Mysore
25
mist

Social Media

ಭಾನುವಾರ, 22 ನವೆಂಬರ್ 2026
Light
Dark

ಸತ್ವಕ್ಕಿಂತ ಸದ್ದನ್ನೇ ಸಂಭ್ರಮಿಸುತ್ತಿರುವ ಸಾಹಿತ್ಯ ಔತಣಗಳು  

ಪಾತು

ಕರ್ನಾಟಕದಾದ್ಯಂತ ಈಗ ಸಾಹಿತ್ಯದ ಹಬ್ಬ. ಈ ಬರಹ ಬರೆದು, ಅಚ್ಚಿಗೆ ಹೋಗಿ, ಮುದ್ರಣವಾಗಿ ನೀವು ಓದುತ್ತಿರುವ ಹೊತ್ತಿಗೆ ಬೆಂಗಳೂರಿನ ಶಾಲಿನಿ ಮೈದಾನದಲ್ಲಿನ ‘ಪುಸ್ತಕ ಸಂತೆ’ ಮೂರನೇ ದಿನಕ್ಕೆ ಕಾಲಿಟ್ಟಿರುತ್ತದೆ.

ಮೊನ್ನೆ ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಬುಕ್‌ಬ್ರಹ್ಮ ಸಾಹಿತ್ಯೋತ್ಸವ ನಡೆಯಿತು. ಈಗ ಅದೇ ಬುಕ್‌ಬ್ರಹ್ಮ ತನ್ನ ಚತುರ್ಭುಜದ ತುಂಬಾ ಜೆಎಸ್‌ಡಬ್ಲ್ಯೂ ಸಾಹಿತ್ಯ ಹಬ್ಬದ ಹೊಣೆಯನ್ನು ಹೊತ್ತುಕೊಂಡು ಬಳ್ಳಾರಿಯತ್ತ ಹೆಜ್ಜೆ ಇಟ್ಟಿದೆ. ಈ ತಿಂಗಳ ಅಂತ್ಯದ ವೇಳೆಗೆ ಮಂಗಳೂರಿನಲ್ಲಿ ‘ಜನನುಡಿ’ ಆಯೋಜಿಸಲಾಗಿದೆ, ಅದೇ ಹೊತ್ತಿಗೆ ಬೆಂಗಳೂರಿನಲ್ಲಿ ಸಮಾಜಮುಖಿ ಸಾಹಿತ್ಯೋತ್ಸವ ನಡೆಯಲಿದೆ. ಜನವರಿಯಲ್ಲಿ ಮಂಗಳೂರಿನಿಂದ ಚೂರೇ ಚೂರು ದೂರ ಇರುವ ಮೂಡಬಿದಿರೆಯಲ್ಲಿ ‘ನುಡಿಸಿರಿ’ ನಡೆಯಲಿದೆ. ಅದಕ್ಕೂ ಮುನ್ನ, ಪ್ರತಿವರ್ಷದಂತೆ ಬೆಂಗಳೂರಲ್ಲಿ ಮತ್ತೆ ಬೆಂಗಳೂರು ಲಿಟರೇಚರ್ ಫೆಸ್ಟ್ ನಡೆಯಲಿದೆ.

ಒಟ್ಟಿನಲ್ಲಿ, ಸಾಹಿತಿಗಳ ಮನೆಯಲ್ಲಿ ಈಗ ಪುಸ್ತಕಗಳಿಗಿಂತ ಆಹ್ವಾನ ಪತ್ರಿಕೆಗಳದ್ದೇ ಹೆಚ್ಚು ಓಡಾಟ. ಆದರೆ ಆಹ್ವಾನ ಬಂದ ತಕ್ಷಣ ಖುಷಿಯಿಂದ ಹೊರಡುವ ಕಾಲ ಮುಗಿದಂತಿದೆ. ಪುಸ್ತಕ ಎತ್ತಿಟ್ಟು ಕೊಂಡು, ದೊಗಲೆ ಚೀಲ ಹೆಗಲಿಗೇರಿಸಿ, ಶೂವಿನ ಲೇಸ್ ಕಟ್ಟುವ ಮುನ್ನ ಇನ್ನೊಂದು ತುರ್ತು ಕೆಲಸ ಮುಗಿಸಲೇಬೇಕಾಗಿದೆ. ತಾವು ಧರಿಸುವ ಹಳೆಯ ಕನ್ನಡಕಕ್ಕೆ ಚೂರು, ಎಲ್ಲಿಯೂ ಗೊತ್ತಾಗದಂತೆ ಕಾಮಾಲೆ ಬಣ್ಣ ಬಳಿದುಕೊಂಡು, ತಾವು ಹೋಗುತ್ತಿರುವ ಕಾರ್ಯಕ್ರಮದ ಸೈದ್ಧಾಂತಿಕ ಹಿನ್ನೆಲೆಯನ್ನೂ ಪರಿಶೀಲಿಸಿಕೊಳ್ಳಬೇಕು. ಅಲ್ಲಿ ಹೋದರೆ ಇಲ್ಲಿ ಮುನಿಸಿಕೊಳ್ಳುವವರಿದ್ದಾರೆಯೇ, ಇಲ್ಲಿ ಹೋದರೆ ಅಲ್ಲಿ ಬೇಸರಿಸಿಕೊಳ್ಳುವವರಿದ್ದಾರೆಯೇ ಎಂಬುದನ್ನೂ ಮುಂಚಿತವಾಗಿ ತಿಳಿದುಕೊಳ್ಳಬೇಕು.

