ಅಕ್ಷತಾ
‘ಹವ್ಯಾಸ ಮನುಷ್ಯನ ಕನಸುಗಳಿಗೆ ಗರಿ ಮೂಡಿಸುತ್ತದೆ. ಕನಸು ಕಾಣುವ ವ್ಯಕ್ತಿಗೆ ಅವಕಾಶಗಳ ದಾರಿ ತೆರೆದುಕೊಳ್ಳುತ್ತವೆ’ ಇದು ಬೆಂಗಳೂರಿನಲ್ಲಿ ನೆಲೆಸಿರುವ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಹುಟ್ಟಿ ಬೆಳೆದ ಕುಶಲ ಅವರ ಮಾತು. ಓದಿದ್ದು ಬಿಬಿಎ, ಉದ್ಯಮಿಯಾಗುವ ದಾರಿಯಿಂದೀಚೆ ಅವರನ್ನು ಸೆಳೆದಿದ್ದು ರಂಗೋಲಿ ಹವ್ಯಾಸ. ತಾತನ ಮನೆಯಲ್ಲೇ ಹುಟ್ಟಿ ಬೆಳೆದ ಕುಶಲ ಆಕರ್ಷಿತರಾಗಿದ್ದು ಪ್ರತಿದಿನ ಬೆಳಿಗ್ಗೆ ಚಿಕ್ಕಮ್ಮ ಮನೆ ಮುಂದೆ ಹಾಕುತ್ತಿದ್ದ ರಂಗೋಲಿ ಯತ್ತ. ಆರಂಭಿಸಿದ್ದು ರಂಗೋಲಿ ಚಿತ್ತಾರವಾದರೂ ಬಣ್ಣ ಕಳೆಗಟ್ಟಿದ್ದು ಮದರಂಗಿಯಲ್ಲಿ!
ಕೈಗಳಿಗೆ ಹಲವು ಬಗೆಯ ಮದರಂಗಿ ವಿನ್ಯಾಸ ಬಿಡಿಸುತ್ತಿದ್ದ ಕುಶಲರಿಗೆ ‘ಯಾಕೆ ಇದರಲ್ಲೇ ವಿಶ್ವ ದಾಖಲೆ ಮಾಡಬಾರದು?’ ಎಂಬ ಯೋಚನೆ ಬಂದಿದ್ದು ‘ಏನಾದರೊಂದು ಸಾಧಿಸ್ಬೇಕು, ವಿಶ್ವದ ಗಮನ ಸೆಳೀಬೇಕು’ ಎಂಬ ತಾತನ ಮಾತು. ಅಲ್ಲಿಂದ ಮುಂದಕ್ಕೆ ಕುಶಲ ಅವರ ಹೊಸ ಪ್ರಯತ್ನಕ್ಕೆ ಇಡೀ ಕುಟುಂಬವೇ ಜೊತೆಯಾಯಿತು. ಕೈಗಳಿಗೆ ಬಿಡಿಸುತ್ತಿದ್ದ ವಿನ್ಯಾಸ ವಸ್ತ್ರಕ್ಕೆ ಹಂತ ಹಂತವಾಗಿ ಇಳಿಸಿ ವಿವಿಧ ಚಿತ್ರಗಳನ್ನು ಪಡಿಮೂಡಿಸತೊಡಗಿದರು.
ವಿಶ್ವ ದಾಖಲೆಗೆ ಹೊರಟ ಕುಶಲ ಆಯ್ಕೆ ಮಾಡಿಕೊಂಡ ಬಟ್ಟೆಯ ಅಳತೆ ಬರೋಬ್ಬರಿ ೧೦೦ ಅಡಿ ಉದ್ದ, ಎರಡು ಅಡಿ ಅಗಲ. ‘ಇಷ್ಟು ಉದ್ದಗಲ ಅಳತೆಯ ಬಟ್ಟೆಯಲ್ಲಿ ಮದರಂಗಿ ವಿನ್ಯಾಸಕ್ಕಾಗಿ ಪೂರ್ವ ತಯಾರಿ ಹೇಗಿತ್ತು?’ ಎಂದು ಕೇಳಿದರೆ ‘ಇದು ಇಂದು ನಿನ್ನೆಯ ತಯಾರಿಯಲ್ಲ, ಸತತ ನಾಲ್ಕು ವರ್ಷಗಳಿಂದ ಪ್ರತಿಕ್ಷಣ ಇದಕ್ಕಾಗಿಯೇ ಪೂರ್ವ ಸಿದ್ಧತೆ ಮಾಡಿಕೊಂಡು ಬಂದಿದ್ದೇನೆ. ಹಿಂದೊಮ್ಮೆ ವಿಶ್ವ ದಾಖಲೆಗಾಗಿ ಹೆಸರು ಅಯ್ಕೆಯಾದರೂ ಬಾಣಂತನ ಆರೈಕೆಯಲ್ಲಿದ್ದುದರಿಂದ ಸಾಧ್ಯವಾಗಲಿಲ್ಲ. ಆದರೆ ಅಲ್ಲಿಂದ ನಂತರ ಸತತ ಅಭ್ಯಾಸಕ್ಕೆ ತೊಡಗಿಸಿಕೊಂಡೆ. ಗಂಭೀರವಾಗಿ ಮದರಂಗಿಯಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲ ಹುಟ್ಟಿತು. ನನ್ನ ತಯಾರಿಯಲ್ಲಿ ಕುಟುಂಬ ಹಾಗೂ ಬಂಧು ಮಿತ್ರರ ಪಾಲೂ ಇದೆ’ ಎನ್ನುತ್ತಾರೆ ಕುಶಲ.
ಸತತ ಮೂವತ್ತು ಗಂಟೆಗಳ ಕಾಲ ವಸ್ತ್ರದಲ್ಲಿ ಮದರಂಗಿ ವಿನ್ಯಾಸ ಬಿಡಿಸಿದ ಕುಶಲ ಅವರ ಕೈಚಳಕ ಸೃಜನಶೀಲತೆಗೆ ಹಿಡಿದ ಕನ್ನಡಿ. ಪ್ರತೀ ಒಂದು ಅಡಿಗೆ ವಿನ್ಯಾಸ ಬದಲಾಯಿಸಿದ್ದು, ಪ್ರತಿಯೊಂದು ವಿನ್ಯಾಸವೂ ಭಿನ್ನ ಕತೆಗಳನ್ನು ಹೇಳುತ್ತದೆ. ಅಂದ ಇನ್ನಷ್ಟು ಹೆಚ್ಚಿಸಲು ಕೆಲವೆಡೆ ಎರಡು ಅಡಿ ಉದ್ದದ ವಿನ್ಯಾಸವನ್ನೂ ಮಾಡಿದ್ದು ಗ್ರಾಮ್ಯ ಶೈಲಿಯ ಕುಸುರಿ ನಾಡಿನ ಸಂಸ್ಕೃತಿ, ಕಲೆಯ ಪ್ರತಿಬಿಂಬ.
ತಾನು ಹುಟ್ಟಿ ಬೆಳೆದ ಮಂಡ್ಯದ ಕೃಷಿ ಸೊಗಡು, ಓದಿನ ಭಾಗವಾಗಿದ್ದ ಮೈಸೂರಿನ ಕಲಾ ಸಂಸ್ಕೃತಿ, ಅರಮನೆಯ ಸೊಬಗು ಹೀಗೆ ಜಿಲ್ಲೆಯ ವಿಶೇಷತೆ ಕುಶಲರ ಕರಕುಶಲಕ್ಕೆ ಸಾಕ್ಷಿಯಾಗಿ ಬಟ್ಟೆಯಲ್ಲಿ ಮೈದಳೆದಿದೆ. ಮಂಡ್ಯದ ಜನರು ದೇವರೆಂದು ಪೂಜಿಸುವ ಸರ್ ಎಂ.ವಿಶ್ವೇಶ್ವರಯ್ಯ ಅವರು ಮದರಂಗಿಯಲ್ಲಿ ಮಂದಸ್ಮಿತ ನಗು ಚೆಲ್ಲಿದ್ದಾರೆ.
‘ಮದರಂಗಿ ವಿನ್ಯಾಸದಲ್ಲಿ ಅನೇಕರು ವಿಶ್ವ ದಾಖಲೆ ಮಾಡಿದ್ದಾರೆ. ನಿಮ್ಮ ಶೈಲಿಯ ವಿಶೇಷ ಏನು?’ ಎಂಬ ಪ್ರಶ್ನೆಗೆ ‘ಇದುವರೆಗೆ ಆದ ದಾಖಲೆಗಳ ವಿನ್ಯಾಸ ಫ್ಲೋರಲ್ ಸ್ಟೈಲ್ನಲ್ಲಿ ಇರುವುದರಿಂದ ಸಂಪೂರ್ಣ ಭಿನ್ನವಾಗಿರಬೇಕೆಂಬ ಕಾರಣಕ್ಕೆ ಹಳ್ಳಿ ಸೊಗಡನ್ನು ಚಿತ್ರಿಸಿದ್ದೇನೆ’ ಎನ್ನುವ ಕುಶಲ ಅವರ ಮದರಂಗಿ ವಿನ್ಯಾಸದಲ್ಲಿ ಹೊಲ, ಗದ್ದೆಯ ಜೊತೆಯಲ್ಲಿ ಹಸು, ರಾಸುಗಳನ್ನೂ ನೋಡಬಹುದಾಗಿದೆ. ಮೊದಲ ಹತ್ತು ಅಡಿಯ ವಿನ್ಯಾಸ ತುಸು ತ್ರಾಸದಾಯಕವಾಗಿತ್ತು. ನಂತರ ನಿಧಾನವಾಗಿ ಒಗ್ಗಿಹೋದೆ, ನಂತರದ ವಿನ್ಯಾಸ ಕಷ್ಟವೆನ್ನಿಸಲಿಲ್ಲ. ಸ್ವಲ್ಪ ಸುಸ್ತು ಅನ್ನಿಸುವಾಗೆಲ್ಲ ಸ್ನೇಹಿತರು ಹುರಿದುಂಬಿಸುತ್ತಿದ್ದರು’ ಎನ್ನುತ್ತಾರೆ.
ಈ ತನಕದ ಮದರಂಗಿಯ ವಿಶ್ವದಾಖಲೆಯನ್ನು ನೋಡುವುದಾದರೆ ೨೦೨೬ ಎಪ್ರಿಲ್ನಲ್ಲಿ ೪೦೦ ಕೋನ್ಗಳನ್ನು ಬಳಸಿ ಮದರಂಗಿ ವಿನ್ಯಾಸ ಬಿಡಿಸಿದ ಮಂಡ್ಯದವರೇ ಆದ ಕೀರ್ತಿ ಮುರಳೀಧರ್ ಅವರು ಟಾಪ್ ಲಿಸ್ಟ್ ನಲ್ಲಿ ಕಂಡುಬರುತ್ತಾರೆ. ಈ ವಿಶ್ವ ದಾಖಲೆ ಮುರಿಯುವ ಹಂತದಲ್ಲಿ ಇರುವ ಕುಶಲ ಅವರ ವಿಶ್ವ ದಾಖಲೆಯ ಫಲಿತಾಂಶ ಇನ್ನೇನು ಬರಲಿದೆ. ಸದ್ಯಕ್ಕೆ ಈಗ ಎಲ್ಲರ ಬಾಯಲ್ಲೂ ಕುಶಲರ ‘ಮೆಹಂದಿ ವರ್ಲ್ದ್ ರೆಕಾರ್ಡ್’ ನದ್ದೇ ಮಾತು. ಮಂಡ್ಯಕ್ಕೆ ಇನ್ನೊಂದು ವಿಶ್ವ ದಾಖಲೆಯ ಗರಿ ಮೂಡುವ ಹೊತ್ತು ತುಂಬಾ ಹತ್ತಿರ!
” ಸತತ ಮೂವತ್ತು ಗಂಟೆಗಳ ಕಾಲ ವಸ್ತ್ರದಲ್ಲಿ ಮದರಂಗಿ ವಿನ್ಯಾಸ ಬಿಡಿಸಿದ ಪಾಂಡವಪುರದ ಕಲಾವಿದೆ ಕುಶಲರ ಕೈಚಳಕ ಅವರ ಸೃಜನಶೀಲತೆಗೆ ಹಿಡಿದ ಕನ್ನಡಿ. ಇವರ ಗ್ರಾಮ್ಯ ಶೈಲಿಯ ಮೆಹಂದಿ ಕುಸುರಿ ನಾಡಿನ ಸಂಸ್ಕೃತಿ, ಕಲೆಯ ಪ್ರತಿಬಿಂಬ.”




