Mysore
25
few clouds

Social Media

ಸೋಮವಾರ, 28 ಸೆಪ್ಟೆಂಬರ್ 2026
Light
Dark

ಪಾಳು ಕೊಂಪೆಯಂತಾದ ಕರ್ಜನ್ ಪಾರ್ಕ್!

ದಿನೇಶ್ ಕುಮಾರ್ ಎಚ್.ಎಸ್.

ಅಶುಚಿತ್ವ ಮರೆಮಾಚಲು ಹಗಲು ಹೊತ್ತಿನಲ್ಲಿಯೇ ಪಾರ್ಕ್ ಬಂದ್; ಸಾರ್ವಜನಿಕರ ಆಕ್ರೋಶ

ಮತ್ತೊಂದೆಡೆ ನಳನಳಿಸುತ್ತಿದೆ ಜಿಲ್ಲಾ ಪಂಚಾಯಿತಿ ಆವರಣ!

ಮೈಸೂರು: ದಸರಾ ವೇಳೆ ಪ್ರವಾಸಿಗರನ್ನು ತನ್ನ ಸೌಂದರ್ಯದಿಂದ ಸೆಳೆಯಬೇಕಾಗಿದ್ದ ತೋಟಗಾರಿಕೆ ಇಲಾಖೆ ಕಚೇರಿ ಆವರಣ(ಕರ್ಜನ್ ಪಾರ್ಕ್) ಇದೀಗ ಪಾಳು ಕೊಂಪೆಯಂತಾಗಿದ್ದು, ಸಾರ್ವಜನಿಕರಲ್ಲಿ ಇಲಾಖೆಯ ಸಿಬ್ಬಂದಿಯ ಬದ್ಧತೆಯ ಬಗ್ಗೆ ಪ್ರಶ್ನೆಯನ್ನು ಹುಟ್ಟುಹಾಕುವಂತಿದೆ. ಆದರೆ, ಜಿಪಂ ಹಾಗೂ ನಗರ ಪಾಲಿಕೆ ತಮ್ಮ ಕಚೇರಿ ಆವರಣವನ್ನು ಸುಂದರಗೊಳಿಸಿದೆ.

ನಾಡಹಬ್ಬ ದಸರಾ ಎಂದರೆ ಸಾಕು ದೇಶ-ವಿದೇಶಗಳ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಸುಮಾರು ಒಂದು ತಿಂಗಳ ಅವಧಿಯಲ್ಲಿ ಲಕ್ಷಾಂತರ ಮಂದಿ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡುತ್ತಾರೆ. ಹೀಗಾಗಿ ಅರಮನೆ, ನಗರಪಾಲಿಕೆ ಸೇರಿದಂತೆ ವಿವಿಧ ಸ್ಥಳಗಳನ್ನು ಸ್ವಚ್ಛ ಹಾಗೂ ಸುಂದರವಾಗಿರಿಸುವುದು ಮಾಮೂಲು.

ಆದರೆ, ಅರಮನೆಗೆ ಹೊಂದಿಕೊಂಡಂತೆ ಇರುವ ತೋಟಗಾರಿಗೆ ಕೇಂದ್ರ ಕಚೇರಿ ಆವರಣ ಮಾತ್ರ ಇದಕ್ಕೆ ಅಪವಾದ. ಈ ಆವರಣದ ಬಳಿ ಸಾವಿರಾರು ಪ್ರವಾಸಿಗರು ಬಂದು ಹೋಗುತ್ತಾರೆ. ತೋಟಗಾರಿಕೆ ಇಲಾಖೆ ಎಂಬ ನಾಮಫಲಕವನ್ನು ಗಮನಿಸುವ ಅವರುಗಳು, ಅಲ್ಲಿಯ ವಾತಾವರಣವನ್ನು ಕಂಡು ಹೌಹಾರುತ್ತಾರೆ. ಇದರ ಜೊತೆಗೆ ಆವರಣ ಸ್ವಚ್ಛವಾಗಿಲ್ಲದಿರುವುದನ್ನು ಸಾರ್ವಜನಿಕರಿಂದ ಮುಚ್ಚಿಡುವ ಸಲುವಾಗಿ ಅಲ್ಲಿಗೆ ಸಾರ್ವಜನಿಕರ ಪ್ರವೇಶವನ್ನು ಹಗಲು ಹೊತ್ತಿನಲ್ಲಿಯೇ ಬಂದ್ ಮಾಡಲಾಗಿದೆ.

ಬೇರೆ ಬೇರೆ ಇಲಾಖೆಗಳ ಕಚೇರಿಗಳಿಗೆ ಎರವಲು ಸೇವೆ ನೀಡುವ ತೋಟಗಾರಿಕೆ ಇಲಾಖೆ, ಅಲ್ಲಿನ ಕಚೇರಿಗಳ ಆವರಣವನ್ನು ಸುಂದರವಾಗಿಡಲು ಕೆಲಸ ನಿರ್ವಹಿಸುತ್ತದೆ. ಆದರೆ, ತನ್ನ ಕೇಂದ್ರ ಕಚೇರಿಯ ಆವರಣವನ್ನು ಸುಂದರವಾಗಿಡಬೇಕು ಎಂಬ ಪ್ರಜ್ಞೆ ಮೂಡದಿರುವುದು ಸಾರ್ವಜನಿಕರಲ್ಲಿ ಬೇಸರ ತರಿಸಿದೆ.

