ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ
ರಾಜ್ಯ ರಾಜಕೀಯದಲ್ಲಿ ೧೯೮೩ರ ರಾಜಕೀಯ ಸನ್ನಿವೇಶ ರೂಪುಗೊಳ್ಳುತ್ತಿದೆಯೇ ಎಂಬ ಅನುಮಾನಗಳು ಶುರುವಾಗಿವೆ. ಅಂದ ಹಾಗೆ ೧೯೮೩ರಲ್ಲಿ ಕರ್ನಾಟಕ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ನೋಡಿತ್ತು. ಮತ್ತು ಇದಕ್ಕೆ ಪೂರಕವಾಗಿ ಅಂದಿನ ಸನ್ನಿವೇಶಗಳು ರೂಪುಗೊಂಡಿದ್ದವು.
ಅರ್ಥಾತ್,ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸರು ೧೯೮೦ ರಲ್ಲಿ ಕೆಳಗಿಳಿದ ಮೇಲೆ ರಾಜ್ಯ ರಾಜಕೀಯದಲ್ಲಿ ಒಂದು ಬಗೆಯ ಅರಾಜಕತೆ ಶುರುವಾಯಿತು. ಈ ಅರಾಜಕತೆಯನ್ನು ಆಡಳಿತಾರೂಢ ಕಾಂಗ್ರೆಸ್ ಸಮರ್ಥವಾಗಿ ಎದುರಿಸಿದ್ದರೆ ಈ ಅರಾಜಕತೆಯ ಹೊಡೆತ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗುತ್ತಿತ್ತೇನೋ?
ಆದರೆ ದೇವರಾಜ ಅರಸರ ನಂತರ ಕರ್ನಾಟಕದ ಮುಖ್ಯಮಂತ್ರಿಯಾದ ಆರ್.ಗುಂಡೂರಾಯರಿಗೆ ಕರ್ನಾಟಕದ ಸಾಮಾಜಿಕ ಸಂರಚನೆಯ ದಟ್ಟ ಪರಿಚಯವಿರಲಿಲ್ಲ. ರಫ್ ಅಂಡ್ ಟಫ್ ವ್ಯಕ್ತಿತ್ವದ ಆರ್.ಗುಂಡೂರಾವ್ ಅವರು ತಮ್ಮ ಮಿತ್ರ ಎಫ್.ಎಂ.ಖಾನ್ ಜತೆಗೂಡಿ ದಿಲ್ಲಿಯ ರಾಜಕೀಯ ವಲಯಗಳಿಗೆ ಪ್ರಿಯರಾಗಿದ್ದರೇ ವಿನಾ ರಾಜ್ಯ ಸರ್ಕಾರದ ಚುಕ್ಕಾಣಿಯನ್ನು ಹಿಡಿದು ಅದನ್ನು ಸರಿ ದಾರಿಯಲ್ಲಿ ನಡೆಸುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಒಂದು ಕಡೆ ದೇವರಾಜ ಅರಸರ ಪದಚ್ಯುತಿ ಮತ್ತು ಇನ್ನೊಂದು ಕಡೆ ಆರ್.ಗುಂಡೂರಾಯರು ಇಡುತ್ತಿದ್ದ ಹೆಜ್ಜೆಗಳು ರಾಜ್ಯ ರಾಜಕೀಯದಲ್ಲಿ ಒಂದು ಬಗೆಯ ಅರಾಜಕತೆಯನ್ನು ಸೃಷ್ಟಿಸಿದವು.
ಗಮನಿಸಬೇಕಾದ ಸಂಗತಿ, ಅವತ್ತು ಕರ್ನಾಟಕ ರಾಜಕೀಯವಾಗಿ ಮಾತ್ರವಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಂಕಷ್ಟವನ್ನು ಎದುರಿಸುತ್ತಿದ್ದ ಕಾಲ. ಅದರಲ್ಲೂ ಮುಖ್ಯವಾಗಿ ದೇಶದಲ್ಲಿ ನಡೆದ ಹಸಿರು ಕ್ರಾಂತಿಯಪರಿಣಾಮವಾಗಿ ಕೃಷಿ ವಲಯ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿತ್ತು. ಅಷ್ಟೇ ಅಲ್ಲ, ತಾನು ಎದುರಿಸುತ್ತಿದ್ದ ಸಮಸ್ಯೆಗಳಿಗೆ ಸರ್ಕಾರದಿಂದ ಸಮರ್ಪಕ ಪರಿಹಾರವನ್ನು ಬಯಸುತ್ತಿತ್ತು.
ಇದರ ಪರಿಣಾಮವಾಗಿ ರೈತ ಚಳವಳಿಯ ಕಾವು ಕರ್ನಾಟಕದಲ್ಲಿ ತೀವ್ರವಾಯಿತು. ಇಂತಹ ಸ್ಥಿತಿಯಲ್ಲಿ ಸರ್ಕಾರ ಎಚ್ಚರದಿಂದ ಹೆಜ್ಜೆ ಇಟ್ಟಿದ್ದರೆ, ರೈತರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಬೌದ್ಧಿಕ ಪ್ರಯತ್ನಗಳನ್ನು ಮಾಡಿದ್ದರೆ ಒಳ್ಳೆಯದಿತ್ತೋ ಏನೋ? ಆದರೆ ಮುಖ್ಯಮಂತ್ರಿ ಗುಂಡೂರಾಯರು ಅದನ್ನು ಮಾಡುವ ಬದಲು ನಿರ್ದಾಕ್ಷಿಣ್ಯವಾಗಿ ಅದನ್ನು ಹತ್ತಿಕ್ಕಲು ಮುಂದಾದರು. ಪೊಲೀಸರು ರಾಜ್ಯದ ಹಲವು ಕಡೆ ಗೋಲಿಬಾರ್ ಮಾಡಿದರು.
ಈ ಮಧ್ಯೆ ದಲಿತ ಚಳವಳಿಯ ಕಾವು ಕೂಡಾ ಜೋರಾಗಿತ್ತು. ಪರಿಣಾಮ ಅವತ್ತು ಕರ್ನಾಟಕ ಚಳವಳಿಗಳ ವೇದಿಕೆಯಾಯಿತು. ಮತ್ತು ಇಂತಹ ವೇದಿಕೆಗಳನ್ನು ನಿಭಾಯಿಸಲು ಗುಂಡೂರಾಯರು ವಿಫಲರಾದ ರೀತಿ ಅವರ ಸರ್ಕಾರಕ್ಕೆ ಮಾರಕವಾಗುತ್ತಾ ಹೋಯಿತು. ಹೀಗೆ ಚಳವಳಿಗಳನ್ನು ನಿಭಾಯಿಸಲು ಸರ್ಕಾರ ವಿಫಲವಾಗುತ್ತಿದ್ದುದು ಒಂದು ಕಡೆಗಾದರೆ, ದೇವರಾಜ ಅರಸರ ಪದಚ್ಯುತಿಯ ನಂತರ ಶೋಷಿತ ಸಮುದಾಯಗಳಲ್ಲಿ ಕಾಣಿಸಿಕೊಂಡ ಆತಂಕ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ದುರ್ಬಲವಾಗುತ್ತಾ ನಡೆಯುವಂತೆ ಮಾಡಿತು. ಮತ್ತು ಇಂತಹ ಸನ್ನಿವೇಶವನ್ನು ವಿರೋಧ ಪಕ್ಷಗಳು ಎಷ್ಟು ಸಮರ್ಪಕವಾಗಿ ಬಳಸಿಕೊಂಡವು ಎಂದರೆ ಕರ್ನಾಟಕದ ವಿವಿಧ ಜನ ವರ್ಗಗಳು ಕಾಂಗ್ರೆಸ್ ವಿರೋಧಿ ಧೋರಣೆಯನ್ನು ತಳೆಯತೊಡಗಿದವು.
ವಾಸ್ತವವಾಗಿ ಅವತ್ತು ಪ್ರತಿಪಕ್ಷಗಳು ಏಕ ವೇದಿಕೆಯ ಮೇಲೆ ನಿಂತಿರಲಿಲ್ಲ. ಒಂದು ಕಡೆ ಜನತಾ ಪಕ್ಷವಿದ್ದರೆ, ಮತ್ತೊಂದು ಕಡೆ ಬಿಜೆಪಿ ಇತ್ತು, ಮಗದೊಂದು ಕಡೆ ಅರಸರು ಕಟ್ಟಿದ ಕರ್ನಾಟಕ ಕ್ರಾಂತಿರಂಗದ ರಥ ಹಿಂದುಳಿದ ವರ್ಗದ ನಾಯಕ ಎಸ್.ಬಂಗಾರಪ್ಪ ಅವರ ಕೈಲಿತ್ತು. ಈ ಪೈಕಿ ಜನತಾ ಪಕ್ಷ ಮತ್ತು ಕ್ರಾಂತಿರಂಗ ಚುನಾವಣೆಯಲ್ಲಿ ಒಗ್ಗೂಡಿ ಹೋರಾಡಿದವಾದರೂ ಬಿಜೆಪಿ, ಕಮ್ಯುನಿಸ್ಟ್ ಸೇರಿದಂತೆ ಎಲ್ಲ ಶಕ್ತಿಗಳೂ ಸೇರಿ ಒಂದು ಸರ್ಕಾರ ರಚಿಸಲು ಅಗತ್ಯವಾದ ಸಂಖ್ಯೆಯನ್ನು ಕ್ರೋಢೀಕರಿಸಿಕೊಂಡವು. ಅಷ್ಟೇ ಅಲ್ಲ,ಹೆಗಡೆ ಅವರ ನೇತೃತ್ವದಲ್ಲಿ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಸರ್ಕಾರವೂ ರಚನೆಯಾಯಿತು.
ಹೋಲಿಕೆ ಮಾಡಿ ನೋಡಿದರೆ, ಇವತ್ತು ಕೂಡಾ ಆಡಳಿತಾರೂಢ ಕಾಂಗ್ರೆಸ್ ಅಂದಿನ ಸನ್ನಿವೇಶವನ್ನೇ ಎದುರಿಸತೊಡಗಿದೆ. ಅಹಿಂದ ನಾಯಕರೆನ್ನಿಸಿಕೊಂಡ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಅವತ್ತು ದೇವರಾಜ ಅರಸರ ಜತೆಗಿದ್ದವರು ಕೊನೆ ಕ್ಷಣದಲ್ಲಿ ಗುಂಡೂರಾಯರ ಜತೆಗೆ ಹೋದಂತೆ ಸಿದ್ದರಾಮಯ್ಯ ಸಿಎಂ ಆಗಿರುವವರೆಗೂ ಅವರ ಜತೆಗಿದ್ದ ಹಲ ನಾಯಕರು ಈಗ ಡಿ.ಕೆ. ಶಿವಕುಮಾರ್ ಅವರ ಬೆನ್ನಿಗೆ ನಿಂತಿದ್ದಾರೆ.
ಈ ಪೈಕಿ ಸತೀಶ್ ಜಾರಕಿಹೊಳಿ ಮತ್ತು ಜಮೀರ್ ಅಹ್ಮದ್ ಅವರು ಸಿದ್ಧರಾಮಯ್ಯ ಅವರು ಬಹುವಾಗಿ ನೆಚ್ಚಿಕೊಂಡ ನಾಯಕರು. ಆದರೆ ತಮ್ಮ ಪತನದ ಮುನ್ಸೂಚನೆ ಸಿಗುತ್ತಲೇ ಸತೀಶ್ ಜಾರಕಿಹೊಳಿ ಮತ್ತು ಜಮೀರ್ ಅಹ್ಮದ್ ಅವರು ತಮ್ಮ ಕ್ಯಾಂಪಿನಿಂದ ಡಿಕೆಶಿ ಕ್ಯಾಂಪಿಗೆ ಜಿಗಿದರು ಎಂಬ ಅಸಮಾಧಾನ ಸಿದ್ದರಾಮಯ್ಯ ಅವರಲ್ಲಿದೆ. ಈ ಪೈಕಿ ಸತೀಶ್ ಜಾರಕಿಹೊಳಿ ಅವರಂತೂ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅನಿವಾರ್ಯವೇ ಆದರೆ, ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವುದೇ ಆದರೆ ತಾವು ಕಾಂಗ್ರೆಸ್ ತೊರೆದು ಬಿಜೆಪಿ-ಜಾ.ದಳ ಮಿತ್ರಕೂಟದ ಕಡೆ ಹೋಗುವುದಾಗಿ ಹೇಳಿದ್ದರಂತೆ. ಆದರೆ ಹೀಗೆ ಹೇಳಿದವರು ಸಿದ್ದರಾಮುಯ್ಯ ಅವರು ಬದಲಾಗುತ್ತಾರೆ ಎಂಬುದು ಸ್ಪಷ್ಟವಾಗುತ್ತಿದ್ದಂತೆಯೇ ಡಿಕೆಶಿ ಪರವಾಗಿ ನಿಂತರು ಎಂಬುದು ಕಾಂಗ್ರೆಸ್ಸಿನ ಒಂದು ಬಣದ ಆರೋಪ.
ಇದು ಜಮೀರ್ ಅಹ್ಮದ್ ಅವರ ವಿಷಯದಲ್ಲೂ ಅನ್ವಯವಾಗುತ್ತದೆ ಎಂಬುದು ಮೂಲಗಳ ಮಾತು. ಇದೇ ಕಾರಣಕ್ಕಾಗಿ ಈಗ ಸಿದ್ದರಾಮಯ್ಯ ಅವರು ಜಮೀರ್ ಅಹ್ಮದ್ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಅರ್ಥಾತ್, ಒಂದು ಕಾಲದ ಅಹಿಂದ ಜತೆಗಾರರು ಬೇರೆ ಬೇರೆ ನೆಲೆಗಳಲ್ಲಿ ನಿಂತಿದ್ದಾರೆ. ಆದರೆ ಈ ವಿಷಯ ಬಂದಾಗ ಡಾ.ಹೆಚ್.ಸಿ.ಮಹದೇವಪ್ಪ ಅವರ ಪ್ರಕರಣವೇ ಬೇರೆ. ತಾವು ನಲವತ್ತು ವರ್ಷಗಳಿಂದಲೂ ಸಿದ್ದರಾಮಯ್ಯ ಅವರ ಜತೆಗಿದ್ದರೂ ನಿರ್ಣಾಯಕ ಸಂದರ್ಭಗಳಲ್ಲಿ ಸಿದ್ದರಾಮಯ್ಯ ಅವರು ತಮ್ಮ ಜತೆ ನಿಲ್ಲಲಿಲ್ಲ ಎಂಬ ಕಾರಣಕ್ಕಾಗಿ ಮಹದೇವಪ್ಪ ಅಸಮಾಧಾನಗೊಂಡಿದ್ದಾರೆ.
ಅವರ ಅಸಮಾಧಾನ ಮತ್ತು ಒಳಮೀಸಲಾತಿಯ ಬಗ್ಗೆ ಸರ್ಕಾರ ಕೈಗೊಂಡ ನಿರ್ಧಾರ ದಲಿತ ವರ್ಗದ ಬಲಗೈ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿರುವುದು ನಿಜ. ಆದರೆ ಮಿತ್ರರು ದೂರವಾದರೂ ಮೌನಕ್ಕೆ ಜಾರುವುದೇ ಇದ್ದರೂ ಅದು ರಾಜಕೀಯವಾಗಿ ಪ್ರತಿಕೂಲ ಪರಿಣಾಮವನ್ನು ಬೀರುವುದು ನಿಶ್ಚಿತ. ಮತ್ತು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅದನ್ನು ಎದುರಿಸುವುದು ಅನಿವಾರ್ಯ. ಒಟ್ಟಿನಲ್ಲಿ ಸ್ಪಷ್ಟವಾಗಿ ಹೇಳಬೇಕೆಂದರೆ ಕಳೆದ ಎರಡು ದಶಕಗಳಿಂದ ಕಾಂಗ್ರೆಸ್ ಪಾಲಿಗೆ ಶಕ್ತಿಯ ಮೂಲವಾಗಿದ್ದ ಅಹಿಂದ ವರ್ಗಗಳು ಮುಂದಿನ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್ನಿಂದ ದೊಡ್ಡ ಮಟ್ಟದಲ್ಲಿ ದೂರವಾಗುವುದು ನಿಶ್ಚಿತ.
