ಶಶಿ ಸಂಪಳ್ಳಿ
ರೊಬೋಟಿಕ್ ಆನೆಗಳ ಬಳಕೆ ಪರ್ಯಾಯ ಆಯ್ಕೆ
ದಸರಾ ಜಂಬೂ ಸವಾರಿಯ ವೇಳೆ ಅಂಬಾರಿಯನ್ನು ಹೊತ್ತ ಆನೆ ದಿಕ್ಕೆಟ್ಟು ಓಡಿ, ಅಂಬಾರಿ ನೆಲಕ್ಕುರುಳಿದ ಶಿವಮೊಗ್ಗ ದಸರಾದ ಆಘಾತಕಾರಿ ಘಟನೆ ಈಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ವಿಜಯದಶಮಿಯ ದಿನ ಸಂಜೆ ಜಂಬೂ ಸವಾರಿ ಆರಂಭವಾದ ಕೆಲವೇ ನಿಮಿಷಗಳಲ್ಲಿ ಈ ಅವಘಡ ಸಂಭವಿಸಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ. ಮುಖ್ಯವಾಗಿ ಜಂಬೂ ಸವಾರಿಯಲ್ಲಿ ಭಾಗವಹಿಸಿದ ಆನೆಗಳಿಗೆ ಸರಿಯಾದ ತರಬೇತಿ ನೀಡಿರಲಿಲ್ಲ, ಸೋಮಣ್ಣ ಎಂಬ ಹೊಸ ಆನೆಗೆ ಕೊನೇ ಕ್ಷಣದಲ್ಲಿ ಅಂಬಾರಿ ಹೊರಿಸಲಾಗಿತ್ತು, ಹಾಗಾಗಿ ಸುರಕ್ಷತೆ ದೃಷ್ಟಿಯಿಂದ ಆ ಆನೆಯ ಮುಂದೆ ಮತ್ತು ಹಿಂದೆ ಎರಡು ಕುಮ್ಕಿ ಆನೆಗಳನ್ನು ಬಿಟ್ಟುಕೊಂಡು ಅದನ್ನು ಮಧ್ಯದಲ್ಲಿ ಕರೆದೊಯ್ಯಲಾಗುತ್ತಿತ್ತು. ಆದರೆ, ಜನಪ್ರತಿನಿಧಿಯೊಬ್ಬರು ಪ್ರತಿಷ್ಠೆಗಾಗಿ ಮುಂದಿದ್ದ ಕುಮ್ಕಿ ಆನೆಯನ್ನು ಹಿಂದಕ್ಕೆ ಕಳಿಸಿ ಅಂಬಾರಿ ಆನೆಯನ್ನೆ ಮುಂದೆ ಬಿಡಲು ತಾಕೀತು ಮಾಡಿದರು.
ಆಗ ಪಟಾಕಿ, ಲೌಡ್ ಸ್ಪೀಕರ್, ಡೋಲು ಮತ್ತಿತರ ವಾದ್ಯಗಳ ಸದ್ದು, ಜನಜಂಗುಳಿಯ ಗದ್ದಲಗಳಿಂದ ಬೆಚ್ಚಿದ ಅಂಬಾರಿ ಆನೆ ಬೆದರಿ ಹಿಂದಕ್ಕೆ ಓಡಿತು ಎಂದೂ ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಅಲ್ಲದೆ, ಆನೆಗಳ ಆಸುಪಾಸಿನಲ್ಲಿ ಸಾರ್ವಜನಿಕರು ಸುಳಿಯದಂತೆ ಅಂತರ ಕಾಯ್ದುಕೊಳ್ಳುವಲ್ಲಿ ಆದ ವೈಫಲ್ಯವೂ ಘಟನೆಗೆ ಕಾರಣ. ಆನೆ ಹಿಂತಿರುಗುವ ವೇಳೆ ಕೆಲವು ಹುಡುಗರು ಅದರ ಹಿಂಬದಿಯನ್ನು ತಟ್ಟುವ, ತಿವಿಯುವ ವಿಡಿಯೋ ತುಣುಕುಗಳು ಕೂಡ ವೈರಲ್ ಆಗಿದ್ದು, ಅಂತಹ ಕುಚೇಷ್ಟೆಗಳು ಕೂಡ ಘಟನೆಗೆ ಕಾರಣವಿರಬಹುದು ಎನ್ನಲಾಗುತ್ತಿದೆ.