ನಳನಳಿಸುತ್ತಿರುವ ಜಿಪಂ ಆವರಣ: ಮತ್ತೊಂದೆಡೆ ಜಿಲ್ಲಾ ಪಂಚಾಯಿತಿ ಆವರಣ ಸುಂದರ ಹಾಗೂ ಸ್ವಚ್ಛತೆಯಿಂದ ಕಂಗೊಳಿಸುತ್ತಿದೆ. ದಸರಾ ಸಂದರ್ಭದಲ್ಲಿ ಪ್ರತಿವರ್ಷವೂ ಜಿಪಂ ಸಿಬ್ಬಂದಿಗಳು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಚೇರಿಯ ಆವರಣವನ್ನು ಸಿಂಗರಿಸುತ್ತಾರೆ. ಅದರಂತೆ ಈ ಬಾರಿ ಕೂಡ ಕಚೇರಿಯ ಆವರಣದ ಎರಡೂ ಭಾಗಗಳಲ್ಲೂ ಸಾಕಷ್ಟು ಅಲಂಕಾರಿಕ ಗಿಡಗಳನ್ನು ನೆಡುವ ಮೂಲಕ ಹಸಿರಿನಿಂದ ಕಂಗೊಳಿಸುವಂತೆ ಮಾಡಲಾಗಿದೆ. ಅಲ್ಲಿ ಹಸಿರು ಹುಲ್ಲಿನ ಲಾನ್ ಸಿದ್ಧಗೊಳಿಸಲಾಗಿದೆ.

ಎರಡೂ ಭಾಗಗಳಲ್ಲೂ ಹೂವುಗಳಿಂದ ವೃತ್ತಾಕಾರವನ್ನು ನಿರ್ಮಾಣ ಮಾಡಲಾಗಿದೆ. ಚೆಂಡು ಮಲ್ಲಿಗೆಯ ಗಿಡಗಳನ್ನು ಹೆಚ್ಚು ಬಳಸಿರುವುದರಿಂದ ಹಸಿರಿನ ಮಧ್ಯೆ ಹಳದಿ ಹೂವುಗಳು ಕಣ್ಣನ್ನು ಕುಕ್ಕುತ್ತಿವೆ. ಇದರ ಜೊತೆಗೆ ಹಲವಾರು ಬಗೆಯ ಅಲಂಕಾರಿಕ ಗಿಡಗಳು ನೋಡು ಗರನ್ನು ಸೆಳೆಯುತ್ತಿವೆ.

ವಿವಿಧ ಕೆಲಸದ ನಿಮಿತ್ತ ಜಿಪಂ ಕಚೇರಿಗೆ ಆಗಮಿಸುತ್ತಿರುವ ಗ್ರಾಮೀಣ ಭಾಗದ ಜನರು ಕಚೇರಿಯ ಆವ ರಣದ ಉದ್ಯಾನವನದ ಸೌಂದರ್ಯಕ್ಕೆ ಮನಸೋತು ಹಸಿರಿನ ನಡುವೆ ನಿಂತು ಸೆಲ್ಛಿ ತೆಗೆದುಕೊಳ್ಳುತ್ತಿದ್ದುದು ಕಂಡುಬಂದಿತು.

ಉದ್ಯಾನವನ ನಿರ್ವಹಣೆಯಲ್ಲಿ ತಾನೂ ಯಾರಿಗೇನು ಕಮ್ಮಿ ಇಲ್ಲ ಎಂದು ಜಿಪಂ ಇತರೆ ಇಲಾಖೆಗಳಿಗೆ ಮಾದರಿಯಾಗುವಂತೆ ತೋರಿಸಿಕೊಟ್ಟಿದೆ. ಜಿಪಂ ಕಚೇರಿ ಆವರಣವನ್ನು ನೋಡಿಯಾದರೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

ನಗರಪಾಲಿಕೆ ಸಿದ್ಧತೆ…: 

ದಸರಾ ಅಂಗವಾಗಿ ನಗರಪಾಲಿಕೆ ಆವರಣವನ್ನೂ ಕೂಡ ವಿವಿಧ ಬಗೆಯ ಹೂವುಗಳ ಮೂಲಕ ಅಲಂಕರಿಸಲಾಗುತ್ತಿದೆ. ಅಲ್ಲಿನ ತೋಟಗಾರಿಕಾ ವಿಭಾಗದ ಸಿಬ್ಬಂದಿ ನಗರಪಾಲಿಕೆ ಆವರಣವನ್ನು ಸಿಂಗರಿಸುವ ಕಾಯಕದಲ್ಲಿ ತೊಡಗಿದ್ದಾರೆ.

 

 

Tags:
error: Content is protected !!