Mysore
31
few clouds

Social Media

ಭಾನುವಾರ, 11 ಅಕ್ಟೋಬರ್ 2026
Light
Dark

ಮತ್ತೆ ಹುಯ್ಯುತ್ತಿರುವ ಪ್ರತಿಭಟನೆಯ ಸುರಿಮಳೆ

ಕೆ.ನೀಲಾ

ಕರುನಾಡ ಹೋರಾಟಗಾರ್ತಿ ಕಾಮ್ರೇಡ್ ನೀಲಾ ನೆನಪುಗಳು

ನಾನು ಆಗ ಏಳು ಅಥವಾ ಎಂಟನೇ ತರಗತಿ ಓದುತ್ತಿದ್ದೆ ಎಂದು ನೆನಪು. ರಸ್ತೆಯಲ್ಲಿ ಕೇಳಿ ಬರುತ್ತಿದ್ದ ಆಕ್ರಂದನ, ಅರಿವಿಲ್ಲದೆಯೇ ನನ್ನನ್ನು ಮೆಟ್ಟಿಲು ಇಳಿದು ಅಂಗಳದಿಂದಾಚೆ ಕರೆ ತಂದಿತು.ದೃಶ್ಯ ಕಂಡು ಮನದೊಳಗೆ ತಲ್ಲಣ! ಬೀದಿಯಲ್ಲಿ ಒಬ್ಬ ಗಂಡಸು ಹೆಣ್ಣು ಮಗಳ ಕೂದಲು ಹಿಡಿದು ದರ ದರ ಎಳೆದೊಯ್ಯುತ್ತಿದ್ದ. ಆಕೆಯದು ಬಿಡಿಸಿಕೊಳ್ಳುವ ಪ್ರಯತ್ನ. ಆದರೆ ಆತ ಕರುಣೆ ಸತ್ತಂತೆ ಕೂದಲು ಹಿಡಿದು ಎಳೆದೊಯ್ಯುತ್ತಿದ್ದ. ನನಗೆ ಆ ಹೊತ್ತಿನಲ್ಲಿ ಅದೊಂದು ಗಾಬರಿಗೊಳಿಸುವ ಸನ್ನಿವೇಶವಾಗಿತ್ತು.

ಸಿಟ್ಟು, ಆಕ್ರೋಶ ಉಕ್ಕಿ ಬಂದು ನಾನು ಅಲ್ಲಿ ಹೋಗಿ “ಬಿಡು” ಎಂದು ಹೇಳಬೇಕೆನ್ನಿಸಿತ್ತು. ನಾನಿನ್ನೂ ಚಿಕ್ಕವಳಾದ್ದರಿಂದ ನನ್ನ ಮಾತು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಆ ಹೆಣ್ಮಗು ಅಳುತ್ತಾ ಚೀರುತ್ತಾ ಪ್ರತಿಭಟಿಸುತ್ತಿದ್ದಳು. ಆದರೆ ಬೀದಿ ಮಂದಿ ಮಾತ್ರ ಅದು ಅವನ ಕರ್ತವ್ಯ ಎಂಬಂತೆ ನೋಡಿ ಹೋಗುತ್ತಿದ್ದರು.

ಆ ದಾರಿಹೋಕರು, ಆಕೆ ಮತ್ತು ಆತ! ನನ್ನ ಮನಸ್ಸು ಕದಡಿದ ಕೊಳದಂತಾಯಿತು. “ಯಾರಮ್ಮಾ ಅವನು? ಏಕೆ ಹಾಗೆ ಎಳೆದುಕೊಂಡು ಹೋಗುತ್ತಿದ್ದಾನೆ?” ಮನೆಯೊಳಗೆ ಓಡಿ ಬಂದು ಅಮ್ಮನಲ್ಲಿ ಕೇಳಿದೆ. ಅಮ್ಮ ಬಂದು ನೋಡುವಷ್ಟರಲ್ಲಿ ಅವರು ಅನತಿ ದೂರ ಹೋಗಿದ್ದರು. “ಆತ ಗಂಡನಿರಬೇಕು. ಅವಳೇನೋ ತಪ್ಪು ಮಾಡಿರಬೇಕು, ಅದಕ್ಕೆ ಎಳ್ಕೊಂಡು ಹೋಗ್ತಿದಾನೆ” ಅಮ್ಮನ ಮಾತು ಕೇಳಿದ್ದೇ ತಡ ಗಾಬರಿ, ಅಂಜಿಕೆ, ಆಕ್ರೋಶ ಒಟ್ಟಾಗಿ ನನ್ನ ಎದೆಬಡಿತ ಜೋರಾಯಿತು.

ಇವತ್ತಿಗೂ ಸಹ ಅನೇಕ ಸಂದರ್ಭಗಳಲ್ಲಿ, ನನ್ನ ಮನಸ್ಸಿನ ಮೇಲೆ ತೀವ್ರ ದಾಳಿ ಇಟ್ಟ, ಆಘಾತ ಮಾಡಿದ ಮತ್ತು ನನ್ನೊಳಗೆ ಯಾವತ್ತೂ ಮುಗಿಯದ ಸಿಟ್ಟು, ಆಕ್ರೋಶ ಹುಟ್ಟಿಸಿದ ಆ ಪ್ರಸಂಗ ನೆನಪಿಸಿಕೊಳ್ಳುತ್ತೇನೆ. ಆದರೆ ಈ ಘಟ್ಟದಲ್ಲಿ ನಿಂತು ನೋಡಿದರೆ, ಪ್ರಶ್ನೆ ಮಾಡುವಂತಹ ಮನಸ್ಥಿತಿಗೆ ಕಾರಣವಾದದ್ದು ನಮ್ಮ ಮನೆಗೆ ಅಂದು ತರಿಸುತ್ತಿದ್ದ ಪುಸ್ತಕಗಳು. ನಮ್ಮ ಮನೆಯಲ್ಲಿ ಅನೇಕ ಪುಸ್ತಕಗಳಿದ್ದವು. ವಚನ ಸಾಹಿತ್ಯ ಪುಸ್ತಕವಿತ್ತು. ನಮ್ಮ ತಾಯಿ ತತ್ವ ಪದ ಹಾಡ್ತಿದ್ಳು ಬಾಲ್ಯಕಾಲದಲ್ಲಿ ನಮ್ಮ ಕಿವಿಗೆ ಬಿದ್ದಿದ್ದು ವಚನಗಳು. ಅಕ್ಕಮಹಾದೇವಿ ವಚನ, ಮಾದಾರ ಚನ್ನಯ್ಯ, ಡೋಹರ ಕಕ್ಕಯ್ಯ, ಬಸವಣ್ಣ, ಚನ್ನಬಸವಣ್ಣರ ವಚನಗಳು ಬಹಳ ಇಷ್ಟವಾಗುತ್ತಿದ್ದವು.

ವಿಶೇಷವಾಗಿ ಗಂಡಾಗಿ ಹೆಣ್ಣಿನ ಬಗ್ಗೆ ಬರೆದ ಜೇಡರ ದಾಸಿಮಯ್ಯರ “ಮೊಲೆ ಮುಡಿ ಬಂದಡೆ ಹೆಣ್ಣೆಂಬರು. ಗಡ್ಡ ಮೀಸೆ ಬಂದಡೆ ಗಂಡೆಂ ಬರು. ನಡುವೆ ಸುಳಿವ ಆತ್ಮನು ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ! ರಾಮ ನಾಥ” ವಚನ “ಓ ಎಂಥ ಅದ್ಭುತ ವಚನ, ಹೌದಲ್ಲ ಇದು ಸರೀನೆ” ಅನ್ನಿಸಿತ್ತು. ನಾನು ನಾಲ್ಕು ಅಥವಾ ಐದನೇ ಕ್ಲಾಸು ಓದ್ತಾ ಇದ್ದೆ ಅನ್ಸತ್ತೆ. ತಿಂಗಳಿನಲ್ಲಿ ಎರಡು ಮೂರು ನಾವು ಜೋಳ ಬೀಸಲು ಕೊಡುವುದಕ್ಕೆ ಹೋಗಬೇಕಾಗಿತ್ತು. ಆ ಜೋಳದ ಡಬ್ಬಿ ತಗೊಂಡು ಹೆಚ್ಚು ಕಡಿಮೆ ನಾನೇ ಹೋಗ್ತಿದ್ದೆ. ಯಾಕಂದ್ರೆ ಮನೆಯಲ್ಲಿ ನಾನು ಮಧ್ಯದ ಮಗಳು. ದೊಡ್ಡವರು ಮೂರು ಜನ, ಚಿಕ್ಕವರು ಮೂರು ಜನ. ಏಳು ಜನ ಮಕ್ಕಳಲ್ಲಿ ನಾನು ನಡುವಿನವಳು. ಹಾಗಾಗಿ ದೊಡ್ಡವರ ಕೆಲಸವೂ ನನ್ನ ಪಾಲಿಗೆ ಇತ್ತು. ಜೋಳದ ಡಬ್ಬಿ ಅಥವಾ ಗೋಧಿ ಡಬ್ಬಿ ತಗೊಂಡು ಹಿಟ್ಟಿನ ಗಿರಣಿಗೆ ಹೋಗ್ತಿದ್ದೆ.

