Mysore
30
overcast clouds

Social Media

ಗುರುವಾರ, 01 ಅಕ್ಟೋಬರ್ 2026
Light
Dark

ಸಕ್ಕರೆ ನಾಡಿನಲ್ಲಿ ಬರದಿಂದ ಕಂಗಾಲಾದ ರೈತರು

ಹೇಮಂತ್‌ಕುಮಾರ್

ಮಂಡ್ಯ ಜಿಲ್ಲೆಯಲ್ಲಿ ೪೮,೫೯೧ ಹೆ. ಬೆಳೆ ಹಾನಿ ೫೪.೫೩ ಕೋಟಿ ರೂ. ನಷ್ಟದ ಅಂದಾಜು

ಮಂಡ್ಯ: ಜಿಲ್ಲೆಯಲ್ಲಿ ಕಳೆದ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಶೇ.೩೮ರಷ್ಟು ಮಳೆ ಕೊರತೆಯಾದ ಪರಿಣಾಮ ಬೆಳೆ ನಷ್ಟ ಸಂಭವಿಸಿ ಬರಗಾಲದ ತೀವ್ರತೆಯನ್ನು ಕಾಣುವಂತಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ೪೮,೫೯೧ ಹೆಕ್ಟೇರ್ ಕೃಷಿ ಪ್ರದೇಶ ಹಾಗೂ ೩ ಹೆ. ತೋಟಗಾರಿಕೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಒಟ್ಟಾರೆ ೫೪.೫೩ ಕೋಟಿ ರೂ. ಮೌಲ್ಯದ ಬೆಳೆ ನಷ್ಟ ಸಂಭವಿಸಿದೆ.

ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ೨೭೭ ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ ೧೭೧ ಮಿ.ಮೀ. ಮಾತ್ರ ಮಳೆಯಾಗಿದ್ದು, ಶೇ.೩೮ರಷ್ಟು ಮಳೆ ಕೊರತೆಯಾಗಿದೆ. ಬರಗಾಲದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬರಪೀಡಿತ ಪ್ರದೇಶಗಳ ಪಟ್ಟಿ ಬಿಡುಗಡೆ ಮಾಡಿದ್ದು, ಮಂಡ್ಯ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ, ನಾಗಮಂಗಲ ಹಾಗೂ ಮಳವಳ್ಳಿ ತಾಲ್ಲೂಕುಗಳನ್ನು ಗುರುತಿಸಲಾಗಿತ್ತು.

ಮದ್ದೂರು ಮತ್ತು ಪಾಂಡವಪುರ ತಾಲ್ಲೂಕುಗಳನ್ನು ಮಧ್ಯಮ ಬರಪೀಡಿತವೆಂದು ಪರಿಗಣಿಸಿದೆ. ಆದರೆ ಜಿಲ್ಲೆಯ ರೈತರು ಮತ್ತು ಸಂಘಟನೆಗಳುಇಡೀ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ಒತ್ತಾಯಿಸಿವೆ.

ಮಳೆಯಾಶ್ರಿತ ಪ್ರದೇಶಗಳಲ್ಲಿ ಹೆಚ್ಚು ಹಾನಿ: ಪ್ರಮುಖವಾಗಿ ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆದ ಅಲಸಂದೆ, ಹುರುಳಿ, ಶೇಂಗಾ, ಜೋಳ, ರಾಗಿ, ಕಬ್ಬು, ಎಳ್ಳು, ಉದ್ದು, ಹೆಸರುಕಾಳು ಬೆಳೆಗಳು ತೀವ್ರ ಮಳೆ ಕೊರತೆಯಿಂದ ಒಣಗಿಹೋಗಿವೆ. ನೀರಾವರಿ ಪ್ರದೇಶದಲ್ಲಿ ಸ್ವಲ್ಪಮಟ್ಟಿಗೆ ಬೆಳೆಗಳು ಉಳಿದುಕೊಂಡಿವೆ. ಮಳೆಯಾಶ್ರಿತ ಪ್ರದೇಶದಲ್ಲಿ ೩೩,೦೩೬ ಹೆ. ಮತ್ತು ನೀರಾವರಿ ಪ್ರದೇಶದಲ್ಲಿ ೧೫,೫೫೫ ಹೆ.ನಲ್ಲಿ ಬೆಳೆ ಹಾನಿಯಾಗಿರುವುದು ವರದಿಯಾಗಿದೆ.

ಬಿತ್ತನೆ ಬೀಜ, ಉಳುಮೆ, ರಸಗೊಬ್ಬರ, ಕಾರ್ಮಿಕರ ವೆಚ್ಚ ಸೇರಿದಂತೆ ಕೃಷಿ ಚಟುವಟಿಕೆಗೆ ಹಾಕಿದ ಬಂಡವಾಳವೂ ಈ ಬಾರಿ ಕೈಸೇರದೆ ರೈತ ಸಂಕಷ್ಟಕ್ಕೆ ಸಿಲುಕಿ, ಸರ್ಕಾರದ ಬರ ಪರಿಹಾರದತ್ತ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹೀಗೆ ಬರದ ಹೊಡೆತ ಹೆಚ್ಚಾಗಿ ಅನುಭವಿಸುತ್ತಿರುವ ನಾಗಮಂಗಲ ಮತ್ತು ಕೆ.ಆರ್.ಪೇಟೆ ತಾಲ್ಲೂಕುಗಳ ರೈತರು ತೀವ್ರ ಸಮಸ್ಯೆಗೆ ಸಿಲುಕಿದ್ದಾರೆ.

ನಾಗಮಂಗಲ ತಾಲ್ಲೂಕಿನಲ್ಲಿ ೧೮,೧೬೨ ಹೆ. ಮತ್ತು ಕೆ.ಆರ್.ಪೇಟೆಯಲ್ಲಿ ೧೨,೮೮೩ ಹೆ.ಬೆಳೆ ನಾಶವಾಗಿದೆ. ಪಾಂಡವಪುರ ತಾಲ್ಲೂಕಿನಲ್ಲಿ ೩ ಹೆ. ಸೇವಂತಿ ಬೆಳೆ ಹಾನಿ ಸಂಭವಿಸಿದೆ. ಇಂತಹ ಸ್ಥಿತಿಯಲ್ಲಿ ರೈತರಿಗೆ ಬೆಳೆಗಾಗಿ ಪಡೆದ ಸಾಲದ್ದೇ ದೊಡ್ಡ ಚಿಂತೆಯಾಗಿದೆ. ಸೊಸೈಟಿಗಳಲ್ಲಿ, ಬ್ಯಾಂಕ್ಗಳಲ್ಲಿ ಚಿನ್ನಾಭರಣ ಗಿರವಿ ಇಟ್ಟು ಪಡೆದ ಸಾಲ, ಖಾಸಗಿಯಾಗಿ ಮಾಡಿರುವ ಸಾಲಗಳ ಹೊರೆ ತಾಳಲಾಗದ ಸನ್ನಿವೇಶ ಎದುರಾಗಿದೆ. ಇತ್ತ ಬೆಳೆಯೂ ಇಲ್ಲದೆ, ಸಾಲ ತೀರಿಸಲೂ ಆಗದ ಸ್ಥಿತಿ ಎದುರಾಗಿದೆ. ಬೆಳೆಯನ್ನೇ ನಂಬಿಕೊಂಡವರು ಸರ್ಕಾರ ಕೊಡುವ ೨,೫೦೦ ರೂ. ಬೆಳೆ ನಷ್ಟ ಪರಿಹಾರ ಯಾವುದಕ್ಕೂ ಸಾಲುತ್ತಿಲ್ಲ ಎಂಬ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

” ಮಂಡ್ಯ ಜಿಲ್ಲೆಯಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ೩೩,೦೩೬ ಹೆ. ಮತ್ತು ನೀರಾವರಿ ಪ್ರದೇಶದಲ್ಲಿ ೧೫,೫೫೫ ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿರುವುದು ವರದಿಯಾಗಿದೆ. ಈಗಾಗಲೇ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯ ಜಂಟಿ ಸರ್ವೆ ನಡೆದಿದ್ದು, ಸುಮಾರು ೪೮,೫೯೧ ಹೆ. ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದ್ದು, ಸಮೀಕ್ಷೆಯಂತೆ ೫೪.೫೩ ಕೋಟಿ ರೂ. ಮೌಲ್ಯದ ಬೆಳೆ ನಷ್ಟವುಂಟಾಗಿರುವುದು ಕಂಡುಬಂದಿದೆ. ಬೆಳೆ ವಿಮೆ ಮಾಡಿಸಿಕೊಂಡ ರೈತರಿಗೆ ತಿಂಗಳ ಅವಧಿಯಲ್ಲಿ ಸುಮಾರು ೧೮ರಿಂದ ೨೦ ಕೋಟಿ ರೂ. ಬರುವ ಸಂಭವವಿದೆ.”

 -ಜಯಸ್ವಾಮಿ, ಜಂಟಿ ಕೃಷಿ ನಿರ್ದೇಶಕರು, ಮಂಡ್ಯ

” ಇಂತಹ ಬರಗಾಲದಲ್ಲಿ ಸರ್ಕಾರ ಹೇಳುವುದೊಂದು ಮಾಡುವುದೊಂದು ಆಗಿದೆ. ಗೃಹಕ್ಷ್ಮಿ ಯೋಜನೆಯಡಿ ಮಹಿಳೆಗೆ ೨,೦೦೦ ರೂ. ಕೊಡುವ ಸರ್ಕಾರ ಒಂದು ಎಕರೆ ಬೆಳೆ ಬೆಳೆದು ನಷ್ಟ ಅನುಭವಿಸಿದ ರೈತನಿಗೆ ಎರಡೂವರೆ ಸಾವಿರ ರೂ. ಪರಿಹಾರ ಎನ್ನುತ್ತಾರಲ್ಲ ಇದು ಯಾವ ನ್ಯಾಯ? ಬೆಳೆ ಹಾಕಬೇಡಿ ಎಂದವರು ಯಾವ ಪರಿಹಾರ ಕೊಡಿಸಿದರು? ಕೆಆರ್‌ಎಸ್‌ನಿಂದ ತಮಿಳುನಾಡಿಗೆನೀರು ಹರಿಸಿ ಇಲ್ಲಿನ ರೈತರ ಬೆಳೆ ಒಣಗಿಸಿದರು. ಮಂಡ್ಯ ಜಿಲ್ಲೆಯ ಎಲ್ಲ ಎಂಎಲ್‌ಎ, ಎಂಎಲ್‌ಸಿಗಳೂ ಕಾಂಗ್ರೆಸ್ಸಿಗರೇ ಇದ್ದಾರೆ. ಇವರೆಲ್ಲ ರೈತರ ನೆರವಿಗೆ ಏಕೆ ಬರುತ್ತಿಲ್ಲ? ಆದ್ದರಿಂದ ಸರ್ಕಾರ ಕೂಡಲೇ ಕೃಷಿ ಸಾಲ ಮನ್ನಾ ಮಾಡಬೇಕು, ಸೊಸೈಟಿ ಮತ್ತು ಬ್ಯಾಂಕ್ ಸಾಲ ವಸೂಲಾತಿಯನ್ನು ಮುಂದೂಡಲು ಆದೇಶಿಸಬೇಕು.”

 -ಇಂಡುವಾಳು ಚಂದ್ರಶೇಖರ್, ರೈತಸಂಘದ ಅಧ್ಯಕ್ಷರು, ಮಂಡ್ಯ

ಬೆಳೆಹಾನಿಯ ವಿವರ: 

ಜಿಲ್ಲೆಯಲ್ಲಿ ೨೬,೯೭೩ ಹೆ. ಅಲಸಂದೆ, ೬೮೦ ಹೆ. ಹುರುಳಿ, ೨೦ ಹೆ. ಶೇಂಗಾ, ೪೫೪ ಹೆ. ಜೋಳ, ೧೫,೧೦೩ ಹೆ. ಕಬ್ಬು, ೨೦ ಹೆ.ರಾಗಿ, ೫,೨೪೧ ಹೆ.ಎಳ್ಳು, ೭೯ ಹೆ.ಉದ್ದು ೨೦ ಹೆ. ಹೆಸರುಕಾಳು ಹಾಗೂ ೩ ಹೆ.ನಲ್ಲಿನ ಸೇವಂತಿಗೆ ಹಾನಿ ಸಂಭವಿಸಿದೆ.

