ಡಾ.ಕೆ.ಪಿ.ಸಿದ್ಧಲಿಂಗಸ್ವಾಮಿ
ಇಂದು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ೧೧೧ನೇ ಜಯಂತಿ
ಕೆಲವರು ತಮ್ಮ ಕಾಲದಲ್ಲಿ ಬದುಕುತ್ತಾರೆ; ಕೆಲವರು ತಮ್ಮ ಕಾಲವನ್ನೇ ಬದಲಿಸುತ್ತಾರೆ! ಇನ್ನೂ ಕೆಲವರು ತಮ್ಮ ಸೇವಾ ಕೈಂಕರ್ಯದಿಂದ ಒಂದು ಚಿಂತನೆ, ಸಂಸ್ಥೆ ಮತ್ತು ಸೇವಾ ಪರಂಪರೆಯಾಗಿ ಜೀವಂತವಾಗಿರುತ್ತಾರೆ. ಅಂತಹ ಅಪರೂಪದ ಮಹನೀಯರಲ್ಲಿ ಸುತ್ತೂರು ಕ್ಷೇತ್ರದ ೨೩ನೇ ಪೀಠಾಧ್ಯಕ್ಷರಾಗಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಪ್ರಮುಖರು. ಅವರ ೧೧೧ನೇ ಜಯಂತಿ ಕೇವಲ ಒಬ್ಬ ಸಂತನ ಸ್ಮರಣೆಯ ಸಂದರ್ಭವಲ್ಲ; ‘ಸೇವೆಯ ಮೂಲಕ ಸಮಾಜದ ಕೊನೆಯ ವ್ಯಕ್ತಿಯ ಬದುಕಿನಲ್ಲಿಯೂ ಬದಲಾವಣೆ ತರಬೇಕು’ ಎಂಬ ಮಹತ್ವದ ಸಾಮಾಜಿಕ ತತ್ವವನ್ನು ಪುನಃ ನೆನಪಿಸಿಕೊಳ್ಳುವ ಸಂದರ್ಭ.
೧೯೧೬ರ ಆಗಸ್ಟ್ ೨೯ರಂದು ಸುತ್ತೂರಿನಲ್ಲಿ ಜನಿಸಿದ ಶ್ರೀಗಳು, ಬಾಲ್ಯದಲ್ಲಿಯೇ ಗ್ರಾಮೀಣ ಬದುಕಿನ ಬಡತನ, ಅಜ್ಞಾನ, ಅಸಮಾನತೆ ಮತ್ತು ಅವಕಾಶಗಳ ಕೊರತೆಯನ್ನು ಹತ್ತಿರದಿಂದ ಕಂಡವರು. ಈ ಅನುಭವಗಳೇ ಅವರ ಸಮಾಜಮುಖಿ ಚಿಂತನೆಗೆ ಬುನಾದಿಯಾದವು. ಹಾಗಾಗಿ ಅವರು ಕೇವಲ ಧಾರ್ಮಿಕ ಅಧ್ಯಯನಕ್ಕೆ ಸೀಮಿತರಾಗಲಿಲ್ಲ. ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯ ಬೆಳೆಸಿಕೊಂಡ ಅವರು, ಜ್ಞಾನ, ಸಾಹಿತ್ಯ, ಕಲೆ ಮತ್ತು ಶಿಕ್ಷಣವನ್ನು ಸಮಾಜ ಪರಿವರ್ತನೆಯ ಸಾಧನಗಳೆಂದು ಪರಿಗಣಿಸಿದರು.
