ಕೆ.ಬಿ.ರಮೇಶ್ ನಾಯಕ
ಟಿಕೆಟ್ ಜೀನಿ ಸಂಸ್ಥೆಗೆ ಟಿಕೆಟ್ ಮಾರಾಟದ ಹೊಣೆ; ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ
ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿ ಮೆರವಣಿಗೆ, ಪಂಜಿನ ಕವಾಯತು ಪ್ರದರ್ಶನ ವೀಕ್ಷಣೆಗಾಗಿ ದಸರಾ ಮಹೋತ್ಸವ ಸಮಿತಿ ವತಿಯಿಂದ ಗೋಲ್ಡ್ ಕಾರ್ಡ್, ಟಿಕೆಟ್ ಮಾರಾಟ ಶುರು ಮಾಡಲಾಗಿದ್ದು, ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೈಸೂರು ದಸರಾ ಮಹೋತ್ಸವ ಸಮಿತಿಯ ಅಧಿಕೃತ ಪಾಲುದಾರರಾಗಿರುವ ಟಿಕೆಟ್ಜೀನಿ ಸಂಸ್ಥೆಯು ಟಿಕೆಟ್ ಮಾರಾಟದ ಹೊಣೆ ಹೊತ್ತಿದೆ. ಇದೇ ಮೊದಲ ಬಾರಿಗೆ ಜಂಬೂಸವಾರಿ ಮೆರವಣಿಗೆಗೆ ಒಂದು ತಿಂಗಳ ಮುನ್ನವೇ ಟಿಕೆಟ್ ಮಾರಾಟಕ್ಕೆ ವೆಬ್ಸೈಟ್ನಲ್ಲಿ ಅನುವು ಮಾಡಿಕೊಟ್ಟಿರುವುದರಿಂದ ಸಾರ್ವಜನಿಕರು ಖರೀದಿಸಬಹುದಾಗಿದೆ. ಕಳೆದ ವರ್ಷದಂತೆ ಈ ಬಾರಿಯೂ ಒಂದು ಗೋಲ್ಡ್ ಕಾರ್ಡ್ಗೆ ೬,೫೦೦ ರೂ. ದರ ನಿಗದಿಪಡಿಸಿದ್ದು, ಒಬ್ಬರಿಗೆ ನಾಲ್ಕು ಗೋಲ್ಡ್ ಕಾರ್ಡ್ ಮತ್ತು ನಾಲ್ಕು ಟಿಕೆಟ್ಗಳ ಖರೀದಿಗೆ ಮಿತಿ ನಿಗದಿಪಡಿಸಲಾಗಿದೆ. ಜಂಬೂಸವಾರಿ ಮೆರವಣಿಗೆ ಟಿಕೆಟ್ ದರವನ್ನು ೩,೫೦೦ ರೂ. ನಿಗದಿಪಡಿಸಿದ್ದರೆ, ಬನ್ನಿಮಂಟಪದಲ್ಲಿ ನಡೆಯಲಿರುವ ಪಂಜಿನ ಕವಾಯತು ಪ್ರದರ್ಶನದ ಟಿಕೆಟ್ಗೆ ೧,೫೦೦ ರೂ. ನಿಗದಿ, ಡ್ರೋನ್ ಶೋ ಟಿಕೆಟ್ ದರವನ್ನು ೧ ಸಾವಿರ ರೂ. ನಿಗದಿಪಡಿಸಲಾಗಿದೆ.
ಒಂದು ಗೋಲ್ಡ್ ಕಾರ್ಡ್ಗೆ ಒಬ್ಬರಿಗೆ ಮಾತ್ರ ಪ್ರವೇಶವಿದ್ದು, ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಚಾಮರಾಜೇಂದ್ರ ಮೃಗಾಲಯ ವೀಕ್ಷಣೆಗೆ ಅವಕಾಶವಿದೆ. ಜಂಬೂಸವಾರಿ, ಪಂಜಿನ ಕವಾಯತು, ಡ್ರೋನ್ ಶೋ ಟಿಕೆಟ್ ಖರೀದಿಸಿದವರಿಗೆ ಆಯಾಯ ಕಾರ್ಯಕ್ರಮಗಳ ವೀಕ್ಷಣೆಗೆ ಮಾತ್ರ ಅವಕಾಶವಿದೆ.