ಯಾವ ತಾಲ್ಲೂಕಿನಲ್ಲಿ ಎಷ್ಟು ನಷ್ಟ?: 

ಮಂಡ್ಯ ೪,೦೪೦.೯೨ ಹೆ., ಮದ್ದೂರು ೩,೯೯೭ ಹೆ., ಮಳವಳ್ಳಿ ೨,೭೪೯ ಹೆ., ಪಾಂಡವಪುರ ೪,೬೧೦ ಹೆ., ಕೆ.ಆರ್.ಪೇಟೆ ೧೨,೮೮೩ ಹೆ., ನಾಗಮಂಗಲ-೧೮,೭೬೨ ಹೆ. ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ೧,೫೫೦ ಹೆ.ಗಳಲ್ಲಿ ಕೃಷಿ ಬೆಳೆ ನಷ್ಟ ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ ೪೮,೫೯೧.೯ ಹೆ. ಕೃಷಿ ಬೆಳೆ ನಷ್ಟವಾಗಿದ್ದರೆ, ಪಾಂಡವಪುರದಲ್ಲಿ ಮಾತ್ರ ೩ ಹೆಕ್ಟೇರ್ ಸೇವಂತಿಗೆ ಹೂವು ನಷ್ಟ ಸಂಭವಿಸಿದೆ ಎಂದು ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು ಬೆಳೆ ನಷ್ಟದ ವರದಿ ನೀಡಿವೆ.

ಎಣ್ಣೆ ಕಾಳುಗಳ ಬಿತ್ತನೆ ತೀವ್ರ ಕುಸಿತ:

ಜಿಲ್ಲೆಯಲ್ಲಿ ಎಣ್ಣೆಕಾಳು ಬಿತ್ತನೆಯಲ್ಲಿ ತೀವ್ರ ಕುಸಿತವುಂಟಾಗಿದ್ದು, ೬,೬೫೫ ಹೆ. ಗುರಿಹೊಂದಲಾಗಿತ್ತು. ಆದರೆ, ಬಿತ್ತನೆಯಾಗಿದ್ದು ೨,೨೨೬ ಹೆ.ನಲ್ಲಿ ಮಾತ್ರ. ಅಂದರೆ, ಶೇ.೩೩.೪ರಷ್ಟು ಮಾತ್ರ ಸಾಧನೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೬,೦೧೭ ಹೆ. ಗುರಿ ಹೊಂದಿದ್ದರೆ, ೬,೦೭೯ ಹೆ.ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ.೧೦೧ರಷ್ಟು ಪ್ರಗತಿ ಸಾಧಿಸಲಾಗಿತ್ತು.

——–

ಫಸಲ್ ವಿಮಾ ಯೋಜನೆ: 

ಜಿಲ್ಲೆಯಲ್ಲಿ ೨೦೨೧ರಿಂದ ೨೦೨೬ರ ಇಲ್ಲಿಯವರೆಗೆ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಡಿ ನೋಂದಾಯಿತರಾದ ೪.೫೩ ಲಕ್ಷ ರೈತರು ೧.೨೧ ಲಕ್ಷ ಹೆ.ಗೆ ವಿಮೆ ಮಾಡಿಸಿದ್ದು, ಅವರಲ್ಲಿ ೧.೯೪ ರೈತರಿಗೆ ೭,೭೪೨ ಲಕ್ಷ ರೂ.ಗಳ ವಿಮಾ ಪರಿಹಾರ ದೊರಕಿದೆ. ಆದರೆ, ೨೦೨೬ರಲ್ಲಿ ನೋಂದಾಯಿಸಿಕೊಂಡ ೧,೧೬,೫೬೮ ರೈತರು ೨೯,೪೪೧ ಹೆ.ಗೆ ವಿಮೆ ಮಾಡಿಸಿ ೩೫೧ ಲಕ್ಷ ರೂ. ಮೊತ್ತ ಪಾವತಿಸಿದ್ದಾರೆ. ಇವರಿಗೆ ಬೆಳೆ ನಷ್ಟದ ಪರಿಹಾರ ಬರಬೇಕಿದೆ.

 

 

Tags:
error: Content is protected !!