ಸಿಂಗಿ ಸತೀಶ್
ತಾಕುಗಳನ್ನು ಪರಿಶೀಲಿಸಿದ ಕೃಷಿ ವಿಜ್ಞಾನಗಳು; ಮುನ್ನೆಚ್ಚರಿಕೆ ವಹಿಸಲು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಸಲಹೆ
ಗೋಣಿಕೊಪ್ಪ: ಕೊಡಗಿನಲ್ಲಿ ಭತ್ತ ಬೆಳೆಯುವ ಪ್ರದೇಶಗಳಾದ ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲ್ಲೂಕುಗಳಲ್ಲಿ ಭತ್ತದ ನಾಟಿ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಇದೀಗ ೩೦ರಿಂದ ೪೦ ದಿನಗಳಾಗಿರುವ ಪೈರಿಗೆ ಬೆಂಕಿ ರೋಗ ಹಾಗೂ ಎಲೆ ಸುರುಳಿ ಹುಳುವಿನ ಬಾಧೆ ಕಾಣಿಸಿಕೊಂಡಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ವಿವಿಧ ಗ್ರಾಮಗಳ ಗದ್ದೆಗಳಲ್ಲಿ ರೋಗ ಮತ್ತು ಕೀಟದ ಬಾಧೆ ಕಂಡುಬಂದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ ರೈತರ ತಾಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ರೈತರು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಕೃಷಿ ವಿಜ್ಞಾನ ಕೇಂದ್ರ ಸಲಹೆ ನೀಡಿದೆ.
ಬೆಂಕಿ ರೋಗದ ಆರಂಭಿಕ ಹಂತದಲ್ಲಿ ಭತ್ತದ ಎಲೆಗಳ ಮೇಲೆ ಸಣ್ಣ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಕ್ರಮೇಣ ಚುಕ್ಕೆಗಳು ವಿಸ್ತರಿಸಿ ಕದಿರಿನಾಕಾರದ ತುದಿಗಳನ್ನು ಪಡೆಯುತ್ತವೆ. ಚುಕ್ಕೆಗಳ ಮಧ್ಯಭಾಗ ಬೂದಿ ಬಣ್ಣಕ್ಕೆ ತಿರುಗಿ ಸುತ್ತಲೂ ಕಂದು ಬಣ್ಣ ಕಾಣಿಸಿಕೊಳ್ಳುತ್ತದೆ. ನಂತರ ಚುಕ್ಕೆಗಳು ಒಂದಕ್ಕೊಂದು ಸೇರಿಕೊಂಡು ಎಲೆ ಸುಟ್ಟುಹೋದಂತೆ ಕಾಣುತ್ತದೆ. ರೋಗ ತೀವ್ರಗೊಂಡರೆ ಬೆಳೆಯ ಬೆಳವಣಿಗೆ ಹಾಗೂ ಇಳುವರಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.
ಬೆಂಕಿ ರೋಗ ನಿಯಂತ್ರಣಕ್ಕೆ ಭತ್ತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಬಳಸುವುದನ್ನು ತಪ್ಪಿಸಬೇಕೆಂದು ಕೃಷಿ ಇಲಾಖೆ ಸೂಚಿಸಿದೆ. ರೋಗದ ಬಾಧೆ ಕಂಡುಬಂದಲ್ಲಿ ಶಿಫಾರಸು ಮಾಡಿರುವ ಪ್ರಮಾಣದಲ್ಲಿ ಟ್ರೈಪ್ಲೊಕ್ಸಿಸ್ಟ್ರೋಬಿನ್ + ಟೆಬುಕೋನಜೋಲ್, ಟ್ರೈಸೈಕ್ಲಜೋಲ್ ಅಥವಾ ಅಜಾಕ್ಸಿಸ್ಟ್ರೋಬಿನ್ + ಡೈಫೆನ್ಕೋನಜೋಲ್ ಒಳಗೊಂಡ ಶಿಲೀಂಧ್ರನಾಶಕಗಳನ್ನು ಬಳಸಿ ಸಿಂಪಡಣೆ ಮಾಡುವಂತೆ ಸಲಹೆ ನೀಡಲಾಗಿದೆ.
