ಎಂ.ನಾರಾಯಣ
ತಿ.ನರಸೀಪುರ: ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿರುವ ಟೀ ಅಂಗಡಿ ಮಾಲೀಕ ಚಿನ್ನಸ್ವಾಮಿ
ತಿ.ನರಸೀಪುರ: ಮಂಡ್ಯದ ವೈದ್ಯ ಡಾ.ಶಂಕರೇಗೌಡರು ಕೇವಲ ೫ ರೂ.ಗೆ ವೈದ್ಯಕೀಯ ಸೇವೆ ನೀಡುವ ಮೂಲಕ ಜನಮನ್ನಣೆ ಗಳಿಸಿದ್ದರೆ, ತಿ.ನರಸೀಪುರದ ಚಿನ್ನಸ್ವಾಮಿ ಅವರು ಹಾಲಿನ ದರ ಏರಿಕೆಯ ನಡುವೆಯೂ ಕೇವಲ ಐದು ರೂ.ಗೆ ಟೀ ಮತ್ತು ಕಾಫಿ ನೀಡುವ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನ.೧ರಿಂದ ಪ್ರತಿ ಲೀಟರ್ ಹಾಲಿನ ದರದಲ್ಲಿ ೮ ರೂ. ಏರಿಕೆಯಾಗುತ್ತಿರುವುದು ಜನಸಾಮಾನ್ಯರಿಗೆ ಹೊರೆಯಾಗಲಿದೆ. ಹಾಲಿನ ದರ ಏರಿಕೆಯ ನೇರ ಪರಿಣಾಮ ಹೋಟೆಲ್‌ಗಳು, ಟೀ ಅಂಗಡಿಗಳು ಹಾಗೂ ಸಣ್ಣಪುಟ್ಟ ಕ್ಯಾಂಟೀನ್‌ಗಳ ಮೇಲೂ ಬೀಳಲಿದ್ದು, ಈಗಾಗಲೇ ಟೀ ಮತ್ತು ಕಾಫಿ ದರಗಳು ಗ್ರಾಹಕರಿಗೆ ಹೊರೆಯಾಗಿವೆ. ಸಣ್ಣ ಟೀ ಅಂಗಡಿಗಳಲ್ಲಿ ೧೦ ರೂ. ಹಾಗೂ ಸಾಮಾನ್ಯ ಹೋಟೆಲ್ಗಳಲ್ಲಿ ೧೫ ರೂ. ಇರುವ ಟೀ, ಕಾಫಿ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಆದರೆ, ಬೆಲೆ ಏರಿಕೆಯ ಈ ಹೊತ್ತಿನಲ್ಲಿ ಪಟ್ಟಣದ ನ್ಯಾಯಾಲಯದ ಸಮೀಪವಿರುವ ಪುಟ್ಟ ಗುಡಿಸಲಿನ ಮಾದರಿಯ ಕ್ಯಾಂಟೀನ್‌ನಲ್ಲಿ ‘ಮಲೆ ಮಹದೇಶ್ವರ ಟೀ ಕಾರ್ನರ್’ ಹೆಸರಿನಲ್ಲಿ ವ್ಯಾಪಾರ ನಡೆಸುತ್ತಿರುವ ಚಿನ್ನಸ್ವಾಮಿ ಮಾತ್ರ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟದಂತೆ ನೋಡಿಕೊಳ್ಳುತ್ತಿದ್ದಾರೆ. ಹಾಲಿನ ದರ ಹೆಚ್ಚಾದರೂ ತಮ್ಮ ಅಂಗಡಿಯಲ್ಲಿ ಈ ಹಿಂದಿನಂತೆಯೇ ಕೇವಲ ಐದು ರೂಪಾಯಿಗೆ ಟೀ ಮತ್ತು ಕಾಫಿ ನೀಡುವುದನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಒಂದು ಕಾಲದಲ್ಲಿ ಪಟ್ಟಣದ ಮಹದೇಶ್ವರ ಭವನ ಹೋಟೆಲ್‌ನಲ್ಲಿ ಅಡುಗೆ ಭಟ್ಟರಾಗಿ ಕೆಲಸ ಮಾಡುತ್ತಿದ್ದ ಚಿನ್ನಸ್ವಾಮಿ, ಇದೀಗ ಸ್ವಂತವಾಗಿ ಪುಟ್ಟ ಟೀ ಅಂಗಡಿ ಆರಂಭಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಟೀ ನಡೆಸುತ್ತಿದ್ದರೂ ತಮ್ಮ ಮೂಲ ವೃತ್ತಿಯನ್ನು ಮರೆತಿಲ್ಲ. ಬಿಡುವಿನ ವೇಳೆಯಲ್ಲಿ ಮದುವೆ, ವಿವಿಧ ಶುಭ ಸಮಾರಂಭಗಳಲ್ಲಿ ಅಡುಗೆ ಕೆಲಸ ಹಾಗೂ ದೋಸೆ ಹಾಕುವ ಭಟ್ಟರಾಗಿ ದುಡಿಯುತ್ತಿದ್ದಾರೆ.
ಕಡಿಮೆ ಬೆಲೆಗೆ ಟೀ, ಕಾಫಿ ನೀಡುತ್ತಿದ್ದಾರೆ ಎಂದ ಮಾತ್ರಕ್ಕೆ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಕಡಿಮೆ ದರದಲ್ಲಿ ಉತ್ತಮ ಗುಣ ಮಟ್ಟದ ಟೀ, ಕಾಫಿ ದೊರೆಯುತ್ತಿರುವುದರಿಂದ ಅವರ ಪುಟ್ಟ ಅಂಗಡಿಯ ಮುಂದೆ ಪ್ರತಿನಿತ್ಯ ಗ್ರಾಹಕರ ದಂಡೇ ಕಂಡು ಬರುತ್ತದೆ. ಲಾಭವನ್ನೇ ಮುಖ್ಯವಾಗಿಸಿ ಕೊಂಡಿರುವ ಇಂದಿನ ವ್ಯಾಪಾರಿ ಜಗತ್ತಿನಲ್ಲಿ ಗ್ರಾಹಕರ ಹಿತ ಮತ್ತು ಸಂತೃಪ್ತಿಗೆ ಆದ್ಯತೆ ನೀಡುತ್ತಿರುವ ಚಿನ್ನಸ್ವಾಮಿ ಅವರ ನಡೆ ನಿಜಕ್ಕೂ ಶ್ಲಾಘನೀಯ.
” ಲಾಭಾಂಶ ಸ್ವಲ್ಪ ಕಡಿಮೆಯಾದರೂ ಪರವಾಗಿಲ್ಲ, ತಮ್ಮ ಅಂಗಡಿಗೆ ಬರುವ ಗ್ರಾಹಕರು ತೃಪ್ತಿಯಿಂದ ಟೀ, ಕಾಫಿ ಸೇವಿಸಿ ಸಂತೋಷದಿಂದ ತೆರಳಬೇಕು ಎಂಬುದು ನನ್ನ ಆಶಯ.”
-ಚಿನ್ನಸ್ವಾಮಿ, ಟೀ ಅಂಗಡಿ ಮಾಲೀಕ