ಉತ್ತಮ ಪ್ರತಿಕ್ರಿಯೆ: ಗೋಲ್ಡ್ಕಾರ್ಡ್ ಸಾರ್ವಜನಿಕರಿಗೆ ಸಿಗುವುದಿಲ್ಲ ಎನ್ನುವ ಆರೋಪವನ್ನು ದೂರ ಮಾಡಲು ಜಿಲ್ಲಾಡಳಿತ ಈ ಬಾರಿ ಆನ್ಲೈನ್ ಮೂಲಕವೇ ಖರೀದಿಸಲು ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡಿದೆ. ೩,೫೦೦ ಸಂಖ್ಯೆಯ ಗೋಲ್ಡ್ ಕಾರ್ಡ್, ಜಂಬೂಸವಾರಿ, ಪಂಜಿನ ಕವಾಯತು ಕಾರ್ಯಕ್ರಮದ ತಲಾ ೩ ಸಾವಿರ ಟಿಕೆಟ್ಗಳನ್ನು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಡ್ರೋನ್ ಶೋ ಟಿಕೆಟ್ ಮಾರಾಟಕ್ಕೆ ಮಿತಿ ಇಲ್ಲದೆ, ಕಾರ್ಯಕ್ರಮದ ಹಿಂದಿನ ದಿನದವರೆಗೂ ಮಾರಾಟ ಇರುತ್ತದೆ. ಉಳಿದಂತೆ ನಿಗದಿ ಪಡಿಸಿರುವ ಗೋಲ್ಡ್ ಕಾರ್ಡ್, ಟಿಕೆಟ್ಗಳು ಮಾರಾಟ ಮುಗಿದ ಮೇಲೆ ತೆರೆ ಬೀಳಲಿದೆ.
ಗೋಲ್ಡ್ ಕಾರ್ಡ್ ಖರೀದಿ ಪ್ರಕ್ರಿಯೆ ಹೀಗಿದೆ…
ಮೈಸೂರು ದಸರಾ ಮಹೋತ್ಸವದ ಅಧಿಕೃತ ವೆಬ್ಸೈಟ್ನಲ್ಲಿ ಟಿಕೆಟ್ ಖರೀದಿಸಿ ಮೇಲೆ ಕ್ಲಿಕ್ ಮಾಡಿದರೆ ಟಿಕೆಟ್ ಜೀನಿ ಪುಟ ತೆರೆದುಕೊಳ್ಳಲಿದೆ. ಇಲ್ಲಿ ಗೋಲ್ಡ್ ಕಾರ್ಡ್, ಜಂಬೂಸವಾರಿ, ಪಂಜಿನ ಕವಾಯತು, ಡ್ರೋನ್ ಶೋ ಟಿಕೆಟ್ಗಳ ಪ್ರದರ್ಶನ ಕಾಣುತ್ತದೆ. ತಮಗೆ ಯಾವುದು ಬೇಕೋ ಅದರ ಮೇಲೆ ಕ್ಲಿಕ್ ಮಾಡಿದರೆ ಒಬ್ಬರಿಗೆ ನಾಲ್ಕು ಟಿಕೆಟ್ ಖರೀದಿಸುವ ಅವಕಾಶವಿದೆ. ಸೇವಾ ಶುಲ್ಕ, ಜಿಎಸ್ಟಿ ಸೇರಿದಂತೆ ಒಟ್ಟು ಮೊತ್ತವನ್ನು ಗೂಗಲ್ ಪೇ, ಫೋನ್ ಪೇ, ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಿದರೆ ಟಿಕೆಟ್ ಖಚಿತವಾಗಿ ಮೊಬೈಲ್ಗೆ ಸಂದೇಶ ರವಾನೆಯಾಗಲಿದೆ. ಟಿಕೆಟ್ ವಿತರಿಸುವ ದಿನಾಂಕ ಮತ್ತು ಸಮಯವನ್ನು ತಿಳಿಸಿದಾಗ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ಹಾಜರುಪಡಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸ್ಪಂದನ ಕೌಂಟರ್ನಲ್ಲಿ ಪಡೆದುಕೊಳ್ಳಬಹುದಾಗಿದೆ.
” ಮೈಸೂರು ದಸರಾ ಮಹೋತ್ಸವದ ಗೋಲ್ಡ್ ಕಾರ್ಡ್, ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಮಾರಾಟಕ್ಕೆ ಬಿಡಲಾಗಿದೆ. ಸಮಿತಿಯು ನಿಗದಿಪಡಿಸಿರುವ ಟಿಕೆಟ್ಗಳ ಮಾರಾಟ ಮುಗಿಯುವವರೆಗೂ ಆನ್ಲೈನ್ನಲ್ಲಿ ಇರುತ್ತದೆ. ಟಿಕೆಟ್ಜೀನಿ ಸಂಸ್ಥೆಗೆ ಮಾರಾಟ ಮಾಡಲು ಹೊಣೆ ನೀಡಲಾಗಿದೆ. ನಿಗದಿಪಡಿಸಿರುವ ಆಸನಗಳ ಸಂಖ್ಯೆಗೆ ತಕ್ಕಂತೆ ಟಿಕೆಟ್ ಮಾರಾಟ ಮಾತ್ರ ನಡೆಯಲಿದೆ.”
-ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾಧಿಕಾರಿ




