ಪಂಜುಗಂಗೊಳ್ಳಿ ಅವರ ವಾರದ ಅಂಕಣ
ಹರಿದ್ವಾರಕ್ಕೆ ಹೋಗಿ ತಲೆಯ ಕೂದಲು ತೆಗೆಸಿಕೊಂಡರು!
ನೋಯ್ಡಾದ ೫೨ ವರ್ಷ ಪ್ರಾಯದ ಅಲಕಾನಂದಾ ದಾಸ್ಗುಪ್ತಾ ಒಬ್ಬ ಖ್ಯಾತ ಕಥಕ್ ನರ್ತಕಿ. ಪಂಡಿತ್ ಬಿರ್ಜು ಮಹಾರಾಜರಿಂದ ತರಬೇತಿ ಪಡೆದವರು. ತಮ್ಮ ಆರು ವರ್ಷ ಪ್ರಾಯದಲ್ಲೇ ಕಥಕ್ ಮಾಡಲು ಪ್ರಾರಂಭಿಸಿದ್ದ ಅವರು ಇಂದಿಗೂ ಅದನ್ನು ನಿಲ್ಲಿಸಿಲ್ಲ. ಏಕೆಂದರೆ, ಕಥಕ್ ಅವರಿಗೆ ಪ್ರಾಣವಿದ್ದಂತೆ. ೨೦೨೨ರ ಆಗಸ್ಟ್ ತಿಂಗಳಲ್ಲಿ ಅವರು ಒಂದು ಕಥಕ್ ಪ್ರದರ್ಶನದ ಕೊನೆಯಲ್ಲಿ ತಮ್ಮ ತಲೆ ಮೇಲಿನ ಟೋಪಿಯನ್ನು ತೆಗೆದು ಎಸೆದಾಗ ಸಭಿಕರು ನಿಬ್ಬೆರಗಾದರು. ಏಕೆಂದರೆ, ಅವರ ತಲೆ ಬೋಳಾಗಿತ್ತು!
ಕೆಲವು ತಿಂಗಳ ಹಿಂದೆ ಅವರಿಗೆ ಅಂಡಾಶಯದ ಕ್ಯಾನ್ಸರ್ ಇರುವುದು ಪತ್ತೆಯಾಗಿ, ಕೆಲವೇ ದಿನಗಳ ಹಿಂದಷ್ಟೇ ಅವರು ಶಸಚಿಕಿತ್ಸೆಗೆ ಒಳಗಾಗಿದ್ದರು. ಅವರ ಕಿಬ್ಬೊಟ್ಟೆಗೆ ೩೬ ಕಟ್ಟುಗಳನ್ನು ಹಾಕಲಾಗಿತ್ತು. ವೈದ್ಯರು ಗಾಯ ಗುಣವಾಗಲು ಅವರಿಗೆ ಎರಡು ತಿಂಗಳ ಕಡ್ಡಾಯ ವಿಶ್ರಾಂತಿಯನ್ನು ಸೂಚಿಸಿದ್ದರು. ಆದರೆ, ಅಲಕಾನಂದಾ ಕೇವಲ ಹದಿನೈದು ದಿನಗಳಲ್ಲೇ ಎದ್ದು ವೇದಿಕೆ ಮೇಲೆ ಕುಣಿಯುತ್ತಿದ್ದರು!
ಅಲಕಾನಂದರಿಗೆ ಸ್ಟೇಜ್-೧ ಹಂತದ ಅಂಡಾಶಯದ ಕ್ಯಾನ್ಸರ್ ಇರುವುದು ದೃಢಪಟ್ಟುದುದು ೨೦೨೨ರ ಮೇ ತಿಂಗಳಲ್ಲಿ. ಅದು ಸ್ಟೇಜ್-೧ ಹಂತದ ಕ್ಯಾನ್ಸರ್ ಆಗಿದ್ದರೂ ಗೆಡ್ಡೆ ಅದಾಗಲೇ ಒಡೆದಿದ್ದುದರಿಂದ ಇತರ ಅಂಗಗಳಿಗೂ ಅದು ಹಬ್ಬುವ ಅಪಾಯ ಇತ್ತು. ಆದ್ದರಿಂದ ಅವರ ವೈದ್ಯರು ತಕ್ಷಣವೇ ಶಸಕ್ರಿಯೆ ನಡೆಸಬೇಕು, ಆವತ್ತೇ ಆಸ್ಪತ್ರೆಗೆ ದಾಖಲಾಗಿ ಅಂದರು. ಆದರೆ, ಅಲಕಾನಂದಾ ಅದಕ್ಕೊಪ್ಪಲಿಲ್ಲ. ಏಕೆಂದರೆ, ಆವತ್ತು ಅವರ ಜನ್ಮದಿನವಾಗಿತ್ತು! ತನ್ನ ಮನೆಯವರಿಗೂ ವಿಷಯ ತಿಳಿಸದೆ ಅವರು ಅಂತಹ ಗಂಭೀರ ಸನ್ನಿವೇಶದಲ್ಲೂ ತನ್ನ ಸ್ನೇಹಿತ ಬಳಗವನ್ನು ಕರೆದು, ಕೇಕ್ ಕತ್ತರಿಸಿ, ವೈನ್ ಕುಡಿದು ತಮ್ಮ ಜನ್ಮದಿನಾಚರಣೆಯನ್ನು ನಡೆಸಿದರು. ಅದೂ ಅಲ್ಲದೆ, ಮುಂದಿನ ಎರಡು ವಾರಗಳಲ್ಲಿ ಅವರ ಎರಡು ದೊಡ್ಡ ನೃತ್ಯ ಪ್ರದರ್ಶನಗಳು ನಿಗದಿಯಾಗಿದ್ದವು.
ಎರಡು ವಾರ ತಡೆದರೆ ತಾನೇನೂ ಸಾಯುವುದಿಲ್ಲ ಎಂದು ಹೇಳಿ, ಆ ನೃತ್ಯ ಪ್ರದರ್ಶನಗಳನ್ನೂ ಮುಗಿಸಿ, ಆಗಸ್ಟ್ ೧೭ರಂದು ಶಸ್ತ್ರಕ್ರಿಯೆಗೆ ಒಳಗಾದರು. ವೈದ್ಯರು ಎರಡು ತಿಂಗಳ ಕಡ್ಡಾಯ ವಿಶ್ರಾಂತಿ ಹೇಳಿದ್ದರೂ, ಅಲಕಾನಂದಾ ಹಸಿಯಾಗಿರುವ ಹೊಲಿದ ಗಾಯ ತೆರೆಯದಿರಲಿ ಎಂದು ಅದರ ಮೇಲೆ ಬೆಲ್ಟ್ ಕಟ್ಟಿಕೊಂಡು ಕಥಕ್ ನೃತ್ಯ ಪ್ರದರ್ಶನ ನೀಡಿದರು!
ಅಲಕಾನಂದಾರ ಪ್ರಕಾರ, ನಮ್ಮ ಕಷ್ಟದ ಸಮಯದಲ್ಲಿ ತುಸು ಹುಚ್ಚುತನ ಬೇಕಾಗುತ್ತದೆ. ನಾವು ಪ್ರತೀ ದಿನ ಜೀವಿಸುತ್ತೇವೆ. ಆದರೆ, ಸಾಯುವುದು ಒಮ್ಮೆ ಮಾತ್ರ. ನೀವು ಕಣ್ಣು ತೆರೆದ ದಿನ ನೀವು ಉಸಿರಾಡುತ್ತಿದ್ದರೆ, ನಿಮಗೆ ಆ ದಿನವನ್ನು ಅನುಭವಿಸುವ ಅವಕಾಶ ಸಿಕ್ಕಂತೆ. ಹಾಗಾಗಿ, ಚಿಂತೆ ಮಾಡುತ್ತ ನಾನು ನನ್ನ ಬದುಕಿನ ಅಂತಹ ದಿನಗಳನ್ನು ವ್ಯರ್ಥಗೊಳಿಸಿದರೆ ಏನು ಪ್ರಯೋಜನ? ನೀವು ಬದುಕನ್ನು ಅಳುತ್ತ ಕಳೆಯಬೇಕೋ, ನಗುತ್ತ ಕಳೆಯಬೇಕೋ ಎಂದು ನಿರ್ಧರಿಸುವುದು ನಿಮ್ಮ ಕೈಯಲ್ಲೇ ಇದೆ. ಅಲಕಾನಂದಾ ದಾಸ್ಗುಪ್ತಾ ತಮ್ಮನ್ನು ಕಥಕ್ಗೆ ಎಷ್ಟು ಸಮರ್ಪಿಸಿಕೊಂಡಿದ್ದಾರೆಂದರೆ, ಕೀಮೋಥೆರಪಿ ನಡೆಯುತ್ತಿರುವಾಗಲೂ ವೇದಿಕೆ ಮೇಲೆ ಕುಣಿಯುತ್ತಿದ್ದರು. ಕೆಲವೊಮ್ಮೆ ಕೀಮೋಥೆರಪಿ ನಡೆಯಲಿರುವ ಹಿಂದಿನ ದಿನ ಕುಣಿದಿದ್ದರೆ, ಕೆಲವೊಮ್ಮೆ ಕೀಮೋಥೆರಪಿ ನಡೆದ ಮರುದಿನ. ತಮ್ಮ ಮೂರನೇ ಹಾಗೂ ಆರನೇ ಕೀಮೋಥೆರಪಿಗಳ ನಡುವೆ ಅವರು ಒಟ್ಟು ೧೫ ಪ್ರದರ್ಶನಗಳನ್ನು ನೀಡಿದ್ದರು!
