Mysore
25
few clouds

Social Media

ಸೋಮವಾರ, 28 ಸೆಪ್ಟೆಂಬರ್ 2026
Light
Dark

ಹೆದ್ದಾರಿ ಅಗಲೀಕರಣ ಕಾಮಗಾರಿ; ಸವಾರರಿಗೆ ದೂಳಿನ ಕಿರಿಕಿರಿ

ಮಹೇಂದ್ರ ಹಸಗೂಲಿ

ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾರ್ವಜನಿಕರ ಆಗ್ರಹ 

ಗುಂಡ್ಲುಪೇಟೆ: ಮೈಸೂರು- ಗುಂಡ್ಲುಪೇಟೆ-ಊಟಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಕಾಮಗಾರಿಯನ್ನು ಸ್ವಲ್ಪಸ್ವಲ್ಪವೇ ಮಾಡದೆ, ರಸ್ತೆಯನ್ನು ಕಿಲೋಮೀಟರ್‌ಗಟ್ಟಲೆ ಅಗೆದಿರುವುದರಿಂದ ವಿಪರೀತ ದೂಳು ಏಳುತ್ತಿದ್ದು, ವಾಹನ ಸವಾರರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.

ಎರಡೂ ಬದಿಯ ವಾಹನಗಳನ್ನುಒಂದೇ ರಸ್ತೆಯಲ್ಲಿ ಸಂಚಾರಕ್ಕೆ ಬಿಟ್ಟಿರುವುದರಿಂದ ಸಂಚಾರ ದಟ್ಟಣೆ ಜತೆಗೆ ದೂಳು ಕುಡಿದು ಸಂಚರಿಸುವಂತಾಗಿದೆ. ಗುತ್ತಿಗೆದಾರರು ಮಂದಗತಿಯಲ್ಲಿ ಕಾಮಗಾರಿ ನಡೆಸುತ್ತಿದ್ದರೂ ರಾಷ್ಟ್ರೀಯ ಅಭಿವೃದ್ಧಿ ಪ್ರಾಧಿಕಾರ ಗಮನ ಹರಿಸುತ್ತಿಲ್ಲ ಎಂದು ವಾಹನ ಸವಾರರು, ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು, ಟಿಪ್ಪರ್‌ಗಳು ಸಂಚರಿಸುತ್ತವೆ. ಇದರಿಂದ ಏಳುತ್ತಿರುವ ದೂಳಿನಿಂದ ಸವಾರರಿಗೆ ಕಣ್ಣಿನ ಸಮಸ್ಯೆ, ಆಸ್ತಮಾ ಮುಂತಾದ ರೋಗಗಳು ಬರುವ ಭೀತಿ ಎದುರಾಗಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮದುವೆ, ಕಚೇರಿ, ಮತ್ತಿತರ ಕಾರ್ಯಕ್ರಮಗಳಿಗೆ ತೆರಳುವ ವಾಹನ ಸವಾರರು ವೀರನಪುರ ಗೇಟ್‌ನಿಂದ ಪಟ್ಟಣದ ಸ್ವಾಗತ ಕಮಾನಿನವರೆಗೆ ಜೀವ ಕೈಯಲ್ಲಿಹಿಡಿದು ಸಂಚರಿಸುವ ಸ್ಥಿತಿ ನಿರ್ಮಾಣವಾಗಿರುವುದಲ್ಲದೆ, ಬಟ್ಟೆಗಳು ಮಲಿನಗೊಂಡು ವಾಪಸ್ ತೆರಳುವಂತಾಗಿದೆ.

ಈ ಬಗ್ಗೆ ಪ್ರಶ್ನೆ ಮಾಡಲು ಕೆಲಸಗಾರರು ಸ್ಥಳದಲ್ಲಿ ಇರುವುದಿಲ್ಲ. ಎಲ್ಲೋ ಅಪರೂಪಕ್ಕೆ ಸಿಕ್ಕರೂ ಹಿಂದಿಯಲ್ಲಿ ಮಾತನಾಡುತ್ತಾರೆ. ಅದು ಸ್ಥಳೀಯರಿಗೆ ಅರ್ಥವಾಗುವುದಿಲ್ಲ. ಒಟ್ಟಾರೆ ಸಾರ್ವಜನಿಕರು, ವಾಹನ ಸವಾರರ ಸಮಸ್ಯೆ ಕೇಳುವವರೇ ಇಲ್ಲ ಎಂಬಂತಾಗಿದೆ. ಗರಗನಹಳ್ಳಿ ಬಳಿ ಅಗೆದಿರುವ ರಸ್ತೆಗೆ ಡಾಂಬರು ಹಾಕದೆ ವಿಪರೀತ ಮಣ್ಣಿನ ದೂಳು ಇದ್ದು, ವಾಹನಗಳು ಸ್ಕಿಡ್ ಆಗಿ ಬೀಳುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

” ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸಬೇಕಾದರೆ ಒಂದಷ್ಟು ಕಿ.ಮೀ. ಮಾತ್ರ ಮಾಡಿ ನಂತರ ಮುಂದೆ ಮಾಡಬೇಕು. ಆದರೆ ಎಲ್ಲವನ್ನೂ ಕಿತ್ತುಹಾಕಿ ಕಾಮಗಾರಿ ವಿಳಂಬ ಮಾಡಿದರೆ ಜನರು, ವಾಹನ ಸವಾರರು ಹೇಗೆ ಸಂಚರಿಸುವುದು? ಕೂಡಲೇ ತ್ವರಿತಗತಿಯಲ್ಲಿ ಕಾಮಗಾರಿ ಪುರ್ಣಗೊಳಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು.”

ಈಶ್ವರ್, ಜಿಲ್ಲಾಧ್ಯಕ್ಷ, ಜಯ ಕರ್ನಾಟಕ ರಕ್ಷಣಾ ಸೇನೆ 

 

 

 

Tags:
error: Content is protected !!