ಇತ್ತೀಚೆಗೆ ಮೈಸೂರಿನ ಅಶೋಕ ರಸ್ತೆ ಮತ್ತು ಶ್ರೀಹರ್ಷ ರಸ್ತೆಯ ಮುಂದಿನ ದೊಡ್ಡ ಗಡಿಯಾರದ ಬಳಿ ಟ್ಯೂಷನ್‌ಗೆ ಹೋಗುತ್ತಿದ್ದ ವಿದ್ಯಾರ್ಥಿನಿ ನಗರ ಸಾರಿಗೆ ಬಸ್ ಹರಿದು ಸ್ಥಳದ ಮೃತಪಟ್ಟ ಘಟನೆಗೆ ಈ ಸ್ಥಳದ ಅಕ್ಕ ಪಕ್ಕದಲ್ಲಿ ನಡೆಯುತ್ತಿದ್ದ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಕಾರಣ ಎಂಬ ಮಾತು ಕೇಳಿಬಂದಿದೆ. ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಎಂಬುದು ಕೆಲವರು ಹಣ ಮಾಡುವ ದೊಡ್ಡ ದಂಧೆ ಎಂಬ ಟೀಕೆಯೂ ಇದೆ. ಕೆಲವು ಶ್ರೀಮಂತ ವರ್ಗದ ಜನರು ಈ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಗಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ.
ಪ್ರತಿ ದಿನ ಬೆಳಿಗ್ಗೆ ೬ ಗಂಟೆಯಿಂದ ಮೈಸೂರಿನ ಅರಮನೆ ಮುಂಭಾಗದ ಚಾಮರಾಜ ಒಡೆಯರ್ ವೃತ್ತ, ವಸ್ತು ಪ್ರದರ್ಶನ ಮುಂಭಾಗದ ಅರಮನೆಯ ಪೂರ್ವ ಭಾಗದಲ್ಲಿ ಕನಿಷ್ಠ ಎಂಟರಿಂದ ಹತ್ತು ತಂಡಗಳಲ್ಲಿ ಫೋಟೋ ಶೂಟ್ ನಡೆಯುತ್ತಿರುತ್ತವೆ. ಇದು ಪೊಲೀಸ್ ಇಲಾಖೆಗೂ ತಿಳಿದಿರುವ ವಿಷಯ.ಈ ಜಾಗದಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ.ಆದರೂ ಇದರ ಬಗ್ಗೆ ಪೊಲೀಸರು ತಲೆಕೆಡಿಸಿಕೊಂಡಿಲ್ಲ. ಇಲ್ಲಿ ಫೋಟೋ ಶೂಟ್ ನಡೆಯುವುದನ್ನು ಯಾರಾದರೂ ಪ್ರಶ್ನಿಸಿದರೆ, ನಾವು ಪೋಲೀಸ್ ಇಲಾಖೆಯಿಂದ ಅನುಮತಿ ಪಡೆದಿದ್ದೇವೆ ಎಂದು ಹೇಳುತ್ತಾರೆ. ಈ ಪೋಟೋ ಶೂಟ್ ನಿಂದಾಗಿ ಸುರಕ್ಷಿತ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಈ ಜಗದಲ್ಲಿ ಇನ್ನು ಮುಂದೆ ಫೋಟೋ ಶೂಟ್ ಅನ್ನು ನಿರ್ಬಂಧಿಸಲು ಕ್ರಮಕೈಗೊಳ್ಳಬೇಕು.
– ಬೂಕನಕೆರೆ ವಿಜೇಂದ್ರ, ಮೈಸೂರು





