ಮತದಾರರಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಕೇಂದ್ರ ಚುನಾವಣಾ ಆಯೋಗ ಮತದಾರರ ಸಂವಿಧಾನಬದ್ಧ ಹಕ್ಕನ್ನು ಕಸಿದುಕೊಳ್ಳಲು ಹೊರಟಿದೆ ಎಂದು ಆರೋಪಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಹಾಗೂ ಅವರ ವಿರುದ್ಧ ಕಾನೂನು ಕ್ರಮಕ್ಕೆ ಜೆನ್ ಝೀಗಳು ಹಾಗೂ ಪ್ರತಿಪಕ್ಷಗಳು ಬೀದಿಗಿಳಿದಿವೆ. ಆದರೆ, ಕೇಂದ್ರದ ಎನ್‌ಡಿಎ ಸರ್ಕಾರ ಪ್ರತಿಭಟನೆಗಳನ್ನು ದಮನಿಸಲು ಪೊಲೀಸ್ ಬಲವನ್ನು ಪ್ರಯೋಗಿಸುತ್ತಿರುವುದು ಆತಂಕಕಾರಿ ಬೆಳವಣಿಗೆ.
ದೇಶದಲ್ಲಿ ೨೦೧೦ರ ನಂತರ ಅನೇಕ ಚಳವಳಿಗಳು ನಡೆದಿವೆ. ಆದರೆ, ಜೆನ್ ಝೀ ಚಳವಳಿ ಹೆಚ್ಚು ಪರಿಣಾಮಕಾರಿಯಾಗಿದೆ. ಜೆನ್‌ಝೀಗಳು ಜನತಂತ್ರದ ರಕ್ಷಣೆಗೆ ಕಟಿಬದ್ಧರಾಗಿ ನಿಂತಿದ್ದಾರೆ. ಸರ್ವಾಧಿಕಾರಿ ಧೋರಣೆಯನ್ನು ಮೆಟ್ಟಿ ನಿಂತಿದ್ದಾರೆ. ನ್ಯಾಯಯುತ ಪ್ರತಿಭಟನೆಗಳನ್ನು ಬಲಪ್ರಯೋಗದಿಂದ ಹತ್ತಿಕ್ಕಿದಷ್ಟೂ ಅವು ಮತ್ತಷ್ಟು ಬೆಳೆಯುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇದಕ್ಕೆ ಈ ಹಿಂದಿನ ಅನೇಕ ಚಳವಳಿಗಳೇ ಸಾಕ್ಷಿ.
ಕೇಂದ್ರ ಚುನಾವಣಾ ಆಯೋಗ ಲೋಪ ಎಸಗಿದಾಗ ಕೇಂದ್ರ ಸರ್ಕಾರ ಏಕೆ ಆಯೋಗದ ರಕ್ಷಣೆಗೆ ನಿಲ್ಲಬೇಕು ಎಂಬುದೇ ಅರ್ಥವಾಗುತ್ತಿಲ್ಲ. ಕೇಂದ್ರ ಚುನಾವಣಾ ಆಯೋಗ ಸಂವಿಧಾನ ಬದ್ಧವಾಗಿ ಒಂದು ಸ್ವತಂತ್ರ ಸಂಸ್ಥೆ. ಅದಕ್ಕೂ ಕೇಂದ್ರ ಸರ್ಕಾರಕ್ಕೂ ಸಂಬಂಧವಿಲ್ಲ. ಹಾಗಾಗಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್ ಅವರ ರಕ್ಷಣೆಗೆ ಕೇಂದ್ರ ಸರ್ಕಾರ ನಿಂತಿರುವುದು ಸರಿಯಲ್ಲ.
ಎಸ್‌ಐಆರ್ ವಿರೋಧಿಸಿ ಅ.೧೦ರಂದು ಹೊಸದಿಲ್ಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಕರೆ ನೀಡಿದ್ದ ಪ್ರತಿಭಟನೆಗೆ ದಿಲ್ಲಿ ಪೊಲೀಸರು ಅನುಮತಿ ನಿರಾಕರಿಸಿದ್ದರೂ ಪ್ರತಿಭಟನೆಗೆ ಮುಂದಾದ ಕಾರಣಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಮುಂಬೈನಿಂದ ಹೊಸದಿಲ್ಲಿಗೆ ಬಂದಿಳಿದ ಸಿಜೆಪಿ ಸ್ಥಾಪಕ ಅಭಿಜೀತ್ ದಿಪ್ಕೆ ಅವರನ್ನು ವಿಮಾನದಲ್ಲೇ ವಶಕ್ಕೆ ಪಡೆದಿದ್ದು, ಇತರ ಇಬ್ಬರು ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ಮುಂದಿನ ಒಂದು ವರ್ಷ ಯಾವುದೇ ಪ್ರತಿಭಟನೆಗಳಲ್ಲಿ ಭಾಗವಹಿಸಬಾರದು, ದೇಶದಲ್ಲಿ ಶಾಂತಿ ಕಾಪಾಡಬೇಕು ಎಂಬ ಷರತ್ತಿನ ಮೇಲೆ ಬಿಡುಗಡೆ ಮಾಡಿದೆ. ಸಿಜೆಪಿ ಬೆಂಬಲಿಗರ ಬಂಧನಕ್ಕೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗ ಕಳವಳ ವ್ಯಕ್ತಪಡಿಸಿದೆ. ಈ ವಿಚಾರಕ್ಕೆ ಭಾರತ ಸರ್ಕಾರ ಕೂಡ ದೇಶದ ಆಂತರಿಕ ವಿಚಾರಗಳಲ್ಲಿ ಹೊರಗಿನವರ ಅನಗತ್ಯ ಹಸ್ತಕ್ಷೇಪ ಸಹಿಸುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ಭಾರತವು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಇಲ್ಲಿ ನಾಗರಿಕರು ಶಾಂತಿಯುತವಾಗಿ ಒಗ್ಗೂಡುವ, ಒಂದೆಡೆ ಸೇರುವ ಹಕ್ಕನ್ನು ಭಾರತದ ಸಂವಿಧಾನವು ನೀಡಿದೆ. ಆದರೆ, ಜನರ ಮತದಾನದ ಹಕ್ಕಿನ ಉಳಿವಿಗಾಗಿ ಸಿಜೆಪಿ ಮತ್ತು ಇತರೆ ವಿರೋಧಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಗೆ ದೇಶದ ಮೂಲೆ ಮೂಲೆಗಳಿಂದ ಸಾವಿರಾರು ಮಂದಿ ಸ್ವಯಂಪ್ರೇರಿತರಾಗಿ ಹೊಸದಿಲ್ಲಿಯ ಜಂತರ್ ಮಂತರ್‌ನತ್ತ ಧಾವಿಸಿಬಂದರೆ, ಜನರ ಧ್ವನಿಯನ್ನು ಆಲಿಸಬೇಕಾದ ಕೇಂದ್ರ ಸರ್ಕಾರ ಪೊಲೀಸ್ ಬಲ ಪ್ರಯೋಗಿಸಿ ಹೋರಾಟವನ್ನು ಹತ್ತಿಕ್ಕಲು ಯತ್ನಿಸಿ, ರಾಷ್ಟ್ರ ರಾಜಧಾನಿಯತ್ತ ಸಿಜೆಪಿ ಬೆಂಬಲಿಗರ ಹರಿವನ್ನು ತಡೆಯಲು ಬಸ್, ರೈಲು, ದಿಲ್ಲಿ ಮೆಟ್ರೋಗಳಂತಹ ಸಾರಿಗೆ ಸಂಪರ್ಕಗಳ ಮೇಲೆ ನಿರ್ಬಂಧ ಹೇರಿದ್ದಲ್ಲದೆ, ಇಂಟರ್‌ನೆಟ್ ಸೇವೆ ಕಡಿತಗೊಳಿಸಿದ್ದು ದುರದೃಷ್ಟಕರ.
ದಿಲ್ಲಿ ಪೊಲೀಸರ ಈ ಕ್ರಮ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಜೊತೆಗೆ ಸಿಜೆಪಿ ನಾಯಕರು ಇಂತಹ ಬೆದರಿಕೆಗಳಿಂದ ನಮ್ಮ ಹೋರಾಟವನ್ನು ಹತ್ತಿಕ್ಕಲಾಗುವುದಿಲ್ಲ. ಹೊಸದಿಲ್ಲಿ ಮಾತ್ರವಲ್ಲ, ದೇಶಾದ್ಯಂತ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದು ಸವಾಲು ಹಾಕಿದ್ದಾರೆ. ಸಾರಿಗೆ ಸೇವೆ ರದ್ದು, ಇಂಟರ್ ನೆಟ್ ಸ್ಥಗಿತ, ಪ್ರತಿಭಟನೆಗಳ ಮೇಲೆ ನಿರ್ಬಂಧ ಹೇರಿ, ಪ್ರತಿಭಟನಾಕಾರರನ್ನು ಬಂಧಿಸುವ ಮೂಲಕ ಮೋದಿ ಸರ್ಕಾರ ದೇಶದಲ್ಲಿ ತುರ್ತುಪರಿಸ್ಥಿತಿಯಂತಹ ವಾತಾವರಣ ಸೃಷ್ಟಿಸಿದೆ ಎಂದು ಹರಿಹಾಯ್ದಿರುವುದಲ್ಲದೆ, ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸುವ ಬದಲು ಪ್ರತಿಭಟನಾಕಾರರೊಂದಿಗೆ ಸರ್ಕಾರ ಮಾತುಕತೆಗೆ ಮುಂದಾಗಬೇಕು ಎಂದಿದ್ದಾರೆ. ಆದರೆ, ಈ ಸರ್ಕಾರ ಬಡಪೆಟ್ಟಿಗೆ ಬಗ್ಗುವಂತೆ ಕಾಣುತ್ತಿಲ್ಲ.
” ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಬಹಳ ಮುಖ್ಯ. ಸಂವಿಧಾನ ನಮಗೆ ನೀಡಿರುವ ಹಕ್ಕು ಇದು. ಈ ಹಕ್ಕಿಗೆ ಚ್ಯುತಿ ಬಂದಾಗ ಜನತೆ ಸಿಡಿದೇಳುವುದು ಸಾಮಾನ್ಯ. ಮತದಾನದ ಹಕ್ಕಿಗೆ ಇವತ್ತು ಚ್ಯುತಿ ಬಂದಿದೆ. ಹೀಗಾಗಿ ಯುವಜನತೆ ಸಿಡಿದೆದ್ದಿದ್ದಾರೆ.”




