Mysore
26
light rain

Social Media

ಗುರುವಾರ, 05 ನವೆಂಬರ್ 2026
Light
Dark

ಸಪ್ತ ಭಾಷೆಗಳಲ್ಲಿ ಸಿಗಲಿದೆ ಮೈಸೂರು ಚಿತ್ರಣ!  

ಕೇಶವ್ ಎಂ.

ಮೈಸೂರು: ದಕ್ಷಿಣ ಭಾರತದಲ್ಲಿನ ಪ್ರವಾಸಿಗರ ನೆಚ್ಚಿನ ತಾಣ ಅರಮನೆ ನಗರಿ ಮೈಸೂರು. ಇದೀಗ ಮೈಸೂರು ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್‌ನಲ್ಲಿ ಕನ್ನಡದ ಜತೆಗೆ ಏಳು ವಿದೇಶಿ ಭಾಷೆಗಳಲ್ಲೂ ಮೈಸೂರಿನ ಪ್ರವಾಸಿತಾಣಗಳ ಮಾಹಿತಿ ಲಭ್ಯವಿದೆ.

ಹೌದು, ಕನ್ನಡ, ಇಂಗ್ಲಿಷ್, ಫ್ರೆಂಚ್, ಸ್ಪಾನಿಶ್, ಅರೇಬಿಕ್, ಡಚ್(ಜರ್ಮನ್ ಭಾಷೆ), ಇಟಾಲಿಯನ್, ರಷ್ಯನ್ ಭಾಷೆಗಳ ಮೂಲಕ ಮೈಸೂರಿನ ಐತಿಹಾಸಿಕ ಪರಂಪರೆ, ಸಂಸ್ಕೃತಿ, ಪ್ರವಾಸಿ ತಾಣಗಳು ಹಾಗೂ ವೈವಿಧ್ಯಮಯ ಪ್ರವಾಸೋದ್ಯಮದ ಅನುಭವ ಗಳನ್ನು ದೇಶ-ವಿದೇಶಗಳ ಪ್ರವಾಸಿಗರು, ಮೈಸೂರು ಪ್ರವಾಸೋದ್ಯಮ ಪ್ರೋಗ್ರೆಸಿವ್ ವೆಬ್ ಆಪ್(ಪಿಡಬ್ಲ್ಯೂಎ) ಮೂಲಕ ನೋಡಬಹುದಾಗಿದೆ.

ಆಧುನಿಕ ತಂತ್ರಜ್ಞಾನ, ಮೊಬೈಲ್ ಸ್ನೇಹಿ ವಿನ್ಯಾಸ ಮತ್ತು ಸುಲಭ ಬಳಕೆಗೆ ಅನುಕೂಲವಾಗುವಂತೆ ಈ ವೆಬ್‌ಸೈಟ್ ರೂಪಿಸಲಾಗಿದ್ದು, ಕನ್ನಡ ಮತ್ತು ೭ ವಿದೇಶಿ ಭಾಷೆಗಳಲ್ಲಿ ಮಾಹಿತಿ ಪಡೆಯುವ ಸೌಲಭ್ಯ ಹೊಂದಿರುವುದು ವಿದೇಶಿ ಪ್ರವಾಸಿಗರಿಗೆ ನೆರವಾಗಲಿದೆ.

ಒಂದೇ ಡಿಜಿಟಲ್ ತಾಣ: ಮೈಸೂರು ಪ್ರವಾಸೋದ್ಯಮ ವೆಬ್‌ಸೈಟ್‌ನಲ್ಲಿ ಐತಿಹಾಸಿಕ ಸ್ಮಾರಕಗಳು, ಸಾಂಸ್ಕೃತಿಕ ತಾಣಗಳು, ಪ್ರಕೃತಿ ಮತ್ತು ವನ್ಯಜೀವಿ ಪ್ರವಾಸೋದ್ಯಮ, ವಿವಿಧ ಚಟುವಟಿಕೆಗಳು, ಪ್ರವಾಸಿ ಮಾರ್ಗದರ್ಶಕರ ಮಾಹಿತಿ ಹಾಗೂ ಪ್ರವಾಸಿಗರಿಗೆ ಅಗತ್ಯವಾದ ವಿವರಗಳು ಮೈಸೂರು ಪ್ರವಾಸೋದ್ಯಮ ಇಲಾಖೆ ವೆಬ್‌ಸೈಟ್‌ನಲ್ಲಿ ದೊರೆಯಲಿದೆ.

ಅಲ್ಲದೇ, ಪ್ರವಾಸಿಗರು ಮೈಸೂರಿಗೆ ಬಂದು ಈ ವೆಬ್ ಸೈಟ್‌ನಲ್ಲಿ ಪ್ರವಾಸಿತಾಣಗಳನ್ನು ಹುಡುಕಾಡಿದಾಗ, ಅಕ್ಕಪಕ್ಕದ ಪ್ರವಾಸಿ ತಾಣಗಳ ಮಾಹಿತಿ, ಅಲ್ಲಿಗೆ ಹೇಗೆ ಹೋಗಬೇಕು, ಎಷ್ಟು ಕಿಮೀ ದೂರ ಇದೆ ಎಂಬ ಮಾಹಿತಿಯೂ ಸಿಗಲಿದೆ. ಪ್ರೋಗ್ರೇಸಿವ್ ವೆಬ್ ಆಪ್ ತಂತ್ರ ಜ್ಞಾನದಲ್ಲಿ ರೂಪಿಸಲಾಗಿರುವ ವೆಬ್‌ಸೈಟ್ ಅನ್ನು ಸ್ಮಾರ್ಟ್ ಫೋನ್, ಟ್ಯಾಬ್ ಹಾಗೂ ಡೆಸ್ಕ್‌ಟಾಪ್‌ಗಳಲ್ಲಿಬಳಸಬಹುದಾಗಿದೆ. ಪ್ರತ್ಯೇಕ ಮೊಬೈಲ್ ಆಪ್ ಡೌನ್ಲೋಡ್ ಮಾಡದೆಯೇ, ಹೊಂದಾಣಿಕೆಯ ಸಾಧನ ಗಳಲ್ಲಿ ವೆಬ್ ಬ್ರೌಸರ್ ಮೂಲಕ ಪ್ರವಾಸೋದ್ಯಮ ಮಾಹಿತಿ ಯನ್ನು ಪಡೆಯುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ.

ವೆಬ್‌ನಲ್ಲಿ ಭೌಗೋಳಿಕ ಸೂಚ್ಯಂಕ(ಜಿಐ) ಟ್ಯಾಗ್: ಮೈಸೂರು ಸಿಲ್ಕ್, ಶ್ರೀಗಂಧದ ಎಣ್ಣೆ, ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಅಗರಬತ್ತಿ, ಮೈಸೂರ ರೋಸ್‌ವುಡ್ ಇನ್ಲೇ, ಮೈಸೂರು ಸಾಂಪ್ರದಾಯಿಕ ವರ್ಣಚಿತ್ರಗಳು, ಮೈಸೂರು ಗಂಜೀಫ್ಹಾ ಆರ್ಟ್, ವೀಳ್ಯದೆಲೆ, ಮೈಸೂರು ಮಲ್ಲಿಗೆ, ನಂಜನಗೂಡಿನ ರಸಬಾಳೆ ಮಾಹಿತಿ ಇದೆ.

ಯಾತ್ರಿ ಮಿತ್ರದಲ್ಲಿ ಗಸ್ತು: ಪೊಲೀಸರಂತೆ ಪ್ರವಾಸೋದ್ಯಮ ಇಲಾಖೆಯ ‘ಯಾತ್ರಿ ಮಿತ್ರ’ ವಾಹನದಲ್ಲಿ ಪ್ರವಾಸಿ ಮಿತ್ರರು ಗಸ್ತು ತಿರುಗಲಿದ್ದಾರೆ. ಪ್ರವಾಸಿ ಮಿತ್ರರ ಮೊ.ಸಂ.: ೯೫೩೮೨ ೭೪೪೮೪ಕ್ಕೆ ಪ್ರವಾಸಿಗರು ಕರೆ ಮಾಡಿ ದರೆ ಪ್ರವಾಸಿಗರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವರು. ಅರಮನೆ, ಚಾಮುಂಡಿಬೆಟ್ಟ, ಮೃಗಾಲಯ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣದ ಮುಂಭಾಗಗಳಲ್ಲಿ ಈ ವಾಹನಗಳು ನಿಲ್ಲಲಿವೆ.

” ನೂತನ ವೆಬ್‌ಸೈಟ್ ಅನ್ನು ಕನ್ನಡ ಸೇರಿದಂತೆ ೭ ಭಾಷೆಗಳಲ್ಲಿ ಮಾಹಿತಿ ದೊರೆಯುವಂತೆ ರೂಪಿಸಲಾಗಿದೆ. ಪ್ರವಾಸಿಗರು ಹಾಗೂ ಸ್ಥಳೀಯ ರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ.”

-ರಾಘವೇಂದ್ರ, ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ

ಜಾಗತಿಕ ಪ್ರವಾಸಿತಾಣವಾಗಿ ಪರಿಚಯ:  ರಾಜಮನೆತನದ ಇತಿಹಾಸ, ಭವ್ಯ ಅರಮನೆಗಳು, ಧಾರ್ಮಿಕ ಕ್ಷೇತ್ರಗಳು, ಸಾಂಸ್ಕೃತಿಕ ಸಂಪ್ರದಾಯಗಳು, ಸ್ಥಳೀಯ ಆಹಾರ ವೈವಿಧ್ಯತೆ ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ಮೈಸೂರಿನ ಪ್ರವಾಸೋದ್ಯಮವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಪರಿಚಯಿಸಲು ತಂತ್ರಜ್ಞಾನ, ಸಂಸ್ಕೃತಿ ಮತ್ತು ಪ್ರವಾಸಿಗರ ಅನುಕೂಲತೆಯನ್ನು ಒಂದೇ ವೇದಿಕೆಯಲ್ಲಿ ಸಂಯೋಜಿಸುವ ಮೂಲಕ, ಮೈಸೂರು ಪ್ರವಾಸೋದ್ಯಮದ ಡಿಜಿಟಲ್ ಬೆಳವಣಿಗೆಗೆ ಈ ವೆಬ್ ಆಪ್ ಅನುಕೂಲಕರವಾಗಿದೆ.

ಅಮ್ಮು ಮತ್ತು ಗಜ್ಜು ಡಿಜಿಟಲ್ ರಾಯಭಾರಿಗಳು!;  ಮೈಸೂರು ದಸರಾ ವೆಬ್‌ಸೈಟ್‌ನಲ್ಲಿ ಕೋಟ್ಯಂತರ ಜನರ ಗಮನ ಸೆಳೆದ ಅಮ್ಮು ಮತ್ತು ಗಜ್ಜು , ಮೈಸೂರು ಪ್ರವಾಸೋದ್ಯಮ ಇಲಾಖೆಯ ಡಿಜಿಟಲ್ ರಾಯಭಾರಿಗಳಾಗಿವೆ. ಅಮ್ಮು ಮತ್ತು ಗಜ್ಜು ಎಂಬ ಮುದ್ದಾದ ಪ್ರವಾಸೋದ್ಯಮ ಮ್ಯಾಸ್ಕಾಟ್‌ಗಳು ವೆಬ್‌ಸೈಟ್ ನೋಡುಗರ ಕುತೂಹಲ ಕೆರಳಿಸಲಿದೆ.

ಆಸ್ಕ್ ಗಜ್ಜು ಯೂವರ್ ಇಂಟಲಿಜೆಂಟ್ ಗೈಡ್ ಪರಿಕಲ್ಪನೆಯಡಿ ಗಜ್ಜುವನ್ನು ಮೈಸೂರಿನ ಎಐ ಪ್ರವಾಸಿ ಸಹಾಯಕನಾಗಿ ರೂಪಿಸಲಾಗಿದೆ. ಮುಂದಿನ ಹಂತಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಪ್ರವಾಸಿ ಮಾಹಿತಿ, ಪ್ರವಾಸಿ ತಾಣಗಳ] ಅನ್ವೇಷಣೆ ಹಾಗೂ ವೈಯಕ್ತಿಕ ಪ್ರವಾಸ ಯೋಜನೆಗೆ ನೆರವಾಗುವ ಸೌಲಭ್ಯಗಳ ಅಭಿವೃದ್ಧಿಯಾಗಲಿದೆ. ಅಮ್ಮು ಮತ್ತು ಗಜ್ಜು ಮೂಲಕ ಮೈಸೂರಿನ ಸಾಂಸ್ಕೃತಿಕ ಪರಂಪರೆ, ಸ್ಥಳೀಯ ವೈಶಿಷ್ಟ್ಯಗಳು ಮತ್ತು ಪ್ರವಾಸಿ ಅನುಭವಗಳನ್ನು ತಂತ್ರಜ್ಞಾನ ದೊಂದಿಗೆ ಸಂಯೋಜಿಸಿ, ಪ್ರವಾಸಿಗರಿಗೆ ಸ್ಮರಣೀಯ ಡಿಜಿಟಲ್ ಅನುಭವ ಒದಗಿಸುವ ಆಶಯ ಇದಾಗಿದೆ. ಈ ಡಿಜಿಟಲ್ ವೇದಿಕೆಯು ಪ್ರವಾಸಿ ಮಾರ್ಗದರ್ಶಕರು, ಸ್ಥಳೀಯ ಪ್ರವಾಸೋದ್ಯಮ ಸೇವೆಗಳು ಮತ್ತು ಇತರೆ ಪ್ರವಾಸೋದ್ಯಮ ಪಾಲುದಾರರಿಗೆ ಆನ್‌ಲೈನ್ ನಲ್ಲಿ ಹೆಚ್ಚಿನ ಮಾಹಿತಿ ಪಡೆಯಲು ಅವಕಾಶ ಒದಗಿಸಿದೆ.

” ಪ್ರವಾಸೋದ್ಯಮ ಇಲಾಖೆಯ ವೆಬ್ ಸೈಟ್‌ನಲ್ಲಿ ಕನ್ನಡದ ಜತೆಗೆ ಏಳು ವಿದೇಶಿ ಭಾಷೆಗಳಲ್ಲೂ ಪ್ರವಾಸಿ ತಾಣಗಳ ಮಾಹಿತಿ”

 

 

Tags:
error: Content is protected !!