ಲಕ್ಷ್ಮೀಕಾಂತ್ ಕೊಮಾರಪ್ಪ
ವಾಡಿಕೆಯಂತೆ ಸುರಿಯದ ಮಳೆ; ಆತಂಕಗೊಂಡಿರುವ ರೈತರು
ಸೋಮವಾರಪೇಟೆ: ಮಳೆ ಕೈಕೊಟ್ಟ ಪರಿಣಾಮ ಭತ್ತದ ಬೆಳೆಗೆ ನೀರಿನ ಕೊರತೆ ಎದುರಾಗಿದ್ದು, ತಾಲ್ಲೂಕಿನ ಶನಿವಾರಸಂತೆ ಹೋಬಳಿ ವ್ಯಾಪ್ತಿಯ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ನಾಟಿ ಮಾಡಿರುವ ಗದ್ದೆಗಳಲ್ಲಿ ನೀರಿಲ್ಲದೆ ಬಿರುಕು ಕಾಣಿಸಿಕೊಂಡಿದ್ದು, ಭತ್ತದ ಪೈರುಗಳು ಬಿಸಿಲಿನ ತಾಪಕ್ಕೆ ಸೊರಗುತ್ತಿವೆ.
ವಾಡಿಕೆಯಂತೆ ಸೆಪ್ಟೆಂಬರ್ ವೇಳೆಗೆ ಶನಿವಾರಸಂತೆ ಹೋಬಳಿಯ ಬಹುತೇಕ ಗದ್ದೆಗಳು ನೀರಿನಿಂದ ತುಂಬಿಕೊಂಡು ಭತ್ತದ ಪೈರುಗಳು ಹುಲುಸಾಗಿ ಬೆಳೆಯಬೇಕಿತ್ತು. ಆದರೆ ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದಿರುವುದು ಭತ್ತ ಬೆಳೆಗಾರರಿಗೆ ದೊಡ್ಡ ಹೊಡೆತ ನೀಡಿದೆ.
ಆಗಸ್ಟ್‌ನಲ್ಲಿ ಸುರಿದ ಅಲ್ಪ ಪ್ರಮಾಣದ ಮಳೆಯನ್ನು ಬಳಸಿಕೊಂಡು ದುಂಡಳ್ಳಿ, ನಿಡ್ತ ಹಾಗೂ ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ರೈತರು ಭತ್ತ ನಾಟಿ ಮಾಡಿದ್ದರು. ಕೆರೆ, ಹಳ್ಳಗಳ ನೀರಿನ ಸೌಲಭ್ಯ ಹೊಂದಿದ್ದವರು ಗದ್ದೆಗಳಿಗೆ ನೀರು ಹಾಯಿಸಿ ಬೆಳೆ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಆದರೆ ಸತತವಾಗಿ ಮಳೆ ಬಾರದ ಕಾರಣ ಕೆರೆಗಳಲ್ಲಿದ್ದ ನೀರೂ ಖಾಲಿಯಾಗಿದ್ದು, ಇದೀಗ ಗದ್ದೆಗಳಿಗೆ ನೀರು ಹರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ನಾಟಿ ಮಾಡಿ ಒಂದೂವರೆ ತಿಂಗಳಾದರೂ ಮಳೆ ಬಾರದ ಪರಿಣಾಮ ಕೆಲವು ಗದ್ದೆಗಳಲ್ಲಿ ಮಣ್ಣು ಒಣಗಿ ಬಿರುಕು ಬಿಟ್ಟಿದೆ. ಬೋರ್‌ವೆಲ್ ಮೂಲಕ ನೀರು ಹಾಯಿಸುವ ರೈತರಿಗೆ ಕೂಡ ಸಮಸ್ಯೆ ತಪ್ಪಿಲ್ಲ. ಗದ್ದೆಗೆ ನೀರು ಹಾಯಿಸಿದ ಕೆಲವೇ ಸಮಯದಲ್ಲಿ ನೀರು ಇಂಗಿ ಹೋಗುತ್ತಿರುವುದರಿಂದ ಪೈರಿಗೆ ಅಗತ್ಯ ತೇವಾಂಶ ಒದಗಿಸಲು ಸಾಧ್ಯವಾಗುತ್ತಿಲ್ಲ.
