Mysore
27
overcast clouds

Social Media

ಸೋಮವಾರ, 26 ಅಕ್ಟೋಬರ್ 2026
Light
Dark

ದಸರಾ ಲೋಪಗಳನ್ನು ಸರಿಪಡಿಸಿಕೊಳ್ಳಿ

ಅವ್ಯವಸ್ಥೆ, ಪೊಲೀಸರ ಅತಿರೇಕದ ವರ್ತನೆ, ಅಧಿಕಾರಿಗಳ ದೌಲತ್ತು, ಜನಸಾಮಾನ್ಯರ ಸಂಕಷ್ಟ- ಈ ಬಾರಿಯ ದಸರಾ ಅನೇಕ ಕಹಿ ಘಟನೆಗಳಿಗೂ ಸಾಕ್ಷಿಯಾಗಿದ್ದು ವಿಷಾದನೀಯ.

ಮೈಸೂರಿನ ಐತಿಹಾಸಿಕ ದಸರಾ ಉತ್ಸವ ತೆರೆ ಕಂಡಿದೆ. ಲಕ್ಷಾಂತರ ಮಂದಿ ದಸರಾ ಉತ್ಸವವನ್ನು ಕಣ್ತುಂಬಿಕೊಂಡಿzರೆ. ದಸರಾ ಮುಗಿದ ನಂತರ ಈ ಬಾರಿಯ ದಸರೆ ಹೇಗಾಯಿತು ಎಂಬ ಚರ್ಚೆಯೂ ಸಾಗಿದೆ. ಈ ಬಾರಿಯ ದಸರಾ ಕೆಲವು ವಿನೂತನ ಕಾರ್ಯಕ್ರಮಗಳ ಜೊತೆಗೆ ಅವಾಂತರಗಳು, ಎಡವಟ್ಟುಗಳಿಗೂ ಕಾರಣವಾಗಿದ್ದು ಮಾತ್ರ ಬೇಸರದ ಸಂಗತಿ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಬಾರಿಯ ದಸರೆಗೆ ಹೊಸ ರೂಪ ನೀಡುವ ಪ್ರಯತ್ನ ಮಾಡಿ ಅದರಲ್ಲಿ ಸ್ವಲ್ಪಮಟ್ಟಿಗೆ ಯಶಸ್ಸನ್ನೂ ಕಂಡಿದ್ದು ನಿಜ. ಈ ಬಾರಿಯ ದಸರಾ ಉತ್ಸವಕ್ಕೆ ಆಹ್ವಾನದ ಮೇರೆಗೆ ಕೇರಳದ ಮುಖ್ಯಮಂತ್ರಿ ವಿ.ಡಿ.ಸತೀಶನ್ ಹಾಗೂ ತೆಲಂಗಾಣದ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು ಆಗಮಿಸಿದ್ದು ವಿಶೇಷವಾಗಿತ್ತು. ಅದೇ ರೀತಿ ೧೩ ದೇಶಗಳ ರಾಯಭಾರಿಗಳನ್ನು ಬರಮಾಡಿಕೊಂಡಿದ್ದು ದೇಶ-ದೇಶಗಳ ಮಧ್ಯೆ ಸಾಂಸ್ಕೃತಿಕ ಕೊಂಡಿಯನ್ನು ಮತ್ತಷ್ಟು ಬೆಸೆಯಲು ನೆರವಾಯಿತು. ಭಾರತೀಯ ಸೇನಾ ಪಡೆ ಇದೇ ಮೊದಲ ಬಾರಿಗೆ ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದು ಸಂತಸ ತಂದಿತು. ಚಲನಚಿತ್ರ ಕಲಾವಿದರು ಜಂಬೂ ಸವಾರಿಯಲ್ಲಿ ತೆರಳಿದ್ದು ಮೆರುಗು ನೀಡಿತು.

