ಮೈಸೂರು ನಗರದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತೆಯ ಜೀವನಾಡಿಗಳಾಗಿರುವ ಪೌರಕಾರ್ಮಿಕರಿಗೆ, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ೧೦೦ ಕ್ಕೂ ಹೆಚ್ಚಿನ ಪೌರಕಾರ್ಮಿಕರು ತಪಾಸಣೆಗೆ ಒಳಪಟ್ಟು ಅಗತ್ಯ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಲು ಕಾರಣಕರ್ತರಾದ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಎಂ.ಕೆ. ಸವಿತಾ ಅವರ ನಡೆ ಶ್ಲಾಘನೀಯ.
ಈ ಹಿಂದೆ ಪುರಭವನದ ಆವರಣದಲ್ಲಿ ಒಂದೇ ದಿನ ಎ ವಲಯಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ತಪಾಸಣೆ ಮಾಡಲಾಗುತ್ತಿತ್ತು. ಇನ್ನು ಮುಂದೆ ಆಯಾ(೯ ವಲಯಗಳು) ವಲಯವಾರು ಇರುವ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಆರೋಗ್ಯ ಶಿಬಿರ ಆಯೋಜಿಸಲಾಗುತ್ತಿರುವುದು ಮತ್ತು ಮಣಿಪಾಲ್ ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ತಪಾಸಣೆಗೆ ಆಸ್ಪತ್ರೆ ವತಿಯಿಂದ ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿರುವುದು ಹಾಗೂ ಅಗತ್ಯವುಳ್ಳವರಿಗೆ ಔಷಧೋಪಚಾರ ದೊರಕಿರುವುದು ಮೆಚ್ಚುವಂತಹದ್ದು.ಈ ಉಚಿತ ಆರೋಗ್ಯ ಶಿಬಿರಗಳು ನೆರವೇರಲು ಮೈಸೂರು ಮಹಾ ನಗರ ಪಾಲಿಕೆ ಮತ್ತು ಖಾಸಗಿ ಆಸ್ಪತ್ರೆಗಳ ಒಡಂಬಡಿಕೆ ಮಾಡಿಕೊಂಡಿರುವುದು ಒಳ್ಳೆಯದೆ.
-ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು


