ಮಧುಕರ ಎಮ್.ಎಲ್.
ಯಳಂದೂರಿನಲ್ಲೊಂದು ಅಪರೂಪದ ಜೋಡಿ
ಅದು ಬೇಸಿಗೆ ಕಾಲ, ಬೆಳಗಿನ ವೇಳೆಯಲ್ಲಿ ವಾಕಿಂಗ್ ಮಾಡುವ ಜನರ ಸಂಖ್ಯೆ ಹೆಚ್ಚು, ನಿದ್ದೆ ಬಾರದ ಕಾರಣವೂ ಇರಬೇಕು. ಈ ಗುಂಪಿನ ನಡುವೆ ಒಂದು ಜೋಡಿಯ ಕಂಡೆ. ಆ ನಸುಕಿನ ಸೂರ್ಯನ ಹೊಳಪಿನಲ್ಲಿ ಮಿನುಗುವ ಗುಲ್ಮೊಹರ್ ಮರದಡಿಯಲ್ಲಿ ವಿಶ್ರಾಂತಿ ಮಾಡುತ್ತಿದ್ದರು. ಇವರು ಯಾರು? ಅದರಲ್ಲಿ ಕಣ್ಣು ಕಾಣದ ಗಂಡು, ಅದರ ಆಶ್ರಯಕ್ಕೆ ಹೆಣ್ಣು ಜೀವ! ನನ್ನ ಹೀಗೆ ಪೂರ್ತಿ ಮನಸ್ಸು ಇವರ ಸಂಬಂಧಕ್ಕೆ ಹೆಸರೇನು? ಎಂದು ಕೇಳಿತ್ತು. ಹೀಗೆ ಹಲವಾರು ದಿನ ತಮ್ಮ ಊರಾದ ಯರಿಯೂರಿನಿಂದ ಯಳಂದೂರಿಗೆ ನಡೆದುಕೊಂಡು ಬರುವುದೇ ವಾಡಿಕೆ. ಯಳಂದೂರಿನ ಗಡಿಯಾದ ನಾಡಮೇಗಲಮ್ಮನ ದೇವಸ್ಥಾನದ ತನಕ ನಡೆದುಕೊಂಡೇ ಬರುವುದು ಆ ಕಣ್ಣು ಕಾಣದ ಗಂಡು ಆ ಹೆಂಗಸನ್ನೇ ಊರುಗೋಲಾಗಿ ಆಶ್ರಯ ಪಡೆದು ಬರುವುದು. ನಂತರ ಅಲ್ಲಿ ಯಾವುದಾದರು ಹೋಟೆಲಿನಲ್ಲಿ ತಿಂಡಿಯನ್ನೂ ಊಟವನ್ನೂ ಮಾಡಿಕೊಂಡು ಮತ್ತೇ ತಮ್ಮ ಊರು ಸೇರುವುದು,ಸುಮಾರು ನಾಕು ಮೈಲಿ ನಡೆದುಕೊಂಡೇ.
ಒಂದು ದಿನ ಮಾತಿಗೆ ಸಿಕ್ಕರು ಈ ಜೋಡಿ, ‘ನಮಸ್ತೆ ಟೀ ಕುಡಿದ್ರ ಎಂದೇ’. ಆ ಹೆಂಗಸು ತನ್ನ ಹರಕು ಸೀರೆಯನ್ನು ಸರಿಮಾಡಿಕೊಂಡು ಕೆದುರಿದ ಕೂದಲನ್ನು ಹಾಗೂ ಅಲ್ಲಲ್ಲಿ ಕಾಣವ ಬುಂಡೆಯನ್ನು ಕಾಣಿಸುತ್ತಾ ‘ಹೂಂ ಸಾ ಈಗ ತಾನೇ ಆಯಿತು ಎಂದಳು? ಬಹಳ ಕೂತುಹಲವಾಗಿದ್ದ ನನ್ನ ಪ್ರಶ್ನೆಗೆ ‘ಇವರು ಯಾರು’? ಎಂದೆ. ‘ಇವರಿಗೆ ಕಣ್ಣು ಕಾಣುವುದಿಲ್ಲವೆ’? ಎಂದು ಕೇಳಿದೆ. ‘ಇವಾ ನನ್ನ ತಮ್ಮ ಸಾ, ಕಣ್ಣು ಕಾಣುವುದಿಲ್ಲ. ಅದಕ್ಕೆ ನಾನು