ಮಂಡ್ಯ ನಗರದ ಕೆ.ವಿ.ಶಂಕರಗೌಡ ರಸ್ತೆಯು ಮೈಸೂರು-ಬೆಂಗಳೂರು ಹೆದ್ದಾರಿ ಮತ್ತು ಬನ್ನೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿದೆ. ಇಲ್ಲಿ ಫುಟ್ಪಾತ್ಇಲ್ಲದೇ ಪಾದಚಾರಿಗಳು ಸಂಚರಿಸಲು ತೀವ್ರ ತೊಂದರೆಯಾಗಿದೆ.
ಈ ಮಾರ್ಗದಲ್ಲಿ ಸರ್ಕಾರಿ ಮಹಾವಿದ್ಯಾಲಯ, ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಕಚೇರಿಗಳಿವೆ. ಜನತಾ ಶಿಕ್ಷಣ ಸಂಸ್ಥೆಯ ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜು, ಪಿ.ಇ.ಎಸ್.ಪದವಿಪೂರ್ವ ಕಾಲೇಜು, ಶಂಕರಗೌಡ ಮಹಾಶಿಕ್ಷಣ ವಿದ್ಯಾಲಯ, ಜನತಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರ ನಿಲಯಗಳು, ಜನತಾ ಶಿಕ್ಷಣ ಸಂಸ್ಥೆಯ ಕ್ರೀಡಾ ಸಮುಚ್ಚಯವಿದೆ. ಬ್ಯಾಂಕ್ ಹಾಗೂ ಸರ್ಕಾರಿ ಬಾಲಕ -ಬಾಲಕಿಯರ ವಿದ್ಯಾರ್ಥಿ ನಿಲಯಗಳಿವೆ, ಜನತಾ ಶಿಕ್ಷಣ ಟ್ರಸ್ಟಿನ ಕ್ರೀಡಾ ಸಮುಚ್ಚಯ ವಿಭಾಗದ ಮಾರ್ಗದಲ್ಲಿ ಮುಂಜಾನೆ ಹಾಗೂ ಸಂಜೆ ವೇಳೆ ಮಂಡ್ಯದ ಹಿರಿಯ ನಾಗರಿಕರು ವಾಯುವಿಹಾರಕ್ಕಾಗಿ ಇಲ್ಲಿಗೆ ಬರುತ್ತಾರೆ. ಶಂಕರಗೌಡ ರಸ್ತೆಯ ಎರಡೂ ಬದಿಗಳಲ್ಲಿ ಜಾಗವಿದ್ದರೂ ಅಲ್ಲಿ ಕೊರಕಲು ಬಿದ್ದಿರುವುದರಿಂದ ಅನಿವಾರ್ಯವಾಗಿ ವಾಹನಗಳು ಸಂಚರಿಸುವ ಮಾರ್ಗದಲ್ಲೇ ನಡೆದು ಹೋಗುವ ಪರಿಸ್ಥಿತಿ ಉಂಟಾಗಿದೆ. ಇಲ್ಲಿ ವಾಹನ ಸಂಚಾರ ಅಧಿಕವಾಗಿರುವುದರಿಂದ ಪಾದಚಾರಿಗಳಿಗೆ ಅಪಾಯ ತಪ್ಪಿದ್ದಲ್ಲ. ಸಣ್ಣಪುಟ್ಟ ಅಪಘಾತಗಳು ನಡೆದಿವೆ. ಆದ್ದರಿಂದ ಈ ಮಾರ್ಗದಲ್ಲಿ ಆಧುನಿಕ ರೀತಿಯಲ್ಲಿ ಪಾದಚಾರಿಗಳಿಗಾಗಿ ಸ್ಥಳಾವಕಾಶ ಒದಗಿಸಿ ಎರಡು ಬದಿಯಲ್ಲೂ ಕಂಬಿಗಳನ್ನು ಅಳವಡಿಸುವ ಮೂಲಕ ನಾಗರಿಕರಿಗೆ ಅನುಕೂಲ ಕಲ್ಪಿಸಬೇಕು.
-ಸಿ.ಸಿದ್ದರಾಜು, ಆಲಕೆರೆ, ಮಂಡ್ಯ




