ತಲಾ ೨,೫೦೦ ರೂ. ನೆರವಿನಂತೆ ಒಟ್ಟು ೧೨,೯೯,೩೦,೦೦೦ ರೂ. ಬಿಡುಗಡೆ
ಚಾಮರಾಜನಗರ: ಮುಂಗಾರು ವೈಫಲ್ಯದಿಂದ ಜಿಲ್ಲೆಯ ಎಲ್ಲ ಐದು ತಾಲ್ಲೂಕುಗಳೂ ಬರ ಪೀಡಿತ ಪ್ರದೇಶ ಎಂದು ಘೋಷಣೆಯಾಗಿದ್ದ ಹಿನ್ನೆಲೆಯಲ್ಲಿ ಮಳೆ ಕೊರತೆಯಿಂದ ಬೆಳೆ ಕಳೆದುಕೊಂಡಿರುವ ಜಿಲ್ಲೆಯ ೫೧,೯೭೨ ರೈತರ ಖಾತೆಗಳಿಗೆ ಮಧ್ಯಂತರ ಇನ್‌ಪುಟ್ ಸಬ್ಸಿಡಿ ತಲಾ ೨,೫೦೦ ರೂ. ನೆರವಿನಂತೆ ಒಟ್ಟು ೧೨,೯೯,೩೦,೦೦೦ ರೂ. ಬಿಡುಗಡೆಯಾಗಿದೆ. ಗುರುವಾರದಿಂದ ಇಲ್ಲಿಯ ರೈತರ ಖಾತೆಗಳಿಗೆ ಹಣ ಸಂದಾಯವಾಗುತ್ತಿದೆ.
ಚಾಮರಾಜನಗರ ತಾಲ್ಲೂಕಿನ ೨೧,೦೦೮, ಗುಂಡ್ಲುಪೇಟೆ ತಾಲ್ಲೂಕಿನ ೨೦,೬೬೬, ಹನೂರು ತಾಲ್ಲೂಕಿನ ೪,೮೮೯, ಕೊಳ್ಳೇಗಾಲ ತಾಲ್ಲೂಕಿನ ೫,೧೫೦ ಮತ್ತು ಯಳಂದೂರು ತಾಲ್ಲೂಕಿನ ೨೫೯ ರೈತರ ಖಾತೆಗಳಿಗೆ ಬೆಳೆನಷ್ಟ ಪರಿಹಾರ ಸಂದಾಯವಾಗ ತೊಡಗಿದೆ. ಬರದಿಂದ ಉಂಟಾದ ಬೆಳೆ ಹಾನಿಗೆ ಸಂಬಂಧಿಸಿದಂತೆ ರೈತರಿಗೆ ಮೊದಲ ಕಂತಿನ ಮಧ್ಯಂತರ ಇನ್‌ಪುಟ್ ಸಬ್ಸಿಡಿ ನೆರವು ಬಿಡುಗಡೆಗೆ ಮುಖ್ಯಮಂತ್ರಿ ಇತ್ತೀಚೆಗೆ ಚಾಲನೆ ನೀಡಿದ್ದರು. ಅದರಂತೆ ಜಿಲ್ಲೆಯ ರೈತರ ಖಾತೆಗೆ ಈಗ ಜಮೆಯಾಗುತ್ತಿದೆ.
೨೦೨೬ರ ಮುಂಗಾರು ಹಂಗಾಮಿನಲ್ಲಿ ತೀವ್ರ ಬರದಿಂದ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ತಕ್ಷಣದ ನೆರವು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಮೊದಲ ಕಂತಿನ ಮಧ್ಯಂತರ ಇನ್ ಪುಟ್ ಸಬ್ಸಿಡಿ ಪರಿಹಾರ ೨,೫೦೦ ರೂ. ಬಿಡುಗಡೆ ಮಾಡಿದೆ. ಎನ್‌ಡಿಆರ್‌ಎಫ್ ನಿಯಮಗಳಂತೆ ಪ್ರತಿ ರೈತರಿಗೂ ಗರಿಷ್ಟ ಎರಡು ಹೆಕ್ಟೇರ್‌ಗೆ ಮಿತಿಗೊಳಿಸಿ ೫,೦೦೦ ರೂ. ಪರಿಹಾರ ನೀಡಲು ತೀರ್ಮಾನಿಸಿ ಮೊದಲ ಕಂತಿನಲ್ಲಿ ೨,೫೦೦ ರೂ. ಬಿಡುಗಡೆ ಮಾಡಿದ್ದು, ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್ ಅಡಿಯಲ್ಲಿ ಬರ ಪರಿಹಾರದ ಅನುದಾನ ಬಿಡುಗಡೆಯಾದ ಕೂಡಲೇಪರಿಷ್ಕ ತ ಮಾನದಂಡಗಳ ಅನ್ವಯ ಬಾಕಿ ಪರಿಹಾರ ಮೊತ್ತವನ್ನು ರೈತರಿಗೆ ವಿತರಿಸಲಾಗುತ್ತದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.