ಅವನಿಗೆ ಆಶ್ರಯ’ ಎಂದಳು! ‘ಯಾಕೆ ಈಗ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಸೌಕರ್ಯವಿದೆಯಲ್ಲ’ ಎಂದೆ. ಆಕೆ ಮುಂದುವರಿದು ‘ಇಲ್ಲಾ ಸಾ ಇದು ಹುಟ್ಟು ಕುರುಡು ನಮ್ಮ ತಾಯಿ ಊರು ಪಕ್ಕದಲ್ಲಿದೆ. ನಮ್ಮ ತಂದೆ ತುಂಬಾ ಕುಡುಕ. ನಮ್ಮ ಬಾಲ್ಯವೆಲ್ಲಾ ನಮ್ಮಜ್ಜಿ ಮನೆಯಲ್ಲೇ ಕಳೆಯಿತು. ನಾನು ಹಾಗೂ ನನ್ನ ದೊಡ್ಡ ತಮ್ಮ ಇದ್ದೆವು. ಈ ಕುರುಡ ಹುಟ್ಟಿದ ಎರಡೇ ತಿಂಗಳಿಗೆ ನಮ್ಮ ತಾಯಿ ತೀರಿ ಹೋದರು. ನಾಕಾರು ದಿನ ನಮ್ಮಜ್ಜಿ ನಮ್ಮ ಮಾವ ನಮ್ಮನ್ನ ಸಾಕಿ ನಮ್ಮೂರಾದ ಯರಿಯೂರಿಗೆ ತಂದು ಬಿಟ್ಟರು, ಆಗ ನನಗೆ ಏಳು ವರ್ಷ ಆಗಿನಿಂದ ಇಲ್ಲಿ ತನಕ ಕೂಲಿ ಕಂಬಳ ಮಾಡುತ್ತಾ ಬೆಳೆದೆವು. ಹಿಂಗೆ ಹಲವಾರು ಗಾಳಿ ಮಳೆ ಕಂಡು ಬೆಳೆದ ಕೂಸುಗಳು ನಾವು ಎಂದು ತಮ್ಮನ ತಲೆ ಸವರಿದಳು.
ನನ್ನ ದೊಡ್ಡ ತಮ್ಮನಿಗೆ ಮದುವೆ ಮಾಡಿದೆ. ನಂಗೂ ಮದುವೆಯಿಲ್ಲ, ಈ ಕುರುಡನಿಗೂ ಇಲ್ಲ. ನಮ್ಮಪ್ಪನ ಮನೆ ಜ್ಯೋತಿ ಬೆಳಗಲಿ ಅಂತ ಪಕ್ಕದೂರಿನಲ್ಲಿ ಒಂದು ಹೆಣ್ಣು ಗೊತ್ತು ಮಾಡಿದೆ.ಆದರೆ ಇವಾ ಕಳ್ತನ ಮಾಡುತ್ತಿದ್ದ, ಕುಡಿಯುತ್ತಿದ್ದ ಅಂತ ಹೆಣ್ಣು ಕೊಡುವುದಕ್ಕೆ ಹಿಂದು ಮುಂದು ನೋಡಿದರು. ಆಗ ನಾನೇ ನಾಲಕ್ಕು ಪಲ್ಯ ಭತ್ತ, ಒಂದು ಗಾಡಿ ಸೌದೆ, ನಮ್ಮ ಸೋದರ ಮಾವ ಕೊಟ್ಟಿದ್ದ ಕಾಸು, ನನ್ನ ಕೂಲಿ ಕಂಬಳದ ದುಡ್ಡು ಸೇರಿಸಿ ಮೂವತ್ತು ಸಾವಿರ ಕೊಟ್ಟು ನನ್ನ ತಮ್ಮನಿಗೆ ಮದುವೆ ಮಾಡಿದೆ. ನನ್ನದೇ ಮಗಳು ಅಂತ ಮನೆಗೆ ತಂದೆ. ಆದರೆ ನನ್ನ ಯಾನ- ಯತ್ತ? ಎನ್ನಲಿಲ್ಲ. ದಿನ ಕಳೆದಂತೆ ನಮ್ಮನ್ನು ಹೊರಗೆ ಹಾಕಿದರು ಗಂಡ ಹೆಂಡತಿ.
ನಾವಿಬ್ಬರೂ ಮನೆಯಿಂದ ಆಚೆ ಬಂದೆವು. ನಮ್ಮನ್ನ ಯಾರು ಏನು ಅಂತ ಕೇಳಲಿಲ್ಲ. ಹೊಟ್ಟೆ ಬಟ್ಟೆಗೆ ಕೂಲಿಕಂಬಳಕ್ಕೆ ಹೋಗಿ ದುಡಿಮೆ ಶುರು ಮಾಡಿದೆ, ಈಗಂಡು ಗಾರೆ ಹೊರುವುದಕ್ಕೆ ಶುರುಮಾಡಿತು. ಆಗ ಏನಾಯಿತೋ ಏನೋ ಬಲಗಡೆ ಕುತ್ತಿಗೆ ತಾವು ಈ ಪಾಟಿ ಗಂಟು ಮೂಡಿತು, ಡಾಕ್ಟರ್‌ಗೆ ತೋರಿಸಿದೆ. ಅವರು ಕ್ಯಾನ್ಸರ್ ಗಡ್ಡೆ ಎಂದರು. ಆಗ ಇದು ಮನೆಯಲ್ಲಿಯೇ ನಿಲ್ತು, ಆಗ ಒಂದು ದಿನ ಇವನ ಜೊತೆಗಾರ ಸಿಕ್ಕಿ ‘ನಾನು ನಿಮಗೆ ಸಹಾಯ ಮಾಡ್ತೀನಿ ಆಪರೇಷನ್ ಮಾಡಿಸಿ’ ಎಂದ. ಹಣ ಸಹಾಯ ಮಾಡಿದ ಅನ್ನಿ, ಆದರೆ ಆಪರೇಷನ್ ಮಾಡುವಾಗ ರಕ್ತ ಜಾಸ್ತಿ ಹೋಗಿ ತಲೆಗೆ ರಕ್ತ ಸಂಚಾರ ಕಡಿಮೆ ಆಯಿತು. ಆಗಿನಿಂದ ಇವನಿಗೆ ಚುರುಕು ಕಡಿಮೆ ಆಗಿ ಮಂದ ಆದ, ಮತ್ತೇ ಕಣ್ಣು ಕಾಣುವುದು ಕಡಿಮೆಯಾ ಯಿತು ಎನ್ನುತ್ತಾ ಸೆರಗಿನಲ್ಲಿ ಕಣ್ಣೀರು ಒರೆಸಿಕೊಂಡಳು.
ಮತ್ತೆ ನಿಮ್ಮ ತಲೆಕೂದಲು ಯಾಕೆ ಕಡಿಮೆ ಅಗಿದೆ ಎಂದೆ. ಅದಕ್ಕವಳು ‘ಅದ ಸಾ ನಾನು ರೇಷ್ಮೆ ನೂಲು ಬಿಚ್ಚುವ ಕೆಲಸಕ್ಕೆ ಹೋಗುತ್ತಿದ್ದೆ. ಆಗ ಗಾಳಿಯಲ್ಲಿ ಚಕ್ರಕ್ಕೆ ಕೂದಲು ಸಿಕ್ಕಿ ಹಾಕಿಕೊಂಡು ಹೀಗಾಯಿತು. ಆಗ ಜನ ಹೇಳಿದರು ನಿನಗೆ ಈ ಒಡಬಾಳು ಯಾಕೆ? ಒಂದು ಮದುವೆ ಅಗು’ ಅಂತ. ನಾನು ನನ್ನ ತಮ್ಮನನ್ನು ಕೇಳಿದೆ. ಇದು ಹೇಳಿತು, ‘ನನ್ನ ನೀನು ಯಾವುದಾದರೂ ಹಾಳು ಬಾವಿಗೆ ತಳ್ಳುಬಿಟ್ಟು ಆಗು’ ಅಂತು. ಆಗ ನಾನು ಯೋಚನೆ ಮಾಡಿದೆ ‘ನನ್ನ ಹೊಟ್ಟೆಯೊಳಗಿನ ಕೂಸು ಎಂದು ತಿಳಿದುಕೊಂಡು ಇವನ ಕಷ್ಟ ಸುಖ ನೋಡುತ್ತ ಜೀವನ ತಳ್ಳುವ’ ಅಂತ ತೀರ್ಮಾನ ಮಾಡಿದೆ. ಡಾಕ್ಟರ್ ಹೇಳಿದಂಗೆ ಇವನ ಪುಷ್ಟಿ ಮಾಡಲು ದಿನಾಲು ನಡ್ಕೊಂಡೆ ಊರಿಂದ ಯಳಂದೂರಿಗೆ ಹೋಗ್ತೀನಿ.
