Mysore
26
overcast clouds

Social Media

ಭಾನುವಾರ, 01 ನವೆಂಬರ್ 2026
Light
Dark

‘ಎಂತ ಗೊತ್ತುಂಟ!’ ನಮ್ ಮಂಗ್ಳೂರು ಕನ್ನಡಾನೇ ಹೀಗೆ

ಕವಿ ಸಾಲಿನಂತೆ ಇದು ಕನ್ನಡಾಂತರ್ಗತ ತುಳುನಾಡು!

ಎಷ್ಟೇ ಗಂಭೀರವಾಗಿರಲಿ ಅಥವಾ ಸರಳವಾಗಿರಲಿ ನಮ್ಮ ಕುಡ್ಲದ ಕಡೆ ವಿಷಯವನ್ನು ನೇರವಾಗಿ ಹೇಳುವ ಜಾಯಮಾನವೇ ಇಲ್ಲ. ಪ್ರತೀ ಮಾತಿನ ಆರಂಭದಲ್ಲಿ ‘ಎಂತ ಗೊತ್ತುಂಟ’ ಅಂಥ ಕೇಳದಿದ್ರೆ ಸಮಾಧಾನವೇ ಇರುವುದಿಲ್ಲ ಮಾರ್ರೇ! ಬಹುಶಃ ಇದೊಂದೇ ಸಾಕು ಪರವೂರಿನಲ್ಲಿ ನಾವು ಮಂಗಳೂರಿನವರು ಎಂಬ ಪರಿಚಯಕ್ಕೆ. ಇಲ್ಲಿನ ಕನ್ನಡದಲ್ಲಿ ಉಪಭಾಷೆಯ ಒಂದು ಪದವಾದ್ರೂ ಇರದಿದ್ದರೆ ಮಾತಿಗೆ ಚಂದವೇ ಇರ್ಲಿಕ್ಕಿಲ್ಲ. ಒಂದ್ವೇಳೆ ಪದಬೆರಕೆ ಇಲ್ವೋ, ‘ಅವು  ಘಟ್ಟದವ್ರು’ ಅಂಥ ಹೇಳಿಬಿಡ್ತೇವೆ. ಮಾತು ಎಂದಾಗ ಒಂದು ಪ್ರಸಂಗ ಯಾವಾಗ್ಲೂ ನೆನಪಾಗಿ ನಗು ಬರುತ್ತೆ. ನನ್ನಪ್ಪ ಹೋಟೆಲ್ ವೃತ್ತಿಯಲ್ಲಿದ್ದವರು. ಪ್ರತಿದಿನ ಊರು, ಪರವೂರಿನ ಹಲವಾರು ಗ್ರಾಹಕರು! ಅದೊಂದ್ಸಲ ಹೋಟೆಲ್‌ಗೆ ಬೆಂಗ್ಳೂರು ಕಡೆಯವ್ರು ಬಂದು ‘ಒಂದು ಪ್ಲೇಟ್ ಬೋಂಡಾ’ ಅಂದ್ರಂತೆ. ಪಾಪ ಮಾಣಿ! ತಲೆ ಕೆರೆದುಕೊಂಡು ಅಲ್ಲೇ ನಿಂತಿದ್ದ. ‘ಹೇಳಿದ್ದು ಕೇಳ್ಸಿಲ್ವ? ಬೋಂಡಾ ತಾರ್ಲಾ’ ಗ್ರಾಹಕನ ಮಾತಿಗೆ ‘ಅಲ್ಲ, ಅಷ್ಟು ದೊಡ್ಡ ಬೊಂಡ ಒಂದು ಪ್ಲೇಟಲ್ಲಿ ಹೇಗೆ ಇಟ್ಟು ತರ್ಲಿ’ ಮಾಣಿಯ ವಾದ ಕೇಳಿ ಅಪ್ಪನಿಗೆ ನಗುವೋ ನಗು. ಮಂಗ್ಳೂರಲ್ಲಿ ‘ಬೊಂಡಾ’ ಎಂದರೆ ಸೀಯಾಳವೆಂದು ಗ್ರಾಹಕರಿಗೆ ಗೊತ್ತಿಲ್ಲ. ಅವ್ರು ಕೇಳೋ ‘ಬೋಂಡಾ’ ಇಲ್ಲಿನ ಅಂಬಡೆ ಎನ್ನುವುದು ಮಾಣಿಗೆ ಗೊತ್ತಿಲ್ಲ. ಒಟ್ರಾಸಿ ಆ ಘಟನೆ ಹೋಟೆಲ್ ವೃತ್ತಿಯ ಕಡೇತನಕವೂ ಅಪ್ಪ ನೆನಪಿಸಿಕೊಳ್ಳುತ್ತಿದ್ದರು. ಇಂತಹ ಭಾಷಾಮೋಜು ಮಂಗ್ಳೂರು ಕನ್ನಡದಲ್ಲಿ ಬಹಳಷ್ಟಿವೆ. ‘ಕೆಂಪಿರುವೆ’ ನಮ್ಗೆ ‘ಉರಿ’ ಆದ್ರೆ ‘ತೆಳ್ಳಗಿದಾರೆ’ ಅನ್ನೋದಕ್ಕೆ ‘ನರ್ವಂಟೆ ಕಟ್ಟಿದಾರೆ’ ಅನ್ನೋದಿದೆ. ‘ಮೊರ’ ಇಲ್ಲಿ ‘ಸೂಪು’ ಆದ್ರೆ ಇನ್ನು ‘ಹಳ್ಳ’ ಪಳ್ಳವಾಗಿದೆ.

ನಮ್ಮಲ್ಲಿ ವಾಣಿಜ್ಯ ಭಾಷೆಯಾಗಿ ತುಳುವಿಗೆ ಪ್ರಾಧಾನ್ಯತೆ ಇರುವುದರಿಂದಲೋ ಏನೋ ಮನೆಯಲ್ಲಿ ಮಾತೃಭಾಷೆಯನ್ನಾಡುವವರು, ವ್ಯಾವಹಾರಿಕವಾಗಿ ತುಳು ಭಾಷೆ ಯನ್ನಾಡುವವರೇ ಹೆಚ್ಚು. ಇದೇ ಕಾರಣಕ್ಕೆ ಮಂಗಳೂರಿಗರು ಕನ್ನಡ ಮಾತನಾಡಿದರೆ ‘ಪಾಠ ಪುಸ್ತಕ’ ಓದಿದಂತೆ ಎಂಬ ಅಪಹಾಸ್ಯಕ್ಕೆ ಗುರಿಯಾದರೂ ಶಿಷ್ಟ ಕನ್ನಡಕ್ಕೆ ಹತ್ತಿರವಾಗಿರುವ ಮಂಗಳೂರಿಗರ ಕನ್ನಡ ಸ್ಪಷ್ಟ ಉಚ್ಚಾರಕ್ಕೆ ಹೆಚ್ಚು ಪ್ರಸಿದ್ಧ ಎನ್ನುವುದು ನನ್ನ ಕನ್ನಡದ ಹೆಮ್ಮೆ. ಎಷ್ಟೇ ಆತ್ಮೀಯವಾಗಿರಲಿ ಅಥವಾ ಅಪರಿಚಿತರಾಗಲಿ ‘ಬನ್ನಿ’, ‘ಹೋಗಿ’, ‘ಮಾಡಿ’ ಎಂದು ಬಹುವಚನದಲ್ಲಿ ಸಂಬೋಧಿಸುವುದರಿಂದ ‘ಬಾ’, ‘ಹೋಗು’ ಸಲುಗೆ ನಮ್ಗೆ ಸ್ವಲ್ಪ ದೂರವೇ ಮಾರ್ರೇ! ಇದೇ ಕಾರಣಕ್ಕೆ ಮಂಗ್ಳೂರಿನವ್ರು ಬೈದ್ರೂ ಪದ್ಯ ಹೇಳಿದಂತೆ ಅಂಥ ‘ಮಕ್ಕರ್’ ಅಂದ್ರೆ ತಮಾಷೆ ಮಾಡೋದು.

 -ಅಕ್ಷತಾ ರಾಜ್ ಪೆರ್ಲ, ಬಹುಭಾಷಾ ಲೇಖಕಿ ಮತ್ತು ನಿರೂಪಕಿ

Tags:
error: Content is protected !!