Mysore
30
scattered clouds

Social Media

ಭಾನುವಾರ, 11 ಅಕ್ಟೋಬರ್ 2026
Light
Dark

ಪೆಟ್ರೋಲ್ ಬಂಕ್‌ನಲ್ಲಿ ನಿರ್ಮಾಣವಾದ ಮಿನಿ ಕೆರೆ!

ಮಂಜು ಕೋಟೆ

ನೀರಾವರಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅವ್ಯವಸ್ಥೆ ಎಂದು ಸಾರ್ವಜನಿಕರ ಆಕ್ರೋಶ 

ಎಚ್.ಡಿ.ಕೋಟೆ: ತಾಲ್ಲೂಕಿನಲ್ಲಿ ಮಳೆ ಇಲ್ಲದೆ ಬರ ಆವರಿಸಿಕೊಂಡು ಬರಪೀಡಿತ ಪ್ರದೇಶವೆಂದು ಘೋಷಣೆಯಾಗಿದ್ದರೂ ಅಮೂಲ್ಯವಾದ ನೀರನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ತೋರಿರುವ ಬೇಜವಾಬ್ದಾರಿಯಿಂದ ಪೆಟ್ರೋಲ್ ಬಂಕ್ ಆವರಣದಲ್ಲಿ ಕೆರೆಯಂತೆ ನೀರು ಸಂಗ್ರಹವಾಗಿದೆ.

ತಾಲ್ಲೂಕಿನ ತಾರಕ ಜಲಾಶಯದ ನೀರನ್ನು ಕೆರೆಕಟ್ಟೆಗಳಿಗೆ ಹರಿಸುವ ಕಾರ್ಯ ಒಂದು ತಿಂಗಳಿನಿಂದ ನಡೆಯುತ್ತಿದ್ದರೂ ಬಹುತೇಕ ಕೆರೆಕಟ್ಟೆಗಳಿಗೆ ನೀರು ತುಂಬಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಜತೆಗೆ ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿಯೂ ಎಡವಿದ್ದಾರೆ.

ಹೀಗಾಗಿ ನೀರು ಎಲ್ಲೆಂದರಲ್ಲಿ ಹೋಗುತ್ತಿರುವುದರಿಂದ ಪಟ್ಟಣದ ಕೃಷ್ಣಾಪುರ ವೃತ್ತದ ಬಳಿ ಇರುವ ಮಾಜಿ ಸಚಿವ ಎಂ.ಶಿವಣ್ಣನವರ ಪೆಟ್ರೋಲ್ ಬಂಕ್ನ ಬಳಿ ನೀರು ಕೆರೆಯಂತೆ ಸಂಗ್ರಹವಾಗಿದೆ. ತಾಲ್ಲೂಕಿನ ಅನೇಕ ಭಾಗಗಳಲ್ಲಿ ಮಳೆ ಇಲ್ಲದೆ ಬೆಳೆಗಳು ಒಣಗುತ್ತಿವೆ. ರೈತರು ನೀರಿಗಾಗಿ ಪರದಾಡುತ್ತಿದ್ದಾರೆ. ಆದರೆ, ತಾರಕ ನೀರಾವರಿಇಲಾಖೆ ಅಧಿಕಾರಿಗಳು ಕೆರೆಕಟ್ಟೆಗೆ ನೀರು ಬಿಡದೆ ಎಲ್ಲೆಂದರಲ್ಲಿ ನೀರು ಹರಿಸುತ್ತಿರುವುದರಿಂದ ಭಾರಿ ಪ್ರಮಾಣದ ನೀರು ರಸ್ತೆಗಳ ಬದಿಯಲ್ಲಿ,  ಜಮೀನುಗಳಲ್ಲಿ ನಿಲ್ಲುತ್ತಿದೆ.ಸೌಜನ್ಯ ಪೆಟ್ರೋಲ್ ಬಂಕ್‌ನಲ್ಲಿ ನೀರು ಶೇಖರಣೆಗೊಂಡಿರುವುದರಿಂದ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು, ವಾಹನ ಸವಾರರಿಗೆ ಕಿರಿಕಿರಿಯಾಗಿದೆ. ಇದೇ ನೀರನ್ನು ಕೆರೆ ಮತ್ತು ಜಮೀನುಗಳಿಗೆ ಹರಿಸಿದ್ದರೆ ಬೆಳೆಗಳು ಮತ್ತು ಜಾನುವಾರುಗಳ ನೀರಿನ ಸಮಸ್ಯೆ ಕಡಿಮೆಯಾಗುತ್ತಿತ್ತು ಎಂದು ಹೇಳುತ್ತಿದ್ದಾರೆ.

” ತಾರಕ ಜಲಾಶಯದಿಂದ ಬಲದಂಡೆ ನಾಲೆಗೆ ನೀರು ನಿಲ್ಲಿಸಲಾಗಿದೆ. ನಾಲೆಯಲ್ಲಿರುವ ನೀರನ್ನು ಕೆಲವರು ಗೇಟ್‌ಗಳನ್ನು ತೆರೆದು ಬಿಟ್ಟಿರುವುದರಿಂದ ಹಾಗೂ ಮಳೆ ನೀರು ಜೊತೆಯಾಗಿ ಹರಿದು ಬಂದು ಕೆರೆಯಂತೆ ನಿರ್ಮಾಣಗೊಂಡಿದೆ. ನೀರು ಸರಾಗವಾಗಿ ಹೋಗಲು ಚರಂಡಿ ನಿರ್ಮಾಣ ಮಾಡದೇ ಇರುವುದರಿಂದ ಇಂತಹ ಸಮಸ್ಯೆ ಎದುರಾಗಿದೆ.”

ನಟಶೇಖರ್ ಮೂರ್ತಿ, ಎಇಇ, ತಾರಕ ಜಲಾಶಯ

” ತಾಲ್ಲೂಕಿನಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಿಸಿ ಜಲಾಶಯದಲ್ಲಿ ಇದ್ದ ನೀರನ್ನು ಕೆರೆಕಟ್ಟೆಗಳಿಗೆ ತುಂಬಿಸಿದ್ದರೆ ಎಲ್ಲಾ ಕೆರೆಕಟ್ಟೆಗಳು ತುಂಬುತ್ತಿದ್ದವು. ಆದರೆ ಇವರು ರಸ್ತೆಗಳು, ಎಲ್ಲಿ ಬೇಕಾದರೂ ಅಲ್ಲಿ ನೀರು ಬಿಡುವುದರಿಂದ ಪೆಟ್ರೋಲ್ ಬಂಕ್ ಆವರಣದ ಬಳಿ ಸಣ್ಣ ಕೆರೆಯಂತೆ ನಿರ್ಮಾಣಗೊಳ್ಳುತ್ತಿವೆ”

ಕುಮಾರಸ್ವಾಮಿ, ರೈತ ಮುಖಂಡ 

 

 

 

 

Tags:
error: Content is protected !!