Mysore
21
overcast clouds

Social Media

ಬುಧವಾರ, 30 ಸೆಪ್ಟೆಂಬರ್ 2026
Light
Dark

ಅ.೧, ೨ರಂದು ಶ್ರೀ ಗುರುಮಲ್ಲೇಶ್ವರ ದಾಸೋಹ ಭವನ ಉದ್ಘಾಟನೆ

ಮಹೇಂದ್ರ ಹಸಗೂಲಿ

ದೇಪಾಪುರದಲ್ಲಿ ಗುಡಿಸಲಿನಲ್ಲಿ ಆರಂಭವಾದ ಅನ್ನ ದಾಸೋಹಕ್ಕೆ ಈಗ ದಾಸೋಹ ಭವನದ ರೂಪ

ಗುಂಡ್ಲುಪೇಟೆ: ಸಣ್ಣ ಗುಡಿಸಲಿನಲ್ಲಿ ಆರಂಭಗೊಂಡ ಅನ್ನದಾಸೋಹ ಇಂದು ಭವ್ಯವಾದ ದಾಸೋಹ ಭವನದ ರೂಪ ಪಡೆದುಕೊಂಡಿದೆ.

ತಾಲ್ಲೂಕಿನ ದೇಪಾಪುರ ಗ್ರಾಮದ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ದಾಸೋಹ ಭವನದ ಉದ್ಘಾಟನೆ ಹಾಗೂ ಆರಾಧನಾ ಮಹೋತ್ಸವವು ಅಕ್ಟೋಬರ್ ೧ ಮತ್ತು ೨ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕ ತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.ಅಕ್ಟೋಬರ್ ೧ರಂದು ಸುತ್ತೂರು ಶ್ರೀಗಳ ಸಾನ್ನಿಧ್ಯದಲ್ಲಿ ಷಟ್‌ಸ್ಥಲ ಧ್ವಜಾರೋಹಣ ಹಾಗೂ ದಾಸೋಹ ಭವನದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಅಕ್ಟೋಬರ್ ೨ರಂದು ಬೆಳಿಗ್ಗೆ ೬ ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ದೇವನೂರು ಶ್ರೀ ಗುರುಮಲ್ಲೇಶ್ವರ ತ್ರಿವಿಧ ದಾಸೋಹ ಮಹಾಸಂಸ್ಥಾನ ಮಠದ ಮಠಾಧ್ಯಕ್ಷರು ಮತ್ತು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ವಿವಿಧ ಹರಗುರು ಚರಮೂರ್ತಿಗಳು ಉಪಸ್ಥಿತರಿರಲಿದ್ದಾರೆ.

ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ದಾಸೋಹ ಪರಂಪರೆಗೆ ಹಲವು ವರ್ಷಗಳ ಇತಿಹಾಸವಿದೆ. ಬಸವಣ್ಣಸ್ವಾಮಿಗಳು ಮಠಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸಣ್ಣ ಗುಡಿಸಲಿನಲ್ಲಿ ಅನ್ನದಾಸೋಹದ ಕಾರ್ಯ ಆರಂಭಿಸಿದರು. ಯಾವುದೇ ಸರ್ಕಾರಿ ನೆರವು ಅಥವಾ ಅಽಕಾರಿಗಳ ಆಶ್ರಯವಿಲ್ಲದೆ, ಗ್ರಾಮದ ಜನರ ಸಹಕಾರದೊಂದಿಗೆ ಮನೆ ಮನೆಗೆ ತೆರಳಿ ಕಂತೆ ಭಿಕ್ಷೆ ಸಂಗ್ರಹಿಸಿ ದಾಸೋಹ ನಡೆಸುತ್ತಾ ಬಂದಿದ್ದರು.

ಆ ಸಂದರ್ಭದಲ್ಲಿ ದೇಪಾಪುರ ಹಾಗೂ ಸುತ್ತಮುತ್ತಲಿನ ಹುತ್ತೂರು, ಶೀಲವಂತಪುರ, ಸೋಮನಪುರ, ಕಡತಾಳಕಟ್ಟೆಹುಂಡಿ, ಕೊಡಸೋಗೆ ಸೇರಿದಂತೆ ಹಲವು ಗ್ರಾಮಗಳಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ದೇಪಾಪುರಕ್ಕೆ ಆಗಮಿಸುತ್ತಿದ್ದರು. ಶಾಲೆಗಳಲ್ಲಿ ಇಂದಿನಂತೆ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆ ಇಲ್ಲದಿದ್ದ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಮಠದಲ್ಲಿ ಪ್ರತಿದಿನ ಮಧ್ಯಾಹ್ನ ಅನ್ನದಾಸೋಹ ಮಾಡಲಾಗುತ್ತಿತ್ತು.

ದೂರದ ಊರುಗಳಿಂದ ಬಂದ ಕೆಲವು ವಿದ್ಯಾರ್ಥಿಗಳು ಮಠದಲ್ಲಿಯೇ ಉಳಿದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭವೂ ಇತ್ತು. ಅನ್ನದಾನಕ್ಕೆ ಮಾತ್ರ ಸೀಮಿತವಾಗದೆವಿದ್ಯಾರ್ಥಿಗಳಿಗೆ ಸಂಸ್ಕಾರ, ಶಿಸ್ತು ಹಾಗೂ ಧಾರ್ಮಿಕ ಮೌಲ್ಯಗಳ ಬೋಧನೆಯನ್ನೂ ಮಠದ ವತಿಯಿಂದ ನೀಡಲಾಗುತ್ತಿತ್ತು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ.

ಇಂದಿಗೂ ಹತ್ತಾರು ಮಂದಿಗೆ ಮಠ ಆಶ್ರಯ ತಾಣವಾಗಿದೆ. ಗ್ರಾಮಸ್ಥರು ಹಾಗೂ ಭಕ್ತರ ಸಹಕಾರದೊಂದಿಗೆ ಮಠವು ಧಾರ್ಮಿಕ, ಸಾಮಾಜಿಕ ಹಾಗೂ ದಾಸೋಹ ಸೇವಾ ಕಾರ್ಯಗಳನ್ನು ಮುಂದುವರಿಸಿಕೊಂಡು ಬರುತ್ತಿದೆ.

” ನಾವು ಹುತ್ತೂರು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ದೇಪಾಪುರ ಶಾಲೆಗೆ ವಿದ್ಯಾಭ್ಯಾಸಕ್ಕಾಗಿ ತೆರಳುತ್ತಿದ್ದ ಸಂದರ್ಭದಲ್ಲಿ ಶಾಲೆಯಲ್ಲಿ ಇಂದಿನ ರೀತಿಯಲ್ಲಿ ಬಿಸಿಯೂಟದ ವ್ಯವಸ್ಥೆಇರಲಿಲ್ಲ. ಸುತ್ತಮುತ್ತಲಿನ ಗ್ರಾಮಗಳಿಂದ ಬರುತ್ತಿದ್ದ ಎಲ್ಲ ವಿದ್ಯಾರ್ಥಿಗಳಿಗೂ ಮಠದಲ್ಲಿ ವರ್ಷಾನುಗಟ್ಟಲೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗುತ್ತಿತ್ತು. ಊಟದ ಜೊತೆಗೆ ಮಠದಿಂದ ಸಂಸ್ಕಾರ ಬೋಧನೆಯೂ ದೊರೆಯುತ್ತಿತ್ತು. ಅಂದು ಗುಡಿಸಲಿನಲ್ಲಿ ಆರಂಭವಾದ ದಾಸೋಹ ಇಂದು ಭವ್ಯ ದಾಸೋಹ ಭವನವಾಗಿ ರೂಪುಗೊಂಡಿರುವುದು ಸಂತಸದ ಸಂಗತಿ.”

-ದಿವ್ಯನಾಗ್ (ಚಿರಕನಹಳ್ಳಿ), ದೇಪಾಪುರ ಶಾಲೆಯ ಹಳೆಯ ವಿದ್ಯಾರ್ಥಿ

” ನಾನು ದೇಪಾಪುರ ಶಾಲೆಯಲ್ಲಿ ಬೋಧನೆ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಸಿವು ನೀಗಿಸುತ್ತಿದ್ದ ಗುಡಿಸಲಿನ ದಾಸೋಹವನ್ನು ಕಂಡಿದ್ದೇನೆ. ಇಂದು ಅದೇ ದಾಸೋಹ ಭವ್ಯ ಭವನದ ರೂಪ ಪಡೆದಿರುವುದು ಮಠದ ಸೇವಾ ಪರಂಪರೆಯ ಬೆಳವಣಿಗೆಗೆ ಸಾಕ್ಷಿಯಾಗಿದೆ.”

-ಸಿದ್ದಮಲ್ಲಪ್ಪ, ದೇಪಾಪುರ, ಮುಖ್ಯಶಿಕ್ಷಕರು, ಬಲಚವಾಡಿ

” ನಮ್ಮ ಮಠದಲ್ಲಿ ವರ್ಷಕ್ಕೊಮ್ಮೆ ಆರಾಧನೆ ನಡೆಸುವ ಸಂದರ್ಭದಲ್ಲಿ ಭವ್ಯ ದಾಸೋಹ ಭವನ ನಿರ್ಮಾಣವಾಗಬೇಕು ಎಂಬುದು ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ಭಕ್ತರ ಆಶಯ ಆಗಿತ್ತು. ಅದು ಈಗ ಈಡೇರುತ್ತಿದೆ.”

-ಬಸವಣ್ಣ ಸ್ವಾಮಿಗಳು, ಗುರುಮಲ್ಲೇಶ್ವರ ಮಠ, ದೇಪಾಪುರ

 

 

Tags:
error: Content is protected !!