ಅಲ್ಲಿ ಹಿಟ್ಟಿನ ಡಬ್ಬಿಗಳನ್ನು ಸಾಲಿನಲ್ಲಿ ಇಡಬೇಕಾಗಿತ್ತು. ಜೋಳ ಹಾಕಿ ಬೀಸಿ ಕೊಡೋನು ಒಂದೊಂದೇ ಡಬ್ಬಿ ತಗೊಂಡು ಇಡ್ತಿದ್ದ. ನನಗಿಂತಲೂ ಸ್ವಲ್ಪ ದೊಡ್ಡ ವಯಸ್ಸಿನ ಒಬ್ಬ ಹುಡುಗ ನನ್ನ ಡಬ್ಬಿ ಹಿಂದಿಟ್ಟು ತನ್ನ ಡಬ್ಬಿ ಮುಂದಿಡ್ತಿದ್ದ. ನಾನು ಮತ್ತೆ ಆತನ ಡಬ್ಬಿ ಹಿಂದಿಟ್ಟು ನನ್ನ ಡಬ್ಬಿ ಮುಂದಿಡ್ತಿದ್ದೆ. ಮತ್ತೆ ಮತ್ತೆ ಪುನರಾವರ್ತನೆ ಆಯಿತು. ಅವನು ಬೇಕಂತಲೇ ಮಾಡ್ತಿದ್ದ. “ಎಷ್ಟಾದ್ರೂ ಹೆಣ್ಣು ಹುಡುಗಿ, ನಾನು ಮುಂದೆ ಇಟ್ಟರೂ ನಡೆಯುತ್ತೆ. ಇವಳೇನೂ ಮಾಡಲಾರಳು” ಎಂದು ಅವನ ಮನಸ್ಸಿನಲ್ಲಿ ಇತ್ತೇನೋ! ಸಹಜವಾಗಿ ನನಗೆ ಸಿಟ್ಟು ಬಂತು. ನಾನು ಆತನ ಕಾಲರ್ ಪಟ್ಟಿ ಹಿಡಿದು ಹಿಟ್ಟು ಗುಡಿಸುವ ಜಾಡು ತಗೊಂಡು ಹೊಡೆದುಬಿಟ್ಟೆ. ಅಲ್ಲಿದ್ದವರು ಆತನನ್ನು ಬೆಂಬಲಿಸಲಿಲ್ಲ.ನನ್ನ ಪರವಾಗಿ ನಿಂತರು. ಹಿಟ್ಟಿನ ಗಿರಣಿಯ ಮಾಲೀಕ ಕೊನೆಗೂ ನನ್ನ ಡಬ್ಬಿಯನ್ನು ಮುಂದಿಟ್ಟು ಹಿಟ್ಟು ಹಾಕಿ ಕೊಟ್ಟ.

ಯಾರೇನಾದರೂ ಅಪಮಾನ ಮಾಡಿದರೆ, ಬೈದರೆ ನಾವು ಸುಮ್ಮನಿರಬಾರದು ಅನ್ನುವುದನ್ನು ಕಲಿತ ಮೊದಲನೇ ಪ್ರಕರಣ ನಡೆದಿದ್ದು. ಸಮಾಜದೊಳಗಿನ ಬೇರೆ ಬೇರೆ ಪ್ರಸಂಗಗಳು ಪ್ರತಿಭಟಿಸುವಂತಹ ಗುಣವನ್ನು ಹೆಚ್ಚು ಗಟ್ಟಿಗೊಳಿಸಿತು ಅಂತ ಅನ್ನಿಸುತ್ತದೆ. ಅದು ನಮ್ಮ ವೈಯಕ್ತಿಕ ಜೀವನದೊಳಗೆ ಖಂಡಿತ ಒಂದು ಸಂಘರ್ಷ ಹುಟ್ಟಿಸಿತು. ಸಂಘರ್ಷ ಹುಟ್ಟಿದಾಗೆಲ್ಲ ಒಂದು ಬೆಂಕಿಯ ಹೊಂಡ ಸಿದ್ಧವಾಗುತ್ತದೆ. ನಾವು ಬೆಂಕಿ ಹೊಂಡ ಹಾಯ್ಬೇಕು. ಇಲ್ಲಾ, ಹಾಯ್ಲಾರದೆ ಈಚೆಗಿದ್ದು ವಾಪಸ್ ಹೋಗಿ ಹೂದಲಿನೊಳಗೆ ಸೇರ್ಕೋಬೇಕು ಮತ್ತು ತಳಕ್ಕೆ ಹರಿಯುವಂತಹ ನೀರಿನಲ್ಲಿ ಹೋಗಿ ಸೇರ್ಕೋಬೇಕು.

ಪ್ರಶ್ನಿಸುವ, ಪ್ರತಿಭಟಿಸುವ, ಭಯಮುಕ್ತಳಾಗಿ ಮುಂದೆ ಹೋಗುವಂತಹ ಸಂದರ್ಭದಲ್ಲಿ ನಾನು ಒಬ್ಬಳು ಹೆಣ್ಣು ಮಗಳು ಅನ್ನೋದನ್ನೇ ಮರೆಯಿಸುವ ಅನೇಕ ಪ್ರಸಂಗಗಳು ನಡೆದಿದ್ದವು. ನನಗೊಂದು ೧೮ ವಯಸ್ಸು ಇರಬಹುದೇನೋ! ಸಮುದಾಯ ಸಂಘಟನೆಯಲ್ಲಿದ್ದೆ. ಸಮುದಾಯ ಸಂಘಟನೆಯಿಂದ ಒಂದು ಹೋರಾಟ ಕೈಗೆತ್ತುಕೊಂಡಿದ್ದರು. ಕೊಡಗಿನ ಕಡೆಯ ಭಾಗೀರಥಿ ಎಂಬುವವಳು ಬೀದರ್ ಜಿಲ್ಲೆಯ ಕಮಠಾಣದಲ್ಲಿ ನರ್ಸ್ ಆಗಿದ್ದಳು. ಒಬ್ಬಳೇ ಮಗಳು, ಅಪ್ರತಿಮ ಸುಂದರಿ. ಅವಳನ್ನು ಅತ್ಯಾಚಾರ ಮಾಡಿ ಹಾಸ್ಪಿಟಲ್ ಅಲ್ಲಿ ಕೊಲೆ ಮಾಡಿದರು. ಅದರಲ್ಲಿ ಯಾರೆಲ್ಲ ಶಾಮೀಲಾಗಿದ್ರು ಅನ್ನೋದು ಬಯಲಿಗೆ ಬಂತು. ಒಂದೂರಿಂದ ಮತ್ತೊಂದು ಊರಿಗೆ ಹೋದವರಿಗೆ ಒಳ್ಳೆ ರೀತಿಯಿಂದ ಕೆಲಸ ಮಾಡಿ ಗೌರವದಿಂದ ಜೀವನ ನಡೆಸಲೂ ಬಿಡಲ್ಲ. ಇದೆಂತಹ ಸ್ಥಿತಿ? ಅಂತ ಹೇಳಿ “ಭಾಗೀರಥಿ ಪ್ರಕರಣದ ಹೋರಾಟ ಸಮಿತಿ” ಅಂತ ಮಾಡಿಕೊಂಡಿದ್ದರು. ನಾನು ಅದರಲ್ಲಿದ್ದೆ. ಮೊದಲ ಬಾರಿಗೆ ಬೀದಿ ಮೇಲೆ ಹೋರಾಟಕ್ಕೆ ಇಳಿದುಬಿಟ್ಟೆ ನಾನು.

ನಮ್ಮೊಳಗೆ ಎಷ್ಟು ಆಕ್ರೋಶ, ಸಿಟ್ಟಿತ್ತು ಅಂತಂದ್ರೆ ಆವಾಗ ಕಾಂಗ್ರೆಸ್ ಸರಕಾರ ಇತ್ತು. ನಮ್ಮ ಹುಮ್ನಾಬಾದ್ ತಾಲ್ಲೂಕಿನ ಬಸವರಾಜ್ ಪಾಟೀಲ್ ಅನ್ನೋವರು ಪಶು ಇಲಾಖೆಗೆ ಸಂಬಂಧಪಟ್ಟಂತಹ ಮಿನಿಸ್ಟರ್ ಆಗಿದ್ದರು. ಐಬಿಗೆ ಅವರು ಬಂದಾಗ ಅವರ ರಟ್ಟೆ ಹಿಡಿದು “ನಿಮ್ಮ ಜಿಲ್ಲೆಗೆ ಜೀವನ ನಡೆಸಲು, ಹೊಟ್ಟೆ ಹೊರೆಯಲು, ಸುಂದರವಾದ ಭವಿಷ್ಯ ಕಟ್ಟಿಕೊಳ್ಳಲು ಬಂದ ಒಬ್ಬ ಹುಡುಗಿಯನ್ನು ಈ ರೀತಿ ಅತ್ಯಾಚಾರ ಮಾಡಿ ಕೊಂದು ಹಾಕಿದ್ದಾರಲ್ಲ! ನೀವೇನು ಬಾಯಿ ಮುಚ್ಚಿಕೊಂಡಿದ್ದೀರೀ? ಯಾಕೆ ನೀವು ಚುನಾವಣೆಯಲ್ಲಿ ಗೆದ್ದು ಬರಬೇಕಂಗಿದ್ರೆ? ನಮ್ಮ ತೆರಿಗೆ ಹಣ ನಿಮಗೆ ಪೇಮೆಂಟ್ ಕೊಡ್ತೀವಿ” ಆಕ್ರೋಶದಿಂದ ಕೇಳಿದ ಪ್ರಕರಣ ನಾನು ಮರೆಯುವುದಿಲ್ಲ. ಹೆಣ್ಣುಮಕ್ಕಳನ್ನು ದೇಹವಾಗಿ ಮಾತ್ರ ನೋಡುವಂತಹ ಸ್ಥಿತಿ ಯಾಕಿದು? ಇದು ಸರಿಯಲ್ಲ. ನಮ್ಮನ್ನು ಜೀವವಾಗಿ ಸಹವರ್ತಿಯಾಗಿ ಯಾಕೆ ನೋಡಬಾರದು ಅನ್ನೋವಂತದ್ದು ತಲೆ ಒಳಗೆ ಹೊಕ್ಕಿಬಿಟ್ಟಿತು. ಅದು ಎಲ್ಲಿಗೆ ಹೋಗಿ ನಿಲ್ಲಿಸ್ತು

ಅಂತಂದ್ರೆ ಹೆಣ್ಣು ಮಕ್ಕಳ ಮೇಲೆ ಮಾತ್ರ ಅಲ್ಲ, ಸಾಮಾನ್ಯ ದುಡಿದು ಉಣ್ಣುವ ಜನರ ಮೇಲೂ ಇದೇ ರೀತಿ ಅನ್ಯಾಯ, ಅತ್ಯಾಚಾರ, ದೌರ್ಜನ್ಯ ನಡೀತದೆ ಅಂತ ಅನ್ನೋದು ನಮ್ಮ ಅರಿವಿಗೆ ಬರಲು ಶುರುವಾಯಿತು. ನಾನು ಮೊದಲನೆಯ ಸಮುದಾಯದ ಸಭೆಗೆ ಹಾಜರಾಗಿದ್ದೆ. ಆ ಸಭೆಗೆ ಬಸವಲಿಂಗಯ್ಯನವರು ಬಂದಿದ್ದರು. ಸಮುದಾಯದ ರಾಜ್ಯಾಧ್ಯಕ್ಷರಾಗಿದ್ದರು. ಬೀದರ್‌ನಲ್ಲಿ ಸಮುದಾಯ ಸಂಘಟನೆಯ ಒಂದು ಸಭೆ ಕರೆದಿದ್ದರು. ಸಭೆಯಲ್ಲಿ ಕುಳಿತು ಮಾತನಾಡುತ್ತಿದ್ದವಳಿಗೆ “ನಾನೊಬ್ಬಳು ಯುವತಿ, ಇಷ್ಟು ರಾತ್ರಿ ೦೯:೩೦ ವರೆಗೂ ಅದು ಬೀದರ್‌ನಂತಹ ಅತ್ಯಂತ ಫ್ಯೂಡಲ್ ಪ್ರದೇಶದಲ್ಲಿ ರಾತ್ರಿ ಹೊತ್ತು ಗಂಡಸರ ಜೊತೆಗೆ ಅದು ಒಬ್ಬಳೇ ಕೂತಿದ್ದೀನಿ” ಅನ್ನೋದನ್ನೇ ಮರೆತಿದ್ದೆ. ಬೀದರ್ ಜಿಲ್ಲೆಯಲ್ಲಿ ಒಂದು ಸಾಂಸ್ಕ ತಿಕವಾದ ಚಳವಳಿ ಕಟ್ಟೋದು ಹೇಗೆ, ನಮ್ಮ ಪರಂಪರೆಯನ್ನು ಹೇಗೆ ಮುಂದಕ್ಕೆ ತಗೊಂಡು ಹೋಗಬೇಕು, ಹಾಡು ನಾಟಕ ಹೀಗೆ ಹಲವು ವಿಷಯಗಳ ಕುರಿತು ಸಂವಾದ ನಡೆಯಿತು. ಸಭೆ ಮುಗಿಯೋವಾಗ ರಾತ್ರಿ ೧೦ ಗಂಟೆ. ನಡ್ಕೊಂಡು ಮನೆಗೆ ಹೋದೆ. ನಮ್ಮಕ್ಕ ಭಾವ ಇದ್ರು. ಅಕ್ಕನಿಗೆ ಬಹಳ ಸಿಟ್ಟು ಬಂದಿತ್ತು. ಮಾತಾಡಲಿಲ್ಲ. ಮಾರನೇ ದಿನ ಜಗಳ ಮಾಡಿದ್ದಳು. “ನೀನು ನಮ್ಮ ಮನೆಯೊಳಗೆ ಇದ್ದು ಇಂತದೆಲ್ಲ ಕೆಲಸ ಮಾಡಬೇಡ, ನೀನು ಮದುವೆ ಮಾಡ್ಕೊಂಡು ಹೋಗಿ ನಿನ್ ಗಂಡನ ಮನೆಯೊಳಗೆ ಏನಾದ್ರೂ ಮಾಡು” ಎಂದಳು. ನಾನೇನೂ ಅನ್ನಲಿಲ್ಲ. “ಎಂತದೊ ಒಬ್ಬ ಗಂಡ ಸಿಕ್ಕರೆ ಅವನ ಮನೇಲಿ ಮಾತನಾಡುವ ಅವಕಾಶ ಇರದು. ನನ್ನ ಬದುಕನ್ನು ನಿರ್ಭಿಡೆಯಿಂದ ಕಟ್ಟಿಕೊಳ್ಳಬೇಕು” ಎಂದು ಯೋಚಿಸಿ ಹಾಗೇ ಕಟ್ಟಿಕೊಂಡೆ.

