ಮಹಾದೇಶ್ ಎಂ.ಗೌಡ
ನ.೬ರಿಂದ ೧೦ರವರೆಗೆ ೫ ದಿನಗಳ ಕಾಲ ಜಾತ್ರಾ ಮಹೋತ್ಸವ; ಲಕ್ಷಾಂತರ ಮಂದಿ ಭೇಟಿ ನಿರೀಕ್ಷೆ
ಹನೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ ನ.೬ರಿಂದ ೧೦ರವರೆಗೆ ಐದು ದಿನಗಳ ಕಾಲ ದೀಪಾವಳಿ ಜಾತ್ರಾ ಮಹೋತ್ಸವ ಜರುಗಲಿದ್ದು, ಲಕ್ಷಾಂತರ ಜನರು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ದೀಪಾವಳಿ ಜಾತ್ರಾ ಪ್ರಯುಕ್ತ ನ.೬ರ ಶುಕ್ರವಾರ ವಿಶೇಷ ಕಾರ್ಯಕ್ರಮ ಪ್ರಾರಂಭವಾಗಲಿದೆ. ನ.೭ರಂದು ಸ್ವಾಮಿಗೆ ಎಣ್ಣೆ ಮಜ್ಜನ ಪೂಜೆ ಮತ್ತು ಉತ್ಸವ, ೮ರಂದು ನರಕ ಚತುರ್ದಶಿ ವಿಶೇಷ ಸೇವೆ ಮತ್ತು ಉತ್ಸವ, ನ.೯ರಂದು ದೀಪಾವಳಿ ಅಮಾವಾಸ್ಯೆ, ಹಾಲರವಿ ಉತ್ಸವವು ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ನ.೧೦ರಂದು ದೀಪಾವಳಿ ಮಹಾರಥೋತ್ಸವ ಬೆಳಿಗ್ಗೆ ೭.೩೦ರಿಂದ ೮.೪೦ರವರೆಗೆ ಹಾಗೂ ಮಹಾರಥೋತ್ಸವದ ನಂತರ ಗುರು ಬ್ರಹ್ಮೋತ್ಸವ, ರಾತ್ರಿ ಮಹಾ ನೈವೇದ್ಯದ ನಂತರ ತೆಪ್ಪೋತ್ಸವ ಜರುಗಲಿದೆ. ಪ್ರತಿನಿತ್ಯ ಬೆಳಿಗ್ಗೆ ೬.೩೦ ಗಂಟೆಯಿಂದ ಸಂಜೆ ೬.೩೦ರವರೆಗೆ, ರಾತ್ರಿ ೮.೩೦ ಗಂಟೆಯಿಂದ ಬೀಗಮುದ್ರೆ ಹಾಕುವವರೆಗೂ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಪಾದಯಾತ್ರೆಗೆ ಸಕಲ ವ್ಯವಸ್ಥೆ: ಮಲೆ ಮಹದೇಶ್ವರ ಬೆಟ್ಟಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಪಾದಯಾತ್ರೆಯ ಮೂಲಕ ಆಗಮಿಸುತ್ತಿರುವ ಭಕ್ತಾದಿಗಳಿಗೆ ತಾಳಬೆಟ್ಟದಿಂದ ಮ.ಬೆಟ್ಟದವರೆಗಿನ ಮಾರ್ಗಮಧ್ಯದಲ್ಲಿ ೧೫ ಕಡೆಗಳಲ್ಲಿ ಮಿನಿ ಟ್ಯಾಂಕ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.
ಪಾದಯಾತ್ರೆಯ ಮೂಲಕ ಮ.ಬೆಟ್ಟಕ್ಕೆ ತೆರಳುವ ಭಕ್ತಾದಿಗಳಿಗೆ, ೬೦ ವರ್ಷ ಮೇಲ್ಪಟ್ಟವರಿಗೆ ರಾಜಗೋಪುರದ ಪ್ರವೇಶ ದ್ವಾರದಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅತಿಥಿ ಗಣ್ಯರಿಗೆ, ಜನಪ್ರತಿನಿಽಗಳಿಂದ ಶಿಫಾರಸ್ಸು ಪತ್ರ ಪಡೆದು ಬರುವವರಿಗೆ ದೇವಸ್ಥಾನದ ಕಾರ್ಯಾಲಯದಲ್ಲಿ ವಿಶೇಷ ಪಾಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಾಽಕಾರದ ಕಾರ್ಯದರ್ಶಿ ಪುರುಷೋತ್ತಮ್ ತಿಳಿಸಿದ್ದಾರೆ.