ಒಟ್ಟಾರೆ, ರಾಜಕಾರಣಿಗಳು ತಮ್ಮ ಪ್ರತಿಷ್ಠೆ ಮೆರೆಯಲು, ತಮ್ಮ ಕಾಲದಲ್ಲಿ ಅಷ್ಟು ವೈಭವದಿಂದ ದಸರಾ ಆಚರಿಸಿದೆವು, ಇಷ್ಟು ಆನೆಗಳನ್ನು ತಂದು ಜಂಬೂ ಸವಾರಿ ಮಾಡಿದೆವು ಎಂದು ಹೆಚ್ಚುಗಾರಿಕೆ ತೋರಲು, ರಾಜಕೀಯ ಲಾಭಕ್ಕಾಗಿ ಇಂತಹ ಸಂದರ್ಭಗಳನ್ನು ಬಳಸಿಕೊಳ್ಳಲು ನಡೆಸಿದ ಪೈಪೋಟಿ, ಹಪಾಹಪಿಗಳ ಫಲವಾಗಿ ದಸರೆಗೆ ಕಳಂಕ ಮೆತ್ತಿದೆ. ಆದರೆ, ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಜಿಲ್ಲೆಯ ಮತ್ತು ಶಿವಮೊಗ್ಗ ನಗರದ ಜನಪ್ರತಿನಿಽಗಳು ಪಕ್ಷಾತೀತವಾಗಿ ಘಟನೆಯ ತಿಪ್ಪೆಸಾರಿಸಲು ಇನ್ನಿಲ್ಲದ ಯತ್ನ ನಡೆಸಿದ್ದಾರೆ.
ರಾಜಕಾರಣಿಗಳ ಇಂತಹ ನಡೆ ಹೊಸದೇನಲ್ಲ; ಅದು ನಿರೀಕ್ಷಿತವೇ. ಆದರೆ, ಇಂತಹ ಸಂದರ್ಭಗಳಲ್ಲಿ ವನ್ಯಜೀವಿಗಳ ಹಿತ ಕಾಯಲೆಂದೆ ಇರುವ ಅರಣ್ಯ ಇಲಾಖೆ ಕೂಡ ರಾಜಕಾರಣಿಗಳ ತಾಳಕ್ಕೆ ಕುಣಿಯುತ್ತಿರುವಂತೆ ಕಾಣಿಸುತ್ತಿರುವುದು ದುರಂತ. ವನ್ಯಜೀವಿಗಳು, ಅದರಲ್ಲೂ ಅತ್ಯಂತ ಸೂಕ್ಷ್ಮ ನಡವಳಿಕೆಯ ಪ್ರಾಣಿಯಾದ ಆನೆಯನ್ನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಬಳಸುವಾಗ ಏನೆಲ್ಲಾ ಮುಂಜಾಗ್ರತೆ ಕೈಗೊಳ್ಳಬೇಕು, ಅವುಗಳನ್ನು ಹೇಗೆ ನಡೆಸಿಕೊಳ್ಳಬೇಕು ಮತ್ತು ಒಂದು ವೇಳೆ ಅವುಗಳ ವರ್ತನೆಯಲ್ಲಿ ವ್ಯತ್ಯಾಸ ಕಂಡುಬಂದರೆ ಪರಿಸ್ಥಿತಿಯನ್ನು ಹೇಗೆ ನಿಯಂತ್ರಿಸಬೇಕು ಎಂಬ ಬಗ್ಗೆ ಅರಣ್ಯ ಇಲಾಖೆ ಕಳೆದ ವರ್ಷವಷ್ಟೇ ‘ನಿಗದಿತ ಕಾರ್ಯಾಚರಣೆ ನಿಯಮಾವಳಿ(ಎಸ್ಒಪಿ)’ಗಳನ್ನು ಹೊರಡಿ ಸಿದೆ. ಆದರೆ, ಜನಜಂಗುಳಿ, ಸದ್ದುಗದ್ದಲ, ತರಬೇತಿ, ಆಹಾರ ಸೇರಿದಂತೆ ಹಲವು ವಿಷಯಗಳಲ್ಲಿ ಈ ಪ್ರಕರಣದಲ್ಲಿ ಎಸ್ಒಪಿ ಪಾಲನೆಯಾಗಿಲ್ಲ ಎಂಬುದನ್ನು ಇಲಾಖೆಯ ಆಂತರಿಕ ಮೂಲಗಳೇ ಹೇಳುತ್ತಿವೆ. ಅಷ್ಟೇ ಅಲ್ಲ; ಆನೆ ಅಂಬಾರಿಸಹಿತ ದಿಕ್ಕೆಟ್ಟು ಓಡಿ ಸುಮಾರು ಅರ್ಧ ತಾಸು ಬೀದಿ-ಬೀದಿ ಅಲೆದರೂ ಅದನ್ನು ನಿಯಂತ್ರಿಸಲು ಅರಿವಳಿಕೆ ಪ್ರಯೋಗ ಮಾಡದೆ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲಾಗಿತ್ತು.
ಶಿವಮೊಗ್ಗ ವೃತ್ತದ ಸಿಸಿಎಫ್ ಹನುಮಂತಪ್ಪ ಅವರು ಅರಿವಳಿಕೆ ಮದ್ದು,ಗನ್ ಸಹಿತ ಎಲ್ಲವೂ ಸಿದ್ಧವಿತ್ತು ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದರೂ, ಆ ಘಟನೆಯ ವೇಳೆ ಏಕೆ ಅದನ್ನು ಪ್ರಯೋಗಿಸಲಿಲ್ಲ? ಆನೆ ತನ್ನಷ್ಟಕ್ಕೆ ತಾನು ದಣಿದು ಕೋಟೆ ದೇವಾಲಯದ ಆವರಣದಲ್ಲಿ ನಿಂತುಕೊಂಡ ಬಳಿಕ ಅದಕ್ಕೆ ಅರಿವಳಿಕೆ ನೀಡಿ ವಶಕ್ಕೆ ಪಡೆಯಲಾಯಿತು ಎಂಬುದೇ ಈ ಲೋಪಕ್ಕೆ ಸಾಕ್ಷಿಯಲ್ಲವೆ? ಹಾಗೆಯೇ, ಸೋಮಣ್ಣ ಆನೆಯನ್ನು ಅಂಬಾರಿ ಹೊರಲು ಆಯ್ಕೆ ಮಾಡಿದ ವಿಷಯದಲ್ಲಿಯೂ ಸಾಕಷ್ಟು ಗೊಂದಲಕಾರಿ ಹೇಳಿಕೆಗಳು ಇಲಾಖೆಯ ಕಡೆಯಿಂದ ಹೊರಬಿದ್ದಿವೆ. ಒಂದು ಕಡೆ ಸಿಸಿಎಫ್ ಅವರು ಘಟನೆ ಕುರಿತಂತೆ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ, ‘ಸಾಗರ್ ಆನೆಯ ದೈಹಿಕ ಪರಿಸ್ಥಿತಿ ಪರಿಗಣಿಸಿ ಈ ಬಾರಿ ಸೋಮಣ್ಣ ಆನೆಯನ್ನೇ ಅಂಬಾರಿ ಹೊರಲು ಆಯ್ಕೆ ಮಾಡಲು ಸಾಕಷ್ಟು ಮುಂಚೆಯೇ ಎಲ್ಲ ಸಮಾಲೋಚನೆ ಬಳಿಕ ನಿರ್ಧರಿಸಲಾಗಿತ್ತು’ ಎಂದಿದ್ದರೆ, ಪರಿಸರ ಮತ್ತು ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರು, ‘ಮತ್ತೊಂದು ಆನೆ ಕಾಲು ಕುಂಟುತ್ತಿದ್ದರಿಂದ ಸೋಮಣ್ಣ ಆನೆಯ ಮೇಲೆ ಅಂಬಾರಿ ಹೊರಿಸಲು ಕೊನೇ ಕ್ಷಣದಲ್ಲಿ ನಿರ್ಧರಿಸಲಾಗಿತ್ತು. ಘಟನೆಗೆ ಪ್ರಮುಖವಾಗಿ ಆ ಅಂಶವೇ ಕಾರಣ’ ಎಂದು ಬೆಂಗಳೂರಿನಲ್ಲಿ ಮಾಧ್ಯಮ ಹೇಳಿಕೆ ನೀಡಿದ್ದಾರೆ.
