Mysore
25
mist

Social Media

ಸೋಮವಾರ, 16 ನವೆಂಬರ್ 2026
Light
Dark

ಮೇಕೆದಾಟು ಜಲಾಶಯ ನಿರ್ಮಾಣ ಕರ್ನಾಟಕದ ಹಕ್ಕು

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೊನ್ನೆ ಮೈಸೂರಿಗೆ ಆಗಮಿಸಿದ್ದಾಗ ಮೇಕೆದಾಟು ಜಲಾಶಯ ನಿರ್ಮಾಣ ಯೋಜನೆ ಮತ್ತೆ ಸುದ್ದಿಯಾಯಿತು. ಪ್ರಧಾನಮಂತ್ರಿಗಳ ಸಮ್ಮುಖದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಯೋಜನೆ ಜಾರಿಗೆ ಅಗತ್ಯ ಅನುಮತಿಗಳನ್ನು ನೀಡಬೇಕೆಂದು ಕೋರಿದ್ದು ಗಮನ ಸೆಳೆಯಿತು. ಮೇಕೆದಾಟು ಜಲಾಶಯ ನಿರ್ಮಾಣ ಯೋಜನೆ ಕರ್ನಾಟಕದ ಹಕ್ಕು.

ಇದಕ್ಕೆ ತಮಿಳುನಾಡು ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ರಾಜ್ಯ ಸರ್ಕಾರ ರಾಜ್ಯದ ಹಿತಾಸಕ್ತಿ ಕಾಪಾಡುವ ವಿಚಾರದಲ್ಲಿ ಯಾವ ಹಂತದಲ್ಲೂ ಹಿಂದೆ ಸರಿಯಬಾರದು. ತಮಿಳುನಾಡು ಮೊದಲಿನಿಂದಲೂ ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ರಾಜಕಾರಣ ಬೆರೆಸಿದ್ದೇ ಹೆಚ್ಚು. ತಮಿಳುನಾಡು ೧೭೭ ಟಿಎಂಸಿ ನೀರನ್ನು ಪಡೆಯುವುದು ಅವರ ಹಕ್ಕು. ಅದನ್ನು ಪಾಲಿಸುತ್ತೇವೆ ಎಂದು ರಾಜ್ಯ ಸರ್ಕಾರ ಸ್ಪಷ್ಟವಾಗಿ ಹೇಳಿರುವಾಗ ತಮಿಳುನಾಡಿನ ತಗಾದೆ ಇನ್ನೇಕೆ? ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ನಡುವೆ ಕೊಡು-ಕೊಳ್ಳುವಿಕೆ ಇರಬೇಕು. ಮೇಕೆದಾಟು ಯೋಜನೆ ಕುರಿತು ಕೇಂದ್ರ ಸರ್ಕಾರದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿರುವುದಕ್ಕೆ ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಆತಂಕ ಹೊಂದುವುದಕ್ಕೆ ಕಾರಣವೇ ಇಲ್ಲ. ತಮಿಳುನಾಡಿನ ಅಭಿಪ್ರಾಯ ಪಡೆಯದೇ ಅನುಮತಿ ನೀಡಬಾರದು ಎಂದು ವಿಜಯ್ ಪ್ರಧಾನಮಂತ್ರಿಗಳಿಗೆ ಮಾಡಿರುವ ಮನವಿ ರಾಜಕೀಯದ ಮೇಲಾಟ ಅಷ್ಟೇ.

ಮೇಕೆದಾಟು ಯೋಜನೆ ಜಾರಿಗೆ ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ಅಗತ್ಯ. ಇದಕ್ಕಾಗಿ ರಾಜ್ಯ ಸರ್ಕಾರ ಮನವಿ ಮಾಡಿದೆ. ಮೇಕೆದಾಟು ಜಲಾಶಯ ನಿರ್ಮಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ ಎಂಬುದು ಕರ್ನಾಟಕ ಸರ್ಕಾರದ ವಾದ. ಮೇಕೆದಾಟು ಸೇರಿದಂತೆ ಕಾವೇರಿ ನದಿಗೆ ಅಡ್ಡಲಾಗಿ ಯಾವುದೇ ನಿರ್ಮಾಣ ಕಾಮಕಾರಿ ಕೈಗೊಳ್ಳಲು ತಮಿಳುನಾಡು, ಕೇರಳ ಅಥವಾ ಪುದುಚೇರಿ ರಾಜ್ಯಗಳ ಒಪ್ಪಿಗೆ ಪಡೆಯುವುದು ಕರ್ನಾಟಕಕ್ಕೆ ಕಡ್ಡಾಯವೇನೂ ಅಲ್ಲ ಎಂಬುದನ್ನು ರಾಜ್ಯಸಭೆಯಲ್ಲಿ ಕಳೆದ ಜುಲೈನಲ್ಲಿ ಜಲಶಕ್ತಿ ಸಚಿವಾಲಯದ ಸಹಾಯಕ ಸಚಿವ ರಾಜ್ ಭೂಷಣ್ ಚೌಧರಿ ಸ್ಪಷ್ಟಪಡಿಸಿದ್ದರು.