ದಸರಾ ನಾಡಹಬ್ಬ. ಜನತೆಯ ಹಬ್ಬ. ಆದರೆ, ಅಧಿಕಾರಿಗಳದ್ದೇ ದರ್ಬಾರು. ಈ ಬಾರಿಯಂತೂ ಇದು ಮತ್ತಷ್ಟು ಜೋರು. ಪೊಲೀಸರಿಗಂತೂ ಸಚಿವರನ್ನೇ ತಡೆಯುವಷ್ಟು ದರ್ಪ. ಜಂಬೂಸವಾರಿ ಆರಂಭಕ್ಕೂ ಮುನ್ನ ಮುಖ್ಯಮಂತ್ರಿಗಳು ನಂದಿಧ್ವಜಕ್ಕೆ ಪೂಜೆ ಮಾಡಲು ಹೊರಟಾಗ ಅವರೊಂದಿಗೆ ಸಚಿವರು ಬರದಂತೆ ಪೊಲೀಸರು ತಡೆದಿದ್ದು ಖಂಡನೀಯ. ಪೊಲೀಸರಿಗೆ ಸಚಿವರನ್ನು ಬಿಡದಂತೆ ಸೂಚನೆ ಕೊಡಲಾಗಿತ್ತು ಎಂಬ ಮಾತು ಸಾರ್ವಜನಿಕ ವಲಯದಲ್ಲಿದೆ. ಸಚಿವರನ್ನೇ ತಡೆದ ಪೊಲೀಸರ ವರ್ತನೆ ಕುರಿತು ಸರಕಾರದ ಮುಖ್ಯ ಕಾರ್ಯದರ್ಶಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಅಗತ್ಯ ಕ್ರಮ ಆಗಬೇಕು.

ದಸರಾ ಉತ್ಸವವನ್ನು ವರದಿ ಮಾಡುವ ಪತ್ರಕರ್ತರಿಗೆ ಮೈಸೂರು ನಗರದ ಪೊಲೀಸ್ ಆಯುಕ್ತರೇ ಪಾಸ್ ನೀಡಿರುತ್ತಾರೆ. ಇಂತಹ ಪಾಸ್ ಇದ್ದರೂ ಜಂಬೂ ಸವಾರಿ ವರದಿಗಾಗಿ ಅರಮನೆ ಆವರಣದೊಳಗೆ ಪತ್ರಕರ್ತರನ್ನು ಬಿಡಲು ಪೊಲೀಸರು ನಿರಾಕರಿಸಿದ್ದು ವಿಷಾದನೀಯ. ಅರಮನೆಯಲ್ಲಿ ರಾಜವಂಶಸ್ಥರು ಸಂಪ್ರದಾಯ ಬದ್ಧವಾಗಿ ಪ್ರತಿ ವರ್ಷ ನಡೆಸುವ ಜಟ್ಟಿ ಕಾಳಗವೇ ಈ ಬಾರಿ ರದ್ದಾಗಿದ್ದು ದಸರಾದಲ್ಲಿ ಒಂದು ಕಪ್ಪುಚುಕ್ಕೆಯಾಯಿತು. ಜಟ್ಟಿ ಕಾಳಗದಲ್ಲಿ ಭಾಗವಹಿಸಬೇಕಿದ್ದ ಜಟ್ಟಿಗಳನ್ನೇ ಪೊಲೀಸರು ಒಳಗೆ ಬಿಡಲಿಲ್ಲ. ಜಟ್ಟಿ ಕಾಳಗ ರದ್ದಾದ ಅಚಾತುರ್ಯಕ್ಕೆ ಪೊಲೀಸರೇ ಕಾರಣರಾಗಿದ್ದು ಬೇಸರದ ಸಂಗತಿ.