ಹಾಗಾದರೆ ಈ ಎರಡರಲ್ಲಿ ಯಾವುದು ಸತ್ಯ ಎಂಬುದು ಪ್ರಶ್ನೆ. ಅಷ್ಟೇ ಅಲ್ಲ; ಇಂತಹ ಸೂಕ್ಷ್ಮಸಂಗತಿಯ ಕುರಿತ ತದ್ವಿರುದ್ಧ ಹೇಳಿಕೆಗಳು ಸ್ವತಃ ಸಿಸಿಎಫ್ ಸಲ್ಲಿಸಿರುವ ವರದಿಯ ಸಾಚಾತನದ ಬಗ್ಗೆಯೇ ಅನುಮಾನಗಳನ್ನು ಹುಟ್ಟುಹಾಕಿವೆ. ಅಷ್ಟಕ್ಕೂ ಶಿವಮೊಗ್ಗ ದಸರಾದಲ್ಲಿ ಆನೆಗಳ ಬಳಕೆಯ ಜಂಬೂ ಸವಾರಿಯ ಸಂಪ್ರದಾಯಕ್ಕೆ ದೊಡ್ಡ ಇತಿಹಾಸವೇನೂ ಇಲ್ಲ. ನಗರ ದೇವತೆಗಳ ಬನ್ನಿ ಮುಡಿಯುವ ಆಚರಣೆಗೆ ನೂರಾರು ವರ್ಷಗಳ ಇತಿಹಾಸವಿದ್ದರೂ ೨೦೧೭ಕ್ಕೆ ಮುನ್ನ ಟ್ರಾಕ್ಟರ್ ಮತ್ತಿತರ ವಾಹನಗಳಲ್ಲೇ ನಗರ ದೇವತೆಗಳ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಸುವುದು ವಾಡಿಕೆಯಾಗಿತ್ತು. ೨೦೧೭ರಲ್ಲಿ ಮೊದಲ ಬಾರಿಗೆ ಸರ್ಕಾರ ಇಲ್ಲಿನ ದಸರಾಕ್ಕೆ ವಿಶೇಷ ಅನುದಾನ ನೀಡಿದ ಹಿನ್ನೆಲೆಯಲ್ಲಿ ಜಂಬೂ ಸವಾರಿ ಸಂಪ್ರದಾಯಕ್ಕೆ ಚಾಲನೆ ಸಿಕ್ಕಿತ್ತು. ಆ ಬಳಿಕ ಕೂಡ ಮೂರು ವರ್ಷದ ಹಿಂದೆ ಗರ್ಭಿಣಿ ಆನೆಯನ್ನೇ ಜಂಬೂ ಸವಾರಿಗೆ ತಂದು, ಅದು ಮೆರವಣಿಗೆಯ ನಡುವೆಯೇ ಮರಿಗೆ ಜನ್ಮನೀಡಿದ ಘಟನೆಯೂ ನಡೆದಿತ್ತು.
ಇನ್ನೊಂದು ವರ್ಷ ಅಂಬಾರಿ ಹೊತ್ತ ಆನೆ ಭೇದಿ ಮಾಡಿಕೊಂಡು ಅರ್ಧದಲ್ಲೇ ಅಂಬಾರಿಯನ್ನು ಮತ್ತೊಂದು ಆನೆಗೆ ಬದಲಿಸಿದ ಘಟನೆಯೂ ನಡೆದಿತ್ತು. ಒಟ್ಟಾರೆ ಆನೆಗಳ ಆರೋಗ್ಯ ಸ್ಥಿತಿ, ಅವುಗಳ ಆರೈಕೆ, ತರಬೇತಿ ಮತ್ತು ಮುನ್ನೆಚ್ಚರಿಕೆಯ ವಿಷಯದಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗ ಪದೇಪದೇ ಎಡವುತ್ತಿರುವುದಕ್ಕೂ ಶಿವಮೊಗ್ಗ ಜಂಬೂ ಸವಾರಿ ಮತ್ತೆಮತ್ತೆ ಸಾಕ್ಷಿಯಾಗುತ್ತಲೇ ಇದೆ. ಇನ್ನು ಈ ಬಾರಿಯ ಘಟನೆ ಶಿವಮೊಗ್ಗ ದಸರಾ ಮಾತ್ರವಲ್ಲದೆ, ರಾಜ್ಯದಲ್ಲಿ ರೂಢಿಯಲ್ಲಿರುವ ಜಂಬೂ ಸವಾರಿ ಸೇರಿದಂತೆ ಧಾರ್ಮಿಕ ಮತ್ತು ಸಾರ್ವಜನಿಕ ಮೆರವಣಿಗೆ ಅಥವಾ ಸಮಾರಂಭಗಳಲ್ಲಿ ಆನೆಗಳ ಬಳಕೆಯ ‘ವನ್ಯಜೀವಿ ವಿರೋಧಿ ಧೋರಣೆ’ಯ ಬಗ್ಗೆಯೇ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.
ವನ್ಯಜೀವಿ ಕಾಯ್ದೆಯ ಅನ್ವಯ ಸರ್ಕಸ್ಸುಗಳಲ್ಲಿ ಪ್ರಾಣಿ ಬಳಕೆ, ಬೀದಿಗಳಲ್ಲಿ ಕೋತಿ ಕುಣಿತ, ಕರಡಿ ಕುಣಿತಗಳಿಗೆಲ್ಲಾ ದಶಕಗಳ ಹಿಂದೆಯೇ ಕಡಿವಾಣ ಹಾಕಲಾಗಿದೆ. ಆದರೆ, ಅದೇ ಕಾನೂನು, ಸಂರಕ್ಷಣೆಯ ದೃಷ್ಟಿಯಿಂದ ಆದ್ಯತೆಯ ಪಟ್ಟಿಯಲ್ಲಿರುವ ಆನೆಗಳ ವಿಷಯದಲ್ಲಿ ಏಕೆ ಕಟ್ಟುನಿಟ್ಟಾಗಿ ಅನ್ವಯವಾಗುತ್ತಿಲ್ಲ? ಇಂದಿಗೂ ದಸರಾ ಜಂಬೂ ಸವಾರಿಯೊಂದೇ ಅಲ್ಲದೆ ಹಲವು ಧಾರ್ಮಿಕ ಆಚರಣೆಗಳಲ್ಲಿ, ಸಾರ್ವಜನಿಕ ಸಮಾರಂಭಗಳಲ್ಲಿ ಆನೆಯನ್ನು ಬಳಸಲು ಸರ್ಕಾರವೇ ಅನುಮತಿ ನೀಡುವುದಲ್ಲದೆ, ಪಳಗಿಸಿದ ಆನೆಗಳನ್ನು ಕಳಿಸಿಕೊಡುವುದು ಎಷ್ಟು ಸರಿ? ಜನಜಂಗುಳಿ, ಸದ್ದುಗದ್ದಲದ ನಡುವೆ ಟನ್ ಗಟ್ಟಲೆ ಭಾರ ಹೊತ್ತು ಕಿಮೀ ಗಟ್ಟಲೆ ಸಂಚರಿಸುವುದು ಆನೆಗಳಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆಯಲ್ಲವೆ? ವನ್ಯಜೀವಿ ಕಾಯ್ದೆಯ ಯಾವ ನಿಯಮದಡಿ ಇಂತಹ ಹಿಂಸೆಗೆ ಅವಕಾಶವಿದೆ? ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.