ಇನ್ನೊಂದೆಡೆ, ಮಳೆಯನ್ನೇ ನಂಬಿಕೊಂಡು ಭತ್ತ ಬೆಳೆಯುವ ರೈತರು ನಾಟಿ ಕಾರ್ಯವನ್ನೇ ಕೈಗೊಳ್ಳಲಾಗದೆ ಗದ್ದೆಗಳನ್ನು ಪಾಳು ಬಿಟ್ಟಿದ್ದಾರೆ. ಗೋಪಾಲಪುರ, ನಿಡ್ತ, ಹೊಸಗುತ್ತಿ ಹಾಗೂ ಆಲೂರುಸಿದ್ದಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ರೈತರು ಮಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಗದ್ದೆಗಳನ್ನು ಉಳುಮೆ ಮಾಡಿ ಸಿದ್ಧಪಡಿಸಿದ್ದರು. ಕೆಲವರು ಭತ್ತ ಬಿತ್ತನೆಯನ್ನೂ ಮಾಡಿದ್ದರು. ಆದರೆ ನಾಟಿ ಮಾಡಲು ಬೇಕಾದಷ್ಟು ಮಳೆ ಬಾರದ ಹಿನ್ನೆಲೆಯಲ್ಲಿ ಕೃಷಿ ಕಾರ್ಯವನ್ನು ಮುಂದುವರಿಸಲಾಗದೆ ಗದ್ದೆಗಳನ್ನು ಪಾಳು ಬಿಡುವಂತಾಗಿದೆ.
ಮಳೆ ಇನ್ನೂ ಕೈಕೊಟ್ಟರೆ ಈಗಾಗಲೇ ನಾಟಿ ಮಾಡಿರುವ ಭತ್ತದ ಬೆಳೆಯ ಮೇಲೂ ಪರಿಣಾಮ ಬೀರುವ ಆತಂಕ ರೈತರಲ್ಲಿ ಮೂಡಿದೆ. ಉತ್ತಮ ಮಳೆ ಸುರಿದು ಗದ್ದೆಗಳಿಗೆಮತ್ತೆ ನೀರು ದೊರೆಯಲಿ ಎಂಬ ನಿರೀಕ್ಷೆಯಲ್ಲಿ ರೈತರು ಆಕಾಶದತ್ತ ಮುಖ ಮಾಡಿದ್ದಾರೆ.
” ಆಗಸ್ಟ್‌ನಲ್ಲಿ ಬಂದ ಸ್ವಲ್ಪ ಮಳೆಗೆ ಗದ್ದೆಯಲ್ಲಿ ಭತ್ತ ನಾಟಿಮಾಡಿದ್ದೆ. ನಂತರ ಮಳೆಕೈಕೊಟ್ಟಿದೆ. ಕೆರೆ ಅಥವಾ ಕೊಲ್ಲಿ ಸೌಲಭ್ಯ ಇಲ್ಲದ ಕಾರಣ ಗದ್ದೆಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಈಗ ಗದ್ದೆ ಬಿರುಕು ಬಿಟ್ಟಿದೆ.”
-ಕುಬೇರ ಮಲ್ಲಪ್ಪ, ರೈತ, ಮುಳ್ಳೂರು ಗ್ರಾಮ
” ಭತ್ತ ನಾಟಿ ಮಾಡಿ ಒಂದೂವರೆ ತಿಂಗಳು ಕಳೆದಿದೆ. ಈವರೆಗೆ ಮಳೆ ಬಂದಿಲ್ಲ. ಗದ್ದೆ ಬಿರುಕು ಬಿಟ್ಟಿದ್ದು, ಭತ್ತದ ಪೈರು ಸೊರಗುತ್ತಿದೆ. ಹಾಗಾಗಿ ಮೋಟಾರ್ ಮೂಲಕ ನೀರು ಹಾಯಿಸುತ್ತಿದ್ದೇವೆ.”
ರತನ್, ಕೃಷಿಕ, ಶುಂಠಿ ಗ್ರಾಮ




