ಐಟಿ, ಆರೋಗ್ಯ, ಆಡಳಿತ ಹೀಗೆ ಎಲ್ಲೆಲ್ಲಿ ಎಐ ಬಳಕೆ ಸಾಧ್ಯವೋ ಅಲ್ಲೆಲ್ಲಾ ಪ್ರಾಥಮಿಕ ಹಂತದ ಉದ್ಯೋಗ ಗಳು ಕಡಿತವಾಗಲಿವೆ. ಎಐ ಎಂದರೆ ಮನುಷ್ಯನಂತೆ ಯೋಚಿಸುವ ಮೆದುಳು, ಕಂಪ್ಯೂಟರ್ ಎಂದರೆ ಪುನರಾವರ್ತಿತ ಕೆಲಸಗಳನ್ನು ಮಾಡುವ ಲೇಬರ್. ಎರಡೂ ಸೇರಿದರೆ ಇದು ಬಹುತೇಕ ಎಲ್ಲ ಕಡೆ ಲಗ್ಗೆ ಇಡಬಹುದು. ಕಾಲ್‌ಸೆಂಟರ್ ನಂತಹ ಉದ್ಯೋಗಗಳು ಸಂಪೂರ್ಣ ನಶಿಸಿಹೋಗ ಬಹುದು. ಇದರ ನೇರ ಪರಿಣಾಮ ಯುವತಲೆಮಾರಿನ ಮೇಲೆಯೇ ಬೀರಲಿದೆ. ಕಾಲಾ ನಂತರ ಸರಿಹೋಗುತ್ತೆ, ಹೊಸ ಉದ್ಯೋಗ, ಉದ್ಯಮಗಳು ಸೃಷ್ಟಿಯಾಗ್ತವೆ. ಆದರೆ ಈ ಸ್ಥಿತ್ಯಂತರ ವೇಗ ಇದೆಯಲ್ಲಾ ಅದು ಹಿಂದೆಂದೂ ಕಂಡಿರದ್ದು. ಸದ್ಯದ ಯುವ ತಲೆಮಾರು ಖಂಡಿತ ಕಂಗಾಲಾಗಲಿದೆ. ಯಾಕೆಂದರೆ ಇವರನ್ನೆಲ್ಲ ನಾವು ‘ಇಲ್ಲದ’ ಉದ್ಯೋಗಗಳಿಗೆ ತಯಾರು ಮಾಡಿಬಿಟ್ಟಿದ್ದೇವೆ. ಅವರೀಗ ಅನುಭವಿ ಹಂತದ ಮಟ್ಟಿಗೆ ತಯಾರಾಗಬೇಕು, ಆದರೆ ಅದಕ್ಕೆ ಆರಂಭಿಕ ತರಬೇತಿ ಬೇಕಲ್ಲ. ಪಾಪ ಅನ್ಸುತ್ತೆ, ಒಂಥರ ಅತಂತ್ರ ಸ್ಥಿತಿ.
ಇದು ವಿನಾಶಕಾರಿ ಮಟ್ಟದ ಆತಂಕ ಸೃಷ್ಟಿಸಿದೆ. ಸಣ್ಣಪುಟ್ಟದ್ದಲ್ಲ. ಈಗಾಗಲೇ ಪೂರಕ ಉದಾಹರಣೆಗಳು ಘಟಿಸುತ್ತಿವೆ. ಆಸ್ಟ್ರೇಲಿಯಾ ಸರ್ಕಾರ ಓಪನ್ ಎಐ ಏಜೆಂಟುಗಳಿಂದ ತನ್ನ ಮೆಡಿಕೇರ್ ವೆಬ್ ಸೈಟ್ ಹ್ಯಾಕ್ ಮಾಡಿರುವುದಾಗಿ ಹೇಳಿದೆ. ಇಲ್ಲಿ ಎರಡು ಬಗೆಯ ಅಪಾಯಗಳು. ಒಂದು ದುಷ್ಟರು ದುಷ್ಟ ಉದ್ದೇಶ ಇಟ್ಟುಕೊಂಡು ತಯಾರು ಮಾಡುವ ಏಜೆಂಟುಗಳು. ಇನ್ನೊಂದು ಸಜ್ಜನರು ಸೃಷ್ಟಿಸುವ ಏಜೆಂಟುಗಳೇ ದುಷ್ಟರಾಗುವುದು (rogue). ಎರಡನೆಯದೇ ವಿನಾಶಕಾರಿ ಭೀತಿ ಹುಟ್ಟಿಸಿರುವುದು. ಈ ಏಜೆಂಟುಗಳು ತಾವು ತಾವೇ ಮಾತಾಡಿಕೊಳ್ಳುವ, ಯೋಜನೆ ರೂಪಿಸಿ ಕನ್ನ ಹಾಕುವ ಕ್ಷಮತೆ ತೋರಿಸಿದ್ದಾವೆ. ಒಡೆಯನ ಕಣ್ತಪ್ಪಿಸಿ ಅಪರಾಧವನ್ನು ಎಸಗಿದ್ದಾವೆ. ಇವು ಸ್ವಯಂ ಮರು ಸೃಷ್ಟಿಸಿಕೊಳ್ಳುವ ಸೂಚನೆಯನ್ನೂ ಕೊಡುತ್ತಿವೆ. ಇವು ಒಂದೊಮ್ಮೆ ಹೆಜ್ಜೇನಿನ ಹಿಂಡಿನಂತೆ ಇಂಟರ್ನೆಟ್ ಎಂಬ ಸಾರ್ವಜನಿಕ, ನಾಗರಿಕ ಸಮಾಜದ ಮೇಲೆ ದಾಳಿ ಮಾಡಿದರೆ ಏನುಗತಿ? ಇದು ಭಯ. ನಮ್ಮ ಬ್ಯಾಂಕಿಂಗ್, ಆಸ್ಪತ್ರೆ, ಸರಕಾರಿ ವೆಬ್‌ಸೈಟುಗಳಲ್ಲಿನ ದೋಷ ದೌರ್ಬಲ್ಯ ಗಳನ್ನು ಕಂಡುಹಿಡಿದು ಒಳಗೆ ನುಗ್ಗಿದರೆ? ಆ ಮೂಲಕ ಇವು ನಮ್ಮ ಅರ್ಥಿಕ, ಸಾಮಾಜಿಕ, ಆಡಳಿತ ಇತ್ಯಾದಿ ವ್ಯವಸ್ಥೆಯಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಬಹುದು. ಈ ತನಕ ಇದು ಸಿನಿಮಾಗಳಲ್ಲಿ ಬರುವ ಕತೆಯಾಗಿತ್ತು. ಸಮೀಪದ ಭವಿಷ್ಯದಲ್ಲಿ ನಿಜವಾಗುವ ಸಾಧ್ಯತೆ ದಟ್ಟವಾಗಿದೆ.
ಮಧುಸೂದನ ವೈ.ಎನ್., ಯುವ ಲೇಖಕ ಮತ್ತು ಸಾಫ್ಟ್‌ವೇರ್ ತಜ್ಞ