ಪ್ರಪ್ರಥಮ ಕೀಮೋಥೆರಪಿ ನಡೆದ ನಂತರ ಅಲಕಾನಂದಾರ ಕೂದಲು ಉದುರಲು ಶುರುವಾಯಿತು. ಆಗ ಅವರು ದಿನಾ ಕೂದಲು ಉದುರುವ ರಗಳೆಯೇ ಬೇಡ ಎಂದು ಹರಿದ್ವಾರಕ್ಕೆ ಹೋಗಿ ತಾನೇ ಸ್ವತಃ ತನ್ನ ತಲೆಯನ್ನು ಸಂಪೂರ್ಣವಾಗಿ ಬೋಳಿಸಿಕೊಂಡರು! ಸಾಮಾನ್ಯ ಜನರ ಸೌಂದರ್ಯದ ದೃಷ್ಟಿಯಲ್ಲಿ ಹೆಣ್ಣಿಗೆ, ಅದೂ ಒಬ್ಬ ನೃತ್ಯಗಾತಿಗೆ ತಲೆಗೂದಲು ಅತ್ಯಂತ ಮುಖ್ಯ ವಾದುದು. ಉದ್ದ ಕೂದಲು ಇನ್ನೂ ಹೆಚ್ಚಿನ ಸೌಂದರ್ಯ ನೀಡುವಂತಹದು. ಆದರೆ, ಅಲಕಾನಂದಾರ ಜೀವನ ದೃಷ್ಟಿಯೇ ಬೇರೆ ತೆರನಾದುದು.
ಜನ ತಲೆಗೂದಲಿಲ್ಲದ ನೃತ್ಯಗಾತಿಯನ್ನು ನೋಡಲು ಇಷ್ಟಪಡುವುದಿಲ್ಲ. ಆದರೆ, ಕೂದಲು ನನ್ನ ದೇಹದ ಒಂದು ಭಾಗ ಅಷ್ಟೇ. ಅದು ನನಗೆ ನನ್ನ ಬದುಕನ್ನು ಬದುಕಲು ಅಡ್ಡವಾಗಬಾರದು. ತಲೆಗೂದಲಿಲ್ಲದೆಯೂ ನಾನು ಸುಂದರಳಾಗಿ ಕಾಣುತ್ತೇನೆ. ನೀವು ಇದ್ದ ಹಾಗೆಯೇ ನಿಮ್ಮನ್ನು ಒಪ್ಪಿಕೊಳ್ಳುವುದು ಬಹಳ ಮುಖ್ಯ. ಒಮ್ಮೆ ನಿಮ್ಮನ್ನು ನೀವು ಹಾಗೆ ಒಪ್ಪಿಕೊಂಡರೆ, ಸಮಾಜವೂ ನಿಮ್ಮನ್ನು ಒಪ್ಪುತ್ತದೆ. ಯಾರು ಒಪ್ಪುವುದಿಲ್ಲವೋ ಅಂತಹವರನ್ನು ಬದಿಗೆ ಸರಿಸಿ ಎನ್ನುತ್ತಾರೆ.
