ರೋಹಿಣಿ ಸಂಗಪ್ಪ ದಳವಾಯಿ
ಮೈಸೂರು ರಾಜ್ಯ ಕಂಡ ಅಪ್ರತಿಮ ಹೋರಾಟಗಾರ್ತಿ ಮತ್ತು ಜನಸೇವಕಿ ಯಶೋಧರಾ ದಾಸಪ್ಪ. ತಮ್ಮ ದಿಟ್ಟ ನಿಲುವು, ನಾಯಕತ್ವದ ಗುಣಗಳಿಂದ ರಾಜ್ಯಾದ್ಯಂತ ಹೆಸರುವಾಸಿಯಾಗಿದ್ದರು.
ಮೈಸೂರು ರಾಜ್ಯದಲ್ಲಿ ಮಾತ್ರವಲ್ಲದೆ ಉಳಿದೆಡೆಯಲ್ಲಿಯೂ ಅವರು ಗಾಂಧಿಜಿಯ ನಿಷ್ಠಾವಂತ ಅನುಯಾಯಿಯಾಗಿ ಗುರುತಿಸಲ್ಪಟ್ಟಿದ್ದೇ ಅಲ್ಲದೆ ಹಿಡಿದ ಕೆಲಸವನ್ನು ಬಿಡದೆ ಸಾಧಿಸುತ್ತಿದ್ದ ಛಲಗಾತಿ. ತಮ್ಮ ತ್ಯಾಗ, ಬಲಿದಾನಗಳಿಂದ ಜನರ ಪ್ರೀತಿಯನ್ನಲ್ಲದೆ ಗಾಂಂಧಿಯಿಂದಲೂ ಮೆಚ್ಚುಗೆಯನ್ನು ಗಳಿಸಿದ್ದಾರೆ.
ಮೈಸೂರು ರಾಜ್ಯದ ಉನ್ನತ ಅಧಿಕಾರಿಯೂ, ಮಹಾರಾಜರ ಸಮೀಪ ವರ್ತಿಯೂ ಆಗಿದ್ದ ಕೆ.ಎಚ್.ರಾಮಯ್ಯ ನವರ ಪುತ್ರಿಯಾಗಿ ೧೯೦೫ ರಲ್ಲಿ ಜನಿಸಿದರು. ಇವರ ತಂದೆಯವರ ಕುಟುಂಬ ಬೆಂಗಳೂರಿನ ಆಗರ್ಭ ಶ್ರೀಮಂತರಾಗಿದ್ದು, ರಾಮಯ್ಯನವರು ಮಹಾರಾಜ ನಾಲ್ವಡಿ ಕೃಷ್ಣರಾಜರ ಮತ್ತು ಮಹಾರಾಜರ ಸಹೋದರ ರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಕಟವರ್ತಿಯಾಗಿದ್ದರು. ರಾಮಯ್ಯನವರು ಅವರಿಬ್ಬರ ಪ್ರೇರಣೆಯಂತೆ ಮೈಸೂರು ರಾಜ್ಯದ ಪ್ರಮುಖ ಹಿಂದುಳಿದ ವರ್ಗಗಳನ್ನು ಸಂಘಟಿಸುವಲ್ಲಿ ಆಸಕ್ತಿ ಹೊಂದಿ ೧೯೦೫ ರಲ್ಲಿ ರಾಜ್ಯ ಒಕ್ಕಲಿಗರ ಸಂಘದ ಸ್ಥಾಪನೆಗೆ ಕಾರಣವಾಗಿದ್ದರು. ತನ್ಮೂಲಕ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಏಳಿಗೆಗೆ ಬಹಳವಾಗಿ ಶ್ರಮಿಸಿ ದೇಶದ ಮೊಟ್ಟ ಮೊದಲ ಹಿಂದುಳಿದ ವರ್ಗಗಳ ಆಯೋಗದ ಸ್ಥಾಪನೆಗೆ ಕಾರಣರಾಗಿದ್ದವರು ಕೆ.ಎಚ್.ರಾಮಯ್ಯ.