ಎಲೆ ಸುರುಳಿ ಹುಳು ಭತ್ತದ ಎಲೆಯ ಅಂಚನ್ನು ಮಡಚಿ ಸುರುಳಿಯಂತೆ ಸುತ್ತಿಕೊಂಡು ಒಳಭಾಗದ ಹಸಿರು ಪದರವನ್ನು ಕೆರೆದು ತಿನ್ನುತ್ತದೆ. ಇದರಿಂದ ಪೈರು ಬಿಳಿಚಿಕೊಂಡಂತೆ ಕಾಣುತ್ತದೆ. ಬಾಧೆ ತೀವ್ರವಾದರೆ ಬೆಳವಣಿಗೆ ಕುಂಠಿತವಾಗಿ ತೆನೆ ಬರುವುದರ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಮೋಡ ಕವಿದ ವಾತಾವರಣ, ತುಂತುರು ಮಳೆ ಹಾಗೂ ಬಿಟ್ಟು ಬಿಟ್ಟು ಬರುವ ಬಿಸಿಲು-ಮಳೆಯ ವಾತಾವರಣದಲ್ಲಿ ಈ ಕೀಟದ ಬಾಧೆ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ರೈತರು ಗದ್ದೆಯ ಬದುಗಳಲ್ಲಿರುವ ಕಳೆಗಳನ್ನು ತೆರವುಗೊಳಿಸಿ ಸ್ವಚ್ಛವಾಗಿಟ್ಟುಕೊಳ್ಳಬೇಕು. ಶಿಫಾರಸು ಮಾಡಿದ ಪ್ರಮಾಣದಲ್ಲೇ ಸಾರಜನಕ ಗೊಬ್ಬರ ಬಳಸಬೇಕು. ಕೀಟದ ಬಾಧೆ ಕಂಡುಬಂದಲ್ಲಿ ಇಂಡಾಕ್ಸಿಕಾರ್ಬ್ ಅಥವಾ ಫ್ಲ್ಯೂಬೆಂಡಮೈಡ್ ಅನ್ನು ಶಿಫಾರಸು ಮಾಡಿದ ಪ್ರಮಾಣದಲ್ಲಿ ಸಿಂಪಡಿಸಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.
” ಬೆಂಕಿ ರೋಗ ನಿಯಂತ್ರಣಕ್ಕೆ ಸಲಹೆ ಭತ್ತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ರಸಗೊಬ್ಬರ ಬಳಸುವುದನ್ನು ತಪ್ಪಿಸಿ, ಶಿಫಾರಸು ಮಾಡಿದ ಪ್ರಮಾಣದಲ್ಲೇ ಬಳಕೆ ಮಾಡಬೇಕು. ರೋಗದ ಬಾಧೆ ಕಂಡುಬಂದಲ್ಲಿ ಟ್ರೈಪ್ಲೊಕ್ಸಿಸ್ಟ್ರೋಬಿನ್+ ಟೆಬುಕೋನಜೋಲ್ ೦.೫ ಗ್ರಾಂ, ಟ್ರೈಸೈಕ್ಲಜೋಲ್ ೦.೬ ಗ್ರಾಂ ಅಥವಾ ಅಜಾಕ್ಸಿಸ್ಟ್ರೋಬಿನ್ + ಡೈಫೆನ್ಕೋನಜೋಲ್ ೧ ಮಿ.ಲಿ. ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಶಿಲೀಂಧ್ರನಾಶಕದೊಂದಿಗೆ ಅಂಟು ದ್ರಾವಣ ಸೇರಿಸಿ ಸಿಂಪಡಿಸುವುದು ಸೂಕ್ತ.”