ಇತ್ತೀಚೆಗೆ ಸಾಹಿತ್ಯದ ಚರ್ಚೆಗಳಿಗಿಂತ ಸಾಹಿತಿಗಳ ಓಡಾಟವೇ ಹೆಚ್ಚು ಕುತೂಹಲ ಹುಟ್ಟಿಸುತ್ತಿರುವುದನ್ನು ಗಮನಿಸಿದರೆ, ಸಾಹಿತ್ಯ ವಿಮರ್ಶೆಯಲ್ಲೂ ಹೊಸ ಶಾಖೆಯೊಂದು ಆರಂಭವಾದಂತಿದೆ. ಕೃತಿಯ ವಿಮರ್ಶೆ ಒಂದು ಕಡೆಯಾದರೆ, ಕೃತಿಕಾರನ ಹಾಜರಾತಿಯ ವಿಮರ್ಶೆ ಇನ್ನೊಂದು ಕಡೆ. ಪುಸ್ತಕದಲ್ಲಿ ಏನು ಬರೆದಿದ್ದಾರೆ ಎನ್ನುವುದಕ್ಕಿಂತ ಯಾವ ವೇದಿಕೆಯಲ್ಲಿ ಕುಳಿತುಕೊಂಡಿದ್ದರು ಎಂಬುದೇ ಮುಖ್ಯವಾಗುತ್ತದೆ.

ಬಹುಶಃ ಮುಂದಿನ ದಿನಗಳಲ್ಲಿ ಸಾಹಿತ್ಯೋತ್ಸವಗಳ ಆಹ್ವಾನ ಪತ್ರಿಕೆಯ ಜೊತೆಗೆ ಒಂದು ಸಣ್ಣ ಪ್ರಶ್ನಾವಳಿಯನ್ನೂ ಕಳುಹಿಸಬಹುದೇನೋ! ನಿಮ್ಮ ಪ್ರಗತಿಪರತೆಯ ಪ್ರಮಾಣ ಎಷ್ಟು? ನಿಮ್ಮ ವೈಚಾರಿಕ ನಿಷ್ಠೆ ಯಾವ ಪಾಳಯಕ್ಕೆ? ನೀವು ಈ ಹಿಂದೆ ಯಾವೆಲ್ಲಾ ಸಾಹಿತ್ಯೋತ್ಸವಗಳಿಗೆ ಹೋಗಿದ್ದೀರಿ? ನಿಮ್ಮ ಹಾಜರಾತಿಯಿಂದ ಯಾರಿಗಾದರೂ ಸೈದ್ಧಾಂತಿಕ ಆಘಾತವಾಗುವ ಸಾಧ್ಯತೆ ಇದೆಯೇ? ಈ ತರದ ಪ್ರಶ್ನೆಗಳನ್ನು ಕೇಳಿ ಆ ನಂತರ ಅವರನ್ನು ಆಹ್ವಾನಿಸುವ, ಆಹ್ವಾನಿಸದೇ ಇರುವ ತೀರ್ಮಾನ ಕೈಗೊಂಡರೆ ಒಳ್ಳೆಯದೇನೋ! ಇನ್ನು ಮುಂದೆ ಸಾಹಿತ್ಯೋತ್ಸವಗಳಿಗೆ ಪ್ರವೇಶ ಪಡೆಯಲು ಒಂದು ಹೊಸ ವ್ಯವಸ್ಥೆ ಜಾರಿಗೆ ತರಬಹುದು.

ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ಪಾಸ್ ಪರಿಶೀಲಿಸುವಂತೆ, ಸಾಹಿತ್ಯೋತ್ಸವದ ಪ್ರವೇಶದ್ವಾರದಲ್ಲಿ ಸೈದ್ಧಾಂತಿಕ ಪಾಸ್‌ಪೋರ್ಟ್ ಪರಿಶೀಲಿಸಬಹುದು. ಪಾಸ್‌ಪೋರ್ಟ್‌ನಲ್ಲಿ ಎಡಪಂಥ, ಬಲಪಂಥ, ಪ್ರಗತಿಪರ, ತಟಸ್ಥ ಎಂಬ ವೀಸಾಗಳಿರಲಿ. ತಪ್ಪು ವೀಸಾದೊಂದಿಗೆ ಬಂದರೆ ನೇರವಾಗಿ ಮನೆಗೆ ವಾಪಸ್!

ಆದರೆ ಆಗ ನಷ್ಟವಾಗುವುದು ಕನ್ನಡಿಗನಿಗೆ. ಹೋಗುವ, ಹೋಗದಿರುವ, ಹೋಗಲು ಒಪ್ಪಿಕೊಂಡು ತಿರಸ್ಕರಿಸುವ, ಮೊದಲೇ ಒಪ್ಪಿಕೊಳ್ಳದೆ ಘನತೆಯಿಂದ ಸುಮ್ಮನಿರುವ, ಜಾಲತಾಣದ ಪೊಲೀಸರು ಪೋಸ್ಟ್‌ಗಳ ಮೇಲೊಂದು ಪೋಸ್ಟ್ ಹಾಕಿ ಜನ್ಮ ಜಾಲಾಡಿದ ನಂತರ ಎಚ್ಚೆತ್ತುಕೊಂಡು ಹೋಗದೇ ಇರುವ… ಹೀಗೆ ತರಹೇವಾರಿ ಮಂಗಾಟಗಳ ಮನರಂಜನೆ ತಪ್ಪಿ ಹೋಗುತ್ತದೆ.

ಬಹುಶಃ ಮುಂದಿನ ದಿನಗಳಲ್ಲಿ ಸಾಹಿತಿಗಳಿಗೆ ಹೊಸದೊಂದು ಸೌಲಭ್ಯಒದಗಿಸಬೇಕಾಗಬಹುದು. ಸಾಹಿತ್ಯೋತ್ಸವಕ್ಕೆ ಹೋಗುವ ಮೊದಲು ಒಂದು ಹೆಲ್ಪ್‌ಲೈನ್‌ಗೆ ಕರೆ ಮಾಡಿ, ‘ನಾನು ಈ ಕಾರ್ಯಕ್ರಮಕ್ಕೆ ಹೋದರೆ ನನ್ನ ವೈಚಾರಿಕತೆಯ ಮೇಲೆ ಏನಾದರೂ ಪರಿಣಾಮವಾಗುತ್ತದೆಯೇ?’ ಎಂದು ವಿಚಾರಿಸಬಹುದು. ಅಲ್ಲಿಂದ ಉತ್ತರ ಬರುವವರೆಗೆ ಮನೆಯಲ್ಲೇ ಕುಳಿತು ತಮ್ಮ ಕವಿತೆಗಳನ್ನು, ಭಾಷಣಗಳನ್ನು ಮನನ ಮಾಡಿಕೊಳ್ಳಬಹುದು. ಹಿಂದೆ ಕವಿತೆಯಲ್ಲಿ ರೂಪಕಗಳಿದ್ದಾವೆಯೇ, ಕಥೆಯಲ್ಲಿ ಜೀವನದ ಅನುಭವವಿದೆಯೇ ಎಂದು ನೋಡುತ್ತಿದ್ದರು. ಈಗ ಕವಿಯ ಫೋಟೋ ಎಲ್ಲೆಲ್ಲಿ ಬಂದಿದೆ ಅಂತ ನೋಡಬೇಕಾಗುತ್ತದೆ.ಪುಸ್ತಕದ ಮೊದಲ ಪುಟದಲ್ಲಿ ಲೇಖಕರ ಪರಿಚಯದ ಬದಲು ಕಳೆದ ಐದು ವರ್ಷಗಳ ಕಾರ್ಯಕ್ರಮಗಳ ಹಾಜರಾತಿ ಪಟ್ಟಿ ಮುದ್ರಿಸಿದರೆ ಓದುಗರಿಗೂ ಅನುಕೂಲವಾಗಬಹುದು.ನ ಕೃತಿಯನ್ನು ಓದದೆಯೇ ಲೇಖಕರ ವೈಚಾರಿಕ ಮಟ್ಟವನ್ನು ನಿರ್ಧರಿಸಬಹುದು!