ತಂದೆಯ ಸಾಮಾಜಿಕ ಕಳಕಳಿ ಹಾಗೂ ಹಿಂದು ಳಿದವರನ್ನು ಮೇಲೆತ್ತುವ ಅವರ ಸತತ ಪ್ರಯತ್ನ ಗಳಿಂದ ಪ್ರಭಾವಿತರಾಗಿದ್ದ ಯಶೋಧರಾ ವಿವಾಹವಾಗಿದ್ದು ಹೆಚ್.ಸಿ.ದಾಸಪ್ಪನವರನ್ನು (ಇವರು ಕೊಡಗಿನ ಉನ್ನತ ಅಧಿಕಾರಿಯಾಗಿದ್ದ ಹಿರಳ್ಳಿ ಚೆನ್ನಯ್ಯನವರ ಮಗ). ದಾಸಪ್ಪನವರು ರಾಜ್ಯದ ಅಂದಿನ ಯುವ ಪ್ರತಿಭಾವಂತ ವಕೀಲರಾಗಿದ್ದರು. ದಾಸಪ್ಪನವರು ವಿದ್ಯಾರ್ಥಿದೆಸೆ ಯಲ್ಲಿಯೇ ಮುಂಬೈ, ಮದ್ರಾಸ್‌ನಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಚಳವಳಿಯಿಂದ ಪ್ರಭಾವಿತರಾಗಿದ್ದರು. ಇದ ರಿಂದಾಗಿ ಸ್ವಾಭಾವಿಕವಾಗಿಯೇ ದಂಪತಿಗಳಿಬ್ಬರೂ ರಾಷ್ಟ್ರೀಯ ಚಳವಳಿಯ ನಾಯಕರಾಗಿದ್ದ ಮತ್ತು ಅಹಿಂಸಾ ತತ್ವದ ಪ್ರತಿಪಾದಕ ಗಾಂಧಿಯವರ ಹಿಂಬಾಲಕರಾದರು. ಯಶೋಧರಾ ಅವರು ಗಾಂಧಿಜಿಯವರನ್ನು ಮೊದಲು ಕಂಡದ್ದು ೧೯೨೭ರಲ್ಲಿ. ಮಹಾತ್ಮರು ತಮ್ಮ ಆರೋಗ್ಯ ಸುಧಾರಣೆಗೆಂದು ಮಹಾರಾಜರ ಅತಿಥಿಯಾಗಿ ಬೆಂಗಳೂರಿಗೆ ಬಂದಿದ್ದಾಗ ತಂದೆಯವರೊಡನೆ ಮಹಾತ್ಮರನ್ನು ಕಂಡಿದ್ದ ಯಶೋಧರಾ, ಅವರಿಂದ ಪ್ರಭಾವಿತರಾಗಿದ್ದಲ್ಲದೆ ಅಂದಿನಿಂದ ತಮ್ಮ ಜೀವಿತದ ಕೊನೆಯವರೆಗೆ ಮಹಾತ್ಮರ ನಿಷ್ಠಾವಂತ ಅನುಯಾಯಿಗಳಾಗಿದ್ದರು. ಮತ್ತೊಂದು ಭೇಟಿಯಲ್ಲಿ ಗಾಂಧಿಜಿಯ ವರು ತಮ್ಮ ಸತ್ಯಾಗ್ರಹಗಳಿಗಾಗಿ ನಿಧಿ ಸಂಗ್ರಹಿಸಲು ಬೆಂಗಳೂರಿಗೆ ಆಗಮಿಸಿದ್ದಾಗ ಯಶೋಧರಾ ತಮ್ಮ ಮೈಮೇಲಿದ್ದ ಒಡವೆಗಳನ್ನು ಗಾಂಽಜಿಯವರ ಜೋಳಿಗೆಗೆ ಹಾಕಿದರು. ಅವರನ್ನು ಅನುಸರಿಸಿದ ಉಳಿದ ಮಹಿಳೆಯರೂ ತಮ್ಮ ಚಿನ್ನದ ಒಡವೆಗಳನ್ನು ದಾನ ಮಾಡಿದ್ದರು.
