Mysore
22
overcast clouds

Social Media

ಭಾನುವಾರ, 25 ಅಕ್ಟೋಬರ್ 2026
Light
Dark

ಷಡ್ಯಂತ್ರ

ಎಸ್.ದಿವಾಕರ್

ಕನ್ನಡದ ಮಹತ್ವದ ಕಥೆಗಾರ ಎಸ್.ದಿವಾಕರ್ ಅವರ ನೂತನ ಸಂಕಲನ “ಸಂಕ್ಷಿಪ್ತ ಕನ್ನಡ ನಿಘಂಟು ಮತ್ತು ಇತರ ಕಥೆಗಳು” ಬಿಡುಗಡೆಗೆ ಸಿದ್ಧವಾಗಿದೆ. ಈ ಸಂಕಲನದಲ್ಲಿರುವ ತೀರಾ ಪ್ರಸ್ತುತ ಕತೆಯೊಂದು ನಿಮ್ಮ ಭಾನುವಾರದ ಓದಿಗೆ ಇಲ್ಲಿದೆ.

 “ಅಪ್ಪಾ, ಇದರ ಅರ್ಥ ಹೇಳ್ತೀಯಾ?”

“ಯಾವುದೋ ಅದು?”

“ಷಡ್ಯಂತ್ರ.”

“ತುಂಬಾ ಸುಲಭ. ಪದವಿಭಾಗ ಮಾಡು.”

“ಹೇಗೆ?”

“ಷಟ್ ಯಂತ್ರ = ಷಡ್ಯಂತ್ರ”

“ಷಟ್ ಷಡ್ ಹೇಗಾಗುತ್ತೆ?”

“ಅದು ಸಂಸ್ಕೃತ ಶಬ್ದ”

“ಸಂಸ್ಕೃತ ಶಬ್ದವಾದರೆ ಕನ್ನಡದವರು ಯಾಕೆ ಉಪಯೋಗಿಸಬೇಕು?”

“ಈಗ ಯಾರು ಉಪಯೋಗಿಸಿದರು?”

“ಮೊನ್ನೆ ನಮ್ಮ ಗೃಹಮಂತ್ರಿಗಳೇ ಹೇಳಿದ್ರಲ್ಲ, ತಮ್ಮ ವಿರುದ್ಧ ಯಾರೋ ಷಡ್ಯಂತ್ರ

ಇಟ್ಟಿದ್ದಾರೆ ಅಂತ?”

“ಅವರು ಏನೋ ಸಂಕಷ್ಟದಲ್ಲಿ ಸಿಕ್ಕಿಕೊಂಡಿರಬೇಕು”

“ಷಡ್ಯಂತ್ರ ಅಂದರೆ ಸಂಕಷ್ಟ ಅಂತ ಅರ್ಥವಾ?”

“ಅಲ್ಲ, ಷಡ್ಯಂತ್ರ ಯಾರ ಮೇಲೆ ಪ್ರಯೋಗವಾಗುತ್ತೋ ಅವರು ಸಂಕಷ್ಟಕ್ಕೆ

ಸಿಕ್ಕಿಕೊಳ್ತಾರೆ.”

“ಯಾರು ಪ್ರಯೋಗಿಸುವವರು?”

“ಯಾರೋ ಅವರಿಗೆ ಆಗದವರು”

“ಆ ಆಗದವರ ಹತ್ತಿರ ಷಡ್ಯಂತ್ರ ಇರುತ್ತಾ?”

“ಅವರಲ್ಲೇ ಯಾಕೆ, ಎಲ್ಲರ ಹತ್ತಿರವೂ ಇರುತ್ತೆ”

“ಹಾಗಾದರೆ ನಿನ್ನ ಹತ್ತಿರ ಇದೆಯಾ?”

“ಇರಬಹುದು.”

“ನನ್ನ ಹತ್ತಿರ?”

“ಶುದ್ಧ ತರಲೆ. ಪಾಠ ಓದಿಕೋ ಹೋಗು”

“ಅಲ್ಲಪ್ಪಾ, ನೀನು ಷಡ್ಯಂತ್ರ ಅಂದರೆ ಏನು ಅಂತ ಹೇಳ್ಲೇ ಇಲ್ವಲ್ಲಾ?”

“ಆಗಲೇ ಹೇಳಿದೆನಲ್ಲೋ, ಷಟ್ ಯಂತ್ರ = ಷಡ್ಯಂತ್ರ ಅಂತ”

“ನೀನು ಬರೀ ಪದವಿಭಾಗ ಮಾಡಿದೆ ಅಷ್ಟೆ. ಅರ್ಥ ಹೇಳ್ಲಿಲ್ಲ”

“ಷಟ್ ಅಂದರೆ ಆರು. ಷಡ್ಯಂತ್ರ ಅಂದರೆ ಆರು ಯಂತ್ರಗಳು.”

“ಆರು ಯಂತ್ರಗಳಾ? ಆ ಯಂತ್ರಗಳನ್ನು ಇಟ್ಟುಕೊಳ್ಳೋಕೆ ಒಂದು ಜಾಗ

ಬೇಡವಾ? ನೀನು ಎಲ್ಲಿ ಇಟ್ಟುಕೊಂಡಿದ್ದೀ?”

“ಇಟ್ಟುಕೊಳ್ಳೋಕೆ ಅವೇನೂ ವಸ್ತುಗಳಲ್ಲ”

“ಹಾಗಂದರೆ?”

“ವಸ್ತುಗಳಾದರೆ ಜಾಗ ಬೇಕು. ಷಡ್ಯಂತ್ರ ಈ ಟೇಬಲಿನ ಹಾಗೆ, ಆ ಗಡಿಯಾರದ

ಹಾಗೆ ಒಂದು ವಸ್ತು ಅಲ್ಲ”

“ವಸ್ತು ಅಲ್ಲವಾ? ಒಂದಲ್ಲ ಎರಡಲ್ಲ ಆರು ಯಂತ್ರಗಳು ಅಂದೆ?”

“ಆರು ಯಂತ್ರಗಳು ಅಂದರೆ ಆರು ಭಾವನೆಗಳು ಅಂತ ಇಟ್ಟುಕೋ”

“ಭಾವನೆಗಳು ಯಂತ್ರಗಳು ಹೇಗಾಗುತ್ತವೆ?”

“ಸಂಸ್ಕೃತದಲ್ಲಿ ಅವಕ್ಕೆ ಹಾಗಂದಿದ್ದಾರೆ. ಇದೆಲ್ಲ ನಿಂಗೆ ಅರ್ಥ ಆಗೋಲ್ಲ ಬಿಡು”

“ನೀನು ಬಿಡಿಸಿ ಹೇಳಿದರೆ ತಾನೆ ನಂಗೆ ಅರ್ಥ ಆಗೋದು?”

“ಭಾವನೆಗಳು ಅಂದರೆ ಏನು? ಈಗ ಸಂತೋಷ ಒಂದು ಭಾವನೆ ಹೌದೋ

ಅಲ್ಲವೋ?”

“ಹೌದು”

“ಸಂತೋಷ ಅನ್ನೋ ಭಾವನೇನ ಒಂದು ಯಂತ್ರ ಅಂದುಕೋ”

“ಆಯಿತು. ಷಡ್ಯಂತ್ರದಲ್ಲಿ ಆರು ಯಂತ್ರಗಳಿವೆಯಲ್ಲ? ಅವುಗಳಲ್ಲಿ

ಒಂದೊಂದು ಯಂತ್ರಕ್ಕೂ ಒಂದೊಂದು ಭಾವನೆ ಇರಬೇಕಲ್ಲ?”

“ಇದೆ, ಖಂಡಿತವಾಗಿಯೂ ಇದೆ. ಹೆಸರು ಹೇಳಬೇಕಾ?”

“ಹೇಳು”

“ಹೇಳ್ತೀನಿ ಬರಕೊ. ಷಡ್ಯಂತ್ರದ ಆರು ಯಂತ್ರಗಳೆಂದರೆ ಒಂದು ವಶ್ಯ, ಎರಡು

ಸ್ತಂಭ, ಮೂರು ವಿರೋಧ, ನಾಲ್ಕು ನಿಗ್ರಹ, ಐದು ಉಚ್ಚಾಟನ, ಆರು ಮೋಕ್ಷ.”

“ನಂಗೆ ಸಂತೋಷ ಅರ್ಥವಾಗೋ ತರ ಈ ಯಾವ ಯಂತ್ರಾನೂ ಅರ್ಥ

ಆಗೋಲ್ಲಪ್ಪ”

“ಅರ್ಥ ಆಗೋ ಹಾಗೆ ಹೇಳ್ತೀನಿ. ಅದನ್ನೂ ಬರಕೊ. ವಶ್ಯ ಅಂದರೆ ಆಕರ್ಷಣೆ. ಒಬ್ಬ ಮನುಷ್ಯ ತಾನು ದ್ವೇಷಿಸುವವನನ್ನು ಬಲಿಹಾಕಬೇಕಾದರೆ ಮೊದಲು ಅವನನ್ನು ವಶಪಡಿಸಿಕೊಳ್ಳಬೇಕು ಅಥವಾ ತನ್ನ ಕಡೆ ತಿರುಗಿಸಿಕೊಳ್ಳಬೇಕು ಅಂತ ಇದರ ತಾತ್ಪರ್ಯ. ಸ್ತಂಭ ಅಂದರೆ ನಿಲ್ಲಿಸುವುದು ಅಂತ. ಶತ್ರುವನ್ನು ಕಟ್ಟಿಹಾಕುವುದು ಅಂತ ತಾತ್ಪರ್ಯ. ವಿರೋಧ ಅಂದರೆ ನಿಂಗೆ ಗೊತ್ತೇ ಇದೆ ತಾನೆ? ಇನ್ನು ನಿಗ್ರಹ ಅಂದರೆ ಹತೋಟಿಯಲ್ಲೋ, ನಿಯಂತ್ರಣದಲ್ಲೋ ಇಟ್ಟುಕೊಳ್ಳುವುದು. ಹತೋಟಿ ಅಥವಾ ನಿಯಂತ್ರಣ ಎಂದರೆ ಶತ್ರು ತಾನು ಹಾಕಿದ ಗೆರೆಯನ್ನು ದಾಟದಂತೆ ಮಾಡುವುದು. ಅಥವಾ ತಾನು ಹೇಳಿದಂತೆ ಕೇಳುವ ಹಾಗೆ ಮಾಡುವುದು. ಉಚ್ಚಾಟನ ಅಂದರೆ ಶತ್ರು ಹತ್ತಿರ ಸುಳಿಯದಂತೆ ಮಾಡುವುದು. ಅಂದರೆ ಅವನ ಭೂತ ಬಿಡಿಸುವುದು ಅಂತ. ಕೊನೆಯದಾಗಿ ಮೋಕ್ಷ ಅಂದರೆ ನಿರ್ಭಯವಾಗಿರುವುದು ಅಥವಾ ಶಾಂತಿಯಿಂದಿರುವುದು. ಒಟ್ಟಿನಲ್ಲಿ ಷಡ್ಯಂತ್ರ ಅಂದರೆ ಆರು ರೀತಿಗಳಲ್ಲಿ ಅಥವಾ ಆರು ದಿಕ್ಕುಗಳಲ್ಲಿ ಶತ್ರುವನ್ನು ಬಂಧಿಸುವ, ಅವನನ್ನು ನಿಷ್ಕ್ರಿಯಗೊಳಿಸುವ ವಿದ್ಯೆ.”

“ಇದೊಂದು ವಿದ್ಯೆಯಾದರೆ ನಮಗ್ಯಾಕಪ್ಪ ಸ್ಕೂಲಲ್ಲಿ ಹೇಳಿಕೊಡುವುದಿಲ್ಲ?”

“ಸ್ಕೂಲಲ್ಲಿ ಹೇಳಿಕೊಡುವುದು ಒಳ್ಳೆಯ ವಿದ್ಯೆ, ಕೆಟ್ಟ ವಿದ್ಯೆಯನ್ನಲ್ಲ.”

“ಷಡ್ಯಂತ್ರ ಕೆಟ್ಟ ವಿದ್ಯೆಯಾ?”

“ಕೆಟ್ಟ ವಿದ್ಯೇನೇ. ಅದಕ್ಕೆ ಸಂಚು, ಪಿತೂರಿ, ಮೋಸ ಅಂತಾನೂ ಹೇಳ್ತಾರೆ”

“ಹಾಗಾದರೆ ನಮ್ಮ ಗೃಹಮಂತ್ರಿ ಯವರಿಗೆ ಆಗದವರು ಯಾರು?”

“ವಿರೋಧ ಪಕ್ಷದವರು ಯಾರೋ ಇರಬೇಕು.”

“ಅಂಥವರು ಆ ಕೆಟ್ಟ ವಿದ್ಯೆಯನ್ನು ಎಲ್ಲಿ ಕಲಿತರು?”

“ಎಲ್ಲೋ ಕಲಿತಿರ್ತಾರೆ ಬಿಡು. ಅದೆಲ್ಲಾ ಯಾಕೆ ನಿಂಗೆ?”

“ಅಲ್ಲಪ್ಪಾ, ರಾಜಕೀಯ ಪಕ್ಷ ಗಳಲ್ಲಿರೋ ಜನ ಕೂಡ ಸ್ಕೂಲುಗಳಿಗೇ

ಹೋದವರಲ್ಲವಾ? ಅವರು ಆ ಸ್ಕೂಲುಗಳಲ್ಲಿ ಕಲಿಯಲಾಗದ್ದನ್ನು ಬೇರೆ ಎಲ್ಲಿ

ಕಲಿತರು ಅಂತ”

“ರಾಜಕೀಯ ಪಕ್ಷಗಳಲ್ಲಿರೋ ಎಲ್ಲರಿಗೂ ಕೆಟ್ಟ ವಿದ್ಯೆ ಬರೋಲ್ಲ”

“ಯಾಕೆ?”

“ಯಾಕಂದ್ರೆ ಕೆಲವರು ಮಾತ್ರ ಆ ವಿದ್ಯೆ ಕಲೀತಾರೆ”

“ಹ್ಯಾಗೆ ಕಲೀತಾರೆ?”

“ಹ್ಯಾಗೋ ನನಗೂ ಸರಿಯಾಗಿ ಗೊತ್ತಿಲ್ಲ. ಬಹುಶಃ ರಾಜಕೀಯದಲ್ಲೇ

ಕಲೀತಾರೆ ಅಂತಿಟ್ಕೊ.”

“ಹಾಗಾದರೆ ರಾಜಕೀಯದಲ್ಲಿ ಕೆಲವರಿಗಷ್ಟೇ ಕೆಟ್ಟ ವಿದ್ಯೆ ಕಲಿಸುವಂಥ ವ್ಯವಸ್ಥೆ

ಇದೆಯಾ?”

“ಇಲ್ಲ ಇಲ್ಲ, ಕೆಲವರು ಮಾತ್ರ ಹೇಗೋ ಕಲೀತಾರೆ”

“ಹೋಗಲಿ, ಯಾಕೆ ಕಲೀತಾರೆ ಅಂತಾದ್ರೂ ಹೇಳು?”

“ಯಾಕೆ ಅಂದರೆ? ತಮ್ಮ ವಿರೋಧಿಗಳನ್ನು ಮಟ್ಟ ಹಾಕೋಕೆ”

“ಯಾರೋ ನಮ್ಮ ಗೃಹಮಂತ್ರಿಗಳಿಗೆ ಆಗದವರು ಅಂದ್ಯಲ್ಲ, ಅವರಿಗೆ

ಷಡ್ಯಂತ್ರ ಉಪಯೋಗಿಸೋ ವಿದ್ಯೆ ಗೊತ್ತಿದೆಯಾ?”

“ಗೊತ್ತಿರಬೇಕು”

“ಈಗ ನಮ್ಮ ಗೃಹಮಂತ್ರಿಗಳು ಏನು ಮಾಡ್ತಾರೆ?”

“ಷಡ್ಯಂತ್ರದ ಕೆಟ್ಟ ಪ್ರಭಾವಾನ ನಿವಾರಿಸೋಕೆ ಏನಾದರೂ

ಮಾಡಬಹುದು”

“ಏನಾದರೂ ಅಂದರೆ?”

“ಷಡ್ಯಂತ್ರ ಪ್ರಯೋಗಿಸಿದವರ ವಿರುದ್ಧ ಅವರ ಪಕ್ಷದವರನ್ನೇ ಎತ್ತಿಕಟ್ಟೋದು,

ಅವರಿಗೆ ಅಪಾರ ಹಣ ಕೊಟ್ಟು ತಮ್ಮ ಬುಟ್ಟಿಗೆ ಹಾಕಿಕೊಳ್ಳೋದು, ಪಿತೂರಿ

ಮಾಡೋದು, ದೇವಸ್ಥಾನಗಳನ್ನು ಸುತ್ತೋದು, ಹೋಮಗೀಮ ಮಾಡಿಸೋದು,

ಸದಾ ಮಂತ್ರಿಸಿದ ನಿಂಬೆಹಣ್ಣನ್ನೇ ಕಿಸೆಯಲ್ಲಿಟ್ಟುಕೊಂಡಿರೋದು…. ಇನ್ನೂ

ಏನೋನೋ….”

“ಹೀಗೆಲ್ಲ ಮಾಡಿ ಅಂತ ಅವರಿಗೆ ಯಾರು ಹೇಳಿಕೊಡ್ತಾರೆ?”

“ಅದಕ್ಕೆ ಪುರೋಹಿತರು, ಜ್ಯೋತಿಷಿಗಳು ಅಂತ ಇರ್ತಾರೆ”

“ಅದೇ ಅಜ್ಜನ ಬೊಜ್ಜ ಮಾಡಿಸೋಕೆ ಬರ್ತಾರಲ್ಲ, ಅವರಾ?”

“ಅಲ್ಲ ಅಲ್ಲ, ಅದಕ್ಕೇಂತ ಬೇರೆಯವರೇ ಇರ್ತಾರೆ”

“ಎಲ್ಲಿ ಇರ್ತಾರೆ?”

“ಎಲ್ಲೆಲ್ಲೋ ಇರ್ತಾರೆ. ಅವರನ್ನು ನೋಡೋಕೆ, ಅವರ ಸಲಹೆ ಕೇಳೋಕೆ

ತುಂಬಾ ದುಡ್ಡು ಖರ್ಚಾಗುತ್ತೆ.”

“ತುಂಬಾ ಅಂದರೆ ಎಷ್ಟು?”

“ತುಂಬಾ ಅಂದರೆ ತುಂಬಾ. ಅಷ್ಟನ್ನ ನಮ್ಮಂಥೋರು ಕೊಡೋಕಾಗೋಲ್ಲ.

ರಾಜಕೀಯದಲ್ಲಿರೋರು ಮಾತ್ರ ಕೊಡೋಕಾಗುತ್ತೆ ”

“ರಾಜಕೀಯದಲ್ಲಿರೋರ ಹತ್ರ ಅಷ್ಟು ದುಡ್ಡು ಎಲ್ಲಿರುತ್ತೆ?”

“ಅವರು ರಾಜಕೀಯದಲ್ಲಿ ಇರ್ತಾರಲ್ಲ. ಎಷ್ಟು ಬೇಕಾದ್ರೂ ದುಡ್ಡಿರುತ್ತೆ.”

“ನಮ್ಮ ಗೃಹಮಂತ್ರಿಗಳ ಹತ್ರಾನೂ ಅಷ್ಟು ದುಡ್ಡಿರುತ್ತಾ?”

“ಇರದೇ ಏನು?”

“ಹಾಗಾದ್ರೆ ಅವರಿವಾಗ ಯಾರೋ ಜ್ಯೋತಿಷೀಗೆ ದುಡ್ಡು ಕೊಟ್ಟು ಅವರು

ಹೇಳಿದ ಹಾಗೆ ಮಾಡ್ತಿದ್ದಾರಾ?”

“ಮಾಡ್ತಿರಬಹುದು. ನಂಗೆ ಗೊತ್ತಿಲ್ಲ”

“ಗೃಹಮಂತ್ರಿಗಳ ವಿರೋಽಗಳಿಗೆ ಜ್ಯೋತಿಷಿಗಳು ಗೊತ್ತಿರಲ್ವಾ?”

“ಗೊತ್ತಿರದೇ ಏನು, ಅವರಿಗೂ ಗೊತ್ತಿರ್ತಾರೆ”

“ಗೊತ್ತಿದ್ದ ಮೇಲೆ ಅವರು ಯಾಕೆ ಗೃಹಮಂತ್ರಿಗಳ ವಿರುದ್ಧ ಏನು ಮಾಡಬೇಕು

ಅಂತ ಜ್ಯೋತಿಷಿಗಳನ್ನ ಕೇಳಬಾರದು?”

“ಅದರ ಅಗತ್ಯ ಇರೋದಿಲ್ಲ. ಯಾಕೆಂದರೆ ಅವರು ಆಳುವ ಪಕ್ಷದವರಲ್ಲ.”

“ಅಂದರೆ ವಿರೋಧ ಪಕ್ಷದವರಿಗೆ ಜ್ಯೋತಿಷಿಗಳು ಬೇಡ, ಷಡ್ಯಂತ್ರ ಮಾತ್ರ

ಸಾಕು ಅಂತಾನಾ?”

“ಹೌದು. ಯಾಕೆಂದರೆ ಸಾಮಾನ್ಯವಾಗಿ ವಿರೋಧ ಪಕ್ಷಗಳವರ ಮೇಲೆ ಭ್ರಷ್ಟಾಚಾರ,

ಸ್ವಜನಪಕ್ಷಪಾತ, ಧಾರ್ಮಿಕ ಅಸಹಿಷ್ಣುತೆ, ದೇಶದ್ರೋಹ ಮುಂತಾದ

ಆರೋಪಗಳಿರೋಲ್ಲ”

“ಯಾಕಿರಲ್ಲ?”

“ಯಾಕಿರಲ್ಲ ಅಂದರೆ ಅವರು ಆಳುವ ಪಕ್ಷದವರಲ್ಲ”

“ಅವರು ಆಳುವ ಪಕ್ಷದವರಾಗುವುದು ಯಾವಾಗ?”

“ಅದಕ್ಕೆ ಚುನಾವಣೆ ನಡೆಯಬೇಕು. ನಮ್ಮಲ್ಲಿ ಚುನಾವಣೆ ನಡೆಯೋದು

ಐದು ವರ್ಷಗಳಿಗೆ ಒಂದು ಸಲ. ಈಗ ನಮ್ಮನ್ನು ಆಳುತ್ತಿರುವವರು ಅಽಕಾರಕ್ಕೆ

ಬಂದು ಮೂರೂವರೆ ವರ್ಷಗಳು ಮಾತ್ರ ಆಗಿದೆ.”

“ಹಾಗಾದರೆ ಇನ್ನೂ ಒಂದೂವರೆ ವರ್ಷ ಇದೇ ಸರ್ಕಾರ ಇರುತ್ತೆ ಅನ್ನು?”

“ಹೇಳೋಕಾಗೋಲ್ಲ. ಆಳುವ ಪಕ್ಷದ ಒಂದಷ್ಟು ಶಾಸಕರು ವಿರೋಧ ಪಕ್ಷಕ್ಕೆ

ಹಾರಿದರೆ ಚುನಾವಣೆಗೆ ಮುಂಚೆಯೇ ಈ ಸರ್ಕಾರ ಬೀಳಬಹುದು.

ಆಗ ವಿರೋಧ ಪಕ್ಷಕ್ಕೆ ಬಹುಮತ ಸಿಕ್ಕಿದರೆ ಅದು ಚುನಾವಣೆ

ಇಲ್ಲದೆಯೇ ಸರ್ಕಾರ ರಚಿಸಬಹುದು. ನಿಂಗೊತ್ತಾ,

ಮೂರೂವರೆ ವರ್ಷದ ಹಿಂದೆ ಈಗ ವಿರೋಧ

ಪಕ್ಷದಲ್ಲಿರುವವರೇ ಅಽಕಾರದಲ್ಲಿದ್ದದ್ದು. ಅವರಲ್ಲಿ ಸಾಕಷ್ಟು

ಶಾಸಕರು ಈಗ ಆಳುತ್ತಿರುವ ಪಕ್ಷಕ್ಕೆ ಹಾರಿದ್ದರಿಂದಲೇ ಈಗಿನ

ಸರ್ಕಾರ ಬಂತು.”

“ಅಪ್ಪಾ, ಹೀಗೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರುವವರ

ವಿರುದ್ಧ ಜ್ಯೋತಿಷಿಗಳೇನೂ ಮಾಡೋಕಾಗೋಲ್ವಾ?”

“ಅಷ್ಟು ಸುಲಭವಲ್ಲ. ಸುಲಭವಾಗಿದ್ದಿದ್ರೆ ಪಕ್ಷಾಂತರವೇ ಇರ್ತಿರ್ಲಿಲ್ಲ”

“ಷಡ್ಯಂತ್ರಕ್ಕೂ ಸಾಧ್ಯವಿಲ್ಲವಾ?”

“ಸಾಕು ಸಾಕು ಹುಚ್ಚು ಮುಂಡೇದೆ. ಬಾಯಿ ಮುಚ್ಚಿಕೊಂಡು ಏನಾದರೂ

ಓದಿಕೋ ಹೋಗು.”

Tags:
error: Content is protected !!