ಪರಿಹಾರ ಹಣವನ್ನು ಆಧಾರ್ ಆಧಾರಿತ ನೇರ ನಗದು ವರ್ಗಾವಣೆ (ಡಿಡಿಟಿ) ಮೂಲಕ ರೈತರ ಖಾತೆಗಳಿಗೆ ಜಮೆ ಮಾಡಲು ಪ್ರಾರಂಭಿಸಲಾಗಿದ್ದು, ಬಹಳಷ್ಟು ರೈತರು ಮೊಬೈಲ್‌ಗೆ ಬಂದಿರುವ ಮೆಸೇಜ್ ನೋಡಿ ತಮಗೆ ೨,೫೦೦ ರೂ. ಬಂದಿರುವುದನ್ನು ಖಚಿತಪಡಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ೬೪,೩೧೧ ರೈತರು ಬೆಳೆನಷ್ಟ ಪರಿಹಾರ ಪಟ್ಟಿಯಲ್ಲಿದ್ದು ಈ ಪೈಕಿ ಬ್ಯಾಂಕ್ ಖಾತೆಗಳಿಗೆ ಆಧಾರ್ ಸೀಡಿಂಗ್ ಮಾಡಿಸಿರುವ ಫ್ರೂಟ್ ಐಡಿ (ಎಫ್‌ಐಡಿ) ಮತ್ತು ಪಹಣಿ ವಿವರಗಳು ಸರಿಯಾಗಿರುವ ೫೧,೯೭೨ ರೈತರ ಖಾತೆಗಳಿಗೆ ಸುಗಮವಾಗಿ ಹಣ ಸಂದಾಯವಾಗುತ್ತಿದೆ.
ಇನ್ನುಳಿದ ೧೨,೩೩೯ ರೈತರು ತಮ್ಮ ಪಹಣಿ, ಸೀಡಿಂಗ್, ಎಫ್‌ಐಡಿ ವಿವರ ಕ್ರಮಬದ್ಧವಾಗಿಲ್ಲದ ಕಾರಣ ಇನ್ನೂ ಇವರಿಗೆ ಹಣ ಬಿಡುಗಡೆ ಆಗಿಲ್ಲ. ಸ್ಥಳೀಯ ಗ್ರಾಮ ಆಡಳಿತ ಅಧಿಕಾರಿಗಳನ್ನು ರೈತರು ಸಂಪರ್ಕಿಸಿ ತಾಂತ್ರಿಕ ದೋಷ ಸರಿಯಾಗುತ್ತಿದ್ದಂತೆ ಭೂಮಿ ತಂತ್ರಾಂಶದ ಸಹಾಯದಿಂದ ಈ ಎಲ್ಲ ರೈತರ ಖಾತೆಗಳಿಗೂ ಪರಿಹಾರ ಹಣ ಬಿಡುಗಡೆ ಆಗುತ್ತದೆ ಎಂದು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ೬೮,೨೯೧ ಹೆಕ್ಟೇರ್ ಬೆಳೆ ಹಾನಿ: ಚಾಮರಾಜನಗರ ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆಯಿಂದ ೬೮,೨೯೧ ಹೆಕ್ಟೇರ್ ಬೆಳೆ ಹಾನಿ ಆಗಿರುವುದಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಶ್ರೀರೂಪ ಅವರು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಜೋಳ, ಸೂರ್ಯ ಕಾಂತಿ, ಹತ್ತಿ, ಉದ್ದು, ಹೆಸರು, ರಾಗಿ, ಎಳ್ಳು, ಅವರೆ, ಹುರುಳಿ ಮೊದಲಾದ ಬೆಳೆಗಳು ನಷ್ಟ ಆಗಿರುವುದಾಗಿ ಇದರಲ್ಲಿ ಮಳೆ ಆಶ್ರಿತ ೩೭,೬೨೯ ಹೆಕ್ಟೇರ್ , ನೀರಾವರಿ ೩೦,೬೬೧ ಹೆಕ್ಟೇರ್ ಪ್ರದೇಶದಲ್ಲಿ ಈ ಬೆಳೆಗಳು ಮಳೆ ಕೊರತೆಯಿಂದ ಹಾನಿಗೆ ಒಳಗಾಗಿರುವುದಾಗಿ ರಾಜ್ಯ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ಅವರಿಗೆ ವರದಿ ಮಾಡಿದ್ದರು.
” ಕೇಂದ್ರ ಸರ್ಕಾರಕ್ಕೆ ಪರಿಹಾರದ ಮನವಿ ರಾಜ್ಯದಲ್ಲಿ ಮುಂಗಾರು ವೈಫಲ್ಯದಿಂದ ಎದುರಾಗಿರುವ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿಯ ಪ್ರಮಾಣವನ್ನು ವಿವರಿಸಿ, ಎನ್‌ಡಿಆರ್‌ಎಫ್ ಅಡಿಯಲ್ಲಿ ಒಟ್ಟು ೨೨,೪೦೦.೫೮ ಕೋಟಿ ರೂ. ಆರ್ಥಿಕ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಇದರಲ್ಲಿ ಚಾಮರಾಜನಗರ ಜಿಲ್ಲೆಯ ಪಾಲು ೮೩.೭೬ ಕೋಟಿ ರೂ. ಇರುವುದಾಗಿ ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.”
” ಮುಂಗಾರು ಮಳೆ ಕೊರತೆಯಿಂದ ಬೆಳೆ ಕಳೆದುಕೊಂಡಿರುವ ಚಾಮರಾಜನಗರ ಜಿಲ್ಲೆಯ ರೈತರ ಖಾತೆಗೆ ೨,೫೦೦ ರೂ. ಮಧ್ಯಂತರ ಇನ್‌ಪುಟ್ ಸಬ್ಸಿಡಿ ಗುರುವಾರದಿಂದ ಸಂದಾಯವಾಗುತ್ತಿದೆ. ಈ ಬಗ್ಗೆ ದೃಢಪಡಿಸಿಕೊಳ್ಳಲಾಗಿದೆ.”
ಪ್ರಿಯದರ್ಶಿನಿ, ಅಪರ ಜಿಲ್ಲಾಧಿಕಾರಿ




