ನಾನು ಎ.ಐ. ಅಥವಾ ಕೃತಕ ಬುದ್ಧಿಮತ್ತೆಯ ರಂಗಕ್ಕೆ ಪ್ರಪ್ರಥಮವಾಗಿ ಇಳಿದದ್ದು ಸುಮಾರು ೩೫ ವರ್ಷಗಳ ಹಿಂದೆ, ನ್ಯೂಯಾರ್ಕಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗ. ಎ.ಐ.ನೊಂದಿಗಿನ ಮೂರೂವರೆ ದಶಕಗಳ ನನ್ನ ವಿಧ್ಯುಕ್ತ ಒಡನಾಟ, ಕೆನಡಾದ ಪ್ರತಿಷ್ಠಿತ ಸಂಸ್ಥೆಯೊಂದರ ಎ.ಐ. ಲ್ಯಾಬರೇಟರಿಯ ನಿರ್ದೇಶಕನಾಗಿ ಕೆಲಸಮಾಡುವ ಮೂಲಕ ಇತ್ತೀಚೆಗೆ ಕೊನೆಗೊಂಡಿದೆ.
ನನ್ನ ಈ ಸುದೀರ್ಘ ಒಡನಾಟದಲ್ಲಿ, ಈ ರಂಗದ ಹಲವಾರು ಏಳು ಬೀಳುಗಳನ್ನು ಕಂಡಿದ್ದೇನೆ, ಅನುಭವಿಸಿದ್ದೇನೆ ಕೂಡ. ಜಾಗತಿಕ ತಾಪಮಾನದ ಏರಿಕೆ, ಆರ್ಥಿಕ ಅಸಮಾನತೆ, ಕ್ಯಾನ್ಸರ್‌ನಿಂದ ಹಿಡಿದು ಶತಮಾನಗಳಿಂದ ಉತ್ತರ ಕಂಡು ಹಿಡಿಯಲಾಗದ ಗಣಿತದ ಸಮಸ್ಯೆಗಳವರೆಗೆ, ಎಲ್ಲಕ್ಕೂ, ಎ.ಐ. ಪರಿಹಾರ ಒದಗಿಸುತ್ತದೆಂಬ ವಾದಗಳನ್ನು ನಾನು ಕೇಳಿದ್ದೇನೆ. ಹಾಗೆಯೇ, ಎ.ಐ. ಕ್ರಾಂತಿಯಿಂದ ಮಾನವರೆಲ್ಲಾ ರೋಬೋಟುಗಳ ಅಡಿಯಾಳುಗಳಾಗಿ ಕೊನೆಗೆ ಇಡೀ ಮಾನವ ಜಾತಿಯೇ ಸಂಪೂರ್ಣ ನಾಶವಾಗುತ್ತದೆ ಎನ್ನುವಂತಹ ವಾದಗಳೂ ನನಗೆ ಹೊಸದಲ್ಲ. ಮೊದಲನೆಯವಾದ ಮಂಡಿಸುವವರನ್ನು, ‘ಎ.ಐ. ಬೂಮರ್ಸ್’ ಎಂದೂ, ಎರಡನೆಯವರನ್ನು ‘ಎ.ಐ.ಡೂಮರ್ಸ್’ ಎನ್ನುವುದೂ ಇದೆ. ಈ ವಾದಗಳಿಗೆ ಹಲವು ದಶಕಗಳ ಇತಿಹಾಸವಿದ್ದರೂ, ಹಿಂದೊಮ್ಮೆ ಪಂಡಿತರ ವಲಯಕ್ಕೆ ಮಾತ್ರ ಸೀಮಿತವಾಗಿದ್ದ ‘ಬೂಮರ್ಸ್ ವರ್ಸಸ್ ಡೂಮರ್ಸ್’ಗಳ ಆವೇಶದ ಮಾತುಗಳು, ಇಂದು ಸಾಮಾಜಿಕ ಚರ್ಚೆಯ ವಿಷಯವಾಗಿ ಬದಲಾಗಿವೆ.
ಎ.ಐ.ರಂಗದಲ್ಲಿ ಹಣದ ಹೂಡಿಕೆ, ಬಿಲಿಯನ್-ಟ್ರಿಲಿಯನ್ ಡಾಲರುಗಳ ಲಾಭದ ಆಸೆ-ದುರಾಸೆಗಳು ಹೆಚ್ಚಾದಂತೆ, ಆವೇಶದ ಮಾತುಗಳು, ಡಂಬಾಚಾರಗಳಾಗುತ್ತಿವೆ. ಒಮ್ಮೆ ಬೂಮರ್ಸ್/ಡೂಮರ್ಸ್ ಆಗಿದ್ದವರು, ಇನ್ನೊಮ್ಮೆ ತಮ್ಮ ಆರ್ಥಿಕ ಲಾಭಕ್ಕೆ ತಕ್ಕಂತೆ, ಡೂಮರ್ಸ್/ಡೂಮರ್ಸ್‌ಗಳಾಗಿ ಬದಲಾಗುವುದೂ ನಡೆದಿದೆ. ನನ್ನ ಮಟ್ಟಿಗೆ ಹೇಳುವುದಾದರೇ, ಎ.ಐ. ಎನ್ನುವುದು ಮಾನವ ಇತಿಹಾಸದಲ್ಲಿ ಒಂದು ಕ್ರಾಂತಿಕಾರಕ ಘಟ್ಟ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಎ.ಐ. ವಿಕಾಸದ ಹಾದಿ ಹೇಗಿರಬೇಕು? ಆ ಹಾದಿಗೆ ಎಂತಹ ಬೇಲಿಗಳು, ಸ್ಪೀಡ್ ಲಿಮಿಟ್ಗಳು, ಸಿಗ್ನಲ್‌ಗಳು ಇರಬೇಕು? ಇವೆಲ್ಲಾ, ಜಾಗತಿಕ ರಾಜಕೀಯ ನಾಯಕರು ವಿಜ್ಞಾನಿಗಳು-ತಜ್ಞರೊಂದಿಗೆ ನಟನೆ- ಆವೇಶಗಳನ್ನು ಬದಿಗಿಟ್ಟು, ಸಾಧಕ- ಬಾಧಕಗಳನ್ನು ತಣ್ಣಗೆ ಚರ್ಚಿಸಿ ನಿರ್ಧರಿಸಬೇಕಾದ ವಿಷಯಗಳು. ಆದರೆ, ಈ ಸಂಕ್ರಮಣ ಕಾಲದಲ್ಲಿ, ಈ ರಾಜಕೀಯ ನಾಯಕರು ಬಹುಮಟ್ಟಿಗೆ ಜನಾಂಗವಾದ, ಕೋಮುವಾದ, ಉಗ್ರ ರಾಷ್ಟ್ರೀಯತೆ, ಸರ್ವಾಧಿಕಾರ, ಅವೈಜ್ಞಾನಿಕತೆಗಳ ಪ್ರತಿಪಾದಕರೇ ಆಗಿರುವುದು ಮಾನವ ಜನಾಂಗದ ಭವಿಷ್ಯಕ್ಕೆ ಆಶಾದಾಯಕವೇನಲ
ಶೇಷಾದ್ರಿ ಗಂಜೂರು, ಹೆಸರಾಂತ ಮಾಧ್ಯಮ ತಜ್ಞರು