೧೯೩೮ರಲ್ಲಿ ಮೈಸೂರು ರಾಜ್ಯ ಕಾಂಗ್ರೆಸ್ ಮದ್ದೂರಿನ ಬಳಿಯ ಶಿವಪುರದಲ್ಲಿ ತನ್ನ ಪ್ರಥಮ ಸಮಾವೇಶ ನಡೆಸಿದಾಗ ದಾಸಪ್ಪ ದಂಪತಿ ಸಮಾವೇಶದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಯಶೋಧರಾ ಮಹಿಳಾ ಸ್ವಯಂಸೇವಕಿಯರನ್ನು ಸಂಘಟಿಸಿ ಅವರಿಗೆ ತರಬೇತಿ ನೀಡಿ ಸಮಾವೇಶದ ಸ್ವಚ್ಛತೆ, ಶಿಸ್ತುಗಳನ್ನು ಪಾಲಿಸುವದರ ಜೊತೆಗೆ ಅವರಿಂದ ಧ್ವಜವಂದ ನೆಯ ಹಾಡುಗಳನ್ನು ಹಾಡಿಸುತ್ತಿದ್ದರು. ಮೈಸೂರು ರಾಜ್ಯ ಪೊಲೀಸರ ಪ್ರತಿಬಂಧಕಾಜ್ಞೆಯನ್ನು ಎದುರಿಸಿ ಅಧಿವೇಶನದ ಮೊದಲನೇ ದಿನ ಧ್ವಜ ಹಾರಿಸಲಾಯಿತು. ಆದರೆ ತಮ್ಮ ಆಜ್ಞೆ ಮೀರಿ ಧ್ವಜವನ್ನು ಹಾರಿಸಿದ್ದರಿಂದ ಪೊಲೀಸರು ಅದನ್ನು ಕಿತ್ತು ಹಾಕಬಹು ದೆಂದು ಯಶೋಧರಮ್ಮ, ಸುಬ್ಬಮ್ಮ ಜೋಯಿಸ್, ಕಾವೇರಮ್ಮ ಹಾಗೂ ಉಳಿದ ಮಹಿಳೆಯರೊಡನೆ ಎಚ್ಚರಿಕೆ ಯಿಂದ ಧ್ವಜಸ್ತಂಭದ ಸುತ್ತಲೂ ಕಾವಲು ಕಾಯುತ್ತಿದ್ದರು. ಮಾರನೇ ದಿನ ದಾಸಪ್ಪನವರು ಧ್ವಜ ಹಾರಿಸಿ ಬಂಧಿತರಾದರೂ ಯಶೋಧರಾ ಎದೆಗುಂದದೆ ಸಮಾವೇಶ ಕೊನೆಗೊಳ್ಳು ವವರೆಗೂ ಅಲ್ಲಿಯೇ ಉಳಿದು ನಂತರವೇ ಮೈಸೂರಿಗೆ ಹಿಂತಿರುಗಿದರು.
ಕಾಗ್ರೆಸ್‌ನ ಸಕ್ರಿಯ ಸದಸ್ಯೆಯಾಗಿ ಕಾಂಗ್ರೆಸ್‌ನ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿ, ಕಾಂಗ್ರೆಸ್ ಕಚೇರಿಯಲ್ಲಿ ಮತ್ತು ಬಹಿರಂಗ ಸಭೆಗಳಲ್ಲಿ ಯಶೋಧರಾ ತಮ್ಮ ಭಾಷಣಗಳಿಂದ ಜನರನ್ನು ಪ್ರೇರೇಪಿಸುತ್ತಾ ಸದಾ ಚಟುವಟಿಕೆಯಿಂದಿ ರುತ್ತಿದ್ದರು. ಇಂತಹ ದೇಶಭಕ್ತಿ ತುಂಬಿದ್ದ ಯಶೋ ಧರಾ ಮತ್ತು ಉಳಿದ ಸ್ವಯಂ ಸೇವಕರು, ಸ್ವಯಂಸೇವಕಿ ಯರೇ ಕಾಂಗ್ರೆಸ್‌ನ ಆಸ್ತಿ. ಜನರಿಗೆ ಸ್ವಾತಂತ್ರ್ಯದ ಮಹತ್ವ ಅರಿತುಕೊಳ್ಳುವಂತೆ ರಾಷ್ಟ್ರೀಯಾ ಪ್ರಚಾರಾಂದೋಲನಗಳಲ್ಲಿ ಪ್ರಮುಖ ಪಾತ್ರವಹಿಸುವಂತೆ ಜನರನ್ನು ಪ್ರೇರೇ ಪಿಸಿದ್ದರಿಂದ ಮೈಸೂರು ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ರಾಷ್ಟ್ರೀಯ ಚಳವಳಿ ಅಲ್ಪಕಾಲ ದಲ್ಲಿಯೇ ಜನರ ಗಮನ ಸೆಳೆಯಿತು.
ಸತ್ಯಾಗ್ರಹಗಳಲ್ಲದೆ ಉಳಿದ ದಿನ ಗಳಲ್ಲಿ ಗಾಂಧಿಜಿಯರ ರಚನಾತ್ಮಕ ಕಾರ್ಯದಲ್ಲಿ ತೊಡಗಿ ಮಹಿಳಾ ಯಂಸೇವಕಿಯರೊಂದಿಗೆ ಪ್ರತಿದಿನ ಬೆಳಿಗ್ಗೆ ದಲಿತರು ವಾಸಿಸುತ್ತಿದ್ದ ಗಾಂಧಿನಗರ, ಅಶೋಕ ಪುರಂನಲ್ಲಿ ಭಜನೆಗಳನ್ನು ಹಾಡುತ್ತಾ, ಸ್ವಚ್ಛತಾ ಕಾರ್ಯಕ್ರಮ, ಮಕ್ಕಳಿಗೆ ಅಕ್ಷರಾಭ್ಯಾಸ, ಚರಕನೂಲುವ ಕಾರ್ಯಕ್ರಮಗಳನ್ನು, ಮತ್ತು ಸಂಜೆ ವೇಳೆ ಪ್ರಾರ್ಥನಾ ಸಭೆಗಳನ್ನು ನಡೆಸಿ ಗಾಂಧಿಜಿಯವರ ಸಂದೇಶಗಳನ್ನು ಹಾಗೂ ದೇಶವನ್ನು ಬ್ರಿಟಿಷರ ದಾಸತ್ವದಿಂದ ಬಿಡಿಸಬೇಕಾಗಿರುವುದನ್ನು ಒತ್ತಿ ಹೇಳುತ್ತಿದ್ದರು.
ಕಸ್ತೂರ ಬಾ ಗಾಂಧಿಯವರು ೧೯೪೨ರಲ್ಲಿ ಪೂನಾದ ಬಳಿಯ ಆಗಾಖಾನ್ ಸೆರೆಮನೆಯಲ್ಲಿಯೇ ಕಾಯಿಲೆಯಿಂದ ಮರಣಹೊಂದಿದರು. ಅವರ ಮರಣಾನಂತರ ಕಸ್ತೂರಬಾರವರ ಸೇವೆಯನ್ನು ಮುಂದುವರಿಸಲು ದೇಶಾದ್ಯಂತ ಕಸ್ತೂರಬಾ ನಿಧಿಯನ್ನು ಶೇಖರಿಸಿ ಅದನ್ನು ಹೆಣ್ಣುಮಕ್ಕಳ ಶಿಕ್ಷಣ, ಬಡಮಕ್ಕಳ ವೃತ್ತಿ ತರಬೇತಿ ಸಂಸ್ಥೆಗ ಳಿಗೆ ಬಳಿಸಿಕ್ಕೊಳ್ಳಲಾಯಿತು. ಮಹಾತ್ಮರು ಜನಸೇವೆಯ ಬಗ್ಗೆ ಯಶೋಧರಾರಿಗಿದ್ದ ಆಸಕ್ತಿಯನ್ನು ಗಮನಿಸಿ ಯಶೋಧರಾರವರನ್ನು ಮೈಸೂರು ರಾಜ್ಯದ ಕಸ್ತೂರಬಾ ನಿಧಿಯ ಸಂಚಾಲಕರನ್ನಾಗಿ ನೇಮಕ ಮಾಡಿದರು.
ಯಶೋಧರಾ ಕಾಂಗ್ರೆಸ್ ಚಟುವಟಿಕೆಗಳಲ್ಲಿ ಎಷ್ಟೊಂದು ತೊಡಗಿಸಿಕೊಂಡಿದ್ದರೆಂದರೆ ಅವರ ಬಳಿಯಿದ್ದ ಹಣವೆಲ್ಲಾ ಖಾಲಿಯಾಗಿಬಿಟ್ಟಿತು. ಪತಿ ದಾಸಪ್ಪನವರು ಈಗಾಗಲೇ ಸೆರೆಮನೆಗೆ ಹೋಗಿದ್ದರಿಂದ ಮೈಸೂರು ಸರ್ಕಾರ ದಾಸಪ್ಪನ ವರನ್ನು ವಕೀಲಿ ವೃತ್ತಿಯಿಂದ ಕಿತ್ತು ಹಾಕಿತ್ತು. ಇದರಿಂದ ದಂಪತಿಗಳ ಹಣಮೂಲವೇ ಬತ್ತಿ ಹೋಗಿದ್ದು ಸದಾ ಜನರಿಂದ ತುಂಬಿರುತ್ತಿದ್ದ ಮನೆಯನ್ನು ಹಾಗೂ ದಂಪತಿ ನಡೆಸುತ್ತಿದ್ದ ಕನ್ಯಾ ವಿದ್ಯಾಲಯಗಳು, ಹೆಣ್ಣುಮಕ್ಕಳ ಬೋರ್ಡಿಂಗ್ ನಡೆಸಲು ಅವರ ಬಳಿಯಿದ್ದ ಹಣವೆಲ್ಲಾ ಖರ್ಚಾಗುತ್ತಿತು. ಇದು ದೇಶಕ್ಕಾಗಿ ಇವರು ಮಾಡಿದ ಬಲಿದಾನ. ಈ ಹಿನ್ನೆಲೆ ಯಲ್ಲಿ ಕಸ್ತೂರಬಾ ನಿಧಿ ಸಂಗ್ರಹಕ್ಕಾಗಿ ರಾಜ್ಯ ವನ್ನೆಲ್ಲ ಸುತ್ತಿಬರ ಬೇಕಾಯಿತು. ಮಹಾತ್ಮರನ್ನು ಭೇಟಿ ಮಾಡಿದ ಸಂದರ್ಭವೊಂದರಲ್ಲಿ ಯಶೋಧರಾ ತಮ್ಮ ಕಷ್ಟ ಗಳನ್ನು ಹೇಳಿಕೊಂಡು ತಮಗೂ ಉಳಿದ ಸ್ವಯಂಸೇವಕ ರಂತೆ ತಮ್ಮ ಬಳಿಯಿದ್ದ ಕಾಂಗ್ರೆಸ್ ನಿಧಿಯಿಂದ ವೇತನ ತೆಗೆದುಕೊಳ್ಳ ಬಹುದೋ ಎಂದು ಕೇಳಿದಾಗ ತಮ್ಮ ಹಿಂಬಾಲಕರಿಂದ ಕಠಿಣ ತ್ಯಾಗವನ್ನು, ಅಪೇಕ್ಷಿಸುತ್ತಿದ್ದ ಗಾಂಧಿಜಿಯವರು ಯಶೋಧರಾರ ಕೈಗಳಲ್ಲಿದ್ದ ಎರಡು ಚಿನ್ನದ ಬಳೆಗಳನ್ನು ದೃಷ್ಟಿಸಿ ನಿನ್ನ ಕೈಯಲ್ಲಿ ಚಿನ್ನದ ಬಳೆಗಳಿರುವವರೆಗೂ ವೇತನ ಪಡೆಯದಂತೆ, ಆಮೇಲೇ ಬೇಕಿದ್ದರೆ ಸ್ವಲ್ಪ ವೇತನ ಪಡೆಯುವಂತೆ ಹೇಳಿದರು.
ಅದರಂತಯೇ ಯಶೋಧರಾ ತಮ್ಮ ಜೀವಮಾನದ ಕೊನೆ ಯವರೆಗೂ ಕಾಂಗ್ರೆಸ್ ಫಂಡ್‌ನಿಂದಾಗಲಿ ಉಳಿದ ಮೂಲ ದಿಂದಾಗಲಿ ವೇತನವಾಗಲಿ ಭತ್ಯೆಗಳನ್ನಾಗಲಿ ಪಡೆಯಲಿಲ್ಲ. ಇಂತಹ ತ್ಯಾಗ ಬಲಿದಾನಗಳೇ ಯಶೋಧರಾ ದಾಸಪ್ಪನ ವರನ್ನು ನಿಜವಾದ ಜನನಾಯಕರಾಗಿಸಿತ್ತು. ಇದರಿಂದ ಜನರ ಪ್ರೀತಿ ಮಾತ್ರವಲ್ಲದೆ, ಮಹಾತ್ಮರ ಮೆಚ್ಚುಗೆಯನ್ನೂ ಗಳಿಸಿದ್ದರು. ಮಹಾತ್ಮರ ಆದೇಶವನ್ನು ಚಾಚೂತಪ್ಪದೆ ಪಾಲಿಸಿದ ತೃಪ್ತಿ ಅವರಿಗಿತ್ತು. ಆಮೇಲೇ ಮಂತಿಗಳಾದರೂ ಯಶೋಧರಾ ತಮ್ಮ ಸರಳ ಜೀವನದ ಹಾದಿಯನ್ನು ಬಿಡಲಿಲ್ಲ. ಅಂದು ಮಹಾತ್ಮರನ್ನು ಹಿಂಬಾಲಿಸುತ್ತಿದ್ದ ಅವರ ಅನುಯಾಯಿಗಳಲ್ಲಿ ಬಹುತೇಕರು ಇಂತಹ ತ್ಯಾಗಮಯಿಗಳಾಗಿದ್ದರು.