ಈ ಮಧ್ಯೆ ಅವತ್ತು ಗುಂಡೂರಾಯರು ಎದುರಿಸುತ್ತಿದ್ದಂತೆ ಇವತ್ತು ಡಿ.ಕೆ.ಶಿವಕುಮಾರ್ ಅವರೂ ಆಡಳಿತಾತ್ಮವಾಗಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಪೈಕಿ ಎಲ್ಲಕ್ಕಿಂತ ಮುಖ್ಯವಾದುದು ಅವರ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲದೆ ಇರುವುದು. ಹಣವಿಲ್ಲದೆ ಇದ್ದಾಗ ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುವುದು ಕಷ್ಟ. ಅದರಲ್ಲೂ ಜಗತೀಕರಣದ ಜಲ ಜನರ ಬದುಕನ್ನು ಕಷ್ಟಕ್ಕೆ ದೂಡಿರುವ ಈ ಸಂದರ್ಭದಲ್ಲಿ ಸರ್ಕಾರದಿಂದ ಅವರು ಹೆಚ್ಚಿನದನ್ನು ನಿರೀಕ್ಷೆ ಮಾಡುತ್ತಾರೆ. ಅದರೆ ಒಂದು ವ್ಯತ್ಯಾಸವೆಂದರೆ, ಗುಂಡೂರಾಯರಿಗೆ ಮುಖ್ಯಮಂತ್ರಿಯಾದಾಗ ಕರ್ನಾಟಕದ ಸಾಮಾಜಿಕ ಸಂರಚನೆಯ ಬಗ್ಗೆ ಪರಿಪೂರ್ಣ ಮಾಹಿತಿ ಇರಲಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತು. ಆದರೆ ಗೊತ್ತಿದ್ದರೂ ಈಗ ಸಿದ್ದರಾಮಯ್ಯ ಅವರು ಕೆಳಗಿಳಿದ ನಂತರ ಕಾಂಗ್ರೆಸ್ನಲ್ಲಿ ಕಾಣಿಸಿಕೊಂಡ ಅರಾಜಕತೆಯನ್ನು ಮತ್ತು ಅಶಕ್ತ ಬೊಕ್ಕಸವನ್ನಿಟ್ಟುಕೊಂಡು ಪರಿಸ್ಥಿತಿಯನ್ನು ತಿಳಿಗೊಳಿಸುವುದು ಸರಳವಲ್ಲ. ಇಂತಹ ಸ್ಥಿತಿ ಕ್ರಮೇಣ ಕಾಂಗ್ರೆಸ್ ಜತೆ ನಿಂತಿದ್ದ ಬಹುತೇಕ ಮತದಾರರು ಬಿಜೆಪಿ-ಜಾ.ದಳ ಮೈತ್ರಿಕೂಟದ ಕಡೆ ವಾಲುವಂತೆ ಮಾಡುತ್ತದೆ. ಹಾಗೇನಾದರೂ ಆದರೆ ಕರ್ನಾಟಕದಲ್ಲಿ ೧೯೮೩ರ ಇತಿಹಾಸ ಮರು ಕಳಿಸುತ್ತದೆ. ಇದು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಡಿಕೆಶಿ ಸಫಲರಾಗುತ್ತಾರಾ ಎಂಬುದೇ ಸದ್ಯದ ಕುತೂಹಲ.
” ಅಹಿಂದ ನಾಯಕರೆನ್ನಿಸಿಕೊಂಡ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಅವತ್ತು ದೇವರಾಜ ಅರಸರ ಜತೆಗಿದ್ದವರು ಕೊನೆ ಕ್ಷಣದಲ್ಲಿ ಗುಂಡೂರಾಯರ ಜತೆಗೆ ಹೋದಂತೆ ಸಿದ್ದರಾಮಯ್ಯ ಸಿಎಂ ಆಗಿರುವವರೆಗೂ ಅವರ ಜತೆಗಿದ್ದ ಹಲ ನಾಯಕರು ಈಗ ಡಿ.ಕೆ.ಶಿವಕುಮಾರ್ ಅವರ ಬೆನ್ನಿಗೆ ನಿಂತಿದ್ದಾರೆ.”




