥಿಕ ಪರಿಸ್ಥಿತಿ. ದೇಶದ 45 ಕೋಟಿ ಜನರು ಉದ್ಯೋಗ ಅರಸುವುದನ್ನೇ ನಿಲ್ಲಿಸಿದ್ದಾರೆ. ಅತಿ ಹೆಚ್ಚಿನ ಪ್ರಮಾಣದ ನಿರುದ್ಯೋಗ ಮತ್ತು ಅಸಂಪೂರ್ಣ ಉದ್ಯೋಗಗಳ ಸಮಸ್ಯೆ ಕಾಡುತ್ತಿದೆ. ಈ ಜನತೆಯ ನಡುವೆಯೇ ಸಂಘಟನಾತ್ಮಕ ಹಿಂಸೆಯಲ್ಲಿ ತೊಡಗಬಹುದಾದ ತರಬೇತಿ ಪಡೆದ ಯುವಜನತೆಯ ಸೇರ್ಪಡೆಯಾಗುತ್ತದೆ.  ಯುಗೋಸ್ಲೋವಿಯಾದಿಂದ ರವಾಂಡಾವರೆಗೆ ಮತ್ತು ನಮ್ಮಲ್ಲೇ ದೇಶ ವಿಭಜನೆಯ ಸಂದರ್ಭದಲ್ಲಿ, ಅಲ್ಪಸಂಖ್ಯಾತರ ವಿರುದ್ಧ ಹಿಂಸಾಕೃತ್ಯಗಳಲ್ಲಿ ನಿಸ್ಸೈನ್ಯೀಕರಣಗೊಂಡ ಯುವಜನರೇ ತೊಡಗಿದ್ದುದನ್ನು ಇತಿಹಾಸ ದಾಖಲಿಸಿದೆ. ಭಾರತದ ಇಂದಿನ ಸಂದರ್ಭದಲ್ಲಿ ಬಹುಸಂಖ್ಯಾವಾದಿ ಗುಂಪುಗಳು ಹಿಂಸಾತ್ಮಕ ಹೋರಾಟದಲ್ಲಿ ವಿಪುಲ ಅವಕಾಶ ಗಳಿಸಿಕೊಂಡಿರುವಾಗ , ಇಂತಹ ಪರಿಸ್ಥಿತಿಯು ಅಪಾಯಕಾರಿಯಾಗಿ ಕಾಣುತ್ತದೆ.

ಭಾರತದಲ್ಲಿ ಭಾರತೀಯ ಸೇನೆಯು ಬ್ರಿಟೀಷರಿಂದ ಪಡೆದ ಪರಂಪರೆಯಂತೆಯೇ ಯೋಧರಿಗೆ ವೇತನ, ಸಮವಸ್ತ್ರ ಮತ್ತು ಘನತೆಯನ್ನು ನೀಡುವುದೇ ಅಲ್ಲದೆ, ಸೇನೆಯು ಯೋಧರ ಜೀವನೋಪಾಯ, ಜೀವನ ಮಟ್ಟವನ್ನೂ ಕಾಪಾಡುತ್ತದೆ. ಹಾಗೆಯೇ ಸೈನಿಕರ ಕುಟುಂಬಗಳಿಗೆ ಸೌಕರ್ಯಗಳನ್ನು ಕಲ್ಪಿಸುತ್ತದೆ, ನಿವೃತ್ತಿ ನಂತರವೂ ಹಲವು ಸೌಕರ್ಯ ಮತ್ತು ಪ್ರಶಸ್ತಿಗಳನ್ನು, ಭೂಮಿಯನ್ನೂ ನೀಡುತ್ತದೆ. ಅಂದರೆ ಅನೇಕ ಕುಟುಂಬಗಳಲ್ಲಿ ಹಲವು ಪೀಳಿಗೆಗಳಿಗೆ ಸೇನಾ ಸೇವೆ ಎನ್ನುವುದು ಒಂದು ಪ್ರತಿಷ್ಠೆಯ ಪ್ರಶ್ನೆಯಾಗಿರುತ್ತದೆ.  ಅದೇ ಪರಂಪರೆಯಲ್ಲೇ ಪೀಳಿಗೆಗಳು ಬೆಳೆಯುತ್ತವೆ.  ನಿವೃತ್ತ ಸೈನಿಕರಿಗೆ ದೊರೆಯುವ ಪಿಂಚಣಿ ಆತನಿಗೆ ಒಂದು ಸಾಮಾಜಿಕ ಸ್ಥಾನ ಮತ್ತು ಸವಲತ್ತನ್ನೂ ಒದಗಿಸುತ್ತದೆ. ಆದರೆ ಅಲ್ಪ ಕಾಲಿಕ ಗುತ್ತಿಗೆ ಸೈನಿಕರು, ಯಾವುದೇ ಪಿಂಚಣಿ ಸೌಲಭ್ಯವೂ ಇಲ್ಲದೆ, ಸೇನಾ ವೃತ್ತಿಯ ನಂತರ ಅವರ ಘನತೆಗೆ ತಕ್ಕನಾದುದಲ್ಲದ ನೌಕರಿಗಳಲ್ಲಿ ತೊಡಗಬೇಕಾಗುತ್ತದೆ. ತತ್ಪರಿಣಾಮ ಅಲ್ಪಕಾಲಿಕ ಸೇನಾ ನೌಕರಿಗೆ ಸೇರಿಕೊಳ್ಳುವವರಿಗೆ ಬಲಯುತವಾದ  ಪ್ರೇರಣೆ ಇಲ್ಲವಾಗುತ್ತದೆ. ಆ ವೃತ್ತಿಗೆ ಸಲ್ಲುವ ಗೌರವವೂ ಕ್ಷೀಣಿಸುವುದಿಂದ ಯುವ ಜನತೆಯ ಮೇಲಿನ ಒತ್ತಡಗಳು ಹೆಚ್ಚಾಗುತ್ತವೆ. ಹಣಕಾಸಿನ ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ಸರ್ಕಾರದ ಆಲೋಚನೆಯು ವೃತ್ತಿ ಗೌರವವನ್ನು ಕ್ಷೀಣಿಸುವಂತೆ ಮಾಡುತ್ತದೆ ಹಾಗೆಯೇ ಸಾಮಾಜಿಕ ಸುಸ್ಥಿರತೆ ಮತ್ತು ದೇಶದ ಭದ್ರತೆಗೂ ತೊಂದರೆ ಎದುರಾಗುತ್ತದೆ.

(ಮೂಲ : ದ ಹಿಂದೂ)  ಅನುವಾದ : ನಾ ದಿವಾಕರ

Tags: