Mysore
22
overcast clouds

Social Media

ಗುರುವಾರ, 24 ಸೆಪ್ಟೆಂಬರ್ 2026
Light
Dark

ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮಿಗಳಿಂದ ಈ ಬಾರಿ ದಸರಾ ಉದ್ಘಾಟನೆ

ಬೆಂಗಳೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ಕ್ಕೆ ಈ ಬಾರಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಚಾಲನೆ ನೀಡಲಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಬಳಿಕ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದಲ್ಲಿ ಗುರುವಾರ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದರು.

ಪ್ರತಿ ವರ್ಷ ಮೈಸೂರು ದಸರಾ ಉದ್ಘಾಟನೆಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ಆಹ್ವಾನಿಸುವ ಪರಂಪರೆಯಿದ್ದು, ಈ ಬಾರಿ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿರುವ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರನ್ನು ಆಯ್ಕೆ ಮಾಡಲಾಗಿದೆ.

ಕೊಪ್ಪಳದ ಗವಿಮಠದ ಪರಂಪರೆಯನ್ನು ಮುನ್ನಡೆಸುತ್ತಿರುವ ಶ್ರೀಗಳು ಶಿಕ್ಷಣ, ಸಾಮಾಜಿಕ ಸೇವೆ, ಯುವಜನರ ಮಾರ್ಗದರ್ಶನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಆಯ್ಕೆಯು ಉತ್ತರ ಕರ್ನಾಟಕದ ಧಾರ್ಮಿಕ ಹಾಗೂ ಸಾಮಾಜಿಕ ಪರಂಪರೆಗೆ ಮೈಸೂರು ದಸರಾ ವೇದಿಕೆಯಲ್ಲಿ ವಿಶೇಷ ಮನ್ನಣೆ ದೊರೆತಂತಾಗಿದೆ.

ಈ ಬಾರಿ ದಸರಾ ಉದ್ಘಾಟನೆಗೆ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರನ್ನು ಆಯ್ಕೆ ಮಾಡಿರುವುದು ರಾಜ್ಯದ ವಿವಿಧ ಭಾಗಗಳ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳ ನಡುವೆ ಸಾಂಸ್ಕೃತಿಕ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಸಂದೇಶವನ್ನು ನೀಡಿದೆ.

ಅಕ್ಟೋಬರ್ 11ರಿಂದ 21ರವರೆಗೆ ಒಟ್ಟು 11 ದಿನಗಳ ಕಾಲ ಮೈಸೂರು ದಸರಾ ನಡೆಯಲಿದ್ದು, ಅ.11ರಂದು ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಲಿದೆ.

ಅಧಿಕೃತ ದಸರಾ ಕಾರ್ಯಕ್ರಮದ ಪ್ರಕಾರ, ಅಂದು ಬೆಳಗ್ಗೆ 11.50ರಿಂದ 12.13ರವರೆಗೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಉದ್ಘಾಟನಾ ಪೂಜೆ ನಡೆಯಲಿದೆ.

ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಮಹಾಸ್ವಾಮಿಗಳನ್ನು ಆಯ್ಕೆ ಮಾಡಿರುವುದು ಈ ಬಾರಿಯ ವಿಶೇಷತೆಯಾಗಿದೆ. ಕೊಪ್ಪಳ ಗವಿಸಿದ್ದೇಶ್ವರ ಮಠದ 18ನೇ ಪೀಠಾಧಿಪತಿಗಳಾಗಿರುವ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಶಿಕ್ಷಣ, ಅನ್ನದಾಸೋಹ ಹಾಗೂ ಜಲಸಂರಕ್ಷಣೆಯಂತಹ ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದಾರೆ. 2002ರ ಡಿಸೆಂಬರ್ 13ರಂದು ಮಠದ ಪೀಠಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಉತ್ತರ ಕರ್ನಾಟಕದ ನೀರಿನ ಸಮಸ್ಯೆ ನಿವಾರಣೆಗೆ ‘ಜಲ ದೀಕ್ಷೆ’ ಅಭಿಯಾನ ನಡೆಸಿದರು.

ಕೆರೆಗಳ ಹೂಳೆತ್ತುವಿಕೆ ಮತ್ತು ಜಲಸಂರಕ್ಷಣಾ ಕಾರ್ಯಗಳಿಗೆ ಒತ್ತು ನೀಡಿದ ಹಿನ್ನೆಲೆಯಲ್ಲಿ ಅವರನ್ನು ‘ಜಲಋಷಿ’ ಎಂದೂ ಕರೆಯಲಾಗುತ್ತದೆ.

ಮಠದಲ್ಲಿ ಅನ್ನ, ಅರಿವು ಮತ್ತು ಆಧ್ಯಾತ್ಮದ ತ್ರಿವಿಧ ದಾಸೋಹ ಮುಂದುವರಿದಿದ್ದು, ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ವಸತಿ ಸೌಲಭ್ಯ ಕಲ್ಪಿಸುವ ಕಾರ್ಯವೂ ನಡೆಯುತ್ತಿದೆ. ಪ್ರತಿವರ್ಷ ನಡೆಯುವ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯೂ ದೊಡ್ಡ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುತ್ತದೆ.

Tags:
error: Content is protected !!