ಮಾನ್ಯರೆ ,
ಕುವೆಂಪುನಗರ ಬಡಾವಣೆ ಆರಂಭವಾದ ದಿನಗಳಿಂದಲೂ ಇಲ್ಲಿ (ಮನೆನ ಸಂಖ್ಯೆ ೨೨೨೨, ನಾಲ್ಕನೆಯ ಕ್ರಾಸ್, ಗಂಗೂಬಾಯಿ ಹಾನಗಲ್ ರಸ್ತೆ , ಕೆ.ಬ್ಲಾಕ್,) ಸರಿಯಾದ ಚರಂಡಿಯ ವ್ಯವಸ್ಥೆಯೇ ಇಲ್ಲ. ಮಳೆ ಬಂದಿ ತೆಂದರೆ ಇನ್ನಿಲ್ಲದ ಗೋಳು. ಮನೆಯ ಮುಂದಿರುವ ಮೋರಿ ನೀರು ತುಂಬಿ ಮುಂದಕ್ಕೆ ಹೋಗದೆ ಬೀದಿ ಕಡೆಗೇ ನುಗ್ಗಿತ್ತದೆ. ಪಕ್ಕದ ರಸ್ತೆಯ ಎತ್ತರವಾಗಿದ್ದು, ಮುಂದಿನ ಮನೆಯವರು ಮಣ್ಣು ಕಲ್ಲು ಹಾಕಿ ಚರಂಡಿ ಮುಚ್ಚಿರುವುದರಿಂದ ಯಾವ ಕಡೆಯೂ ನೀರು ಹರಿಯದೆ ಕೊಳಚೆ ಗಟ್ಟಿ ನಿಲ್ಲುವಂತಾಗಿದೆ.
ಇದರಿಂದ ಕಾಂಪೌಂಡ್, ಮನೆಗೆ ಹಾನಿ, ಸಂಪಿಗೆ ಕೊಳಚೆ ನೀರು ಸಂಪರ್ಕ, ಪಕ್ಕದ ಲೈಟ್ ಕಂಬದಿಂದ ಕರೆಂಟ್ ಗ್ರೌಂಡ್ ಆಗುವ ಅಪಾಯವಿದೆ. ಕಳೆದ ಏಳು ವರ್ಷಗಳಿಂದಲೂ ಚರಂಡಿ ನೀರಿನ ಅವಾಂತರದಿಂದ ಮನೆಯ ಗೋಡೆಗಳಿಗೆ ವಸ್ತಿ ಏರಿ ತೊಂದರೆಯಾಗುತ್ತಿದೆ. ಸೂಕ್ತ ಚರಂಡಿ ಮಾಡಿ ಮನೆ ಉಳಿಸಿ ಎಂದು ಅರ್ಜಿ ಮೂಲಕ ಮನವಿ ಮಾಡಿದರೂ ಇತ್ತ ತಿರುಗಿಯೂ ನೋಡಿಲ್ಲ. ಈ ಭಾಗದ ಇಂಜಿನಿಯರ್‌ಗೆ ಖುದ್ದಾಗಿ ವಿನಂತಿಸಿದರೂ ಚರಂಡಿ ಮಾಡಿಲ್ಲ. ಕಳೆದ ಫೆಬ್ರವರಿಯಿಂದ ಹಲವು ಪತ್ರಗಳನ್ನು ನೀಡಿ ಖುದ್ದು ಆಯುಕ್ತರನ್ನು ಭೇಟಿ ಮಾಡಿ ವಿನಂತಿಸಿದರೂ ಸೂಕ್ತ ಚರಂಡಿ ವ್ಯವಸ್ಥೆ ಮಾಡಿಲ್ಲ. ಪದೇ ಪದೇ ಮಳೆಯಿಂದ ತೊಂದರೆ ಇದ್ದರೂ ಅಧಿಕಾರಿಗಳ ಸುಳಿವಿಲ್ಲ.
ವಲಯ – ೩ ಕಚೇರಿ, ಪಾಲಿಕೆಯ ಮುಖ್ಯ ಕಚೇರಿಗೆ ಹಲವು ಬಾರಿ ಹೋಗಿ ನಮ್ಮ ಆತಂಕ ವ್ಯಕ್ತಪಡಿಸಿದರೂ ಅದ್ಯಾರೋ ರಾಜಕಾರಣಿಯನ್ನು ಭೇಟಿಮಾಡಿಯೆಂದೂ, ಇನ್ನಾವುದೋ ವಿಭಾಗವನ್ನು ಭೇಟಿ ಮಾಡಿ ಎಂದು ಅಲೆದಾಡಿಸಿದ್ದಾರೆ. ಹತಾಶೆ ಮೂಡಿದೆ . ಪ್ರಾಧ್ಯಾಪಕನಾಗಿದ್ದ ನನ್ನ ಪಾಡೇ ಹೀಗಾದರೆ ಬೇರೆಯವರ ಪಾಡೇನು? ದಯಮಾಡಿ ನಮ್ಮ ಮನೆ ಬಳಿ ತಾವು ಬರಬೇಕು. ತಾವೇ ಖುದ್ದು ಪರಿಶೀಲಿಸಿ ಆಗುವ ಅನಾಹುತ ತಪ್ಪಿಸಲು ಕೂಡಲೇ ಸೂಕ್ತ ಚರಂಡಿ ವ್ಯವಸ್ಥೆ ಮಾಡಬೇಕೆಂದು ಕೋರುತ್ತೇನೆ. ವಂದನೆಗಳು
-ಎ.ಎಂ ಶಿವಸ್ವಾಮಿ, ನಿವೃತ್ತ ಪ್ರಾಂಶುಪಾಲರು, ಮೈಸೂರು