ಜಂಬೂಸವಾರಿ ವೀಕ್ಷಿಸಲು ಜನರು ಹಣ ಪಾವತಿಸಿ ಗೋಲ್ಡ ಪಾಸ, ಟಿಕೆಟ್ ಖರೀದಿಸಿದ್ದರು. ಇಂಥವರಿಗೆ ಜಂಬೂಸವಾರಿ ವೀಕ್ಷಣೆಗೆ ಪೊಲೀಸರು ಪ್ರವೇಶವನ್ನೇ ನೀಡಲಿಲ್ಲ. ಇದರಿಂದ ಆಕ್ರೋಶಗೊಂಡು ಜನರು ವಾಪಸಾಗಬೇಕಾಯಿತು. ಜಂಬೂಸವಾರಿ ದಿನ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಬೀಸಿದಾಗ ಮಗುವೊಂದಕ್ಕೆ ತಗುಲಿ ತಲೆಗೆ ತೀವ್ರ ಪೆಟ್ಟು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆಯೂ ನಡೆದಿದ್ದು, ಇದು ಕಳವಳಕಾರಿ.

ದಸರಾ ಉತ್ಸವದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನೇ ರಾಜ್ಯ ಸರಕಾರ ಕಡೆಗಣಿಸಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂಬ ಆರೋಪಗಳೂ ಕೇಳಿ ಬಂದಿವೆ. ಈ ಕುರಿತು ಅಹಿಂದ ಸಂಘಟನೆಗಳು ಪ್ರತಿಭಟನೆಯನ್ನೂ ನಡೆಸಿವೆ. ದಸರಾ ಉತ್ಸವದಲ್ಲಿ ಅಧಿಕಾರಿಗಳ ಕುಟುಂಬದವರು ರಾಜಾತಿಥ್ಯ ಪಡೆದರೆಂಬ ಟೀಕೆಗಳಿವೆ. ಇಂತಹ ಅವಾಂತರಗಳಿಗೆ ಸರಕಾರ ಕಡಿವಾಣ ಹಾಕಬೇಕು.

ದಸರಾ ಉತ್ಸವದ ಮೇಲ್ವಿಚಾರಣೆಗೆ ಮೈಸೂರು ಜಿ ಉಸ್ತುವಾರಿ ಸಚಿವರ ಜೊತೆ ಪ್ರತಿದಿನ ಇಬ್ಬರು ಸಚಿವರನ್ನು ಮುಖ್ಯಮಂತ್ರಿಗಳು ನಿಯೋಜಿಸಿದ್ದರು. ಆದರೆ, ಈ ಸಚಿವರು ಸರಿಯಾಗಿ ಬರಲೇ ಇಲ್ಲ. ಅಷ್ಟಕ್ಕೂ ಹೀಗೆ ಪ್ರತಿದಿನ ಇಬ್ಬರು ಸಚಿವರನ್ನು ಉಸ್ತುವಾರಿಗಳನ್ನಾಗಿ ನೇಮಿಸುವುದು ಅಗತ್ಯವಿರಲಿಲ್ಲ ಎಂಬುದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿzರೆ. ಹೀಗೆ ಪ್ರತಿದಿನ ಇಬ್ಬರು ಸಚಿವರನ್ನು ಉಸ್ತುವಾರಿಗೆ ನೇಮಿಸಿದ್ದರ ಹಿಂದಿನ ಉದ್ದೇಶವೇ ಜನರಿಗೆ ಅರ್ಥವಾಗಲಿಲ್ಲ. ದಸರಾ ಚಲನಚಿತ್ರೋತ್ಸವವನ್ನು ಈ ಬಾರಿ ರದ್ದುಪಡಿಸಲಾಗಿತ್ತು. ಇದಕ್ಕೆ ವಿರೋಧವೂ ವ್ಯಕ್ತವಾಯಿತು. ಮುಂದಿನ ವರ್ಷದಿಂದ ದಸರಾ ಚಲನಚಿತ್ರೋತ್ಸವ ಪುನಾರಂಭವಾಗುವುದು ಸೂಕ್ತ.

