ನಾ.ದಿವಾಕರ
ಆದರ್ಶ ಮಾದರಿಗಳೇ ಕಾಣದ ದೇಶದಲ್ಲಿ ಯುವ ಜನಾಂಗಕ್ಕೆ ದಾರಿ ದೀವಿಗೆ ಯಾವುದು?
ಇತ್ತೀಚಿನ ಜೆನ್ ಝಿ ಚಳುವಳಿಗಳು ಜಂತರ್ ಮಂತರ್‌ನಲ್ಲಿ ಧ್ವನಿಸಿದ ಮೇಲೆ ಭಾರತದ ಆಳುವ ವ್ಯವಸ್ಥೆಯಲ್ಲಿ ಸಣ್ಣ ಕಂಪನವಂತೂ ಮೂಡಿದೆ. ಈ ದೇಶದ ಯುವ ಜನತೆಗೆ ಅಲ್ಲಿ ಕಂಡ ಅಹಿಂಸಾತ್ಮಕ ಹೋರಾಟ ಮತ್ತು ಸತ್ಯಾಗ್ರಹದಂತಹ ಪ್ರತಿರೋಧದ ಹಾದಿ ಗಾಂಧಿಯನ್ನು ಪುನಃ ನೆನಪಿಸಿದೆ. ೧೯೩೦ರ ಚಾರಿತ್ರಿಕ ದಂಡಿಯಾತ್ರೆಯಲ್ಲಿ ಗಾಂಧಿ ಜಗ್ಗಲಿಲ್ಲ;
೨೦೨೬ರ ಜಂತರ್ ಮಂತರ್‌ನಲ್ಲಿ ಈ ದೇಶದ ಯುವಶಕ್ತಿ ಮಣಿಯಲಿಲ್ಲ. ಈ ಸಮಾನ ಎಳೆಯನ್ನು ಯುವ ಜನಾಂಗ ಗಂಭೀರವಾಗಿ ಪರಿಗಣಿಸಬೇಕಿದೆ. ಈ ಭಾರತ ಎಂಬ ಮೌಲ್ಯವನ್ನು ಯುವ ಜನಾಂಗ ಸಂಭಾಳಿಸುವುದಷ್ಟೇ ಅಲ್ಲ ಸುರಕ್ಷಿತವಾಗಿ ಕಾಪಾಡಬೇಕಿದೆ. ನವ ಭಾರತದ ರಾಜಕೀಯ ವ್ಯವಸ್ಥೆ ಅಕ್ಟೋಬರ್ ೨ ರಂದು ರಾಜಘಾಟದಲ್ಲಿ ಮಹಾತ್ಮನ ದಿವ್ಯ ಸಮಾಧಿಯ ಮುಂದೆ ‘ವೈಷ್ಣವ ಜನತೋ…’ ಮತ್ತು ‘ರಘುಪತಿ ರಾಘವ…’ ಭಜಿಸುವ ನೈತಿಕ ಅರ್ಹತೆಯನ್ನು ಕಳೆದುಕೊಂಡಿದೆ. ಯಾಂತ್ರಿಕವಾಗಿ ನಡೆಯುವ ಈ ಭಜನೆ ಮರುದಿನವೇ ಧ್ವನಿಸುವ ಗೋಡ್ಸೆಯ ವೈಭವೀಕರಣದಲ್ಲಿ, ಗಾಂಧಿ ಹತ್ಯೆಯ ಸಮರ್ಥನೆಯಲ್ಲಿ ಕರಗಿಹೋಗುತ್ತದೆ. ಇದನ್ನೆಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ದಿನವಿಡೀ ನೋಡುವ ಯುವಜನಾಂಗಕ್ಕೆ ಗಾಂಧಿ ಹೇಗೆ ಕಾಣಬೇಕು? ಕೇವಲ ಭಜನೆಯ ಕೇಂದ್ರವಾಗಿ ಕಾಣಬೇಕೋ ಅಥವಾ ಮೂರ್ತಿ ಪೂಜೆಯ ಬಿಂದುವಾಗಿ ಗೋಚರಿಸಬೇಕೋ? ಅಥವಾ ದೇಶದ ವಿಭಜನೆಯ ಕಾರಣಕರ್ತನಾಗಿ ಕಾಣಬೇಕೋ?
ವ್ಯಕ್ತಿ-ವ್ಯಕ್ತಿತ್ವ ಮತ್ತು ತಾತ್ವಿಕತೆ: ಸ್ವಾತಂತ್ರ್ಯ ಸಂಗ್ರಾಮಿಗಳ ಪೈಕಿ ಹೇಗಾದರೂ ಹಿಗ್ಗಿಸಬಹುದಾದ ವ್ಯಕ್ತಿಯಾಗಿ ಬಳಕೆಯಾಗಿರುವ ಒಬ್ಬ ಹೋರಾಟಗಾರರೆಂದರೆ ಅದು ಮಹಾತ್ಮ ಗಾಂಧಿ ಮಾತ್ರ. ರಾಜಕೀಯ ಪಕ್ಷಗಳು ಗಾಂಧಿಯನ್ನು ಚುನಾವಣಾ ಪ್ರಯಾಣದಲ್ಲಿ ಸಾರಥಿಯಂತೆ ಬಳಸಿವೆ. ಗಾಂಧಿ ತತ್ವಗಳನ್ನು ಆಂತರಿಕವಾಗಿ ಅಳವಡಿಸಿಕೊಳ್ಳದಿದ್ದರೂ ಬಾಹ್ಯರೂಪದ ಅಲಂಕಾರಿಕ ವಸ್ತುವಿನಂತೆ ಬಳಸಿವೆ. ಮೂಲತಃ ಗಾಂಧಿ ಯಾವುದೇ ನಿರ್ದಿಷ್ಟ ಸಿದ್ಧಾಂತವನ್ನು ಹುಟ್ಟುಹಾಕಲಿಲ್ಲ. ಗಾಂಧಿವಾದ ಎನ್ನುವುದು ಸ್ವತಂತ್ರ ಭಾರತದ ರಾಜಕೀಯ-ಸಾಮಾಜಿಕ ಉತ್ಪತ್ತಿ.
ಮಹಾತ್ಮರ ಆಲೋಚನಾ ವಿಧಾನಗಳನ್ನು ಅನುಸರಿಸುವುದನ್ನೇ ಗಾಂಧಿವಾದ ಎನ್ನಲಾಯಿತು. ಆದರೆ ಅನುಕರಿಸಲು ಯಾವ ಪಕ್ಷದಿಂದಲೂ ಸಾಧ್ಯವಾಗಲಿಲ್ಲ. ಹಾಗಾಗಿ ಯುವ ಜನಾಂಗ ನೋಡುತ್ತಿರುವ ಗಾಂಧಿವಾದ ಎಂಬ ವಿಶಾಲ ಚಪ್ಪರದಡಿ, ರಾಜಕೀಯವಾಗಿ ಗಾಂಧಿ ಹಿಂಬಾಲಕರನ್ನು ಗುರುತಿಸಬಹುದೇ ಹೊರತು, ಅನುಯಾಯಿಗಳನ್ನು ಅಲ್ಲ.
ಆದರೆ ಅಧಿಕಾರ ರಾಜಕಾರಣದಿಂದಾಚೆಗೆ ಗಾಂಧಿ ಅನುಯಾಯಿಗಳು ಉತ್ತರದ ರಾಜಸ್ಥಾನದಿಂದ ದಕ್ಷಿಣದ ಕರ್ನಾಟಕದವರೆಗೂ ಹೇರಳ ಸಂಖ್ಯೆಯಲ್ಲಿದ್ದಾರೆ. ಗಾಂಧಿ ಪ್ರಣೀತ ಗ್ರಾಮೀಣಾಭಿವೃದ್ಧಿ, ಸಾಮಾಜಿಕ ಪ್ರಗತಿ, ಜೀವನ ಶೈಲಿ ಮತ್ತು ಪ್ರತಿರೋಧದ ವಿಧಾನಗಳನ್ನು ಅನುಸರಿಸುವ ಅಸಂಖ್ಯಾತ ಸಂಸ್ಥೆಗಳು ನಮ್ಮ ನಡುವೆ ಯಶಸ್ವಿಯಾಗಿ ನಿಂತಿವೆ. ಈ ವಾತಾವರಣದಲ್ಲಿ ನಡೆಯುವ ಸಂಕಥನಗಳಲ್ಲಿ ಅಹಿಂಸೆ-ಸತ್ಯಾಗ್ರಹ ಹೆಚ್ಚಾಗಿ ಪ್ರಸ್ತಾಪವಾಗುವುದೇ ಇಲ್ಲ. ಬದಲಾಗಿ ಸಮಾಜದಲ್ಲಿ ನಿಕೃಷ್ಟವಾಗಿ ಬದುಕುತ್ತಿರುವ, ಸಾಮಾಜಿಕ ಅನುಕೂಲಗಳಿಂದ ವಂಚಿತರಾಗುತ್ತಿರುವ ಹಾಗೂ ಆಧುನಿಕ ಬಂಡವಾಳಶಾಹಿ ಔದ್ಯೋಗಿಕ ಜಗತ್ತಿನಲ್ಲಿ ಮುಂದಡಿ ಇಡಲಾಗದ ಗ್ರಾಮೀಣ-ಆದಿವಾಸಿ ಸಮುದಾಯಗಳಿಗೆ ತಮ್ಮದೇ ಆದ ಸ್ವಾವಲಂಬಿ ಬದುಕು ರೂಪಿಸಿಕೊಳ್ಳುವ ಮಾರ್ಗಗಳನ್ನು ಸೂಚಿಸಲಾಗುತ್ತಿದೆ. ಈ ಸಾಮಾಜಿಕ ವಾತಾವರಣಗಳಲ್ಲಿ ಗಾಂಧಿ ಉಸಿರಾಡುತ್ತಿದ್ದಾರೆ.
ಬಹು ಆಯಾಮದ ಗಾಂಧಿ ನೋಟ: ವರ್ತಮಾನದ ಯುವ ಜನಾಂಗ ಯಾವ ಗಾಂಧಿಯನ್ನು ನೋಡಬೇಕು? ಅಥವಾ ಗಾಂಧಿ ಎಂಬ ವ್ಯಕ್ತಿತ್ವವನ್ನು ತಾತ್ವಿಕವಾಗಿ ಹೇಗೆ ನೋಡಬೇಕು? ಚರಿತ್ರೆಯನ್ನು ಪರಿಶೋಧಿಸಿ, ಭೇದಿಸಿ, ಛೇದಿಸಿ, ಒಳಹೊಕ್ಕು ನೋಡುವ ಮೂಲಕ ಹೊಸ ವಿಚಾರಗಳನ್ನು ಹೆಕ್ಕಿ ತೆಗೆಯುವುದು ವೈಜ್ಞಾನಿಕ ಅಧ್ಯಯನ ವಿಧಾನ. ಆದರೆ ನವಭಾರತ ಈ ವಿಧಾನವನ್ನು ತಲೆಕೆಳಗು ಮಾಡಿದೆ. ಚರಿತ್ರೆಯನ್ನು ತಿರುಚುವ ಮೂಲಕ ವಾಸ್ತವಗಳನ್ನು ಇಲ್ಲವಾಗಿಸಿ ಮಿಥ್ಯೆಗಳಿಗೆ ಜೀವ ತುಂಬುವ ಬೌದ್ಧಿಕ ಪ್ರಕ್ರಿಯೆಗೆ ಹಿಂದುತ್ವ ರಾಜಕಾರಣ ೧೯೯೦ರಿಂದಲೇ ಚಾಲನೆ ನೀಡಿದೆ. ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಚರಿತ್ರೆಯನ್ನು ಛಿದ್ರಗೊಳಿಸಿ, ಅವಶೇಷಗಳಲ್ಲೂ ದೊರೆಯದ ಕಲ್ಪಿತ ವಾಸ್ತವಗಳನ್ನು ನೈಜ ಇತಿಹಾಸ ಎಂದು ಬಿಂಬಿಸಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಚಾರಿತ್ರಿಕ ಘಟನೆಗಳು ಅಳಿಸಿಹಾಕಲ್ಪಟ್ಟರೆ ಪೌರಾಣಿಕ ಮಿಥ್ಯೆಗಳು ಚರಿತ್ರೆಯಾಗಿ ದಾಖಲಾಗುತ್ತಿವೆ. ಈ ಅವೈಜ್ಞಾನಿಕ-ಅಬೌದ್ಧಿಕ ಪ್ರಕ್ರಿಯೆಯ ಒಂದು ಭಾಗವಾಗಿ ಗಾಂಧಿ ಹತ್ಯೆಯ ಹಿಂದೆ ದ್ವೇಷ ಕಾಣುವ ಬದಲು ಸತ್ಯಾನ್ವೇಷಣೆಯ ಹಾದಿ ಕಾಣುತ್ತದೆ. ಗಾಂಧಿ ಹಂತಕ ಹುತಾತ್ಮನಾಗುತ್ತಾನೆ, ಸ್ವತಃ ಗಾಂಧಿ ಹತ್ಯೆಗೆ ಯೋಗ್ಯರಾದ ದುಷ್ಟರಾಗಿ ಬಿಂಬಿಸಲ್ಪಡುತ್ತಾರೆ. ಈ ದ್ವಂದ್ವವನ್ನು ಯುವ ಜನಾಂಗ (ಜೆನ್ ಝಿ) ಗಂಭೀರವಾಗಿ ಗಮನಿಸಬೇಕಿದೆ. ಯುವ ಜನಾಂಗ ಗುರುತಿಸಬೇಕಿರುವುದು ಮಹಾತ್ಮನಲ್ಲಿದ್ದ ಸಂಯಮ ಮತ್ತು ಸ್ವಯಂಶೋಧನೆಯ ಔದಾತ್ಯಗಳನ್ನು.
ಮಾನವೀಯ ಮೌಲ್ಯಗಳ ನಡುವೆ: ವರ್ಣಾಶ್ರಮ ಪದ್ಧತಿ ಮತ್ತು ಸನಾತನ ಧರ್ಮದಲ್ಲಿ ಕೊನೆಯವರೆಗೂ ತಮ್ಮ ನಿಷ್ಠೆಯನ್ನು ಕಾಪಾಡಿಕೊಂಡ ಮಹಾತ್ಮನ ತಾತ್ವಿಕ ನಿಲುವು ಇಂದಿಗೂ ಪ್ರಶ್ನಾರ್ಹವಾಗಿಯೇ ಉಳಿದಿದೆ. ಆದರೆ ಇಂದಿನ ಯುವ ಜನಾಂಗ ಮುಖಾಮುಖಿಯಾಗುತ್ತಿರುವ ಸಮಕಾಲೀನ ಸನಾತನಿಗಳ ದ್ವೇಷ, ಅಸೂಯೆ, ಅಸಹಿಷ್ಣುತೆ ಮತ್ತು ದಮನಕಾರಿ ಪ್ರವೃತ್ತಿಗಳನ್ನು ಶುದ್ಧ ಸನಾತನಿ ಮಹಾತ್ಮನ ವ್ಯಕ್ತಿತ್ವದಲ್ಲಿ ಸೂಕ್ಷ್ಮದರ್ಶಕ ಬಳಸಿದರೂ ಕಾಣಲಾಗುವುದಿಲ್ಲ. ಸೈದ್ಧಾಂತಿಕವಾಗಿ ಕಡು ವಿರೋಧಿಯಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಆಗಲೀ, ದೇಶದ ವಿಭಜನೆಯ ವಿಚಾರದಲ್ಲಿ ಶತ್ರುವಾಗಿ ಪರಿಣಮಿಸಿದ ಜಿನ್ನಾ ಆಗಲೀ, ದ್ವೇಷಭಾವದ ಗಾಂಧಿಯನ್ನು ಕಾಣಲಿಲ. ಕೌಟುಂಬಿಕ ಸಂಬಂಧಗಳಲ್ಲೂ ತಾತ್ವಿಕ ನಡುಗೋಡೆಗಳನ್ನು ಕಟ್ಟಿರುವ ವರ್ತಮಾನದ ಹಿಂದುತ್ವ ರಾಜಕಾರಣದ ನೆಲೆಯಲ್ಲಿ ಯುವ ಜನಾಂಗ ಮಹಾತ್ಮನ ಈ ಔದಾತ್ಯವನ್ನು ಒಳಹೊಕ್ಕು ಗ್ರಹಿಸಬೇಕಿದೆ.