ನಮ್ಮ ಕಷ್ಟ ತಿಳಿದ ಹೋಟೆಲ್‌ನವರು ಹೊಟ್ಟೆ ತುಂಬಾ ತಿಂಡಿನೋ ಊಟನೋ ಕೊಡ್ತಾರೆ. ಇದ ತಿಳಿದ ಊರ ಜನ ‘ಅವರಿಗೇನು ಕಡಿಮೆ ಮೂರೊತ್ತು ಹೋಟೆಲ್‌ನಲ್ಲೇ ಉಣ್ತಾರೆ’ ಅಂತ ಮಾತಾಡಿಕೊಳ್ತಾರೆ. ‘ನಂಗೆ ನೂರಿಪ್ಪತ್ತು ಅನಾಥ ಪಿಂಚಣಿ, ಅವನಿಗೆ ಎಂಟು ನೂರು ಬರುತ್ತೆ. ಮಧ್ಯದಲ್ಲಿ ನಾನು ಕೂಲಿಗೆ ಹೋಗ್ತೀನಿ. ಆಸ್ಪತ್ರೆ ಖರ್ಚು ಇದ್ದದ್ದೆ, ಊಟ ತಿಂಡಿಗೆ ಕೂಪನ್ನಕ್ಕಿ, ರಾಗಿ ಸಿಗುತ್ತೆ. ಇವನ ಸರಿ ಮಾಡಬೇಕಂತ ಮತ್ತೆ ಆಪರೇಷನ್ ಮಾಡಿಸಿದೆ. ಅದು ಖಾಸಗಿ ಆಸ್ಪತ್ರೆಯಲ್ಲಿ. ಇನ್ನು ಸರಿ ಹೋಗಿಲ್ಲ, ಆದರೆ ಸಾಲ ಮೈಮೇಲೆ ಬಂತು’ ಎಂದು ರಾಗ ಎಳೆದಳು.
‘ನನಗೂ ಒಂದೊಂದು ಸಾರಿ ಅನ್ಸುತ್ತೆ, ಈ ಗಂಡು, ಮನೆ ಎಲ್ಲಾ ಯಾಕೆ ಬೇಕು? ನನ್ನದು ಅಂತ ಒಂದು ಸಂಸಾರ ಇದ್ದಿದ್ರೆ ಎಷ್ಟು ಚೆನ್ನಾಗಿತ್ತು ಅಂತ! ಆದರೆ, ನನ್ನ ಬೆನ್ನಿಂದೆ ಬಿದ್ದವ, ಅದಕ್ಯಾರು ದಿಕ್ಕು ಎಂಬ ಆಸೆಯಿಂದ ಜೊತೆಗಿದ್ದೀನಿ’. ಮತ್ತೇ ಕೇಳಿದೆ ‘ಇವತ್ತು ಶ್ರಾವಣ ಅಲ್ಲವಾ ಜೋರಾ!’ ಅಂತಾ ಅದಕ್ಕೆ ಆಕೆ ಹೇಳಿದಳು. ‘ಇಲ್ಲ ಸಾ, ನಾವು ಗಬ್ಬು ಚುಂಗು ಮಾಡಲ್ಲ. ಕೊನೆ ವಾರದಲ್ಲಿ ಅಕ್ಕಿ ಪಾಯಸ ಮಾಡಿ ಎಡೆ ಹಾಕುತ್ತೀವಿ ಎನ್ನುತ್ತಾ ಬಿದ್ದ ಗುಲ್ ಮೊಹರ್ ಪಲಕುಗಳ ಮೇಲೆ ಹೆಜ್ಜೆ ಇಡುತ್ತಾ ‘ನಾವ್ ಬತ್ತೀವಿ ಸಾ’ ಎನ್ನುತ್ತಾ ಸೋದರ-ಸೋದರಿಯರು ಊರ ಕಡೆಗೆ ಹೊರಟರು.
” ‘ನನಗೂ ಒಂದೊಂದು ಸಾರಿ ಅನ್ಸುತ್ತೆ, ಈ ಗಂಡು, ಮನೆ ಎಲ್ಲಾ ಯಾಕೆ ಬೇಕು? ನನ್ನದು ಅಂತ ಒಂದು ಸಂಸಾರ ಇದ್ದಿದ್ರೆ ಎಷ್ಟು ಚೆನ್ನಾಗಿತ್ತು ಅಂತ! ಆದರೆ, ನನ್ನ ಬೆನ್ನಿಂದೆ ಬಿದ್ದವ, ಅದಕ್ಯಾರು ದಿಕ್ಕು ಎಂಬ ಆಸೆಯಿಂದ ಜೊತೆಗಿದ್ದೀನಿ’.”




