ಕೆ.ಬಿ.ರಮೇಶನಾಯಕ
ಅರಮನೆ, ವಸ್ತುಪ್ರದರ್ಶನ, ಮೃಗಾಲಯ, ದೀಪಾಲಂಕಾರ ಕಣ್ತುಂಬಿಕೊಂಡ ಪ್ರವಾಸಿಗರು
ಮೈಸೂರು: ದಸರಾ ಮಹೋತ್ಸವ ಮುಗಿದರೂ ಅರಮನೆ ಸೇರಿದಂತೆ ಸುತ್ತಮುತ್ತಲ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಸಹಸ್ರಾರು ಪ್ರವಾಸಿಗರು ಮೈಸೂರಿಗೆ ದಾಂಗುಡಿ ಇಟ್ಟಿದ್ದಾರೆ. ವಾರದ ಮಟ್ಟಿಗೆ ರಜೆ ಹಾಕಿಕೊಂಡು ಸಹಸ್ರಾರು ಸಂಖ್ಯೆಯಲ್ಲಿ ಹರಿದು ಬರುತ್ತಿರುವುದರಿಂದ ಎಲ್ಲಿ ನೋಡಿದರೂ ಜನಜಂಗುಳಿ ಕಂಡುಬರುತ್ತಿದೆ.
ಮೃಗಾಲಯದಲ್ಲಿ ನೂಕುನುಗ್ಗಲು: ದಸರಾ ಮುಗಿದ ಬಳಿಕ ಮೂರು ದಿನಗಳು ಸಾಲು ಸಾಲು ರಜೆಗಳು ಇರುವುದರಿಂದ ಪ್ರವಾಸಿಗರ ದಂಡೇ ಮೈಸೂರಿಗೆ ಲಗ್ಗೆ ಇಟ್ಟಿದೆ. ಅರಮನೆಗಿಂತ ಚಾಮರಾಜೇಂದ್ರ ಮೃಗಾಲಯದಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಜಮಾಯಿಸಿದ್ದಾರೆ. ಕೌಂಟರ್ ಬಳಿ ಟಿಕೆಟ್ ಪಡೆಯಲು ಸಾವಿರಾರು ಜನರು ಸಾಲುಗಟ್ಟಿದ್ದರಿಂದ ನೂಕುನುಗ್ಗಲು ಉಂಟಾಗಿದೆ.
ಕುಪ್ಪಣ್ಣ ಪಾರ್ಕ್ ರಸ್ತೆ, ಪುರಭವನ, ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಆವರಣ, ಇಟ್ಟಿಗೆಗೂಡು, ಎಂ.ಜಿ.ರಸ್ತೆ, ಲಲಿತಮಹಲ್ ರಸ್ತೆ ಮೊದಲಾದ ಕಡೆ ವಾಹನಗಳನ್ನು ನಿಲ್ಲಿಸಿ ಬರುತ್ತಿದ್ದ ಜನರು ತಂಡೋಪತಂಡವಾಗಿ ಟಿಕೆಟ್ ಪಡೆದು ಮೃಗಾಲಯದಲ್ಲಿನ ಪ್ರಾಣಿ ಪಕ್ಷಿಗಳನ್ನು ವೀಕ್ಷಿಸಿದರು.
ಚಾಮುಂಡಿಬೆಟ್ಟದಲ್ಲೂ ಫುಲ್ ರಷ್: ನಾಡಿನ ಅಧಿದೇವತೆ ಚಾಮುಂಡಿಬೆಟ್ಟದ ದೇವಸ್ಥಾನದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿ ದರ್ಶನ ಪಡೆಯಲು ಜನ ಸಾಲುಗಟ್ಟಿ ನಿಂತಿದ್ದರು. ಸಾಲು ಸಾಲು ವಾಹನಗಳಿಂದ ಚಾಮುಂಡಿಬೆಟ್ಟದ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡು ಪರ ದಾಡುವಂತಾಯಿತು. ಸಂಚಾರ ನಿರ್ವಹಣೆಗೆ ಪೊಲೀಸರು ಹರಸಾಹಸಪಟ್ಟರು.
ವಸ್ತು ಪ್ರದರ್ಶನಕ್ಕೆ ಲಗ್ಗೆ: ಚಾಮುಂಡಿಬೆಟ್ಟ, ಅರಮನೆ, ಮೃಗಾಲಯ ವೀಕ್ಷಿಸಿದ ಜನರು ಸಂಜೆಯಾಗುತ್ತಲೇ ದಸರಾ ವಸ್ತು ಪ್ರದರ್ಶನಕ್ಕೆ ಲಗ್ಗೆ ಇಟ್ಟಿದ್ದರು. ಬೆಳಿಗ್ಗೆಯಿಂದ ಸಂಜೆವರೆಗೆ ಸಾಧಾರಣವಾಗಿಪ್ರವೇಶ ಮಾಡಿದರೂ ೫ ಗಂಟೆಯ ನಂತರ ದುಪ್ಪಟ್ಟು ಪ್ರವಾಸಿಗರು ವಸ್ತುಪ್ರದರ್ಶನವನ್ನು ವೀಕ್ಷಿಸಿದರು. ಬೃಂದಾವನಕ್ಕೂ ಭೇಟಿ: ಮೈಸೂರು ನಗರದ ಪ್ರವಾಸಿ ತಾಣಗಳನ್ನು ವೀಕ್ಷಿಸಿದ ಜನರು, ರಾತ್ರಿ ಕೆಆರ್‌ಎಸ್‌ಗೆ ಭೇಟಿ ನೀಡಿ ಕಾರಂಜಿ ವೀಕ್ಷಿಸಿ ಖುಷಿಪಟ್ಟರು.
ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್: ಅರಮನೆ ಸುತ್ತಮುತ್ತಲ ಮಾರ್ಗಗಳಲ್ಲಿ ನೂರಾರು ವಾಹನಗಳು ಸಂಚರಿಸುತ್ತಿದ್ದರಿಂದ ಆಗಿಂದಾಗ್ಗೆ ಸಂಚಾರ ಅಸ್ತವ್ಯಸ್ತವಾಗಿ ಸಾರ್ವಜನಿಕರು ಪರದಾಡುವಂತಾಯಿತು. ಕೆ.ಆರ್.ವೃತ್ತ, ಹಾರ್ಡಿಂಜ್ ವೃತ್ತ, ವಸ್ತು ಪ್ರದರ್ಶನದ ಬಳಿ ಸಾಲು ಸಾಲು ವಾಹನಗಳು ಬರುತ್ತಿದ್ದರಿಂದ ಜಾಮ್ ಆಗುತ್ತಿತ್ತು.