ಭವಿಷ್ಯದ ಭಾರತಕ್ಕೆ ಅಗತ್ಯವಾಗಿರುವುದು ಬಂಡವಾಳದ ಭದ್ರಕೋಟೆ, ಸುರಕ್ಷಿತ ಗಡಿಗಳು ಮಾತ್ರ ಅಲ್ಲ. ಆಂತರಿಕವಾಗಿ ಭಾರತ ತನ್ನೊಳಗಿನ ಪ್ರಾಚೀನ ಚಿಂತನೆಯ ಮಾದರಿಗಳನ್ನು ಕಳೆದುಕೊಳ್ಳಬೇಕಿದೆ. ಜಾತಿ ತಾರತಮ್ಯ, ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರದಂತಹ ಕ್ರೌರ್ಯ, ನೆರೆಯವರನ್ನೇಪರಕೀಯರಂತೆ ಕಾಣುವ ಮನೋಭಾವ, ಹೆಣ್ಣನ್ನು ಅಧೀನಳಂತೆ ಕಾಣುವ ಪಿತೃಪ್ರಧಾನ ಧೋರಣೆ, ಶತಮಾನಗಳಿಂದ ಬೇರೂರಿರುವ ಸಾಮಾಜಿಕ ನಿಯಮಗಳು ಇಂತಹ ಅವಲಕ್ಷಣಗಳಿಂದ ಭಾರತ ಮುಕ್ತವಾಗಬೇಕಿತ್ತು. ಇದು ಮಹಾತ್ಮ ಗಾಂಧಿಯ ಕನಸಿನ ಒಂದು ಭಾಗವಾಗಿತ್ತು.
ಆದರೆ ಗಾಂಧಿ ಹಂತಕನನ್ನು ಹುತಾತ್ಮನನ್ನಾಗಿ, ಹುತಾತ್ಮ ರಾಷ್ಟ್ರಪಿತನನ್ನು ದುಷ್ಟನನ್ನಾಗಿಸುವ ರಾಜಕೀಯ-ಸಾಂಸ್ಕ ತಿಕ ವಾತಾವರಣದಲ್ಲಿ ಈ ಕನಸುಗಳು ನುಚ್ಚುನೂರಾಗುತ್ತಿವೆ. ಈ ಚೂರಾದ ಕನಸುಗಳ ಕಣಗಳೂ ಕಾಣಿಸದ ಹಾಗೆ ಅವಶೇಷಗಳನ್ನು ತೊಳೆದುಹಾಕಲಾಗುತ್ತಿದೆ. ಯುವ ಜನಾಂಗ (ಜೆನ್ ಝಿ) ಈ ದುಷ್ಟ ಪ್ರಕ್ರಿಯೆಗೆ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದೆ. ಸಹಜವಾಗಿಯೇ ಗೊಂದಲದ ಗೂಡಿನಲ್ಲಿ ಬಂಧಿಯಾಗಿದೆ. ಯಾರ ಕಡೆ ನೋಡುವುದು, ಯಾರ ಹಿಂದೆ ನಡೆಯುವುದು, ಯಾವ ದಿಕ್ಕಿನಲ್ಲಿ ಚಲಿಸುವುದು ಎಂಬ ಪ್ರಶ್ನೆಗಳಿಗೆ ಮುಖಾಮುಖಿಯಾದಾಗ ಯುವ ಜನಾಂಗಕ್ಕೆ ಬುದ್ಧ-ಬಸವನಿಂದ ಹಿಡಿದು ವಿವೇಕಾನಂದ, ಅಂಬೇಡ್ಕರ್, ಗಾಂಧಿ, ಮಾರ್ಕ್ಸ್ ಮೊದಲಾದ ಸೈದ್ಧಾಂತಿಕ ದಾರ್ಶನಿಕರು ಎದುರಾಗುತ್ತಾರೆ. ಈ ದಾರ್ಶನಿಕರ ವಾರಸುದಾರರಂತೆ ವರ್ತಿಸುವ ಸಂಘಟನೆಗಳೂ, ಪಕ್ಷಗಳೂ ಎದುರಾಗುತ್ತವೆ.
ಭವಿಷ್ಯದ ಹಾದಿಯಲ್ಲಿ ಗಾಂಧಿ ಹೆಜ್ಜೆ: ಈ ಸಾಂಸ್ಥಿಕ ನೆಲೆಗಳಲ್ಲಿ ಯುವ ಜನಾಂಗವನ್ನು (ಜೆನ್ ಝಿ) ಸರಿದಾರಿಯಲ್ಲಿ ಕರೆದೊಯ್ಯುವ ಉದಾತ್ತ ಗುರಿ ಸಮಾನ ಎಳೆಯಾಗಿ ಕಂಡರೂ, ಆ ಸರಿದಾರಿಯ ಆತ್ಯಂತಿಕ ಗುರಿ ನಿಷ್ಕರ್ಷೆ ಮಾಡುವಾಗ ಹತ್ತಾರು ಕವಲುಗಳು ಸೃಷ್ಟಿಯಾಗುತ್ತವೆ. ಈ ಕವಲುಗಳನ್ನೇ ಬಳಸುದಾರಿಯಾಗಿ ಉಪಯೋಗಿಸಿಕೊಂಡು ಹೊರಳುದಾರಿಯನ್ನಾಗಿ ಪರಿವರ್ತಿಸುವ ರಾಜಕೀಯ ವ್ಯವಸ್ಥೆ ಭಾರತವನ್ನು ಆಳುತ್ತಿದೆ. ೨೦೪೭ರ ಶತಮಾನೋತ್ಸವದ ಸಮಯದಲ್ಲಿ ನಿರ್ಣಾಯಕ ಸ್ಥಾನದಲ್ಲಿರಬಹುದಾದ ವರ್ತಮಾನದ ಯುವ ಜನಾಂಗ ಈ ವ್ಯವಸ್ಥೆಯ ತೂಫಾನ್ ಎದುರಿಸಬೇಕಿದೆ.