ಧೈರ್ಯ ಎಂಬುದು ಧೀಮಂತಿಕೆಯ ಹೋರಾಟವನ್ನು ಕಲಿಸಿತು. ಆ ಧೈರ್ಯ, ಧೀಮಂತಿಕೆ, ಸ್ಪಷ್ಟತೆ ಇವುಗಳೆಲ್ಲವೂ ಬಹಳ ಮೇರು ಹಂತದವೇನಲ್ಲ. ನಮಗೆ ಎಷ್ಟು ದಕ್ಕಿತೋ ಅಷ್ಟು. ಪೊಲೀಸ್ ಲಾಠಿಗೆ ಬೆನ್ನು ಕೊಟ್ಟಿದ್ದೇವೆ. ತೊಗರಿಗೆ ಬೆಂಬಲ ಬೆಲೆ ಬೇಕು ಅಂತ ಹೋರಾಟ ಮಾಡುವಾಗ ಪೊಲೀಸರು ಲಾಠಿ ಹಿಡ್ಕೊಂಡು ಬಂದಿದ್ದರು. “ಓ ನಿಮ್ಮ ಲಾಠಿ ನೋಡ್ತೀವಿ ನಾವು, ನಿಮ್ಮ ಲಾಠಿ ಮುರೀಬಹುದು, ಆದರೆ ನಮ್ಮ ಒಳಗಿನ ವಿಚಾರ ಮುರಿಯಲು ಸಾಧ್ಯವಿಲ್ಲ”. ಎನ್ನುತ್ತಾ ಮುನ್ನುಗ್ಗಿದ್ದೇವೆ. ನಮ್ಮನ್ನು ಬಂಧಿಸಿ ಜೈಲಿಗೆ ಅಟ್ಟಿದಾಗ ಮಾಧ್ಯಮಗಳಲ್ಲಿ ಇಂತಿಂತವರನ್ನೆಲ್ಲ ಅರೆಸ್ಟ್ ಮಾಡಿದ್ರು. ದೊಡ್ಡ ಹೋರಾಟಗಾರರು ಹೋರಾಟಗಾರ್ತಿಯರು ಅಂತ ಬರೆದಿದ್ದರು. “ಎಷ್ಟು ದಿನ ನೀವು ಜೈಲಲ್ಲಿ ಇಡ್ತೀರಿ ಇಡ್ರಿ ಆದರೆ ನಮ್ಮ ವಿಚಾರಗಳನ್ನು ಕೊಲ್ಲಲಿಕ್ಕೆ ಆಗೋದಿಲ್ಲ” ನಮಗೆ ಅನ್ನಿಸ್ತಿತ್ತು.

ಯಾರ ಹೆಸರುಗಳೂ ಮುಖ್ಯ ಅಲ್ಲ. ರೈತರು ಬೆಳೆಯುವಂತಹ ತೊಗರಿಗೆ ಬೆಂಬಲ ಬೆಲೆ ಸಿಗಬೇಕು ಅದು ಮಾತ್ರ ಪ್ರಧಾನ ಅಂಶ ಆಗಬೇಕೇ ವಿನಾ ನಾವು ಪ್ರಧಾನ ಆಗಬಾರದು. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗಬೇಕು ಎನ್ನುವುದೇ ಪ್ರಧಾನವಾಗಿ ಆಗಬೇಕು ಎಂದು ನಿರ್ಧರಿಸಿದ್ದೆವು. ನಾವು ಚರ್ಚೆ ಮಾಡಿದಾಗ ಪೊಲೀಸರು ನಮಗೆ ಹೊಡೆದ್ರು, ಮತ್ತು ಬಂಧಿಸಿ ಜೈಲಿಗೆ ಅಟ್ಟಿದ್ದರು.