ಕೆಳಭಾಗದ ರಾಜ್ಯಗಳಿಗೆ ನಿಗದಿತ ಪ್ರಮಾಣದ ನೀರನ್ನು ಬಿಡುಗಡೆ ಮಾಡುವ ಜವಾಬ್ದಾರಿಯನ್ನು ಕರ್ನಾಟಕ ನಿರ್ವಹಿಸಿದರೆ ಸಾಕು ಎಂದು ಸಚಿವರು ಆಗ ವಿವರಿಸಿದ್ದರು. ಇದು ಕರ್ನಾಟಕದ ವಾದಕ್ಕೆ ಪುಷ್ಟಿ ನೀಡಿದೆ. ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟಿನಲ್ಲಿ ಜಲಾಶಯವನ್ನು ನಿರ್ಮಿಸುವುದು ರಾಜ್ಯ ಸರ್ಕಾರದದ ಉದ್ದೇಶವಾಗಿದೆ. ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಮುಖ್ಯಮಂತ್ರಿ ಶಿವಕುಮಾರ್ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಈ ಯೋಜನೆ ಸುದೀರ್ಘ ಕಾಲದಿಂದ ಬಾಕಿ ಉಳಿದಿದೆ. ಈ ಯೋಜನೆಯ ಪ್ರಾಥಮಿಕ ಉದ್ದೇಶವು ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುವುದೇ ಆಗಿದೆ. ಇದಲ್ಲದೇ, ನೀರಿನ ಹರಿವನ್ನು ನಿಯಂತ್ರಿಸುವುದು. ಇದರಿಂದ ತಮಿಳುನಾಡಿಗೂ ಅನುಕೂಲ. ನೀರು ಜನರ ಮೂಲಭೂತ ಹಕ್ಕು. ಕುಡಿಯುವ ನೀರಿನ ವಿಚಾರದಲ್ಲಿ ತಮಿಳುನಾಡು ರಾಜಕಾರಣ ಮಾಡುತ್ತಿರುವುದು ಸಲ್ಲದು.

ಹೆಚ್ಚಿನ ಮಳೆಯಾದಾಗ ಕಾವೇರಿ ನದಿ ನೀರು ಸಮುದ್ರಕ್ಕೆ ವ್ಯರ್ಥವಾಗಿ ಹರಿದು ಹೋಗುತ್ತದೆ. ಇದನ್ನು ತಪ್ಪಿಸಲು ಮೇಕೆದಾಟಿನಲ್ಲಿ ಅಣೆಕಟ್ಟೆ ನಿರ್ಮಾಣ ಉಪಯೋಗಕಾರಿ. ಇದು ಒಂದು ಸಮತೋಲಿತ ಜಲಾಶಯವಾಗಲಿದೆ. ಕರ್ನಾಟಕ ಇದನ್ನು ತಮಿಳುನಾಡಿಗೆ ವಿವರಿಸಿ ಹೇಳುತ್ತಿದ್ದರೂ ತಮಿಳುನಾಡು ಸರ್ಕಾರ ಜಾಣ ಕಿವುಡಾಗಿದೆ. ಕರ್ನಾಟಕ ಸರ್ಕಾರ ಈ ಯೋಜನೆ ಜಾರಿ ವಿಚಾರದಲ್ಲಿ ದೃಢ ಹೆಜ್ಜೆ ಇರಿಸಿರುವಂತೆ ತೋರುತ್ತಿದೆ. ಮೇಕೆದಾಟು ಯೋಜನೆಗೆ ಸಂಬಂಧಪಟ್ಟಂತೆ ಯಾವುದೇ ವಿಷಯದಲ್ಲಿ ವಿಳಂಬವಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಈಗಾಗಲೇ ರಾಜ್ಯ ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಈ ನಿಟ್ಟಿನಲ್ಲಿ ಸ್ವಾಗತಾರ್ಹ ಬೆಳವಣಿಗೆ. ತಮಿಳುನಾಡಿನ ನೀತಿ ಹೇಗಿದೆ ಎಂದರೆ ಬೆಂಗಳೂರಿನ ಮೆಟ್ರೋವನ್ನು ತಮಿಳುನಾಡಿನ ಹೊಸೂರುವರೆಗೂ ವಿಸ್ತರಿಸಬೇಕು. ಇದು ತಮಿಳುನಾಡಿನ ಬೇಡಿಕೆ. ಆದರೆ, ಕಾವೇರಿ ನದಿಗೆ ಅಡ್ಡಲಾಗಿ ಕರ್ನಾಟಕದ ನೆಲದಲ್ಲಿ ಜಲಾಶಯವನ್ನು ನಿರ್ಮಿಸಬಾರದು. ಇದು ತಮಿಳುನಾಡಿನ ದ್ವಂದ್ವ ನೀತಿ. ಸ್ವಾರ್ಥ.

” ತಮಿಳುನಾಡಿನ ನೀತಿ ಹೇಗಿದೆ ಎಂದರೆ ಬೆಂಗಳೂರಿನ ಮೆಟ್ರೋವನ್ನು ತಮಿಳುನಾಡಿನ ಹೊಸೂರುವರೆಗೂ ವಿಸ್ತರಿಸಬೇಕು. ಇದು ತಮಿಳುನಾಡಿನ ಬೇಡಿಕೆ. ಆದರೆ, ಕಾವೇರಿ ನದಿಗೆ ಅಡ್ಡಲಾಗಿ ಕರ್ನಾಟಕದ ನೆಲದಲ್ಲಿ ಮೇಕೆದಾಟು ಜಲಾಶಯವನ್ನು ನಿರ್ಮಿಸಬಾರದು. ಇದು ತಮಿಳುನಾಡಿನ ದ್ವಂದ್ವ ನೀತಿ, ಸ್ವಾರ್ಥ”

 

 

Tags:
error: Content is protected !!