ಇನ್ನು ಮೈಸೂರು ದಸರಾ ಉಪ ಸಮಿತಿಗಳಿಗೆ ಅಧಿಕಾರೇತರರನ್ನು ಸದಸ್ಯರನ್ನಾಗಿ ನೇಮಿಸುವಷ್ಟರ ಅಧಿಕಾರಿಗಳು ಬಹುತೇಕ ಎಲ್ಲ ಕಾರ್ಯಕ್ರಮಗಳನ್ನು ಆಖೈರುಗೊಳಿಸಿರುತ್ತಾರೆ. ಇದು ಪ್ರತಿವರ್ಷ ಇದ್ದದ್ದೇ. ಸಮಿತಿಯಲ್ಲಿರುವ ಅಧಿಕಾರೇತರ ಸದಸ್ಯರಿಗೆ ಕೆಲಸ ಮಾಡಲು ಅವಕಾಶವೇ ಇರುವುದಿಲ್ಲ. ಈ ಉಪ ಸಮಿತಿಗಳು ನಾಮ್ಕೇ ವಾಸ್ತೆಯಂತಿರುತ್ತವೆ. ಇದರಿಂದ ಏನೂ ಪ್ರಯೋಜನವಿಲ್ಲ. ಇಂತಹ ವ್ಯವಸ್ಥೆಗೆ ಮೊದಲು ತಡೆಯೊಡ್ಡಬೇಕು. ಜನಸಾಮಾನ್ಯರ ದಸರಾ ಆಗಬೇಕು.

ಮೈಸೂರು ದಸರಾ ಉತ್ಸವದ ಸಿದ್ಧತೆ ಹಾಗೂ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಶಾಶ್ವತ ಪ್ರಾಧಿಕಾರ ರಚಿಸಬೇಕೆಂಬ ಕೂಗು ಮೊದಲಿನಿಂದಲೂ ಇದೆ. ಆದರೆ, ರಾಜ್ಯ ಸರಕಾರ ಮನಸ್ಸು ಮಾಡುತ್ತಿಲ್ಲ. ಇಂತಹ ಪ್ರಾಧಿಕಾರ ರಚನೆಗೆ ಅಧಿಕಾರಿಗಳ ವಲಯದ ವಿರೋಧವಿದೆ ಎಂಬ ಮಾತಿದೆ. ಪ್ರಾಧಿಕಾರ ರಚನೆಯಾದರೆ ಸ್ಥಳೀಯ ಅಧಿಕಾರಿಗಳಿಗೆ ಕಿಮ್ಮತ್ತಿರುವುದಿಲ್ಲ ಎಂಬುದು ಇದಕ್ಕೆ ಕಾರಣವಿರಬಹುದು.

” ದಸರಾ ನಾಡಹಬ್ಬ. ಜನತೆಯ ಹಬ್ಬ. ಆದರೆ, ಅಧಿಕಾರಿಗಳದ್ದೇ ದರ್ಬಾರು. ಈ ಬಾರಿಯಂತೂ ಇದು ಮತ್ತಷ್ಟು ಜೋರು. ಪೊಲೀಸರಿಗಂತೂ ಸಚಿವರನ್ನೇ ತಡೆಯುವಷ್ಟು ದರ್ಪ. ಜಂಬೂಸವಾರಿ ಆರಂಭಕ್ಕೂ ಮುನ್ನ ಮುಖ್ಯಮಂತ್ರಿಗಳು ನಂದಿಧ್ವಜಕ್ಕೆ ಪೂಜೆ ಮಾಡಲು ಹೊರಟಾಗ ಅವರೊಂದಿಗೆ ಸಚಿವರು ಬರದಂತೆ ಪೊಲೀಸರು ತಡೆದಿದ್ದು ಖಂಡನೀಯ. ಪೊಲೀಸರಿಗೆ ಸಚಿವರನ್ನು ಬಿಡದಂತೆ ಸೂಚನೆ ಕೊಡಲಾಗಿತ್ತು ಎಂಬ ಮಾತು ಸಾರ್ವಜನಿಕ ವಲಯದಲ್ಲಿದೆ. ಸಚಿವರನ್ನೇ ತಡೆದ ಪೊಲೀಸರ ವರ್ತನೆ ಕುರಿತು ಸರಕಾರದ ಮುಖ್ಯ ಕಾರ್ಯದರ್ಶಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಅಗತ್ಯ ಕ್ರಮ ಆಗಬೇಕು”

 

 

Tags:
error: Content is protected !!