ಅವರ ದೃಷ್ಟಿಯಲ್ಲಿ ‘ಅಜ್ಞಾನವೇ ಅನೇಕ ಸಾಮಾಜಿಕ ಸಮಸ್ಯೆಗಳ ಮೂಲ’. ಬಡತನದ ಹಿಂದೆ ಅಜ್ಞಾನ, ಅಜ್ಞಾನದ ಹಿಂದೆ ಶಿಕ್ಷಣದ ಕೊರತೆ ಮತ್ತು ಅದರ ಪರಿಣಾಮವಾಗಿ ಸಾಮಾಜಿಕ – ಆರ್ಥಿಕ ಅಸಮಾನತೆ ಉಂಟಾಗುತ್ತದೆ ಎಂಬುದನ್ನು ಅವರು ಅರಿತು ಕೊಂಡಿದ್ದರು. ಆದ್ದರಿಂದ ಶಿಕ್ಷಣವನ್ನು ದಾನವಲ್ಲ, ಸಾಮಾ ಜಿಕ ಪರಿವರ್ತನೆಯ ಶಕ್ತಿಯೆಂದು ಪರಿಭಾವಿಸಿದರು. ೧೯೫೪ರಲ್ಲಿ ರಾಜೇಂದ್ರ ಶ್ರೀಗಳು ಆರಂಭಿಸಿದ ಶೈಕ್ಷಣಿಕ ಸೇವೆಯ ಪ್ರಯತ್ನಗಳು, ಮುಂದೆ ವಿವಿಧ ಹಂತಗಳ ಶಿಕ್ಷಣ ಸಂಸ್ಥೆಗಳ ವಿಶಾಲ ಜಾಲವಾಗಿ ವಿಸ್ತರಿಸಿದವು. ಅಕ್ಷರ ದಾಸೋಹದ ಈ ಪರಿಕಲ್ಪನೆ, ಒಬ್ಬ ವಿದ್ಯಾರ್ಥಿಯ ಬದುಕು ಬದಲಾದರೆ ಕುಟುಂಬ, ಸಮುದಾಯ ಮತ್ತು ಸಮಾಜದ ದಿಕ್ಕೇ ಬದಲಾಗಬಹುದು ಎಂಬ ವಿಶ್ವಾಸದ ಪ್ರತೀಕವಾಗಿದೆ.
ಶಿಕ್ಷಣದ ಜೊತೆಗೆ ‘ಅನ್ನ ದಾಸೋಹ’ ಅವರ ಸೇವಾ ಚಿಂತನೆಯ ಮಾನವೀಯ ಮುಖ. ಬಡ ವಿದ್ಯಾರ್ಥಿಗೆ ಪುಸ್ತಕ ನೀಡುವುದಷ್ಟೇ ಸಾಕಾಗುವುದಿಲ್ಲ; ಆಹಾರ, ವಸತಿ ಮತ್ತು ಸುರಕ್ಷಿತ ವಾತಾವರಣವೂ ಅಗತ್ಯವೆಂಬುದನ್ನು ಅವರು ಮನಗಂಡಿದ್ದರು. ಹೀಗಾಗಿ ಅನ್ನ ದಾಸೋಹವು ಕೇವಲ ಹಸಿವು ನೀಗಿಸುವ ಕಾರ್ಯವಾಗದೆ, ಬಡತನದಿಂದ ಶಿಕ್ಷಣದಿಂದ ವಂಚಿತರಾಗದಂತೆ ಮಾಡುವ ಸಾಮಾಜಿಕ ಹೂಡಿಕೆಯಾಯಿತು. ಅದೇ ರೀತಿ ‘ಆರೋಗ್ಯ ದಾಸೋಹ’ದ ಮೂಲಕ ಗುಣಮಟ್ಟದ ವೈದ್ಯಕೀಯ ಸೇವೆ ಎಲ್ಲರಿಗೂ ದೊರಕಬೇಕು ಎಂಬ ಮಾನವೀಯ ಚಿಂತನೆಯನ್ನು ರಾಜೇಂದ್ರ ಸ್ವಾಮೀಜಿ ಅವರು ಕಾರ್ಯರೂಪಕ್ಕೆ ತಂದರು. ೧೯೬೩ರಲ್ಲಿ ಆರಂಭವಾದ ಆರೋಗ್ಯ ಸೇವೆಯ ಪ್ರಯತ್ನವು ಮುಂದೆ ವಿಶಾಲ ವೈದ್ಯಕೀಯ ವ್ಯವಸ್ಥೆಯಾಗಿ ಬೆಳೆಯಿತು. ಚಿಕಿತ್ಸೆ ಮಾತ್ರವಲ್ಲದೆ ಆರೋಗ್ಯ ಶಿಕ್ಷಣ, ಗ್ರಾಮೀಣ ಆರೋಗ್ಯ ಜಾಗೃತಿ ಮತ್ತು ವಿವಿಧ ವೈದ್ಯಕೀಯ ಕ್ಷೇತ್ರಗಳ ಅಭಿವೃದ್ಧಿಗೂ ಈ ಪರಂಪರೆ ಒತ್ತು ನೀಡಿತು. ರಾಜೇಂದ್ರ ಸ್ವಾಮೀಜಿ ಅವರ ದೃಷ್ಟಿಯಲ್ಲಿ ಶಿಕ್ಷಣವೆಂದರೆ ಉದ್ಯೋಗ ಪಡೆಯುವ ಸಾಧನ ಮಾತ್ರವಲ್ಲ; ‘ಉತ್ತಮ ಮನುಷ್ಯನ ನಿರ್ಮಾಣದ ಪ್ರಕ್ರಿಯೆ’. ಜ್ಞಾನಕ್ಕೆ ಮೌಲ್ಯ, ಶಿಕ್ಷಣಕ್ಕೆ ಸಂಸ್ಕಾರ ಮತ್ತುವಿದ್ಯೆಗೆ ಸಾಮಾಜಿಕ ಹೊಣೆಗಾರಿಕೆ ಇರಬೇಕು ಎಂಬುದು ಅವರ ಚಿಂತನೆಯ ಸಾರ. ಸಾಹಿತ್ಯ, ಕಲೆ, ಸಂಗೀತ, ನಾಟಕ, ಯೋಗ, ಸಂಸ್ಕೃತ ಮತ್ತು ಭಾರತೀಯ ಜ್ಞಾನ ಪರಂಪರೆಯ ಸಂರಕ್ಷಣೆಯಲ್ಲಿಯೂ ಅವರು ಮಹತ್ವದ ಪಾತ್ರ ವಹಿಸಿದರು.
ರಾಜೇಂದ್ರ ಸ್ವಾಮೀಜಿ ಅವರ ಸೇವಾ ತತ್ವದ ಹೃದಯದಲ್ಲಿ ‘ಸಾಮಾಜಿಕ ಒಳಗೊಳ್ಳುವಿಕೆ’ ಇದೆ. ಅವಕಾಶಗಳಿಂದ ವಂಚಿತರಾದವರಿಗೆ ದಾನಕ್ಕಿಂತ ಅವಕಾಶ, ಶಿಕ್ಷಣ, ಕೌಶಲ, ಆರೋಗ್ಯ ಮತ್ತು ಆತ್ಮಗೌರವ ನೀಡಬೇಕು ಎಂಬುದು ಅವರ ಕಾರ್ಯದ ಒಳನೋಟ. ಈ ಚಿಂತನೆ ಇಂದಿನ ಸಾಮಾಜಿಕ ನ್ಯಾಯ, ಸಮಾನ ಅವಕಾಶ ಮತ್ತು ಮಾನವ ಅಭಿವೃದ್ಧಿಯ ಪರಿಕಲ್ಪನೆಗಳಿಗೂ ಅತ್ಯಂತ ಪ್ರಸ್ತುತವಾಗಿದೆ.
