Mysore
22
overcast clouds

Social Media

ಮಂಗಳವಾರ, 22 ಸೆಪ್ಟೆಂಬರ್ 2026
Light
Dark

ಫಾಲ್ಕೆ ಪ್ರಶಸ್ತಿ ಕಲಾಸೇವೆಗೆ ಸಂದ ಗೌರವ: ಅನಂತ್ ನಾಗ್‌

ಸಂದರ್ಶನ: ಬಾನಾಸು 

ಇಂದು ಗುಜರಾತಿನ ಕೆವಾಡಿಯಾದಲ್ಲಿ ೭೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ನಡೆಯಲಿದೆ. ಚಿತ್ರರಂಗಕ್ಕೆ ಸಲ್ಲಿಸಿದ ಅಮೋಘ ಸೇವೆಗಾಗಿ ಸಲ್ಲುವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಹಿರಿಯ ನಟ ಅನಂತನಾಗ್ ಅವರು ಸ್ವೀಕರಿಸಲು ತೆರಳುವ ಮುನ್ನ ‘ಆಂದೋಲನ’ದ ಜೊತೆ ಮಾತನಾಡಿದರು. ತಮ್ಮ ಬಾಲ್ಯ, ರಂಗಭೂಮಿ, ಕಲಾತ್ಮಕ ಚಿತ್ರಗಳು, ಜನಪ್ರಿಯ ಚಿತ್ರಗಳು, ಇಂದಿನ ಸಿನಿಮಾ ವಾತಾವರಣ ಇತ್ಯಾದಿ ವಿಷಯಗಳನ್ನು ಕುರಿತು ಸುದೀರ್ಘವಾಗಿ ಅವರು ಮತನಾಡಿದರು.

ಚಿತ್ರರಂಗಕ್ಕೆ ನೀಡುವ ಅತಿ ದೊಡ್ಡ ಪ್ರಶಸ್ತಿ, ಅತ್ಯುನ್ನತ ಗೌರವ ಫಾಲ್ಕೆ ಪ್ರಶಸ್ತಿ ಸಂದ ಸಂದರ್ಭದಲ್ಲಿ ‘ಆಂದೋಲನ’ ಪತ್ರಿಕೆಯ ಪರವಾಗಿ ನಿಮಗೆ ಅಭಿನಂದನೆಗಳು. ಕನ್ನಡ ಚಿತ್ರರಂಗ ಮಾತ್ರವಲ್ಲ, ಕನ್ನಡಿಗರೆಲ್ಲ ಹೆಮ್ಮೆ ಪಡುವ ಈ ಸಂದರ್ಭದಲ್ಲಿ ನಿಮ್ಮ ಪ್ರತಿಕ್ರಿಯೆ ಏನು?

ಸಂತೋಷವಾಗಿದೆ. ಈ ಕ್ಷೇತ್ರದಲ್ಲಿ ಫಾಲ್ಕೆ ಅತ್ಯುನ್ನತ ಪ್ರಶಸ್ತಿ ಎನ್ನುತ್ತಾರೆ. ಐವತ್ತು ವರ್ಷಗಳ ಕಾಲ, ಕಲಾಕ್ಷೇತ್ರದಲ್ಲಿ ಮಾಡಿದ ಕೆಲಸಗಳ ಸಾರ್ಥಕ್ಯ ಇದರಲ್ಲಿ ಅಡಕವಾಗಿದೆ ಎಂದು ನಾನು ಅಂದುಕೊಂಡಿದ್ದೇನೆ. ಸಂದ ಗೌರವ, ಸಾರ್ಥಕ ಭಾವ ಮೂಡಿಸಿದೆ.

ನಿಮ್ಮ ಸಿನಿಮಾ ಜೀವನ ಮೈಸೂರಿನಲ್ಲಿ ‘ಸಂಕಲ್ಪ’ ಚಿತ್ರದೊಂದಿಗೆ ಆರಂಭವಾಯಿತು. ಆ ನೆನಪುಗಳನ್ನು ಹೇಳಿ.

ಅದಕ್ಕೂ ಮೊದಲು, ನಾನು ಈಗ ಕೇರಳದಲ್ಲಿರುವ ಕಾಸರಗೋಡಿನ ಬಳಿಯ ಕಾಂಞ ಗಾಡಿನಲ್ಲಿರುವ ಆನಂದಾಶ್ರಮ, ಶಿರಾಲಿಯ ಉತ್ತರಾದಿ ಮಠ, ಮುಂತಾದ ಕಡೆ ನನ್ನಬಾಲ್ಯದ ಹನ್ನೆರಡು ವರ್ಷ ಕಳೆದೆ. ೧ನೇ ಮತ್ತು ಎರಡನೇ ತರಗತಿಯನ್ನು ಉಡುಪಿಯಲ್ಲಿ, ನಂತರ ಶಿರಾಲಿಯಲ್ಲಿ ಎಂಟನೇ ತರಗತಿವರೆಗೆ ಕಲಿತೆ.

ಕನ್ನಡ ಮಾಧ್ಯಮದಲ್ಲಿ ಕಲಿತೆ. ನಂತರ ನಮ್ ತಂದೆಯ ಗೆಳೆಯರೊಬ್ಬರ ಸಲಹೆ ಮೇರೆಗೆ ನನ್ನನ್ನು ಮುಂಬೈಗೆ ಕಳುಹಿಸಿದರು. ಅಲ್ಲಿ ಇಂಗ್ಲಿಷ್ ಮಾಧ್ಯಮ. ಇಲ್ಲಿ ಮೊದಲ ಐದು ಸ್ಥಾನದೊಳಗೆ ಇದ್ದ ನಾನು ಕೊನೆಯ ಐದು ಸ್ಥಾನಕ್ಕೆ ಬಂದೆ. ಹತ್ತನೇ ತರಗತಿಯಲಲ್ಲಿ ನಪಾಸಾದೆ. ಮಿಲಿಟರಿ ಸೇರುವ ವಿಫಲ ಪ್ರಯತ್ನವನ್ನೂ ಮಾಡಿದೆ. ಅಷ್ಟರಲ್ಲಿ ಯಾರೋ ‘ನಾಟಕದಲ್ಲಿ ಮಾಡುತ್ತಿ ಏನೋ’ ಎಂದು ಕೇಳಿದರು. ನಾನೂ ಒಪ್ಪಿದೆ. ನನ್ನ ಮೊದಲ ನಾಟಕವೇ ವೆಂಕಟರಾವ್ ತಲಗೇರಿ ನಿರ್ದೇಶನದ ಚೈತನ್ಯ ಮಹಾಪ್ರಭು ಜೀವನಾಧಾರಿತ ನಾಟಕ. ಅದು ಯಶಸ್ವಿಯಾಗುತ್ತಲೇ ಎರಡನೆಯದು ಗೌತಮ ಬುದ್ಧನ ಪಾತ್ರ. ನಂತರ ಆರ್. ಡಿ. ಕಾಮತ್ ಪರಿಚಯ ಆಗಿ, ಅವರ ಜೊತೆ ಸಾಮಾಜಿಕ ಹಾಸ್ಯ ನಾಟಕಗಳಲ್ಲಿ ಅಭಿನಯಿಸಿದೆ. ೩ಎ ಅಂತ ನಾವು ಮೂರು ಜನ ಆನಂದ, ಅಶೋಕ ಮತ್ತು ನಾನು ಸೇರಿ ರಂಗಸಂಸ್ಥೆಯೊಂದನ್ನು ಸ್ಥಾಪಿಸಿ ಅದರ ಮೂಲಕ ನಾನೇ ನಾಟಕಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಅಳವಡಿಸಿ ಮಾಡಿದೆ. ನಿರ್ಮಾಣ, ನಿರ್ದೇಶನ ಅಭಿನಯ ಎಲ್ಲ. ನನಗಿಂತ ಆರು ವರ್ಷ ಚಿಕ್ಕವನು ಶಂಕರ. ಅವನನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದೆ. ಒಂದೆರಡು ಪಾತ್ರಗಳನ್ನೂ ಮಾಡಿಸಿದ್ದೆ. ನಿನಗೂ ಸಿನಿಮಾದಲ್ಲಿ ಕರೆಯುತ್ತಾರೆ ಅಂತ ಆಗಲೇ ಅಂದಿದ್ದ. ಗಿರೀಶ್ ಕಾರ್ನಾಡ್, ಜಿ.ವಿ. ಅಯ್ಯರ್, ವೈಎನ್ಕೆ ಎಲ್ಲ ಮಾತಾಡಿ ‘ಸಂಕಲ್ಪ’ ಕೊಡಿಸಿದರು. ಅಲ್ಲಿಂದ ಜಿ.ವಿ. ಅಯ್ಯರ್ ಅವರದೇ ಹಂಸಗೀತೆ ಮಾಡಿದೆ. ಅದೇ ವೇಳೆ ನಮ್ಮ ಕಾಲೊನಿಯಲ್ಲಿ ವಾಸ ಮಾಡುತ್ತಿದ್ದ ಅಮೋಲ್ ಪಾಲೇಕರ್ ಬಂದರು. ಅವರು ಸತ್ಯದೇವ್ ದುಬೇ ಜೊತೆ ಇದ್ದರು. ‘ಆಧೇ ಅಧೂರೆ’ ಹಿಂದಿ ನಾಟಕದಲ್ಲಿನ ಅಭಿನಯ. ನನ್ನ ರಂಗದ ಮೇಲಿನ ಅಭಿನಯ ಶೈಲಿಯನ್ನು ಬದಲಾಯಿಸಿತು. ದುಬೇ ಅವರು ಶಾಂ ಬೆನಗಲ್ ಜೊತೆಗಾರರು.ಅವರ ಮೂಲಕ ಶಾಂ ಬೆನಗಲ್ ಪರಿಚಯವಾಗಿ, ‘ಅಂಕುರ್’ ಸೇರಿದಂತೆ ಸತತ ಆರು ಚಿತ್ರಗಳಲ್ಲಿ ನಟಿಸಿದೆ. ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಬಂತು. ಸಂಕಲ್ಪ ಮಾಡಿದ್ದರಿಂದ ಸತ್ಯು ಅವರು ‘ಕನ್ನೇಶ್ವರ ರಾಮ’ ಚಿತ್ರಕ್ಕೆ ಕರೆದರು. ಲಂಕೇಶ್ ಅವರು ‘ಅನುರೂಪ’ದಲ್ಲಿ ಅವಕಾಶ ಕೊಟ್ಟರು.