ಹರೆಯದಲ್ಲಿ ಜಾತಿ ಮೀರಬೇಕಾದಾಗ, ನಮ್ಮ ಬದುಕಿನ ಆಯ್ಕೆ ಪ್ರಶ್ನೆ ಬಂದಾಗ ನನ್ನ ತಾಯಿ ಒಂದು ಮಾತು ಕೇಳಿದಳು. “ನೀನು ಮದುವೆಯಾಗಲು ಹೊರಟವನು ಯಾವ ಜಾತಿಯವನು?” ಅಂತ. “ನಂಗೆ ಗೊತ್ತಿಲ್ಲ” ಹೇಳಿದೆ. “ಗೊತ್ತಿಲ್ಲದೆ ನೀನು ಹೆಂಗೆ ಮದುವೆ ಆಗ್ತೀಯ?” ಕೇಳಿದಳು. “ಒಳ್ಳೆ ಹುಡುಗ ಅನ್ನಿಸ್ತು, ಆಯ್ಕೆ ಮಾಡ್ಕೊಂಡ್ವಿ. ನೀವು ಒಪ್ಪಿಕೊಳ್ಳಿ” ಅಂದೆ. “ಸಾಧ್ಯ ಇಲ್ಲ” ಎಂದಾಕೆ “ಅಲ್ಲ, ಯಾರೋ ಹುಡುಗ. ನೀನು ಗೊತ್ತಿಲ್ಲ, ಏನಿಲ್ಲ. ಕೆಲವೇ ದಿವಸದೊಳಗೆ ಅದೆಂಗೆ ನಂಬುತ್ತೀ ನೀನು? ಮಾರ್ಗ ಮಧ್ಯದಲ್ಲಿ ನಿನ್ನನ್ನು ಬಳಸಿ ಕೈಬಿಟ್ಟು ಬಿಸಾಡಿ ಹೋದರೆ ಏನು ಮಾಡ್ತಿ” ಪ್ರಶ್ನಿಸಿದವಳಿಗೆ “ಹೆದರಬೇಡ ನನ್ನ ಜೊತೆಗೆ ಬದುಕೋರು ಮಾರ್ಗ ಮಧ್ಯದಲ್ಲಿ ಬಿಟ್ಟು ಹೋದರೆ ನಿಮ್ಮ ಮನೆಗಂತೂ ಬರಲ್ಲ, ನಾನು ಯಾರದೋ ಮನೆಯಲ್ಲಿ ಪಾತ್ರೆ ತೊಳೆದಾದರೂ ಬದು ಕ್ತೀನಿ. ಸ್ವತಂತ್ರವಾಗಿ ಬದುಕ್ತೀನಿ. ನೀನೇನು ಚಿಂತೆ ಮಾಡಬೇಡವ್ವ” ಅಂದೆ.

“ನೀನು ಬಹಳ ಹಾದಿಬಿಡುತ್ತಿದ್ದೀ” ಹೇಳಿದಳು. “ಇಲ್ಲವ್ವಾ, ನೀನು ಹಳೆ ಹಾದಿ ಮೇಲೆ ನಡೆದು ನಡೆದೂ ಎಷ್ಟ್ ಹೈರಾಣ ಆಗಿದ್ದೀ, ಆದ್ರೆ ನನಗೆ ಬೇರೆ ಹಾದಿ ಬೇಕು. ನೀ ನಡೆದ ಹೈರಾಣ ಹಾದಿಯಲ್ಲಿ ನಾನು ನಡೀಬೇಕೇನೋ?” ಎಂದು ಕೇಳಿದ್ದೆ. ನಮ್ಮ ಈಗಿನ ಜೆನ್-ಝೀ ಯುವಜನಾಂಗದ ಹೋರಾಟ ಮತ್ತು ಉತ್ಸಾಹ ನೋಡುತ್ತ ನೋಡುತ್ತ ಮತ್ತೆ ಹಳೆಯ ಎಲ್ಲವೂ ನೆನಪಾಗುತ್ತಿದೆ. ಖುಷಿಯಾಗುತ್ತಿದೆ. ನಮ್ಮ ಮುಂದಿನ ದಿನಗಳು ಇನ್ನೂ ಚಂದವಾಗಬಹುದು ಅನಿಸುತ್ತಿದೆ.”

” ನಮ್ಮ ಈಗಿನ ಜೆನ್-ಝೀ ಯುವಜನಾಂಗದ ಹೋರಾಟ ಮತ್ತು ಉತ್ಸಾಹ ನೋಡುತ್ತ ನೋಡುತ್ತ ಮತ್ತೆ ಹಳೆಯ ಎಲ್ಲವೂ ನೆನಪಾಗುತ್ತಿದೆ. ಖುಷಿಯಾಗುತ್ತಿದೆ. ನಮ್ಮ ಮುಂದಿನ ದಿನಗಳು ಇನ್ನೂ ಚಂದವಾಗಬಹುದು ಅನಿಸುತ್ತಿದೆ.”

 

 

Tags:
error: Content is protected !!