ಇದರ ಅರ್ಥ ಅಲಕಾನಂದಾ ದಾಸ್ಗುಪ್ತಾ ಯಾವತ್ತೂ ಧೃತಿಗೆಡುವುದಿಲ್ಲ, ಯಾವತ್ತೂ ಹೀಗೆಯೇ ಬಿಂದಾಸ್ ಆಗಿ ಇರುತ್ತಾರೆ ಅಂತಲ್ಲ. ಮೊತ್ತ ಮೊದಲ ಬಾರಿ ಕೀಮೋಥೆರಪಿಗೆ ಒಳಗಾದ ನಂತರ ಕಾಲು ಎತ್ತಿ ಇಟ್ಟು ಹಾಸಿಗೆಯಿಂದ ಏಳಲಾಗದಷ್ಟು ನಿಶ್ಶಕ್ತರಾಗಿದ್ದರು. ಇಬ್ಬರು ಗಂಡು ಮಕ್ಕಳ ಒಂಟಿ ತಾಯಿಯಾಗಿರುವ ಅವರಿಗೆ ಒಬ್ಬಂಟಿತನ ಕಾಡಿ, ಖಿನ್ನತೆಗೆ ಜರಿದ್ದರು. ‘ದೇವರೇ, ನನಗೇ ಏಕೆ ಈ ಕಾಯಿಲೆ? ನಾನು ಯಾರಿಗೇನೂ ಕೇಡು ಮಾಡಿಲ್ಲ’ ಎಂದು ತನಗೆ ತಾನೇ ಹೇಳಿಕೊಂಡಿದ್ದರು. ಆದರೆ, ಎಷ್ಟೋ ಜನ ತನಗಿಂತಲೂ ಕೆಟ್ಟ ಸ್ಥಿತಿಯಲ್ಲಿರುವುದನ್ನು ನೆನಪಿಸಿಕೊಂಡು ಸಮಾಧಾನ ಮಾಡಿಕೊಂಡು ಮತ್ತೆ ಸೆಟೆದು ನಿಂತರು. ಮೊತ್ತ ಮೊದಲ ಬಾರಿಗೆ ಬೋಳು ತಲೆಯಲ್ಲಿ ಸಭಿಕರೆದುರು ಬರಲು ಅವರಿಗೂ ಅಳುಕಾಗಿತ್ತು. ಹಾಗಾಗಿಯೇ ಅವರು ತಲೆಗೆ ಟೋಪಿ ಧರಿಸಿಕೊಂಡು ಕಥಕ್ ಮಾಡಿದ್ದರು. ಅಂದು ಅವರು ‘ಚಾಪ್ ತಿಲಕ್’ ಎಂಬ ಪ್ರಸಿದ್ಧ ಹಾಡಿಗೆ ಅಮೋಘವಾದ ಕಥಕ್ ನೃತ್ಯ ಮಾಡಿ, ಪ್ರದರ್ಶನದ ಕೊನೆಯಲ್ಲಿ ಆ ಟೋಪಿಯನ್ನು ತೆಗೆದು ಸಭಿಕರತ್ತ ಎಸೆದಾಗ, ಸಭಿಕರು ಎದ್ದು ನಿಂತು ಹತ್ತು ನಿಮಿಷಗಳ ಸುದೀರ್ಘ ಚಪ್ಪಾಳೆ ತಟ್ಟಿದುದು ಅವರ ಆತ್ಮಸ್ಥೈರ್ಯವನ್ನು ಇಮ್ಮಡಿಸಿತು. ನೃತ್ಯ ನನಗೆ ಆಮ್ಲಜನಕ ಇದ್ದಂತೆ. ಎಂತಹ ಸಂದರ್ಭದಲ್ಲೂ ನಾನು ಅದನ್ನು ಬಿಡಲಾರೆ. ಈ ಕ್ಯಾನ್ಸರನ್ನು ಎದುರಿಸಲು ನನಗೆ ಶಕ್ತಿ ಬರುತ್ತಿರುವುದು ಇದೇ ಕಥಕ್ನಿಂದ ಎಂದು ಅವರು ಹೇಳುತ್ತಾರೆ.
” ನೃತ್ಯ ನನಗೆ ಆಮ್ಲಜನಕ ಇದ್ದಂತೆ. ಎಂತಹ ಸಂದರ್ಭದಲ್ಲೂ ನಾನು ಅದನ್ನು ಬಿಡಲಾರೆ. ಈ ಕ್ಯಾನ್ಸರನ್ನು ಎದುರಿಸಲು ನನಗೆ ಶಕ್ತಿ ಬರುತ್ತಿರುವುದು ಇದೇ ಕಥಕ್ನಿಂದ ಎಂದು ಅಲಕಾನಂದಾ ದಾಸ್ಗುಪ್ತಾ ಅವರು ಹೇಳುತ್ತಾರೆ”