ನಿರಂತರ ದಾಸೋಹ: ಐದು ದಿನಗಳ ಕಾಲ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ರಾಜ್ಯ ಹಾಗೂ ನೆರೆಯ ತಮಿಳುನಾಡು ರಾಜ್ಯದಿಂದ ಲಕ್ಷಾಂತರ ಭಕ್ತಾದಿಗಳು ಆಗಮಿಸುವುದರಿಂದ ಐದು ದಿನಗಳ ಕಾಲ ನಿರಂತರ ದಾಸೋಹ ವ್ಯವಸ್ಥೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
೩೫೦ ಬಸ್ಗಳ ವ್ಯವಸ್ಥೆ: ಐದು ದಿನಗಳ ಕಾಲ ನಡೆಯಲಿರುವ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಕೆಎಸ್ಆರ್ಟಿಸಿ ವತಿಯಿಂದ ಚಾಮರಾಜನಗರ, ಮೈಸೂರು ನಗರ, ಮೈಸೂರು ಗ್ರಾಮಾಂತರ, ಮಂಡ್ಯ, ಬೆಂಗಳೂರು, ರಾಮ ನಗರ ಘಟಕಗಳಿಂದ ೩೫೦ ಬಸ್ಗಳನ್ನು ವ್ಯವಸ್ಥೆ ಮಾಡಲಾಗಿದೆ.
ವಾಹನಗಳು ಕೆಟ್ಟು ನಿಂತರೆ ದುರಸ್ತಿಪಡಿಸಲು ೨೦ ಮಂದಿ ತಾಂತ್ರಿಕ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ದ್ವಿಚಕ್ರ ವಾಹನಕ್ಕೆ ನಿರ್ಬಂಧ: ದೀಪಾವಳಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ತಡೆಗಟ್ಟಲು ನ.೬ರ ಬೆಳಿಗ್ಗೆ ೬ ಗಂಟೆಯಿಂದ ನ.೧೦ರ ಸಂಜೆ ೬ ಗಂಟೆಯವರೆಗೆ ಮ.ಬೆಟ್ಟಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುವುದನ್ನು ನಿರ್ಬಂಧಿಸಲಾಗಿದೆ. ದ್ವಿಚಕ್ರ ವಾಹನಗಳಲ್ಲಿ ಬರುವ ಭಕ್ತರಿಗೆ ಕೌದಳ್ಳಿಯಲ್ಲಿ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಇಲ್ಲಿಂದ ಕೆಎಸ್ಆರ್ಟಿಸಿ ಬಸ್ ಮುಖಾಂತರ ಮ.ಬೆಟ್ಟಕ್ಕೆ ತೆರಳಬಹುದು.
ಬಂದೋಬಸ್ತ್: ದೀಪಾವಳಿ ಜಾತ್ರಾ ಮಹೋತ್ಸವ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದಲೂ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
ನಾಲ್ಕು ಲಕ್ಷ ಲಾಡು ಸಂಗ್ರಹಣೆ: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿರುವ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿ, ಚಿನ್ನದ ರಥೋತ್ಸವ, ಬೆಳ್ಳಿ ರಥೋತ್ಸವ, ವಿವಿಧ ಸೇವೆಗಳಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ಶ್ರೀ ಕ್ಷೇತ್ರ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಽಕಾರದ ವತಿಯಿಂದ ನಾಲ್ಕು ಲಕ್ಷ ಲಾಡು ಸಂಗ್ರಹಣೆ ಮಾಡಿಕೊಳ್ಳಲಾಗಿದೆ.
” ದೀಪಾವಳಿ ಜಾತ್ರಾ ಮಹೋತ್ಸವ ಪ್ರಯುಕ್ತ ಮ.ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ಬರುವ ಭಕ್ತಾದಿಗಳಿಗೆ ದರ್ಶನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಜನಸಂದಣಿ ಹೆಚ್ಚಾದರೆ ೨೫೦ ರೂ. ಪಾಸ್ನ ಗೇಟ್ನಲ್ಲಿ ಬಿಡಲಾಗುವುದು. ಭಕ್ತಾದಿಗಳ ಸುರಕ್ಷತೆ ದೃಷ್ಟಿಯಿಂದ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ಈಗಾಗಲೇ ಮನವಿ ಮಾಡಲಾಗಿದೆ. ಜೊತೆಗೆ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಗಮಿಸಲಿದ್ದಾರೆ. ಈಗಾಗಲೇ ಜಾತ್ರಾ ಮಹೋತ್ಸವ ಪ್ರಯುಕ್ತ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸಲಾಗುವುದು.”
ಪುರುಷೋತ್ತಮ್, ಕಾರ್ಯದರ್ಶಿ, ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ




