ಚಾಮರಾಜನಗರ ಜಿಯ ಕೊಳ್ಳೇಗಾಲ ಮತ್ತು ಹನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು ರೂ.೫೦೦ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲು ಬುಧವಾರ ಆಗಮಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಆತ್ಮೀಯ ಸ್ವಾಗತ.
ಚಾಮರಾಜನಗರ ಜಿ ರಚನೆಯಾಗಿ ಸುಮಾರು ೩೦ ವರ್ಷಗಳು ಕಳೆದಿವೆ. ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ನೈಸರ್ಗಿಕ ಸಂಪತ್ತಿನ ದೃಷ್ಟಿಯಿಂದ ಶ್ರೀಮಂತವಾಗಿರುವ ಈ ಜಿಲ್ಲೆಯಲ್ಲಿ ಇಂದಿಗೂ ಆರ್ಥಿಕ ಹಿಂದುಳಿದಿರುವಿಕೆ ಎದ್ದು ಕಾಣುತ್ತಿದೆ.
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಮೂಲಸೌಕರ್ಯ, ಶಿಕ್ಷಣ, ಉದ್ಯೋಗ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಜಿಲ್ಲೆಯಿಂದ ಆಯ್ಕೆಯಾದ ಹಲವು ಜನಪ್ರತಿನಿಧಿಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಲ್ಲಿ ಸಚಿವರಾಗಿ ಮತ್ತು ವಿವಿಧ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರೂ, ಜಿಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ನಿರೀಕ್ಷಿತ ಮಟ್ಟದ ಪ್ರಗತಿ ಸಾಧ್ಯವಾಗಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ.
ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯನ್ನು ಹಿಂದುಳಿದ ಜಿಲ್ಲೆಯೆಂದು ಗುರುತಿಸಿ, ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ನೀಡಿರುವ ಸಂವಿಧಾನದ ೩೭೧ಜೆ ವಿಧಿಯ ಮಾದರಿಯಲ್ಲಿ, ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಸ್ಥಾನಮಾನ ಹಾಗೂ ವಿಶೇಷ ಅನುದಾನ ನೀಡುವ ಕುರಿತು ಕ್ರಮ ಕೈಗೊಳ್ಳಬೇಕು.
ಇದರಿಂದ ಅಭಿವೃದ್ಧಿ ಹೊಂದಿದ ಜಿಯನ್ನಾಗಿ ರೂಪಿಸಲು ಸಹಕಾರಿಯಾಗಲಿದೆ.ಈ ಭಾಗದ ಸಚಿವರು, ಸಂಸದರು ಹಾಗೂ ಶಾಸಕರು ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಚಾಮರಾಜನಗರ ಜಿಲ್ಲೆಗೆ ಶಾಶ್ವತ ಅಭಿವೃದ್ಧಿ ಯೋಜನೆಗಳು, ವಿಶೇಷ ಅನುದಾನ ಹಾಗೂ ಅಗತ್ಯವಾದ ವಿಶೇಷ ಸ್ಥಾನಮಾನ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಅಲ್ಲದೆ, ರಾಜ್ಯ ಸರ್ಕಾರವು ಈ ಕುರಿತು ಸಮಗ್ರ ಪ್ರಸ್ತಾವನೆಯನ್ನು ಸಿದ್ಧಪಡಿಸಿ, ಅಗತ್ಯ ಕ್ರಮಗಳಿಗಾಗಿ ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಬೇಕು.
– ದಿಲೀಪ್ ವೆಂಕಟೇಶ್, ಮುಡಿಗುಂಡ, ಚಾಮರಾಜನಗರ ಜಿಲ್ಲೆ


