ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ
ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ
ರೇಣುಕಾಸ್ವಾಮಿಯ ಡೆಡ್ ಬಾಡಿ ಬಿಸಾಕಿ ಬಂದಾಗ ಸರೆಂಡರ್ ಆಗಬೇಕಿದ್ದ ಮೂವರು ವ್ಯಕ್ತಿಗಳು ನಾಪತ್ತೆ
ವಿನಯ್ ಹೋಗಿ ತಮ್ಮ ವಾಹನವನ್ನು ತೆಗೆದುಕೊಂಡು ಬಂದರು. ಅವರ ಪಕ್ಕದ ಸೀಟ್‌ನಲ್ಲಿ ನಾನು ಕುಳಿತುಕೊಂಡೆ. ನನ್ನ ಹಿಂಬದಿಯ ಸೀಟಿನಲ್ಲಿ ಲಕ್ಷ್ಮಣ್, ಅವರ ಪಕ್ಕದಲ್ಲಿ ನಾಗರಾಜ್ ಕುಳಿತುಕೊಂಡಿರು. ನಾನು ಕಾರಿನಲ್ಲಿ ಕುಳಿತಾಗ, ಪಿಎಸ್‌ಐ ವಿನಯ್ ಅವರಿಗೆ ೨-೩ ಬಾರಿ ಫೋನ್ ಮಾಡಿದೆ. ಆಗ ಸಮಯ ಸುಮಾರು ಮಧ್ಯರಾತ್ರಿ ೧ ಗಂಟೆ ಮೇಲಾಗಿತ್ತು. ಆದರೆ ಪಿಎಸ್‌ಐ ವಿನಯ್ ಅವರು ಫೋನ್ ರಿಸೀವ್ ಮಾಡಲಿಲ್ಲ.
ಹೆಣ ಇದ್ದ ಸ್ಕಾರ್ಪಿಯೋ ಕಾರು ಕಣ್ಮರೆ: ನಂತರ ನಮ್ಮ ಕಾರು ಮುಂದಕ್ಕೆ ಹೊರಟಿತು. ಮೃತದೇಹ ಇದ್ದ ಸ್ಕಾರ್ಪಿಯೋ ನಮ್ಮನ್ನು ಹಿಂಬಾಲಿಸಿತು. ಹಾಗೆ ನಮ್ಮ ಕಾರು ಆರ್. ಆರ್.ನಗರ ಆರ್ಚ್ ಹತ್ತಿರ ಬಂದಾಗ, ನಮ್ಮನ್ನು ಹಿಂಬಾಲಿಸುತ್ತಿದ್ದ ಸ್ಕಾರ್ಪಿಯೋ ನಮ್ಮ ಕಾರನ್ನು ಓವರ್ ಟೇಕ್ ಮಾಡಿಕೊಂಡು ವೇಗವಾಗಿ ಮುಂದಕ್ಕೆ ಹೋಯಿತು.
ವಿನಯ್ ಅವರು ನಮ್ಮ ಕಾರನ್ನು ಎಷ್ಟೇ ವೇಗವಾಗಿ ಓಡಿಸಿದರೂ ಮೃತದೇಹ ಇದ್ದ ಸ್ಕಾರ್ಪಿಯೋ ಕಾರು ಮಾಗಡಿ ರಸ್ತೆಯಲ್ಲಿ ಇರುವ ಸತ್ವ ಅಪಾರ್ಟ್‌ಮೆಂಟ್ ತನಕ ಹೋಗುವವರೆಗೂ ನಮಗೆ ಸಿಗಲಿಲ್ಲ.
ಮೃತದೇಹ ಇರುವ ಎಕ್ಸಾಕ್ಟ್ ಲೊಕೇಷನ್ ಕಳಿಸಿ ಎಂದ ಪಿಎಸ್‌ಐ ವಿನಯ್: ಅಷ್ಟುಹೊತ್ತಿಗೆ ಪಿಎಸ್‌ಐ ವಿನಯ್ ಅವರು ನನಗೆ ವಾಪಸ್ ಫೋನ್ ಮಾಡಿದರು. ನಾನು ಫೋನ್ ರಿಸೀವ್ ಮಾಡಿ ಸತ್ವ ಅಪಾರ್ಟ್‌ಮೆಂಟ್ ಹತ್ತಿರ ಇರುವ ತೋಪಿನ ಬಳಿ ಗಲಾಟೆಯಾಗಿದ್ದು, ಮೃತದೇಹ ಅಲ್ಲೇ ಇದೆ ಎಂದು ರಾಘವೇಂದ್ರ ನನಗೆ ತಿಳಿಸಿದ್ದಾರೆ ಎಂದು ಹೇಳಿದೆ. ಆಗ ಅವರು ತಕ್ಷಣ ‘ಯಾವ ಸತ್ವ ಅಪಾರ್ಟ್‌ಮೆಂಟ್ ಹೇಳಿ’ ಎಂದು ಕೇಳಿದರು. ನಾನು ಮಾಗಡಿ ರೋಡ್ ಹತ್ತಿರ ಇರುವ ಸತ್ವ ಅಪಾರ್ಟ್‌ಮೆಂಟ್ ಹತ್ತಿರ ಮೃತದೇಹವನ್ನು ಹಾಕಿರುವುದು ಎಂದು ತಿಳಿಸಿದೆ. ಅವರು ತಕ್ಷಣ ‘ಅದು ನಮ್ಮ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆ’ ಎಂದು ಹೇಳಿ, ರಾಘವೇಂದ್ರ ಅವರ ಮೊಬೈಲ್ ನಂಬರ್ ಕೇಳಿದರು. ಆಗ ನಾನು ಇಲ್ಲ ಸರ್ ಅವನ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದೆ. ಮತ್ತೆ ಪಿಎಸ್‌ಐ ವಿನಯ್‌ಅವರು ಮೃತದೇಹ ಇರುವ ಎಕ್ಸಾಕ್ಟ್ ಲೊಕೇಷನ್ ಕಳುಹಿಸಿಕೊಡಿ ಎಂದು ಕೇಳಿದರು. ಅದಕ್ಕೆ ನಾನು ಅವರ ಬಳಿ ತಿಳಿದುಕೊಂಡು ೧೫ ನಿಮಿಷ ಬಿಟ್ಟು ಮತ್ತೆ ನಿಮಗೆ ಕಾಲ್ ಮಾಡುತ್ತೇನೆ ಎಂದು ಫೋನ್ ಕಾಲ್ ಕಟ್ ಮಾಡಿದೆ.
ಅಲ್ಲಿ ಕಾಣುತ್ತಿರುವ ತೋಪಿನಲ್ಲಿ ಹೆಣ ಬಿಸಾಕಿ ಬನ್ನಿ: ನಾನು ಕಾರಿನಲ್ಲಿ ಕುಳಿತುಕೊಂಡು ಮಾತುಕತೆ ನಡೆಸುತ್ತಿರುವ ಡೆಡ್‌ಬಾಡಿ ಇದ್ದ ಸ್ಕಾರ್ಪಿಯೋ ಕಾರು ನಮ್ಮ ಕಾರಿನ ಪಕ್ಕದಲ್ಲಿ ಎಡ ಭಾಗಕ್ಕೆ ನಾನು ಕುಳಿತಿದ್ದ ಕಡೆ ಬಂದು ನಿಂತುಕೊಂಡಿತು. ಆಗ ನಾನು ಸ್ಕಾರ್ಪಿಯೋ ಕಾರು ಓಡಿಸುತ್ತಿದ್ದ ರವಿಗೆ ಯೂಟರ್ನ್ ಮಾಡಿಕೊಂಡು ಕಾರನ್ನು ರಸ್ತೆಯ ಎಡಬದಿಗೆ ನಿಲ್ಲಿಸಿಕೊ ಎಂದು ಹೇಳಿದೆ. ನಂತರ ವಿನಯ್ ಅವರೂ ಕೂಡ ನಮ್ಮ ಕಾರನ್ನು ಯೂ ಟರ್ನ್ ಮಾಡಿಕೊಂಡು ಹೆಣ ಇದ್ದ ಸ್ಕಾರ್ಪಿಯೋ ಕಾರಿನ ಹಿಂದೆ ಹೋಗಿ ಕಾರನ್ನು ನಿಲ್ಲಿಸಿಕೊಂಡರು.
ರೇಣುಕಾಸ್ವಾಮಿ, ರಾಘವೇಂದ್ರ ಅವರ ಮೊಬೈಲ್ ಮೋರಿ ಪಾಲು: ನಾನು ಕಾರಿನಿಂದ ಇಳಿದು, ಹೆಣ ಇದ್ದ ಸ್ಕಾರ್ಪಿಯೋ ಬಳಿ ಹೋಗಿ, ಗಾಡಿಯಲ್ಲಿ ಮಧ್ಯದಲ್ಲಿ ಕುಳಿತಿದ್ದ ಕಾರ್ತಿಕ್‌ಗೆ, ಮೋರಿ ಹಾಗೂ ಅದರ ಪಕ್ಕದಲ್ಲಿ ಇರುವ ಸರ್ವೀಸ್ ರಸ್ತೆಯನ್ನು ತೋರಿಸಿ, ಆ ರಸ್ತೆಯಲ್ಲಿ ಹೋಗಿ ಮುಂದೆ ಬಲ ತಿರುವು ತೆಗೆದುಕೊಂಡರೆ ಅಲ್ಲೊಂದು ತೋಪಿದೆ. ಅಲ್ಲಿ ಹೆಣವನ್ನು ಬಿಸಾಕಿ ಎಂದು ಹೇಳಿದೆ. ನಂತರ ಸ್ಕಾರ್ಪಿಯೋ ಗಾಡಿಯು ನಾನು ಹೇಳಿ ದಂತೆಯೇ ಸರ್ವೀಸ್ ರಸ್ತೆಯ ಮೂಲಕ ಹೋಗಿ ಬಲತಿರುವು ತೆಗೆದುಕೊಂಡಿತು. ಅದೇ ಸಮಯದಲ್ಲಿ ನನ್ನ ಬಳಿ ಇದ್ದ ರೇಣುಕಾಸ್ವಾಮಿ ಮತ್ತು ರಾಘವೇಂದ್ರ ಅವರ ಎರಡು ಮೊಬೈಲ್‌ಗಳನ್ನು ಮೋರಿಗೆ ಎಸೆದೆ.
ಎರಡು ಕಾರುಗಳು ಬೇರೆ ಬೇರೆ ದಿಕ್ಕಿಗೆ: ಸ್ಕಾರ್ಪಿಯೋ ಕಾರಿನಲ್ಲಿ ಮೃತದೇಹವನ್ನು ತೆಗೆದುಕೊಂಡು ಹೋದವರು, ಸರ್ವೀಸ್ ರಸ್ತೆಯಲ್ಲಿ ಹೋಗಿ ಬಲತಿರುವು ತೆಗೆದುಕೊಂಡರು. ಆದರೆ ತೋಪಿನ ಕಡೆಗೆ ತಿರುವನ್ನು ತೆಗೆದುಕೊಂಡರೂ ತೋಪಿನ ಒಳಗೆ ಹೋಗಲಿಲ್ಲ. ಮೋರಿ ಪಕ್ಕದಲ್ಲಿ ಇರುವ ಸರ್ವೀಸ್ ರಸ್ತೆಯಲ್ಲಿ ಹೋದವರು ಬಲತಿರುವು ತೆಗೆದುಕೊಳ್ಳುವ ಮುನ್ನವೇ ಸರ್ವೀಸ್ ರಸ್ತೆಯ ಪಕ್ಕದಲ್ಲಿ ಇದ್ದ ಸ್ವಲ್ಪ ಜಾಗದಲ್ಲಿ ಹೆಣವನ್ನು ಬಿಸಾಡಿ ನಂತರ ಸ್ಕಾರ್ಪಿಯೋ ಗಾಡಿಯನ್ನು ಬಲತಿರುವು ತೆಗೆದು ಕೊಂಡು ನಾವು ಇರುವ ಜಾಗಕ್ಕೆ ಬಂದರು. ಅವರು ವಾಪಸ್ಸು ಬಂದಾಗ, ಸ್ಕಾರ್ಪಿಯೋ ಕಾರಿನ ಡಿಕ್ಕಿ ಬಾಗಿಲು ತೆರೆದಂತೆಯೇ ಇತ್ತು. ಹೆಣ ಬಿಸಾಕಿ ಡಿಕ್ಕಿ ಡೋರ್ ಅನ್ನೂ ಹಾಕದೆ ಹಾಗೆಯೇ ಗಾಡಿ ಓಡಿಸಿಕೊಂಡು ಬಂದಿದ್ದರು. ಸ್ಕಾರ್ಪಿಯೋ ಕಾರಿನಲ್ಲಿ ಇದ್ದ ರಾಘವೇಂದ್ರ, ಕಾರ್ತಿಕ್ ಮತ್ತು ನಿಖಿಲ್ ನಾಯ್ಕ ಅವರಿಗೆ ಕಾಮಾಕ್ಷಿಪಾಳ್ಯ ಪೊಲೀಸ್ ಸ್ಟೇಷನ್‌ಗೆ ಹೋಗಿ ಸರೆಂಡರ್ ಆಗಿ, ನಾವು ಸ್ಟೇಷನ್‌ನವರಿಗೆ ಹೇಳಿರುತ್ತೇವೆ ಎಂದು ಮೊದಲೇ ತಿಳಿಸಿದ್ದೆವು. ಸ್ಕಾರ್ಪಿಯೋ ಕಾರು ನಮ್ಮ ಹತ್ತಿರ ಬಂದಾಗ, ಆ ಮೂವರು ಆ ಗಾಡಿಯಲ್ಲಿ ಇರಲಿಲ್ಲ, ಹಾಗಾಗಿ ಹೆಣ ಬಿಸಾಕಿದ ನಂತರ ಆ ಮೂವರು ಅಲ್ಲಿಯೇ ಇಳಿದುಕೊಂಡಿದ್ದಾರೆ ಎಂದು ನಾನು ತಿಳಿದುಕೊಂಡೆ.
ಈ ಸಮಯದಲ್ಲಿ ಸ್ಕಾರ್ಪಿಯೋ ಕಾರು ಮುಖ್ಯರಸ್ತೆ ಹತ್ತಿರ ನಿಂತಿದ್ದ ನಮ್ಮ ಕಾರಿನ ಬಳಿ ಬಂದಾಗ, ವಿನಯ್ ಅವರು ‘ನೀನು ಶೆಡ್ ಕಡೆ ಹೊರಟುಬಿಡು’ ಎಂದು ರವಿಗೆ ಹೇಳಿದರು. ನಂತರ ರವಿ ಅವರ ಪಾಡಿಗೆ ಸ್ಕಾರ್ಪಿಯೋ ಕಾರನ್ನು ಚಲಾಯಿಸಿಕೊಂಡು ಮುಂದೆ ಹೋದರು. ನಂತರ ನಮ್ಮ ಕಾರು ಕೂಡ ಮುಂದಕ್ಕೆ ಹೊರಟಿತು.
ಇಷ್ಟುಹೊತ್ತಿನಲ್ಲಿ ಈ ಕಡೆ ಎಲ್ಲಿಗೆ ಹೋಗಿದ್ದಿರಿ?: ನಂತರ ನನ್ನ ಸ್ನೇಹಿತ ಕಾರ್ತಿಕ್‌ಗೆ ಕರೆ ಮಾಡಿ ೫ ನಿಮಿಷದಲ್ಲಿ ಬರುತ್ತೇನೆ ಎಂದು ಹೇಳಿದೆ. ಹಾಗೆ ನಮ್ಮ ಕಾರು ನಾಯಂಡಹಳ್ಳಿ ಹತ್ತಿರ ಹೋದಾಗ, ಕಾರ್ತಿಕ್ ನನ್ನ ವಾಹನವನ್ನು ತೆಗೆದುಕೊಂಡು ಬಂದು ನಾನು ಹೇಳಿದ ಸ್ಥಳದಲ್ಲಿ ನಿಂತಿದ್ದ. ನಾನು ವಿನಯ್ ಕಾರಿನಿಂದ ಇಳಿದು, ನನ್ನ ಕಾರಿನ ಹತ್ತಿರ ಹೋಗಿ, ಡ್ರೈವಿಂಗ್ ಸೀಟಿನಲ್ಲಿ ಕುಳಿತೆ. ಆಗ ನನ್ನ ಸ್ನೇಹಿತ ಇಷ್ಟುಹೊತ್ತಿಗೆ ಈ ಕಡೆಗೆ ಎಲ್ಲಿ ಹೋಗಿದ್ದೀರಿ ಎಂದು ಕೇಳಿದ. ನಾನು ತುಮಕೂರಿಗೆ ಹೋಗಿದ್ದು ವಾಪಸ್ಸು ಬರುತ್ತಿದ್ದೇನೆ ಎಂದೆ (ಆಗ ಸಮಯ ಮಧ್ಯರಾತ್ರಿ ೨ರಿಂದ ೩ ಗಂಟೆಯಾಗಿತ್ತು). ಅದಕ್ಕೆ ನನ್ನ ಸ್ನೇಹಿತ ತುಮಕೂರಿನಿಂದ ಬರುವುದಾದರೆ, ಈ ಕಡೆಯಿಂದ ಏಕೆ ಬಂದಿರಿ ಎಂದು ಮರುಪ್ರಶ್ನೆ ಹಾಕಿದ. ಅದಕ್ಕೆ ನಾನು ಎಲ್ಲ ನಾಳೆ ಹೇಳುತ್ತೇನೆ ಎಂದು ಹೇಳಿ, ಅಲ್ಲಿಂದ ನಮ್ಮ ಮನೆಯ ಕಡೆ ಹೊರಟೆವು.
ಕೃತ್ಯ ಎಸಗಿದ ವ್ಯಕ್ತಿಗಳು ಎಲ್ಲಿದ್ದಾರೆ?: ಪಿಎಸ್‌ಐ ವಿನಯ್ ಪ್ರಶ್ನೆ: ನಾವು ಪಿಇಎಸ್ ಇಂಜಿನಿಯರಿಂಗ್ ಕಾಲೇಜ್ ಕಡೆ ಹೋಗುತ್ತಿದ್ದಾಗ ಪಿಎಸ್‌ಐ ವಿನಯ್ ಅವರಿಗೆ ಫೋನ್ ರಿಂಗ್ ಮಾಡಿದೆ. ಸುಮಾರು ೫-೬ ಬಾರಿ ರಿಂಗ್ ಮಾಡಿದ ನಂತರ, ಅವರು ನನಗೆ ವಾಪಸ್ ಕಾಲ್ ಮಾಡಿದರು. ಆಗ ನಾನು ಅವರಿಗೆ ನಾಗರಭಾವಿ ಹತ್ತಿರ ಇರುವ ಸತ್ವ ಅಪಾಟ್ ಮೆಂಟ್ ಬಳಿ ಮೃತದೇಹವನ್ನು ಹಾಕಿದ್ದಾರೆ ಎಂದು ತಿಳಿಸಿದೆ. ಆಗ ಪಿಎಸ್‌ಐ ವಿನಯ್ ‘ಕೃತ್ಯ ಎಸಗಿದ ವ್ಯಕ್ತಿಗಳು ಎಲ್ಲಿದ್ದಾರೆ?’ ಎಂದು ಕೇಳಿದರು. ಅದಕ್ಕೆ ನಾನು ಅವರು ಎಲ್ಲಿದ್ದಾರೆ ಎಂದು ಗೊತ್ತಿಲ್ಲ ಎಂದು ಸುಳ್ಳು ಹೇಳಿದೆ. ಆಗ ಪಿಎಸ್‌ಐ ವಿನಯ್ ‘ತಕ್ಷಣ ಕಾಮಾಕ್ಷಿಪಾಳ್ಯ ಪೊಲೀಸ್ ಸ್ಟೇಷನ್‌ಗೆ ಸರೆಂಡರ್ ಆಗಲು ಅವರಿಗೆ ತಿಳಿಸಿ’ ಎಂದರು. ನಂತರ ನಾನು ಕಾಲ್ ಡಿಸ್ಕನೆಕ್ಟ್ ಮಾಡಿ, ಏನಾದರು ತಿನ್ನೋಣ ಎಂದು ದೇವೇಗೌಡ ಪೆಟ್ರೋಲ್ ಬಂಕ್ ಹತ್ತಿರ ಹೋದೆ.
ರಾಘವೇಂದ್ರ ಇಂದು ಸರೆಂಡರ್ ಆಗುವುದಿಲ್ಲ ಎನ್ನುತ್ತಿದ್ದಾನೆ: ದಾರಿ ಮಧ್ಯೆ ನನ್ನ ಮೊಬೈಲ್ ತೆರೆದು ನೋಡಿದಾಗ, ಲಕ್ಷ್ಮಣ್ ಫೋನ್ ಕಾಲ್ ಬಂದಿತ್ತು. ಹಾಗಾಗಿ ಅವರಿಗೆ ಫೋನ್ ಮಾಡಿದೆ. ಫೋನ್ ರಿಸೀವ್ ಮಾಡಿದ ಲಕ್ಷ್ಮಣ್, ‘ಮೃತದೇಹವನ್ನು ಬಿಸಾಕುವ ಸಮಯದಲ್ಲಿ ರಾಘವೇಂದ್ರ ಮತ್ತು ಕಾರ್ತಿಕ್ ಮಧ್ಯೆ ಗಲಾಟೆಯಾಗಿ, ಅವರು ಸರೆಂಡರ್ ಆಗಿಲ್ಲ. ಈ ಮಧ್ಯೆ ರಾಘವೇಂದ್ರ ಅವರು ಒಬ್ಬ ಆಟೋ ಡ್ರೈವರ್ ಮೂಲಕ ನಾಗರಾಜ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಈಗ ಅವರು ನಾಗರಭಾವಿ ಹತ್ತಿರ ಇರುವ ನೆಕ್ಸಾ ಶೋರೂಂ ಹತ್ತಿರ ಇದ್ದಾರೆ’ ಎಂದು ತಿಳಿಸಿದರು. ಆಗ ನಾನು ನನ್ನ ಕಾರನ್ನು ತಿರುಗಿಸಿಕೊಂಡು ನೆಕ್ಸಾ ಶೋರೂಂ ಕಡೆಗೆ ಹೊರಟೆ. ಅಲ್ಲಿ ವಿನಯ್ ಅವರ ಜೀಪ್ ನಿಂತಿತ್ತು. ಅಲ್ಲಿ ವಿನಯ್, ದೀಪಕ್, ನಾಗರಾಜ್ ಮತ್ತು ರಾಘವೇಂದ್ರ ಎಲ್ಲರೂ ವಿನಯ್ ಅವರ ಜೀಪಿನಲ್ಲಿ ಕುಳಿತಿದ್ದರು. ನನ್ನ ಕಾರನ್ನು ಅವರ ಜೀಪ್‌ನ ಹಿಂದೆ ನಿಲ್ಲಿಸಿ, ಕಾರಿನಿಂದ ಇಳಿದು ಜೀಪ್ ಬಳಿ ಹೋಗಿ, ಏನಾಯಿತು ಎಂದು ಜೀಪ್‌ನಲ್ಲಿ ಇದ್ದ ನಾಗರಾಜ್ ಅವರನ್ನು ಕೇಳಿರುತ್ತೇನೆ. ಅದಕ್ಕೆ ನಾಗರಾಜ್, ‘ಈ ದಿನ ರಾಘವೇಂದ್ರ ಸರೆಂಡರ್ ಆಗುವುದಿಲ್ಲ ಎಂದು ಹೇಳುತ್ತಿದ್ದಾನೆ’ ಎಂದರು.