ಹೀಗಾಗಿ ಶ್ರೀಗಳ ೧೧೧ನೇ ಜಯಂತಿ ಕೇವಲ ಸ್ಮರಣೆಯ ದಿನವಾಗದೆ ‘ಸಂಕಲ್ಪದ ದಿನವಾಗಬೇಕು’. ಅಕ್ಷರ ಹಂಚುವುದು, ಹಸಿವು ನೀಗಿಸುವುದು, ನೋವಿಗೆ ನೆರವಾಗು ವುದು, ಸಂಸ್ಕಾರ ಬೆಳೆಸುವುದು ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಯ ಗೌರವವನ್ನು ಕಾಪಾಡುವುದು… ಇವೇ ಅವರ ಪರಂಪರೆಗೆ ಸಲ್ಲಿಸುವ ನಿಜವಾದ ಗೌರವ. ಜ್ಞಾನವಿದ್ದರೂ ಕರುಣೆ ಇಲ್ಲದ ಸಮಾಜ ಪೂರ್ಣವಲ್ಲ; ಸಂಪತ್ತಿದ್ದರೂ ಹಂಚುವ ಮನಸ್ಸಿಲ್ಲದ ಸಮಾಜ ಸಮೃದ್ಧವಲ್ಲ; ಧರ್ಮವಿದ್ದರೂ ಮಾನವೀಯತೆ ಇಲ್ಲದ ಸಮಾಜ ಸಾರ್ಥಕವಲ್ಲ.
‘ರಾಜೇಂದ್ರ ಶ್ರೀಗಳ ಹೊತ್ತಿಸಿದ ಶಿಕ್ಷಣದ ದೀಪದಿಂದ ಸಾವಿರಾರು ವಿದ್ಯಾಸಂಸ್ಥೆಗಳಲ್ಲಿ ಜ್ಞಾನದ ಬೆಳಕು ಹೊತ್ತಿದೆ; ಅವರ ಅನ್ನ ದಾಸೋಹದಿಂದ ಮಾನವೀಯತೆಯ ಪರಂಪರೆ ಬೆಳೆದಿದೆ; ಆರೋಗ್ಯ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಸೇವೆ ಯಿಂದ ಕರುಣೆಯ ಸ್ಪರ್ಶ ವಿಸ್ತರಿಸಿದೆ. ಇದೇ ಸುತ್ತೂರು ಶ್ರೀ ರಾಜೇಂದ್ರ ಸ್ವಾಮೀಜಿ ಅವರ ಶಾಶ್ವತ ಸಂದೇಶ ಸಾಧನೆ ಗಿಂತ ಸಾಧನೆಯ ಹಿಂದಿನ ಮೌಲ್ಯವೇ ಮಹತ್ವದ್ದು.’
(ಲೇಖಕರು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧಕರು)
“ರಾಜೇಂದ್ರ ಸ್ವಾಮೀಜಿ ಅವರ ಸೇವಾ ತತ್ವದ ಹೃದಯದಲ್ಲಿ ‘ಸಾಮಾಜಿಕ ಒಳಗೊಳ್ಳುವಿಕೆ’ ಇದೆ. ಅವಕಾಶಗಳಿಂದ ವಂಚಿತರಾದವರಿಗೆ ದಾನಕ್ಕಿಂತ ಅವಕಾಶ, ಶಿಕ್ಷಣ, ಕೌಶಲ, ಆರೋಗ್ಯ ಮತ್ತು ಆತ್ಮಗೌರವ ನೀಡಬೇಕು ಎಂಬುದು ಅವರ ಕಾರ್ಯದ ಒಳನೋಟ. ಈ ಚಿಂತನೆ ಇಂದಿನ ಸಾಮಾಜಿಕ ನ್ಯಾಯ, ಸಮಾನ ಅವಕಾಶ ಮತ್ತು ಮಾನವ ಅಭಿವೃದ್ಧಿಯ ಪರಿಕಲ್ಪನೆಗಳಿಗೂ ಅತ್ಯಂತ ಪ್ರಸ್ತುತವಾಗಿದೆ.”




