ನಾವಿಬ್ಬರು ಪ್ರೊ. ಬಿ. ಪಿ. ಮಹೇಶ್ ಚಂದ್ರ ಗುರುಗಳ ಶಿಷ್ಯರು. ನಮ್ಮಿಬ್ಬರಿಗೂ ಪ್ರೊ. ಗುರು ಇಷ್ಟ. ನೀನು ಮಂಗಳೂರು ವಿವಿ, ನಾನು ಮೈಸೂರು ವಿವಿ. ನೀನು ಕೇಸರಿ ಶಾಲು, ನಾನು ನೀಲಿ ಶಾಲು. ನೀನು ಆರ್‌ಎಸ್‌ಎಸ್ ಪರಿಪಾಲಕನ ಮಗ, ನಾನು ಕಾರ್ಮಿಕನ ಮಗ. ನೀನು ಪತ್ರಿಕೋದ್ಯಮದಲ್ಲಿ ಮಾಸ್ಟರ‍್ಸ್, ನಾನು ಪಿಎಚ್.ಡಿ. ನೀನು ರಾಜ್ಯ ಪತ್ರಿಕೆ, ನಾನು ನ್ಯಾಷನಲ್ ಮತ್ತು ಪ್ರಾದೇಶಿಕ ಪತ್ರಿಕೆ. ನೀನು ಮೈಸೂರನ್ನು ಪ್ಯಾರೀಸ್ ಮಾಡುತ್ತೀನಿ ಅಂದೆ, ನಾನು ‘ಆಂದೋಲನ’ ಪತ್ರಿಕೆಯಲ್ಲಿ ಅದು ಅಸಾಧ್ಯ ಎಂದೆ….
ನೀನು ರಾಜಕೀಯ ನಿರುದ್ಯೋಗಿ, ನಾನು ಆರ್ಥಿಕ ನಿರುದ್ಯೋಗಿ. ನೀನು ರಾಮನ ಮಡಿಲಲ್ಲಿ, ನಾನು ಬುದ್ಧನ ನೆರಳಲ್ಲಿ… ಗಣೇಶ ಚತುರ್ಥಿಯ ವಿಚಾರವಾಗಿ ನೀನು ನೀಲಿ ಶಾಲು ಹೊದಿಕೆ ಮಾಡುವವರನ್ನು ಅವಮಾನಿಸಿದ್ದೀಯ.
ನೀಲಿ ಶಾಲು ಹಾಕಿದ ನಾನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ೧೯೪೦ ರಲ್ಲಿ ಬರೆದ ಥಾಟ್ಸ್ ಆನ್ ಪಾಕಿಸ್ತಾನ್ ಮತ್ತು ಅದನ್ನು ಮರು ಪ್ರಕಟಿಸಿದ ಪಾಕಿಸ್ತಾನ್ ಆರ್ ಪಾರ್ಟಿಷನ್ ಆಫ್ ಇಂಡಿಯಾ ಓದಿದ್ದೀನಿ ಮತ್ತು ಅರ್ಥೈಸಿಕೊಂಡಿದ್ದೇನೆ.
ಅದೇ ಡಾ.ಅಂಬೇಡ್ಕರ್ ನಿಷ್ಠುರವಾಗಿ ಹಿಂದುತ್ವದ ಬಗ್ಗೆ ಬರೆದ ಪುಸ್ತಕ ಅವರು ಬದುಕಿದ್ದಾಗ ಸರ್ಕಾರಗಳು ಪ್ರಕಟಿಸಲಿಲ್ಲ.ಆದರೆ, ನೀನು ಕೇಸರಿ ಶಾಲು ಹಾಕಿ, ೧೯೮೭ ರಲ್ಲಿ ಮಹಾರಾಷ್ಟ್ರ ಸರ್ಕಾರ ಪ್ರಕಟಣೆ ಮಾಡಿದ ರಿಡಲ್ಸ್ ಇನ್ ಹಿಂದೂಯಿಸಮ್ ಓದಿದ್ದೀಯಾ? ಫ್ರೀ ಆಗಿ ಸಿಗು, ಚರ್ಚೆ ಮಾಡೋಣ… ಅಣ್ಣ….!
– ಡಾ. ದಿಲೀಪ್ ನರಸಯ್ಯ ಎಂ., ಮೈಸೂರು


