ಚಿರಂಜೀವಿ ಸಿ.ಹುಲ್ಲಹಳ್ಳಿ
ಭರವಸೆಯ ಆಲ್ರೌಂಡರ್ ಆಗಿ ಹೊರಹೊಮ್ಮುತ್ತಿರುವ ಮೈಸೂರಿನ ಯುವ ಪ್ರತಿಭೆ; ಎಡಗೈ ಶೈಲಿ ಬ್ಯಾಟರ್, ಬಲಗೈಯಲ್ಲಿ ಬೌಲಿಂಗ್
ಮೈಸೂರು: ಗಲ್ಲಿ ಕ್ರಿಕೆಟ್ ಆಡುತ್ತಾ, ನಿತ್ಯ ಸೈಕಲ್ ತುಳಿದು ಅಭ್ಯಾಸಕ್ಕೆ ತೆರಳುತ್ತಿದ್ದ ಯುವಕ ಇಂದು ಕರ್ನಾಟಕ ರಣಜಿ ತಂಡದಲ್ಲಿ ಸ್ಥಾನ ಪಡೆದು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ.
ಆರ್ಥಿಕ ಸವಾಲುಗಳ ನಡುವೆಯೂ ಕ್ರಿಕೆಟ್ ಕನಸನ್ನು ನನಸಾಗಿಸಿಕೊಂಡ ಮೈಸೂರಿನ ಎಲ್. ಮನ್ವಂತ್ ಕುಮಾರ್, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಗಮನ ಸೆಳೆಯುವ ಮೂಲಕ ಭರವಸೆಯ ಆಲ್ರೌಂಡರ್ ಆಗಿ ಹೊರಹೊಮ್ಮುತ್ತಿದ್ದಾರೆ.
೨೦೨೩ರ ಮಹಾರಾಜ ಟ್ರೋಫಿಯಲ್ಲಿ ಹುಬ್ಬಳ್ಳಿ ಟೈಗರ್ಸ್ ಪರ ಆಡಿದ ಮನ್ವಂತ್, ೨೨ ವಿಕೆಟ್ಗಳನ್ನು ಪಡೆದು ಗಮನ ಸೆಳೆದಿದ್ದರು. ಬಳಿಕ ೨೦೨೫ರ ಐಪಿಎಲ್ ವೇಳೆ ದೆಹಲಿ ಕ್ಯಾಪಿಟಲ್ಸ್ ತಂಡ ಅವರನ್ನು ೩೦ ಲಕ್ಷ ರೂ.ಗೆ ಖರೀದಿಸಿತು. ಆ ಋತುವಿನಲ್ಲಿ ಆಡುವ ಅವಕಾಶ ಸಿಗದಿದ್ದರೂ ಉನ್ನತಮಟ್ಟದ ಕ್ರಿಕೆಟ್ ಪರಿಸರವನ್ನು ಹತ್ತಿರದಿಂದ ಅರಿಯಲು ಸಾಧ್ಯವಾಯಿತು.
ಇದೀಗ ರಣಜಿ ಟ್ರೋಫಿಯಲ್ಲಿ ಬ್ಯಾಟಿಂಗ್ ನಲ್ಲೂ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಎಡಗೈ ಬ್ಯಾಟರ್ ಮತ್ತು ಬಲಗೈ ಬೌಲರ್ ಆಗಿ ತಮ್ಮ ಆಲ್ರೌಂಡರ್ ಆಟದ ಮೂಲಕ ಗಮನ ಸೆಳೆದಿರುವ ಅವರೊಂದಿಗೆ ‘ಆಂದೋಲನ’ ದಿನಪತ್ರಿಕೆ ನಡೆಸಿದ ಸಂದರ್ಶನ ಇಲ್ಲಿದೆ.
ಆಂದೋಲನ: ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸಿದ್ದೀರಿ. ವೈಯಕ್ತಿಕ ಮೈಲಿಗಲ್ಲಿಗಿಂತ ತಂಡಕ್ಕೆ ಕೊಡುಗೆ ನೀಡುವುದು ಮುಖ್ಯ ಎಂದಿದ್ದೀರಿ. ಆ ಇನ್ನಿಂಗ್ಸ್ ಬಗ್ಗೆ ಏನು ಹೇಳುತ್ತೀರಿ?