ವ್ಯಾಪಾರಿ ಚಿತ್ರಗಳಲ್ಲಿ ನಟಿಸಲು ಆರಂಭಿಸಿದಿರಿ?

ವೈ. ಆರ್. ಸ್ವಾಮಿ ಅವರು ವ್ಯಾಪಾರಿ ಚಿತ್ರದಲ್ಲಿ ನಟಿಸಲು ಮೊದಲು ಆಹ್ವಾನಿಸಿದರು. ಕಲಾತ್ಮಕ ಚಿತ್ರಗಳಲ್ಲಿ ಸಂಭಾವನೆ ಕಡಿಮೆ. ಅಲ್ಲಿ ಹತ್ತು ಚಿತ್ರಕ್ಕೆ ಸಿಕ್ಕುವ ಸಂಭಾವನೆಯನ್ನು ವ್ಯಾಪಾರಿ ಚಿತ್ರದಲ್ಲಿ ಅವರು ಒಂದು ಚಿತ್ರಕ್ಕೆ ಆಫರ್ ಮಾಡಿದರು. ಮಾಡ್ತೀನಿ ಅಂದೆ. ನನ್ನದು ಪುಟ್ಟ ಪಾತ್ರ. ಈ ಹಿನ್ನೆಲೆಯಲ್ಲಿ ‘ಬಯಲು ದಾರಿ’ ಸಿಕ್ಕಿತು. ಕಲ್ಪನಾ ಅವರ ಜೊತೆ, ಅದು ಮಾಡಿದ ಮೇಲೆ ತಿರುಗಿ ನೋಡಲಿಲ್ಲ. ಅದೇ , ನೀರಿನ ಸೆಳೆತ ಸೆಳೆದುಕೊಂಡು ಹೋಗುತ್ತದಲ್ಲ, ಮಹಾಪೂರ ಬಂದಾಗ! ಆ ರೀತಿ ಕನ್ನಡ ಚಿತ್ರರಂಗ ನನ್ನನ್ನು ಸೆಳೆದುಕೊಂಡು ಹೋಯಿತು, ಐವತ್ತು ವರ್ಷಗಳ ಕಾಲ.

ನೀವು ಒಂಬತ್ತು ಭಾಷೆಗಳಲ್ಲಿ ನಟಿಸಿದ್ದೀರಿ. ಈ ಕುರಿತು?

ಸಿನಿಮಾ ಅಂದರೆ ದೃಶ್ಯಮಾಧ್ಯಮ. ಇಲ್ಲಿ ದೃಶ್ಯವೇ ಮುಖ್ಯ, ಮಾತುಗಳು ಕಡಿಮೆ. ರಂಗಭೂಮಿಯ ಹಿನ್ನೆಲೆಯಿಂದ ಬಂದ ನನ್ನ ಅಭಿನಯ, ವಿಶೇಷವಾಗಿ ಕಣ್ಣು ಮುಖದ ಅಭಿವ್ಯಕ್ತಿಯ ಕಾರಣದಿಂದ ಅಲ್ಲಿ ಕರೆಯುತ್ತಿದ್ದರು. ಬೇರೆ ಬೇರೆ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಲು ಕರೆದಾಗ ನಾನು ನಿರಾಕರಿಸಲಿಲ್ಲ. ಕನ್ನಡದ ರಾಯಭಾರಿಯಾಗಿ ಅದೊಂದು ಗೌರವ ಎಂದುಕೊಂಡು ಹೋದೆ.

ಈ ನಡುವೆ ರಾಜಕೀಯದತ್ತಲೂ ಹೊರಳಿದಿರಿ?

ಮೂರು ವರ್ಷ, ಮೂರೂವರೆ ವರ್ಷ ಇದ್ದೆ.

ಆ ಜಾಗ ನನ್ನದಲ್ಲ ಅಂತ ಅನಿಸಿತಾ ನಿಮಗೆ?

ಹಾಗೇನಿಲ್ಲ. ಇಲ್ಲಿ ಅಥವಾ ಅಲ್ಲಿ ಇರಬೇಕಿತ್ತು. ಇಲ್ಲಿ ಬಂದೆ.

ನೀವು ಈ ಪ್ರಶಸ್ತಿಯನ್ನು ಕನ್ನಡಿಗರಿಗೆ ಅರ್ಪಿಸುತ್ತೇನೆ ಅಂದಿರಿ. ಇದರ ಕುರಿತು ಹೇಳಿ?

ನನಗೆ ಕನ್ನಡಿಗರು ತೋರಿದ ಪ್ರೀತಿ ಅದಕ್ಕೆ ಕಾರಣ, ನಾನು ಇಲ್ಲಿ ಬಂದಾಗ ಅಲೆಯ ಚಿತ್ರಗಳ ಮೂಲಕ ಅಭಿಯಾನ ಶುರುವಾಗಿತ್ತು. ‘ಸಂಸ್ಕಾರ’ ಬಂತು. ಅನಂತಮೂರ್ತಿಯವರ ಕಾದಂಬರಿ. ಅದರಲ್ಲಿ ಲಂಕೇಶ್, ಗಿರೀಶ್ ಕಾರ್ನಾಡ್ ಎಲ್ಲ ನಟಿಸಿದ್ದರು. ಅದರ ನಂತರ ವಂಶವೃಕ್ಷ. ಅದು ಭೈರಪ್ಪನವರ ಕಾದಂಬರಿ ಆಧರಿಸಿದ್ದು. ಆ ಮೇಲೆ, ತಬ್ಬಲಿಯು ನೀನಾದೆ ಮಗನೆ, ಹೀಗೆ ನಾನು ನಟಿಸಿದ್ದ ಚಿತ್ರಗಳಲ್ಲದೆ, ಬೇರೆಬೇರೆಯವರು ಮಾಡಿದ ಚಿತ್ರಗಳಿದ್ದವು. ಇತರ ಪ್ರದೇಶಗಳಿಗಿಂತ ಕರ್ನಾಟಕದಲ್ಲಿ ಹೊಸ ಅಲೆಯ ಚಿತ್ರಗಳು ವಿಜೃಂಭಿಸಿದವು.

೭೦ರ ದಶಕವನ್ನು ಕನ್ನಡ ಚಿತ್ರರಂಗದ ಸುವರ್ಣ ಯುಗ ಅಂತಾನೆ ಕರೆಯುತ್ತಾರೆ. ೭೦ ಮತ್ತು ಎಂಬತ್ತು. ಆವಾಗ ಡಾ. ರಾಜಕುಮಾರ್ ಚಿತ್ರಗಳು ಕೂಡಾ. ಅವರ ಯಾವ ಚಿತ್ರಗಳೂ ಸೋತದ್ದಿಲ್ಲ.

ಹಿಂದಿನಂತೆ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ ಎನ್ನುವ ಮಾತು ಒಂದೆಡೆ, ನೀವು ಕಳೆದ ಮೂರು ವರ್ಷಗಳಿಂದ ನಟಿಸಿಲ್ಲ ಎಂಬ ಹೇಳಿಕೆ ಇನ್ನೊಂದೆಡೆ, ಈ ಎರಡೂ ಹೇಳಿಕೆಗಳ ನಡುವೆ ಸಂಬಂಧವಿದೆ. ಇದಕ್ಕೆ ಏನನ್ನುತ್ತೀರಿ?

ಒಂದು, ರಾಜಕುಮಾರ್ ಅವರು ಚಿತ್ರಗಳಲ್ಲಿ ಅಭಿನಯಿಸುವುದು ಕಡಿಮೆ ಮಾಡಿದರು. ನಮಗೆಲ್ಲ ವಯಸ್ಸಾಗುತ್ತಾ ಬಂತು. ರಾಜಕುಮಾರ್ ಅವರು ಮುಂಚೂಣಿಯಲ್ಲಿದ್ದರು, ನಂತರ ವಿಷ್ಣುವರ್ಧನ್ ಬಂದ್ರು, ಅಂಬರೀಶ್, ನಾನು, ಶಂಕರ್, ೭೦,೮೦,೯೦ರ ದಶಕಗಳಲ್ಲಿ

.. ೯೦ರಲ್ಲಿ ಶಂಕರ ೩೫ನೇ ವಯಸ್ಸಿಗೆ ತೀರಿಕೊಂಡ. ಆ ವೇಳೆಗಾಗಲೇ ಮಾಲ್ಗುಡಿ ಡೇಸ್ ಎಲ್ಲ ಮಾಡಿದ್ದ. ಎಲ್ಲ ಸಾಧ್ಯತೆಗಳಿದ್ದ ವೇಳೆ ಹೀಗಾಯಿತು. ಅದಾಗಲೇ ಯುವಕರು ಬರಬೇಕಾಯಿತು. ಬಂದರು ಕೂಡಾ. ಆ ಜನರೇಶನ್ ಮುಂದು ವರಿಯಿತು. ಆದರೆ ಕಳೆದ ಹತ್ತು ವರ್ಷಗಳಲ್ಲಿ ಈ ಹಿನ್ನಡೆ ಆರಂಭವಾಯಿತು. ಇಳಿದ ಕಾಲಚಕ್ರ ಮತ್ತೆ ಏರುವ ಕಾಲ ಬರುತ್ತಿದೆ. ಏರಬಹುದು.

ಹಿಂದಿನಂತೆ ಕನ್ನಡ ಚಿತ್ರರಂಗ ಬೆಳೆಯಬೇಕಾದರೆ ಏನು ಮಾಡಬೇಕು?

ಹಿಂದಿನಂತೆ ಅಲ್ಲ. ಅದನ್ನು ಅಂದಿನ ಪೀಳಿಗೆಯವರು ನೋಡಿ ರಂಜನೆ ಪಡೆದುಕೊಂಡರು. ಹೊಸ ಪೀಳಿಗೆಯವರಿಗೆ ಏನು ಬೇಕು ಎನ್ನುವುದನ್ನು ಅವರೇ ತೀರ್ಮಾನ ಮಾಡಬೇಕು. ಅವರ ಒಬ್ಬ ನಿರ್ದೇಶಕ ಬರಬೇಕು, ಅವರ ಒಬ್ಬ ನಿರ್ಮಾಪಕ ಬರಬೇಕು, ನಟರು ಬರಬೇಕು, ನಟಿಯರು ಬರಬೇಕು. ಪ್ರತಿಭಾವಂತರಿಗೆ ಅವಕಾಶ ಕೊಟ್ಟು ಕಡಿಮೆ ಬಜೆಟ್‌ನ ಚಿತ್ರ ಮಾಡಿ.

ಕೃತಕ ಬುದ್ಧಿಮತ್ತೆಯ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ನೋಡೋಣ ಏನು ಆಗುತ್ತೆ ಅಂತ. . ಎಷ್ಟೇ ಆದರೂ ಕೃತಕ ಅದು. ನಾನು ‘ಹಲೋ ಗೂಗಲ್ ಫಂಡ್’ ಅಂತ ಹೇಳಿದರೆ, ಅದು, ‘ಐ ಯಾಮ್ ನಾಟ್ ಯುವರ್ ಫಂಡ್, ಐ ಯಾಮ್ ಎ ಮೆಶೀನ್’ ಅಂತ ಉತ್ತರಿಸುತ್ತದೆ

Tags:
error: Content is protected !!