ಸಾಹಿತಿಗಳು ತಮಗಾಗಿ ಇನ್ನೊಂದು ಅನುಕೂಲವನ್ನೂ ಮಾಡಿಕೊಳ್ಳಬಹುದು. ಇನ್ನು ಮುಂದೆ ಸಾಹಿತಿಗಳು ಯಾವುದೇ ಕಾರ್ಯಕ್ರಮಕ್ಕೆ ಹೋಗುವ ಮೊದಲು ತಮ್ಮ ಸ್ನೇಹಿತರ ವಾಟ್ಸಾಪ್ ಗುಂಪಿನಲ್ಲಿ ಅನುಮತಿ ಕೇಳಬಹುದು. ‘ನಾನು ಈ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ. ದಯವಿಟ್ಟು ಯಾರೂ ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿ’ ಎಂದು ಮುಂಚಿತವಾಗಿಯೇ ಸಂದೇಶ ಹಾಕಬಹುದು. ಆದರೂ ಯಾರಾದರೂ ಬೇಸರಿಸಿಕೊಂಡರೆ, ಕಾರ್ಯಕ್ರಮದ ನಂತರ ಒಂದು ಸ್ಪಷ್ಟನೆ, ಅದರ ನಂತರ ಸ್ಪಷ್ಟನೆಗೆ ಸ್ಪಷ್ಟನೆ, ಕೊನೆಗೆ ಸ್ಪಷ್ಟನೆಯ ಬಗ್ಗೆ ಮತ್ತೊಂದು ವಿಚಾರ ಸಂಕಿರಣವೂ ನಡೆಸಬಹುದು.

ಒಟ್ಟಿನಲ್ಲಿ ಸಾಹಿತ್ಯದ ಹಬ್ಬಗಳಿಗಿಂತ ಸಾಹಿತ್ಯದ ಹಾಜರಾತಿ ಲೆಕ್ಕಾಚಾರಗಳೇ ಹೆಚ್ಚು ರಂಗೇರಿರುವ ಕಾಲ ಇದು. ಪುಸ್ತಕಗಳ ನಡುವೆ ಒಂದಿಷ್ಟು ಜಾಗ ಸಿಕ್ಕರೆ ಸಾಕು ಅಲ್ಲಿ ಓದುಗರೂ ಬರಲಿ, ಭಿನ್ನಾಭಿಪ್ರಾಯಗಳೂ ಬರಲಿ. ಎಲ್ಲರೂ ಒಂದೇ ಮಾತು ಹೇಳಬೇಕು, ಕೇಳಬೇಕು ಅಂತಿದ್ದರೆ ಸಾಹಿತ್ಯೋತ್ಸವಕ್ಕಿಂತ ಪ್ರತಿಧ್ವನಿ ಎಬ್ಬಿಸುವ ಖಾಲಿ ಸಭಾಂಗಣಗಳೇ ಸೂಕ್ತ.

” ಇತ್ತೀಚೆಗೆ ಸಾಹಿತ್ಯದ ಆರೋಗ್ಯಕರ ಚರ್ಚೆಗಳಿಗಿಂತ ಸಾಹಿತಿಗಳ ಓಡಾಟವೇ ಹೆಚ್ಚು ಕುತೂಹಲ ಹುಟ್ಟಿಸುತ್ತಿದೆ. ಪುಸ್ತಕದಲ್ಲಿ ಏನು ಬರೆದಿದ್ದಾರೆ ಎನ್ನುವುದಕ್ಕಿಂತ ಯಾವ ವೇದಿಕೆಯಲ್ಲಿ ಯಾರು ಕುಳಿತುಕೊಂಡಿದ್ದರು ಎಂಬುದೇ ಹೆಚ್ಚು ಚರ್ಚೆಯಾಗುತ್ತಿದೆ”

 

 

 

Tags:
error: Content is protected !!