ಮನ್ವಂತ್: ನಾನು ಬ್ಯಾಟಿಂಗ್ಗೆ ಇಳಿದಾಗ ವೈಯಕ್ತಿಕ ಮೈಲಿಗಲ್ಲುಗಳ ಬಗ್ಗೆ ಯೋಚಿಸಿರಲಿಲ್ಲ. ತಂಡಕ್ಕೆ ಏನು ಅಗತ್ಯವಿದೆಯೋ ಅದನ್ನು ಮಾಡಬೇಕು ಎಂಬುದಷ್ಟೇ ನನ್ನ ಗಮನವಾಗಿತ್ತು. ಆ ಸಂದರ್ಭದಲ್ಲಿ ತಂಡಕ್ಕೆ ನೆರವಾಗುವುದು ಮುಖ್ಯವಾಗಿತ್ತು.
ಆಂದೋಲನ: ಮೈಸೂರಿನಲ್ಲಿ ರಣಜಿ ಪಂದ್ಯ ಆಡಿದ ಅನುಭವ ಹೇಗಿತ್ತು?
ಮನ್ವಂತ್: ಮೈಸೂರಿನಲ್ಲಿ ಕ್ರಿಕೆಟ್ ಆರಂಭಿಸಿ ಇಲ್ಲಿಯೇ ರಣಜಿ ಪಂದ್ಯ ಆಡುವುದು ವಿಶೇಷ ಅನುಭವ. ತವರಿನ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಬೇಕು ಎಂಬ ಆಸೆ ಪ್ರತಿಯೊಬ್ಬ ಆಟಗಾರನಿಗೂ ಇರುತ್ತದೆ. ನನಗೂ ಅದೇ ಇತ್ತು. ತಂಡಕ್ಕೆ ಕೊಡುಗೆ ನೀಡಲು ಸಾಧ್ಯವಾಗಿರುವುದರಿಂದ ತುಂಬಾ ಸಂತೋಷವಾಗಿದೆ.
ಆಂದೋಲನ: ನಿಮ್ಮ ಕ್ರಿಕೆಟ್ ಪಯಣವನ್ನು ತಿರುಗಿ ನೋಡಿದಾಗ ಏನನಿಸುತ್ತದೆ?
ಮನ್ವಂತ್: ನನ್ನ ಕ್ರಿಕೆಟ್ ಪಯಣ ಮೈಸೂರಿನಿಂದಲೇ ಆರಂಭವಾಯಿತು. ಮೊದಲು ಎಂಯುಸಿಎಸ್ನಲ್ಲಿ ಅಭ್ಯಾಸ ಆರಂಭಿಸಿದೆ. ಈಗ ಆರ್ಬಿಎನ್ಸಿಸಿ ಮೂಲಕ ಬಾಲಚಂದ್ರ ಸರ್ ಅವರ ಮಾರ್ಗದರ್ಶನದಲ್ಲಿ ಆಡುತ್ತಿದ್ದೇನೆ. ೨೦೨೩ರಲ್ಲಿ ಮಹಾರಾಜ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದೆ. ಈಗ ರಣಜಿ ಪಂದ್ಯದಲ್ಲೂ ತಂಡಕ್ಕೆ ನೆರವಾಗಲು ಸಾಧ್ಯವಾಗಿದೆ.
ಆಂದೋಲನ: ನಿಮ್ಮನ್ನು ವೇಗದ ಬೌಲಿಂಗ್ ಆಲ್ರೌಂಡರ್ ಎಂದು ಗುರುತಿಸಲಾಗುತ್ತಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಯಾವುದಕ್ಕೆ ಹೆಚ್ಚು ಆದ್ಯತೆ ನೀಡುತ್ತೀರಿ?
