ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ವಿರೋಧ ಪಕ್ಷಗಳ ಸಕ್ರೀಯ ಭಾಗವಹಿಸುವಿಕೆ ಇಲ್ಲದೇ ನೀರಸವಾಗಿ ಕೊನೆಗೊಂಡಿದ್ದು ಪ್ರಜಾಪ್ರಭುತ್ವದ ದುರ್ದೈವದ ಸಂಗತಿಯಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ, ಸಚಿವ ನಾಗೇಂದ್ರ ಅವರ ರಾಜಿನಾಮೆಗೆ ಆಗ್ರಹಿಸಿ ಬಿಜೆಪಿ-ಜಾ.ದಳ ಶಾಸಕರು ಅಧಿವೇಶನವನ್ನೇ ವ್ಯರ್ಥಗೊಳಿಸಿದ್ದು ಯಾವು ಪುರುಷಾರ್ಥಕ್ಕೋ ತಿಳಿಯದು.
ಮತ್ತೊಂದು ಕಡೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಈ ವಿಷಯವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿ, ಸದರಿ ಸಚಿವರ ರಕ್ಷಣೆಗೆ ಮುಂದಾಯಿತು. ವಿರೋಧ ಪಕ್ಷಗಳ ಗೈರು ಹಾಜರಿಯ ರಾಜ್ಯ ವಿಧಾನ ಮಂಡಲದಲ್ಲಿ ಹಲವಾರು ಪ್ರಮುಖ ಮಸೂದೆಗಳೊಗೆ ಒಪ್ಪಿಗೆ ಪಡೆಯಲಾಯಿತು.
ಆಡಳಿತ ಹಾಗೂ ವಿರೋಧ ಪಕ್ಷಗಳಿಗೆ ಪ್ರಜಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮದೇ ಆದ ಜವಾಬ್ದಾರಿ ಮತ್ತು ಉತ್ತರದಾಯಿಕತ್ವ ಇರುತ್ತದೆ. ಜನರ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಹೋರಾಡುವ ಪ್ರಮುಖ ಕರ್ತವ್ಯ ಕೂಡ ವಿರೋಧ ಪಕ್ಷಗಳ ಮೇಲಿದೆ. ಬರಗಾಲ, ಅನಾವೃಷ್ಟಿ
ಸೇರಿದಂತೆ ರಾಜ್ಯವನ್ನು ಹಲವಾರು ಗಂಭೀರ ಸ್ವರೂಪದ ಸಮಸ್ಯೆಗಳು ಕಾಡುತ್ತಿವೆ. ಇವುಗಳನ್ನು ಮರೆತು ಸಚಿವರೊಬ್ಬರ ರಾಜಿನಾಮೆಗೋಸ್ಕರ ಇಡೀ ಅಧಿವೇಶನವನ್ನೇ ಬಹಿಷ್ಕಾರ ಮಾಡಿದ್ದು ಒಳ್ಳೆಯ ಬೆಳವಣಿಗೆಯಲ್ಲ.
-ಕೆ.ವಿ.ವಾಸು ,ಮೈಸೂರು