ಅಲ್ಲದೆ, ಇಂದಿನ ತಂತ್ರಜ್ಞಾನದಲ್ಲಿ ರೊಬೋಟಿಕ್ ಆನೆಗಳು ಈಗಾಗಲೇ ನೆರೆಯ ಕೇರಳ ಮತ್ತು ರಾಜ್ಯದ ಕೆಲವು ದೇವಾಲಯಗಳಲ್ಲಿ ಬಳಕೆಗೆ ಬಂದಿದ್ದು, ಜಂಬೂ ಸವಾರಿಗೂ ಅದನ್ನು ಬಳಸುವ ಪರ್ಯಾಯ ಆಯ್ಕೆಗಳಿರುವಾಗ ವನ್ಯಜೀವಿಗಳನ್ನು ಏಕೆ ಬಳಸಬೇಕು? ಅದರಲ್ಲೂ ರಾಜಕಾರಣಿಗಳ ಪ್ರತಿಷ್ಠೆಗಾಗಿ, ರಾಜಕೀಯ ಲಾಭದ ವರ್ಚಸ್ಸು ವೃದ್ಧಿಯ ಪಿಆರ್ ಸ್ಟಂಟಿನ ಭಾಗವಾಗಿ ಜಂಬೂ ಸವಾರಿ ನಡೆಸುವುದು ಎಷ್ಟು ಸಮಂಜಸ ಎಂಬುದು ಕೂಡ ವನ್ಯಜೀವಿ ಪ್ರೇಮಿಗಳ ಪ್ರಶ್ನೆಯಾಗಿದೆ. ಸಂಪ್ರದಾಯ ಮತ್ತು ಧಾರ್ಮಿಕ ಭಾವನೆಗಳು ಒಂದುಕಡೆಯಾದರೆ, ವನ್ಯಜೀವಿಗಳ ಸಂರಕ್ಷಣೆ ಮತ್ತು ಆ ಕುರಿತ ಕಾನೂನುಗಳು ಮತ್ತೊಂದು ಕಡೆ. ಜೊತೆಗೆ ಅವೆಲ್ಲವನ್ನೂ ಮೀರಿದ ನೈತಿಕ ಪ್ರಜ್ಞೆಯ ಭಾಗವಾಗಿಯೂ ಈ ಸಮಸ್ಯೆಯನ್ನು ನೋಡಬೇಕಿದೆ. ಪ್ರಾಣಿಗಳನ್ನು ದಂಡಿಸಿ, ಹಿಂಸಿಸಿ ಯಾವ ದೇವರನ್ನು ಸಂತುಷ್ಟಗೊಳಿಸಲು ಸಾಧ್ಯ? ಯಾವ ಧಾರ್ಮಿಕ ಭಾವನೆಗಳು ಇಂತಹ ಹಿಂಸೆ, ದಂಡನೆಯನ್ನು ಸರಿ ಎನ್ನಲು ಸಾಧ್ಯ? ಎಂಬ ಆಳ ಪ್ರಶ್ನೆಗಳು ಇವೆ. ಆ ಹಿನ್ನೆಲೆಯಲ್ಲಿ ಸರ್ಕಾರ ಈ ನೆಲದ ಕಾನೂನುಗಳನ್ನು ಎತ್ತಿಹಿಡಿಯುವ ದಿಟ್ಟ ನಿರ್ಧಾರವನ್ನು ಕೈಗೊಳ್ಳುವ ಸಮಯ ಬಂದಿದೆ.
” ಒಟ್ಟಾರೆ ಆನೆಗಳ ಆರೋಗ್ಯ ಸ್ಥಿತಿ, ಅವುಗಳ ಆರೈಕೆ, ತರಬೇತಿ ಮತ್ತು ಮುನ್ನೆಚ್ಚರಿಕೆಯ ವಿಷಯದಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗ ಪದೇಪದೇ ಎಡವುತ್ತಿರುವುದಕ್ಕೂ ಶಿವಮೊಗ್ಗ ಜಂಬೂ ಸವಾರಿ ಮತ್ತೆ ಮತ್ತೆ ಸಾಕ್ಷಿಯಾಗುತ್ತಲೇ ಇದೆ.”