ಮನ್ವಂತ್: ಎರಡೂ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕು ಎಂಬುದು ನನ್ನ ಆಸೆ. ನನ್ನನ್ನು ಕೇವಲ ಬೌಲಿಂಗ್ ಆಲ್ರೌಂಡರ್ ಅಥವಾ ಬ್ಯಾಟಿಂಗ್ ಆಲ್ರೌಂಡರ್ ಎಂದು ಗುರುತಿಸುವುದಕ್ಕಿಂತ ಎರಡೂ ವಿಭಾಗಗಳಲ್ಲಿ ತಂಡಕ್ಕೆ ನೆರವಾಗುವ ಆಟಗಾರನಾಗಲು ಬಯಸುತ್ತೇನೆ.
ಆಂದೋಲನ: ಕರ್ನಾಟಕ ತಂಡದ ಮುಖ್ಯ ಕೋಚ್ ಆರ್.ವಿನಯ್ ಕುಮಾರ್ ಅವರ ಮಾರ್ಗದರ್ಶನ ಹೇಗಿದೆ?
ಮನ್ವಂತ್: ವಿನಯ್ ಸರ್ ಬಗ್ಗೆ ಹೇಳಲು ಸಾಕಷ್ಟು ವಿಷಯಗಳಿವೆ. ಆದರೆ, ಮುಖ್ಯವಾಗಿ ಅವರು ನನಗೆ ಸ್ವಾತಂತ್ರ್ಯ ನೀಡಿದ್ದಾರೆ. ಒತ್ತಡ ಹಾಕಿ ಆಡಿಸುವುದಿಲ್ಲ. ನೀನು ಇಂತಹದ್ದೇ ಪ್ರದರ್ಶನ ನೀಡಬೇಕು ಎಂದು ಒತ್ತಾಯಿಸುವುದಿಲ್ಲ. ನನ್ನ ಸಹಜ ಆಟ ಆಡಲು ಅವಕಾಶ ನೀಡಿದ್ದಾರೆ.
ಆಂದೋಲನ: ನಿಮ್ಮ ಯಶಸ್ಸಿನ ಹಿಂದೆ ಯಾರ ಕೊಡುಗೆ ದೊಡ್ಡದು?
ಮನ್ವಂತ್: ಮೊದಲನೆಯದಾಗಿ ನನ್ನ ಕುಟುಂಬಕ್ಕೆ ಎಲ್ಲಾ ಶ್ರೇಯಸ್ಸು ಸಲ್ಲಬೇಕು. ಅವರು ನನ್ನ ಮೇಲೆ ಓದಿನ ಒತ್ತಡ ಹೇರದೆ, ನಾನು ಆಯ್ಕೆ ಮಾಡಿಕೊಂಡ ಕ್ರಿಕೆಟ್ ಕ್ಷೇತ್ರದಲ್ಲಿ ಮುಂದುವರಿಯಲು ಪ್ರೋತ್ಸಾಹಿಸಿದರು. ಬಳಿಕ ಬಾಲಚಂದ್ರ ಸರ್, ರವೀಂದ್ರ ಸರ್, ನಿರ್ಮಿತ್ ನಿತ್ಯಾನಂದ್ ಅವರಂತಹ ಮಾರ್ಗದರ್ಶಕರು ನೆರವಾಗಿದ್ದಾರೆ. ಎಲ್ಲರಿಗೂ ಕೃತಜ್ಞನಾಗಿದ್ದೇನೆ.
ಆಂದೋಲನ: ಮುಂದಿನ ಗುರಿ ಐಪಿಎಲ್ನಲ್ಲಿ ಆಡುವುದೇ ಅಥವಾ ಭಾರತ ತಂಡವನ್ನು ಪ್ರತಿನಿಧಿಸುವುದೇ?
ಮನ್ವಂತ್: ಭಾರತ ತಂಡವನ್ನು ಪ್ರತಿನಿಧಿಸುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು. ನನಗೂ ಮೂರು ಮಾದರಿಗಳಲ್ಲೂ ಭಾರತವನ್ನು ಪ್ರತಿನಿಧಿಸಬೇಕು ಎಂಬ ಆಸೆ ಇದೆ.ಆದರೆ, ನಾನು ದೊಡ್ಡ ಗುರಿಯನ್ನೇ ನೆನಪಿಸಿಕೊಂಡು ಒತ್ತಡಕ್ಕೆ ಒಳಗಾಗಲು ಬಯಸುವುದಿಲ್ಲ.