” ‘ವಿಕಸಿತ ಭಾರತ’ ಎಂಬ ನಾವೆಯನ್ನು ಈ ದ್ವೇಷಾಸೂಯೆಗಳ ತೂಫಾನಿನ ಅಪಾಯದಿಂದ ರಕ್ಷಿಸುವ, ಸಂಭಾಳಿಸುವ ಜವಾಬ್ದಾರಿ ಯುವಜನಾಂಗದ ಮೇಲಿರಲಿದೆ. ಇದನ್ನು ಸಾಧಿಸುವ ಹಾದಿಯಲ್ಲಿ ‘ಮಹಾತ್ಮ ಗಾಂಧಿ’ ಸದಾ ಪ್ರಸ್ತುತವಾಗಿಯೇ ಉಳಿಯುತ್ತಾರೆ.”
” ಈ ಗಾಂಧಿಯನ್ನು ನಾವು ಮರುಶೋಧಿಸಬೇಕಿದೆ. ಇವರು ರಾಜಘಾಟದಲ್ಲಿ ಸಿಗುವುದಿಲ್ಲ. ರಾಜಕೀಯ ಅಂಗಳದಲ್ಲಿ ಅದೃಶ್ಯರಾಗಿದ್ದಾರೆ. ಸಾಂಸ್ಕ ತಿಕ ಲೋಕದಲ್ಲಿ ಈಗ ಅಳಿಸಿಹಾಕಲ್ಪಡುತ್ತಿದ್ದಾರೆ. ಆದರೆ ಚರಿತ್ರೆಯ ಪುಟಗಳನ್ನು ಅಳಿಸಿಹಾಕಬಹುದು, ಇತಿಹಾಸವನ್ನು ಅಳಿಸಲಾಗುವುದಿಲ್ಲ. ಗಾಂಧಿ ಕೆಲವೊಮ್ಮೆ ಸಾಂದರ್ಭಿಕವಾಗಿ, ಕೆಲವೊಮ್ಮೆ ತಾತ್ವಿಕವಾಗಿ, ಕೆಲವೊಮ್ಮೆ ಜೀವನದರ್ಶನವಾಗಿ ನಮ್ಮ ನಡುವೆ ನಡೆದಾಡುತ್ತಲೇ ಇರುತ್ತಾರೆ. ಈ ಮಹಾತ್ಮನನ್ನು ಪ್ರತಿಮೆಗಳಲ್ಲಿ ಬಂಧಿಸಿ, ಭಜನೆಗಳ ಸರಳುಗಳ ಹಿಂದೆ ಕೂಡಿಹಾಕುವ ಬದಲು, ಆತನ ವ್ಯಕ್ತಿತ್ವವನ್ನು ಮತ್ತು ಅದರೊಗಳಗಿನ ಔದಾತ್ಯಗಳನ್ನು ಅಂತರಿಕೀಕರಣಗೊಳಿಸಿಕೊಳ್ಳುವುದು ವರ್ತಮಾನದ ಯುವಜನಾಂಗದ (ಜೆನ್ ಝಿ) ಆಯ್ಕೆಯಾಗಬೇಕಿದೆ. ಸಾಮಾಜಿಕವಾಗಿ ಅಧಃಪತನದ ಹಾದಿಯಲ್ಲಿ ಸಾಗುತ್ತಿರುವ ಭಾರತಕ್ಕೆ ಈ ಸೌಂದರ್ಯದ ಸ್ಪರ್ಶ ಬೇಕಿದೆ. ಜೆನ್ ಝೀ ಇದನ್ನು ಗಮನಿಸಬೇಕಿದೆ.”




